ಅರ್ಥಪೂರ್ಣವಾಗಿ ಸಂಪನ್ನಗೊಂಡ ಹೊಸಪಟ್ಣ ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ಪ್ರಾರಂಭೋತ್ಸವ

ಬೆಳ್ತಂಗಡಿ: ತಾಲೂಕಿನ ಹೊಸಪಟ್ಣ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಪ್ರಾರಂಭೋತ್ಸವ ಇತ್ತೀಚೆಗೆ ಅರ್ಥಪೂರ್ಣವಾಗಿ ಸಂಪನ್ನಗೊಂಡಿತು.

ಮಕ್ಕಳನ್ನು ಮಿಠಾಯಿ ನೀಡಿ, ಪನ್ನೀರು ಚಿಮುಕಿಸಿ ಸ್ವಾಗತಿಸಲಾಯಿತು.

ನಲಿಕಲಿ ತರಗತಿಯ ಎಲ್ಲ ಮಕ್ಕಳು, ಸನಿಹದ ಅಂಗನವಾಡಿ ಮಕ್ಕಳ ಸಹಿತ ಸುಮಾರು 20 ಅಕ್ಷರ ದೀಪಗಳನ್ನು ಬೆಳಗಿದರು.

ಮಕ್ಕಳಿಂದ ಕನ್ನಡ ನಾಡುನುಡಿಯ ಹಾಡಿನ ಮೂಲಕ ಪ್ರಾರಂಭೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.


ವೈವಿಧ್ಯಮಯ ಕ್ಲಾಪ್ಸ್ ಮೂಲಕ ಸಂವಾದ ಕಾರ್ಯಕ್ರಮಕ್ಕೆ ಚಾಲನೆ ನೀಡಿರುವುದು ವಿಶೇಷ ಗಮನ ಸೆಳೆಯಿತು.

ಮಂಗಳೂರು ಸರಕಾರಿ ಶಿಕ್ಷಕರ ಶಿಕ್ಷಣ ತರಬೇತಿ ಸಂಸ್ಥೆಯ ಉಪನ್ಯಾಸಕ ಕುಮಾರಸ್ವಾಮಿ ಪೋಷಕರೊಡನೆ ಮಕ್ಕಳ ಶಿಕ್ಷಣದ ಬಗ್ಗೆ ಸಂವಾದ ನಡೆಸಿದರು.
ಇಲ್ಲಿ ಮಗುಸ್ನೇಹಿಯಾದ ಪ್ರೀತಿಯ ವಾತಾವರಣ ಇದೆ. ಪೋಷಕರ, ಊರಿನವರ ಸಹಭಾಗಿತ್ವ ತುಂಬ ಚೆನ್ನಾಗಿದೆ ಎಂದರು.

ಮಕ್ಕಳಿಗೆ ಮನೆಕೆಲಸ ಹೇರುವುದೇ ಶಿಕ್ಷಣವಲ್ಲ. ಮಗು ಕಲಿಯಲು ಶಿಕ್ಷಿಸಬೇಕೆಂದಿಲ್ಲ. ಮಕ್ಕಳು ಹಿರಿಯರನ್ನು ಅನುಕರಿಸುತ್ತಾರೆ. ಚಿಕ್ಕಮಕ್ಕಳಿಗೆ ಪುಸ್ತಕದ ಪಾಠ ಮಾತ್ರವಲ್ಲ. ಅಲ್ಲಲ್ಲಿ ಕಸ ಹಾಕಬಾರದು, ಸಹಪಾಠಿಗಳೊಡನೆ ಹೊಂದಾಣಿಕೆ ಹೇಳಿಕೊಡುವುದು ಕೂಡ ಶಿಕ್ಷಣದ ಭಾಗವೇ ಆಗಿದೆ ಎಂದರು

ಅಕ್ಷರ ದಾಸೋಹ ಸಿಬ್ಬಂದಿ ಶಶಿಕಲಾ ಅವರನ್ನು ಗೌರವಿಸಲಾಯಿತು.

ಪ್ರಭಾರ ಮುಖ್ಯ ಶಿಕ್ಷಕಿ ವಿದ್ಯಾ ಹೊಸ ಶೈಕ್ಷಣಿಕ ವರ್ಷದ ಶಾಲೆಯ ಹೊಸ ಯೋಜನೆಗಳನ್ನು ಹಂಚಿಕೊಂಡರು.

ವಿದ್ಯಾರ್ಥಿಗಳು ಮತ್ತು ಪೋಷಕರು ಜೊತೆಗೂಡಿ ಸಹಭೋಜನ ನಡೆಯಿತು. ಶಾಲೆಯ ಅಂಗಳದಲ್ಲಿ ಬೆಳೆದ ಹಲಸಿನಕಾಯಿ ಪದಾರ್ಥ, ಪಾಯಸ ಮತ್ತು ಮೈಸೂರುಪಾಕ್ ಸವಿಯೂಟದಲ್ಲಿ ಮುದನೀಡಿತು.

ಉಡುಪಿಯ ಖ್ಯಾತ ಮನೋವೈದ್ಯ ಡಾ.ಪಿ.ವಿ.ಭಂಡಾರಿ ನೀಡಿದ 3000 ರೂ.ಮೌಲ್ಯದ ಗ್ರೀನ್ ಬೋರ್ಡ್ ಕೊಡುಗೆಯ ಅನಾವರಣ ನಡೆಯಿತು.
5 ನೇ ತರಗತಿ ಉತ್ತೀರ್ಣರಾದ 2023-24 ನೇ ಸಾಲಿನ ವಿದ್ಯಾರ್ಥಿಗಳು ನೀಡಿದ ಶಾಲಾ ಘಂಟೆಯನ್ನು ಎಸ್.ಡಿ.ಎಮ್.ಸಿ. ಅಧ್ಯಕ್ಷರಿಗೆ ಹಸ್ತಾಂತರಿಸಲಾಯಿತು.

ಎಸ್.ಡಿ.ಎಮ್.ಸಿ. ಅಧ್ಯಕ್ಷ ದಯಾನಂದ ಮತ್ತು ಉಪಾಧ್ಯಕ್ಷೆ ಶಾರದಾ, ಫ್ರೆಂಡ್ಸ್ ಕ್ಲಬ್ ಯುವ ಮಿತ್ರರ ಬಳಗದ ಅಶ್ವಿತ್ ಮೊದಲಾದವರು ಉಪಸ್ಥಿತರಿದ್ದರು

ನಿಯೋಜಿತ ಪ್ರಭಾರ ಮುಖ್ಯ ಶಿಕ್ಷಕಿ ವಿದ್ಯಾ ಕಾರ್ಕಳ ಸ್ವಾಗತಿಸಿದರು. ಗೌರವ ಶಿಕ್ಷಕಿ ಭವ್ಯ ನಿರೂಪಿಸಿದರು.
ಫ್ರೆಂಡ್ಸ್ ಕ್ಲಬ್ ಹೊಸಪಟ್ಣ ಸಹಭಾಗಿತ್ವ ನೀಡಿತ್ತು.