ಬಿ.ಸಿ.ರೋಡಿನಲ್ಲಿ ಅಪಾರ ಜನಸ್ತೋಮದ ನಡುವೆ ಯೋಗಿ ಆದಿತ್ಯನಾಥ್ ಬೃಹತ್ ರೋಡ್ ಶೋ

ಬಂಟ್ವಾಳ: ಬಿ.ಸಿ.ರೋಡಿನಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಶನಿವಾರ ಬೃಹತ್ ರೋಡ್ ನಡೆಸಿದರು.
ಅಪಾರ ಜನಸ್ತೋಮದ ನಡುವೆ ರೋಡ್ ಶೋ ನಡೆಸಿದ ಯೋಗಿ ಆದಿತ್ಯನಾಥ್ ಬಂಟ್ವಾಳ ಬಿಜೆಪಿ ಅಭ್ಯರ್ಥಿ ರಾಜೇಶ್ ನಾಯ್ಕ್ ಪರ ಮತಯಾಚನೆಗೈದರು
.


ಬಿ.ಸಿ.ರೋಡು ಕೈಕಂಬ ಪೊಳಲಿ ಧ್ವಾರದ ಬಳಿಯಿಂದ ತೆರೆದ ವಾಹನದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು, ಅಭ್ಯರ್ಥಿ ರಾಜೇಶ್ ನಾಯ್ಕ್, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಎಂ. ಅವರ ಜತೆ ನಿಂತು ಬಿ.ಸಿ.ರೋಡು ಖಾಸಗಿ ಬಸ್ಸು ನಿಲ್ದಾಣದವರೆಗೆ ರೋಡ್ ಶೋ ನಡೆಸಿದ ಯೋಗಿ ಅಭಿಮಾನಿಗಳತ್ತ ಕೈಬೀಸಿದರು.
ಈ ಸಂದರ್ಭ ನೆರೆದಿದ್ದ ಅಪಾರ ಸಂಖ್ಯೆಯ ಕಾರ್ಯಕರ್ತರು, ಅಭಿಮಾನಿಗಳು ಯೋಗಿ ಆದಿತ್ಯನಾಥ್ ಗೆ ಜೈಕಾರ ಕೂಗಿದರು.
ಯೋಗಿ ಆದಿತ್ಯನಾಥ್ ಅವರಿಗೆ ಬಂಟ್ವಾಳ ಬಿಜೆಪಿ ಅಭ್ಯರ್ಥಿ ರಾಜೇಶ್ ನಾಯ್ಕ್ ಉಳಿಪ್ಪಾಡಿ ಹನುಮಂತನ ಕಂಚಿನ ಪ್ರತಿಮೆಯನ್ನು ಉಡುಗೊರೆಯಾಗಿ ನೀಡಿ ಗೌರವ ಸಮರ್ಪಿಸಿದರು.
ಬಳಿಕ ಬಿ.ಸಿ.ರೋಡು ಬಸ್ಸು ನಿಲ್ದಾಣದ ಬಳಿ ತೆರೆದ ವಾಹನದಲ್ಲಿ ನಿಂತು ಕನ್ನಡದಲ್ಲಿ ಮಾತು ಆರಂಭಿಸಿದ ಯೋಗಿ ಸ್ಥಳೀಯ ದೇವಾಲಯಗಳ ಹೆಸರುಗಳನ್ನು ಉಲ್ಲೇಖಿಸಿ ಪ್ರಣಾಮಗಳನ್ನು ಸಲ್ಲಿಸಿದರು.


ಕರ್ನಾಟಕದಲ್ಲಿ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರಬೇಕು, ಬಂಟ್ವಾಳದ ಅಭ್ಯರ್ಥಿ ರಾಜೇಶ್ ನಾಯ್ಕ್ ಅವರನ್ನು ಬಹುಮತದಿಂದ ಚುನಾಯಿಸಬೇಕು ಎಂದು ಯೋಗಿ ಮನವಿ ಮಾಡಿದರು.
ಮಾಜಿ ಶಾಸಕರಾದ ಎ.ರುಕ್ಮಯ ಪೂಜಾರಿ, ಕೆ.ಪದ್ಮನಾಭ ಕೊಟ್ಟಾರಿ, ಬಿಜೆಪಿ ಮಂಡಲ ಅಧ್ಯಕ್ಷ ದೇವಪ್ಪ‌ ಪೂಜಾರಿ, ಪ್ರಮುಖರಾದ ಹರಿಕೃಷ್ಣ ಬಂಟ್ವಾಳ, ಸುಲೋಚನಾ ಜಿ.ಕೆ.ಭಟ್, ದೇವದಾಸ ಶೆಟ್ಟಿ, ಗೋವಿಂದ ಪ್ರಭು, ಡೊಂಬಯ ಅರಳ, ರವೀಶ್ ಶೆಟ್ಟಿ ಮೊದಲಾದವರಿದ್ದರು.