ಹೊಕ್ಕಾಡಿಗೋಳಿ – ಕೊಡಂಗೆ ವೀರ – ವಿಕ್ರಮ ಅದ್ಧೂರಿ ಕಂಬಳಕ್ಕೆ ಕ್ಷಣಗಣನೆ.( ಗೋಪಾಲ ಅಂಚನ್, ಯುವಧ್ವನಿ ನ್ಯೂಸ್ ಕರ್ನಾಟಕ

)

ಬಂಟ್ವಾಳ: ವೀರ ವಿಕ್ರಮ ಜೋಡುಕರೆ ಕಂಬಳ ಸಮಿತಿ ಆಶ್ರಯದಲ್ಲಿ ಸಂದೀಪ್ ಶೆಟ್ಟಿ ಪೊಡುಂಬ ಅಧ್ಯಕ್ಷತೆಯಲ್ಲಿ ನಡೆಯುವ ಹೊಕ್ಕಾಡಿಗೋಳಿ ಕೊಡಂಗೆ ವೀರ ವಿಕ್ರಮ ಕಂಬಳಕ್ಕೆ (ಮಾರ್ಚ್ 16ರಂದು ಶನಿವಾರ) ಕ್ಷಣಗಣನೆ ಆರಂಭಗೊಂಡಿದ್ದು ವೈಭವಯುತವಾಗಿ ಸಂಪನ್ನಗೊಳ್ಳುತ್ತಿದೆ.


ವಿಶಾಲವಾದ ಮೈದಾನದಂತಿರುವ ಜಾಗ, ಸೂಕ್ತ ಪಾರ್ಕಿಂಗ್ ವ್ಯವಸ್ಥೆ, ವಿಶಾಲವಾದ ಭವ್ಯ ವೇದಿಕೆ, ಶಾಶ್ವತವಾಗಿಸಿರಬಹುದಾದ ಅಚ್ಚುಕಟ್ಟಾದ ಕರೆಗಳು, ಆಕರ್ಷನೀಯ ವಿದ್ಯುತ್ ದೀಪಾಲಂಕಾರ, ಪ್ರಕೃತಿ ರಮಣೀಯ ಸುಂದರ ಪರಿಸರ, ಅಚ್ಚುಕಟ್ಟಾದ-ಶಿಸ್ತುಬದ್ಧವಾದ ವ್ಯವಸ್ಥೆಗಳು, ಸಕಲ ಮೂಲಭೂತ ವ್ಯವಸ್ಥೆಯೊಂದಿಗೆ ನೂರಾರು ಕಾರ್ಯಕರ್ತರ ಪ್ರಾಮಾಣಿಕ ಸೇವೆಯೊಂದಿಗೆ ಕಂಬಳವು ಅರ್ಥಪೂರ್ಣವಾಗಿ ಅದ್ಧೂರಿಯಾಗಿ ಸಂಪನ್ನಗೊಳ್ಳುತ್ತಿದೆ.

ಕ್ರೀಯಾಶೀಲ ಅಧ್ಯಕ್ಷರು

ಕಂಬಳದ ಕೋಣಗಳ ಯಜಮಾನ, ಕಂಬಳದ ಹಿನ್ನೆಲೆ, ಕೂಟದ ಆಗುಹೋಗುಗಳನ್ನು ಅರಿತಿರುವ ಯುವ ನಾಯಕ, ಕ್ರೀಯಾಶೀಲ ಸಂಘಟಕ ಸಂದೀಪ್ ಶಟ್ಟಿ ಪೊಡುಂಬ ಕಂಬಳ ಕೂಟದ ಅಧ್ಯಕ್ಷರಾಗಿ ಕಂಬಳವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ಹೊಸ ಕಂಬಳಕ್ಕೆ ಹೊಸ ಮೆರುಗು ನೀಡಿ ಕಂಬಳವನ್ನು ಜನಾಕರ್ಷಣೀಯಗೊಳಿಸಿದ್ದಾರೆ.

ಇವರೊಂದಿಗೆ ಅಪಾರ ಸಂಖ್ಯೆಯ ನಾಯಕರುಗಳು, ಕಾರ್ಯಕರ್ತರುಗಳು ಹಾಗೂ ಸಂಘಟನೆಗಳು ಕೈಜೋಡಿಸಿವೆ.
ಶನಿವಾರ ಬೆಳಿಗ್ಗೆ ದಿ.ಕೊಡಂಗೆ ರುಕ್ಮಯ ಪೂಜಾರಿ ಸಭಾ ವೇದಿಕೆಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದ್ದು ಶ್ರೀ ಕ್ಷೇತ್ರ ಪೂಂಜದ ಅಸ್ರಣ್ಣ ಕೃಷ್ಣಪ್ರಸಾದ್ ಆಚಾರ್ಯ ಅಧ್ಯಕ್ಷತೆ ವಹಿಸುವರು. ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಶೆಟ್ಟಿ ಬೆಳಪು ಐಕಳಬಾವ ನೂತನ ಕರೆ ಉದ್ಘಾಟಿಸುವರು.

ಶ್ರೀ ಕ್ಷೇತ್ರ ಪೂಂಜದ ಪ್ರಧಾನ ಅರ್ಚಕ ಪ್ರಕಾಶ್ ಆಚಾರ್ಯ ಕಂಬಳ ಉದ್ಘಾಟಿಸುವರು.
ಜಿಲ್ಲಾ ಕಂಬಳ ಸಮಿತಿ ಗೌರವಾಧ್ಯಕ್ಷ ರೋಹಿತ್ ಹೆಗ್ಡೆ ಎರ್ಮಾಳ್, ಜಿಲ್ಲಾ ಕಂಬಳ ಶಿಸ್ತು ಸಮಿತಿ ಅಧ್ಯಕ್ಷ ಭಾಸ್ಕರ ಎಸ್.ಕೋಟ್ಯಾನ್ ಮೊದಲಾದವರು ಅತಿಥಿಗಳಾಗಿ ಭಾಗವಹಿಸುವರು.
ಸಂಜೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅಧ್ಯಕ್ಷತೆ ವಹಿಸುವರು.ಮಾಜಿ ಸಚಿವ ಬಿ.ರಮಾನಾಥ ರೈ ಉದ್ಘಾಟಿಸುವರು. ಹಲವಾರು ಗಣ್ಯರು ಭಾಗವಹಿಸುವರು.
ಬಹುಮಾನ ವಿತರಣೆ ಸಮಾರಂಭದಲ್ಲಿ ಕುಕ್ಕಿಪ್ಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಶೇಖರ ಶೆಟ್ಟಿ, ಸಂಗಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ರಾಜೀವಿ ಪೂಜಾರಿ, ಆರಂಬೋಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ವಿಜಯ ಕುಂಜಾಡಿ ಮೊದಲಾದವರು ಭಾಗವಹಿಸುವರು.
ಒಟ್ಟಿನಲ್ಲಿ ಹೊಕ್ಕಾಡಿಗೋಳಿ ಕೊಡಂಗೆ ವೀರ ವಿಕ್ರಮ ಕಂಬಳ ಇತಿಹಾಸದಲ್ಲೊಂದು ಹೊಸ ದಾಖಲೆ ನಿರ್ಮಿಸಲು ಸಕಲ ವ್ಯವಸ್ಥೆಯೊಂದಿಗೆ ಸಜ್ಜಾಗಿದೆ.