ಸಮಿತಿ ಪ್ರಮುಖರ ಸರ್ವಾಧಿಕಾರಿ ಧೋರಣೆಯನ್ನು ಪ್ರಶ್ನಿಸಿದ್ದಕ್ಕಾಗಿ ಮುಖ್ಯ ಶಿಕ್ಷಕರಿಗೆ ಟಾರ್ಚರ್- ಇದು ಬಂಟ್ವಾಳ ತಾಲೂಕಿನ ದಡ್ಡಲಕಾಡು ಶಾಲೆಯಲ್ಲಿ ನಡೆಯುತ್ತಿರುವ ಘಟನೆ (ಗೋಪಾಲ ಅಂಚನ್, ಯುವಧ್ವನಿ ನ್ಯೂಸ್ ಕರ್ನಾಟಕ)

ಬಂಟ್ವಾಳ: ಸಮಿತಿ ಪ್ರಮುಖರ ಸರ್ವಾಧಿಕಾರಿ ಧೋರಣೆಯನ್ನು ಪ್ರಶ್ನಿಸುತ್ತಾರೆ ಎಂಬ ಕಾರಣಕ್ಕಾಗಿ ದಡ್ಡಲಕಾಡು ಸರಕಾರಿ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕರನ್ನು ವರ್ಗಾವಣೆಗೊಳಿಸಲು ಪಿತೂರಿ ನಡೆಸಲಾಗಿದೆ ಎಂಬ ಅಂಶ ಈಗ ಬಯಲಾಗಿದೆ.
ಸರಕಾರಿ ನಿಯಾಮಾವಳಿಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುತ್ತ, ಹಲವು ಅಭಿವೃದ್ಧಿ ಕಾರ್ಯಗಳೊಂದಿಗೆ ಉತ್ತಮವಾಗಿ ಕರ್ತವ್ಯ ನಿರ್ವಹಿಸುತ್ತಿರುವ ದಕ್ಷ ಶಿಕ್ಷಕರಾದ ರಮಾನಂದ ವಿರುದ್ಧ ಸಮಿತಿಯ ಕೆಲವರು ವರ್ಗಾವಣೆಗೆ ಷಡ್ಯಂತ್ರ ನಡೆಸುತ್ತಿರುವುದು ಪೋಷಕರ ವಲಯದಲ್ಲಿಯೂ ಆಕ್ರೋಶಕ್ಕೆ ಕಾರಣವಾಗಿದೆ.
ರಮಾನಂದ ಅವರು ಹಲವಾರು ವರ್ಷಗಳಿಂದ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದು ಇಲಾಖಾ ಜವಾಬ್ಧಾರಿಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದಲ್ಲದೆ ಕಡೇಶಿವಾಲಯ, ಸಿದ್ಧಕಟ್ಟೆ ಸರಕಾರಿ ಪ್ರೌಢ ಶಾಲೆಯಲ್ಲಿ ಸೇವೆ ಸಲ್ಲಿಸಿ ಶಾಲೆಗಳನ್ನು ಮಾದರಿಯಾಗಿ ರೂಪಿಸಿದವರು. ಶಾಲೆಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನದ ಸಂಘಟನೆ ಸಹಿತ ಹಲವು ಹೊಸ ಪ್ರಯೋಗಗಳೊಂದಿಗೆ ಶಿಕ್ಷಕ ವೃಂದ, ಪೋಷಕರು ಹಾಗೂ ವಿದ್ಯಾರ್ಥಿ ವಲಯದ ಮೆಚ್ಚುಗೆಗೆ ಪಾತ್ರರಾದವರು. ತನ್ನ ವಿಶೇಷ ಸಾಧನೆಗಾಗಿ ಹಲವು ಪ್ರಶಸ್ತಿಗಳಿಂದ ಪುರಸ್ಕ್ರತರಾದವರು.
ಕೆಲವರ್ಷದಿಂದ ಇವರು ದಡ್ಡಲಕಾಡು ಶಾಲೆಯಲ್ಲಿ ಪ್ರಭಾರ ಮುಖ್ಯ ಶಿಕ್ಷಕರಾಗಿ ಕರ್ತವ್ಯದಲ್ಲಿದ್ದು ಇಲಾಖಾ ನಿಯಾಮಾವಳಿಯಂತೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇತ್ತೀಚೆಗೆ ಕೆಲತಿಂಗಳಿಂದ ಶಾಲಾ ದತ್ತು ಸಮಿತಿಯ ಪ್ರಮುಖರು, ಎಸ್ ಡಿ ಎಂ ಸಿ ಸದಸ್ಯರು ಹಾಗೂ ರಮಾನಂದ ಅವರ ನಡುವೆ ಮನಸ್ತಾಪ ಸೃಷ್ಠಿಯಾಗಿತ್ತು. ಇದೀಗ ರಮಾನಂದರ ಮೇಲೆ ವಿನಾಕಾರಣ ಆರೋಪ ಹೊರಿಸಿ ಅವರನ್ನು ವರ್ಗಾವಣೆಗೊಳಿಸುವಂತೆ ಒತ್ತಾಯಿಸಿ ಪ್ರಕಾಶ್ ಅಂಚನ್, ಪುರುಷೋತ್ತಮ ಅಂಚನ್, ರಾಮಚಂದ್ರ ಮೊದಲಾದವರಿದ್ದ ತಂಡ ಇಲಾಖೆಗೆ ಮನವಿ ಸಲ್ಲಿಸಿದೆ. ಇದು ಯಾವ ನ್ಯಾಯ ಎಂದು ಕೆಲವು ಪೋಷಕರು ಪ್ರಶ್ನಿಸಿದ್ದಾರೆ.

ಮುಖ್ಯ ಶಿಕ್ಷಕರ ತಪ್ಪೇನು?:

ದತ್ತು ಸಮಿತಿ ಮತ್ತು ಶಾಲಾಭಿವೃದ್ಧಿ ಸಮಿತಿಯ ಕೆಲ ಪ್ರಮುಖರು ಶಾಲಾ ಆಡಳಿತದಲ್ಲಿ ಅಡ್ಡಗಾಲು ಹಾಕುವುದು, ಮುಖ್ಯ ಶಿಕ್ಷಕರ ಗಮನಕ್ಕೆ ತಾರದೇ ಅವರೇ ಸಭೆ ನಡೆಸಿ ನಿರ್ಣಯ ಕೈಗೊಳ್ಳುವುದು, ಶಿಕ್ಷಕರ ನೇಮಕಾತಿ ಮಾಡುವುದು, ಒಬ್ಬರು ಇಡೀ ದಿನ ಶಾಲೆಯಲ್ಲಿಯೇ ಇದ್ದು ಮುಖ್ಯ ಶಿಕ್ಷಕರ ಕರ್ತವ್ಯಕ್ಕೆ ಅಡ್ಡಿಪಡಿಸುವುದು, ಅನುದಾನ-ಹಣಕಾಸು ವಿಚಾರ-ಶಿಕ್ಷಕರ ಕೆಲಸದ ಹಂಚಿಕೆ ಇತ್ಯಾದಿ ಬಹುತೇಕ ವಿಚಾರದಲ್ಲಿ ಅಡ್ಡಿ ಪಡಿಸುವುದು, ಒತ್ತಡ ಹೇರುವುದು, ಬೆದರಿಸುವುದು ಈ ಶಾಲೆಯಲ್ಲಿ ನಿರಂತರ ನಡೆಯುತ್ತಿದ್ದು ಶಾಲೆಯಲ್ಲಿ ಶಿಕ್ಷಕರು ಕರ್ತವ್ಯನಿರ್ವಹಿಸಲಾಗದ ಭಯದ ವಾತಾವರಣ ಸೃಷ್ಠಿಯಾಗಿದೆ. ಇದನ್ನು ಪ್ರಶ್ನಿಸುವುದು ತಪ್ಪೇ ಎಂದು ಪೋಷಕರು ಪ್ರಶ್ನಿಸುತ್ತಾರೆ.
ಈ ಕಮಿಟಿಯವರು ಇಲಾಖೆಯನ್ನು ಬೈಯುವುದು, ಇಲಾಖಾ ನಿಯಾಮಾವಳಿಗಳನ್ನು ಕಡೆಗಣಿಸುವುದು, ಎಲ್ಲವೂ ಟ್ರಸ್ಟ್ ಹೇಳಿದಂತೆ ಮತ್ತು ಅಂಚನ್ ಹೇಳಿದಂತೆ ನಡೆಯಬೇಕೆಂದು ಒತ್ತಡ ಹಾಕುವುದು, ಯೂನಿಫಾರ್ಮ್ ಇತ್ಯಾದಿ ವಸ್ತುಗಳನ್ನು ಅಂಚನ್ ಅಂಗಡಿಯಿಂದಲೇ ಖರೀದಿಸಬೇಕೆಂದು ಆಗ್ರಹಿಸುವುದು, ಶಿಕ್ಷಕರ ವೇತನಕ್ಕಾಗಿ ಪ್ರತೀ ವಿದ್ಯಾರ್ಥಿಯಿಂದ ಮೂರು ಸಾವಿರ ಸಹಿತ ಬೇರೆ ಬೇರೆ ಹೆಸರಿನಲ್ಲಿ ಕಮಿಟಿಯವರು ಮಕ್ಕಳಿಂದ ಹಣ ಸಂಗ್ರಹಿಸುವುದು, ಕಾನೂನುಬಾಹಿರವಾಗಿ ಎಸ್ ಡಿಎಂಸಿಯನ್ನು ರಚಿಸಿರುವುದು, ದೂರುಪೆಟ್ಟಿಗೆಯ ದುರುಪಯೋಗ, ಶಿಕ್ಷಕರ ವಿರುದ್ಧ ಮಕ್ಕಳಲ್ಲಿ ವೀಡಿಯೋ ಹೇಳಿಕೆ ಪಡೆಯುವುದು ಇತ್ಯಾದಿಗಳೆಲ್ಲವೂ ನಡೆಯುವಾಗ ಶಿಕ್ಷಕರು ಕರ್ತವ್ಯ ನಿರ್ವಹಿಸುವುದಾದರೂ ಹೇಗೆ ಎನ್ನುತ್ತಾರೆ ಮಕ್ಕಳ ಪೋಷಕರು.
ದತ್ತು ಸಮಿತಿಗೆ ಶಾಲಾ ಆಡಳಿತದಲ್ಲಿ ಹಸ್ತಕ್ಷೇಪ ಮಾಡುವಂತಿಲ್ಲ. ಶಿಕ್ಷಕರ ವಿರುದ್ಧ ದೂರು ಬಂದರೆ ಶಾಲಾಭಿವೃದ್ಧಿ ಸಮಿತಿಯಲ್ಲಿಟ್ಟು ನಂತರ ಪೋಷಕರ ಸಭೆಯಲ್ಲಿ ಚರ್ಚಿಸಿ ನಿರ್ಣಯ ಕೈಗೊಳ್ಳಬೇಕು. ಇಲ್ಲಿ ಇದನ್ನೆಲ್ಲ ಕಡೆಗಣಿಸಿ ನೇರವಾಗಿ ಇಲಾಖೆಗೆ ದೂರು ನೀಡಿರುವುದರಿಂದ ಇದು ಶಿಕ್ಷಕರೊಬ್ಬರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಉದ್ಧೇಶಪೂರ್ವಕ ಕೃತ್ಯವೆನ್ನುವುದು ಸ್ಪಷ್ಠವಾಗಿದೆ.
ಅಂತೂ ಶಿಕ್ಷಕರನ್ನು ಹೇಗಾದರೂ ಮಾಡಿ ವರ್ಗಾವಣೆಗೊಳಿಸಲು ತಂತ್ರ ರೂಪಿಸಿ ಪ್ರಾಮಾಣಿಕ ಶಿಕ್ಷಕರೊಬ್ಬರಿಗೆ ಮಾನಸಿಕ ಹಿಂಸೆ ನೀಡುತ್ತಾ, ವೈಯಕ್ತಿಕ ತೇಜೋವಧೆ ಮಾಡುತ್ತಿರುವ ಸಮಿತಿಯವರ ಧೋರಣೆಯನ್ನು ಪೋಷಕರು ಖಂಡಿಸಿದ್ದು ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ.