ಬಿ.ರಮಾನಾಥ ರೈ ಪರ ಬೃಹತ್ ರೋಡ್ ಶೋ, ಹರಿದು ಬಂದ ಜನ ಸಾಗರ, ಬಿ.ಸಿ.ರೋಡು ತ್ರಿವರ್ಣಮಯ

ಬಂಟ್ವಾಳ : ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಸಚಿವ ಬಿ.ರಮಾನಾಥ ರೈ ಅವರ ಚುನಾವಣಾ ಪ್ರಚಾರದ ಭಾಗವಾಗಿ ಸೋಮವಾರ ಸಂಜೆ ಬಿ.ಸಿ.ರೋಡಿನಲ್ಲಿ ನಡೆದ ಬೃಹತ್ ರೋಡ್ ಶೋ ದಲ್ಲಿ ಸ್ಟಾರ್ ಪ್ರಚಾರಕರಿಲ್ಲದಿದ್ದರೂ ಜನಸಾಗರವೇ ನೆರೆದದ್ದು ವಿಶೇಷ ಗಮನ ಸೆಳೆಯಿತು. ಬಂಟ್ವಾಳದ ಕೇಂದ್ರ ಸ್ಥಾನ ಬಿ.ಸಿ.ರೋಡ್ ಕೇಸರಿ, ಬಿಳಿ, ಹಸಿರು ಬಣ್ಣದ ಕಾಂಗ್ರೆಸ್‍ನ ತ್ರಿವರ್ಣ ಧ್ವಜಗಳಿಂದಲೇ ಕಂಗೊಳಿಸಿತು.


ಬಿ.ಸಿ.ರೋಡು ನಾರಾಯಣ ಗುರು ವೃತ್ತದಿಂದ ಆರಂಭಗೊಂಡ ರೋಡ್ ಶೋ ಮುಖ್ಯರಸ್ತೆಯಲ್ಲಿ ಸಾಗಿ ಕೈಕಂಬ ಜಂಕ್ಷನ್ನಲ್ಲಿ ಸಮಾಪನಗೊಂಡಿತು. ಅಪಾರ ಸಂಖ್ಯೆಯಲ್ಲಿ ಕಾಂಗ್ರೇಸ್ ಕಾರ್ಯಕರ್ತರು, ಹಿತೈಷಿಗಳು ಹಾಗೂ ರೈ ಅಭಿಮಾನಿಗಳು ರೋಡ್ ಶೋ ನಲ್ಲಿ ಹೆಜ್ಜೆ ಹಾಕಿದರು.

ಐಷಾರಾಮಿ ಜೀವನದ ಆಸೆ ನನಗಿಲ್ಲ, ಜನಸೇವೆಗಾಗಿಯೇ ರಾಜಕೀಯಕ್ಕೆ ಬಂದಿದ್ದೇನೆ-ರೈ:

ಕೈಕಂಬ ಜಂಕ್ಷನ್ನಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದ ಬಿ.ರಮಾನಾಥ ರೈ, ನಾನು ಶಾಸಕನಾಗಿ, ಸಚಿವನಾಗಿದ್ದಾಗಲೂ ಐಷಾರಾಮಿ ಜೀವನವನ್ನು ಬಯಸಿದವನಲ್ಲ. ನಿರಂತರ ಕ್ಷೇತ್ರದ ಜನತೆಯೊಂದಿಗೆ ಸಾಮಾನ್ಯ ವ್ಯಕ್ತಿಯಾಗಿದ್ದುಕೊಂಡು ಪ್ರಾಮಾಣಿಕವಾಗಿ ಸೇವೆ ಮಾಡಿದವನು. ಮುಂದೆಯೂ ಐಷಾರಾಮಿ ಬದುಕಿನ ಆಸೆ ನನಗಿಲ್ಲ. ಜನತೆಯ ಸೇವೆಗಾಗಿ ಹಾಗೂ ಕ್ಷೇತ್ರದ ಜನರಿಗೆ ಸ್ವಾಭಿಮಾನದ ಬದುಕು ಕಟ್ಟಿಕೊಡುವುದಕ್ಕಾಗಿ ಮತ್ತೊಮ್ಮೆ ಸ್ಪರ್ಧಿಸುತ್ತಿದ್ದೇನೆ. ಕ್ಷೇತ್ರದ ಜನತೆ ನನ್ನನ್ನು ಆಶೀರ್ವದಿಸುತ್ತಾರೆ ಎಂಬ ನಂಬಿಕೆ ನನಗಿದೆ. ಆಯ್ಕೆಯಾದಲ್ಲಿ ಈ ಹಿಂದೆ ನಡೆಸಿದ ಅಭಿವೃದ್ಧಿ ಕಾರ್ಯಗಳಿಂದ ದುಪ್ಪಟ್ಟು ಅಭಿವೃದ್ಧಿ ಕಾರ್ಯಗಳನ್ನು ನಡೆಸುತ್ತೇನೆ ಎಂದು ಹೇಳಿದರು.

ಕಳಂಕರಹಿತ ಜೀವನ ನಡೆಸಿದ್ದೇನೆ:

ನಾನು ನನ್ನ ರಾಜಕೀಯ ಜೀವನದಲ್ಲಿ ಪಾರದರ್ಶಕತೆಗೆ ಹೆಚ್ಚು ಒತ್ತು ನೀಡಿದವನು. ಭ್ರಷ್ಟಾಚಾರ ರಹಿತ, ಕಳಂಕ ರಹಿತ ಜೀವನ ನಡೆಸಿದ್ದೇನೆ. ಪಕ್ಷಕ್ಕಾಗಲಿ, ಕಾರ್ಯಕರ್ತರಿಗಾಗಲಿ, ಕ್ಷೇತ್ರದ ಜನತೆಗಾಗಲಿ ಅಗೌರವ ತರುವಂತಹ ಯಾವುದೇ ಕೆಲಸವನ್ನು ಮಾಡಿಲ್ಲ. ಮುಂದೆಯೂ ಮಾಡುವುದಿಲ್ಲ ಎಂದು ರೈ ಹೇಳಿದರು.

ಅಭಿಮಾನಿಗಳೇ ಸ್ಟಾರ್ ಗಳು:

ಯಾವುದೇ ಸ್ಟಾರ್ ಪ್ರಚಾರಕರು ಇಲ್ಲದೆಯೂ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ನನ್ನೊಂದಿಗೆ ಹೆಜ್ಜೆ ಹಾಕಿದ್ದೀರಿ. ನನಗೆ ಪ್ರೀತಿ, ಗೌರವ ತೋರಿದ್ದೀರಿ. ಇದೇ ನನಗೆ ದೊಡ್ಡ ಶಕ್ತಿ. ಅದಕ್ಕಾಗಿ ನಾನು ನಿಮಗೆ ಚಿರಋಣಿಯಾಗಿದ್ದೇನೆ. ಅಧಿಕಾರ ಇದ್ದರೂ, ಇಲ್ಲದಿದ್ದರೂ ನೀವು ನನಗೆ ಪ್ರೀತಿ ತೋರಿದ್ದೀರಿ. ನಾನು ನಿಮ್ಮನ್ನೂ ಯಾವತ್ತೂ ಮರೆಯಲಿಲ್ಲ, ಮುಂದೆಯೂ ನಿಮ್ಮ ಸೇವಕನಾಗಿ ಸದಾ ನಿಮ್ಮೊಂದಿಗಿರುತ್ತೇನೆ ಎಂದು ರೈ ಹೇಳಿದರು.

ನಾನು ವ್ಯಾಪಾರಿ ಅಲ್ಲ, ವ್ಯವಹಾರ ವೃದ್ಧಿಗಾಗಿ ರಾಜಕೀಯಕ್ಕೆ ಬಂದಿಲ್ಲ:

ನಾನು ವ್ಯಾಪಾರಿ ಅಲ್ಲ, ನನಗೆ ಯಾವುದೇ ವ್ಯವಹಾರಗಳಿಲ್ಲ. ನನ್ನ ವ್ಯವಹಾರಕ್ಕಾಗಿ ಯಾವುದೇ ಅಧಿಕಾರಿ ಮೇಲೆ ಪ್ರಭಾವ ಬೀರುವ ಅಗತ್ಯವೂ ನನಗಿಲ್ಲ. ನನ್ನ ವ್ಯವಹಾರವನ್ನು ವೃದ್ಧಿಸಲೂ ನಾನು ರಾಜಕೀಯಕ್ಕೆ ಬಂದಿಲ್ಲ. ಜನಸೇವೆಯೇ ನನ್ನ ವೃತ್ತಿ, ಅದರಲ್ಲೇ ನನಗೆ ಸಂತೃಪ್ತಿ ಎಂದು ರೈ ಹೇಳಿದರು.

ನಾರಾಯಣಗುರುಗಳ ಅನುಯಾಯಿ ನಾನು:

ಚಿಕ್ಕ ವಯಸ್ಸಿನಿಂದಲೇ ಹಿರಿಯರ ಆಶೀರ್ವಾದದೊಂದಿಗೆ ಜನಸೇವೆ ಮಾಡಿಕೊಂಡು ಬಂದವನು. ಎಲ್ಲಾ ಜಾತಿ-ಧರ್ಮದ ಜನರ ಪ್ರೀತಿಯನ್ನು ಪಡೆದವನು. ಯಾವುದೇ ಜಾತಿ-ಧರ್ಮಗಳ ನಡುವೆ ಯಾವುದೇ ತಾರತಮ್ಯ ಮಾಡಿದವನಲ್ಲ. ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂಬ ವಿಚಾರವನ್ನು ಪ್ರತಿಪಾದಿಸಿದ ಬ್ರಹ್ಮಶ್ರೀ ನಾರಾಯಣಗುರುಗಳ ಅನುಯಾಯಿ ನಾನು. ಕುವೆಂಪು, ಅಂಬೇಡ್ಕರ್, ಬಸವಣ್ಣನವರ ಚಿಂತನೆಯಡಿ ಸಮಾಜದಲ್ಲಿ ಪರಸ್ಪರ ಶಾಂತಿ-ಸಾಮರಸ್ಯದ ಜೀವನಕ್ಕೆ ವಿಶೇಷ ಒತ್ತು ನೀಡಿ ಬದುಕಿದವನು ನಾನು ಎಂದು ರೈ ತಿಳಿಸಿದರು.

ಭಾಷಣ ಆರಂಭಿಸುತ್ತಿದ್ದಂತೆ, ನೆರೆದಿದ್ದ ಜನಸಮೂಹದ ಪ್ರೀತಿ, ಗೌರವವನ್ನು ನೋಡಿ ರೈಯವರು ಭಾವುಕರಾದರು. ಭಾಷಣದ ನಡುನಡುವೆ ರೈಯವರು ಭಾವುಕರಾದುದು ಕಂಡು ಬಂತು. ಅಭಿಮಾನಿಗಳು ಆಗಾಗ್ಗೆ ರೈಯವರಿಗೆ ಜೈಕಾರ ಹಾಕಿದರು. ಮಾತು ಮುಗಿಸುತ್ತಿದ್ದಂತೆ ರೈಯವರು ವೇದಿಕೆಯ ಎದುರು ಬಂದು ಜನರಿಗೆ ಕೈಮುಗಿದು ಸಾಷ್ಟಾಂಗ ಪ್ರಣಾಮವನ್ನು ಸಲ್ಲಿಸಿದರು.

ರಾಜಸ್ಥಾನದ ಕಾಂಗ್ರೆಸ್ ಮುಖಂಡ ಆಬಿದ್ ಕಾಗ್ಝಿ, ಹಿರಿಯ ಮುಖಂಡರಾದ ಬಿ.ಎಚ್. ಖಾದರ್, ಅಶ್ವನಿ ಕುಮಾರ್ ರೈ, ಕೆಪಿಸಿಸಿ ಸದಸ್ಯರುಗಳಾದ ಪಿಯೂಸ್ ಎಲ್. ರೊಡ್ರಿಗಸ್, ಚಂದ್ರಪ್ರಕಾಶ್ ಶೆಟ್ಟಿ, ಬಂಟ್ವಾಳ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಬೇಬಿ ಕುಂದರ್, ಪಾಣೆಮಂಗಳೂರು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ಪ್ರಚಾರ ಸಮಿತಿ ಅಧ್ಯಕ್ಷ ಉಮೇಶ್ ಸಪಲ್ಯ, ಪ್ರಮುಖರುಗಳಾದ ಪದ್ಮಶೇಖರ್ ಜೈನ್, ಮೊಹಮ್ಮದ್ ಶರೀಫ್, ಲುಕ್ಮಾನ್ ಬಂಟ್ವಾಳ್, ಮಾಯಿಲಪ್ಪ ಸಾಲ್ಯಾನ್, ಸುದರ್ಶನ್ ಜೈನ್, ಅಬ್ಬಾಸ್ ಅಲಿ, ಪಿ.ಎ. ರಹೀಂ, ಸುರೇಶ್ ಜೋರಾ, ಶಬೀರ್ ಸಿದ್ದಕಟ್ಟೆ, ಜಯಂತಿ ಪೂಜಾರಿ, ಲವೀನಾ ವಿಲ್ಮಾ ಮೊರಾಸ್, ಸುಭಾಶ್ ಕೊಲ್ನಾಡು, ಜನಾರ್ಧನ ಚೆಂಡ್ತಿಮಾರ್, ವಾಸು ಪೂಜಾರಿ, ಜೊಸ್ಪಿನ್ ಡಿಸೋಜ, ಜೆಸಿಂತಾ ಡಿಸೋಜಾ, ನವಾಝ್ ಬಡಕಬೈಲ್, ಮೊಹಮ್ಮದ್ ನಂದರಬೆಟ್ಟು, ಪರಮೇಶ್ವರ ಮೂಲ್ಯ, ನಾರಾಯಣ ನಾಯ್ಕ್, ಅಣ್ಣು ಖಂಡಿಗ, ಚಂದ್ರಹಾಸ್ ನಾಯ್ಕ್, ಸಂಪತ್ ಕುಮಾರ್ ಶೆಟ್ಟಿ, ಮೋಹನ್ ಶೆಟ್ಟಿ ಪಂಜಿಕಲ್ಲು, ಮೊಹಮ್ಮದ್ ನಂದಾವರ, ಪ್ರೀತಿರಾಜ್ ದ್ರಾವಿಡ, ಇಬ್ರಾಹಿಂ ಕೈಲಾರ, ಜಗದೀಶ್ ಕೊಯಿಲ, ಪ್ರವೀಣ್ ಬಂಟ್ವಾಳ್, ಸದಾಶಿವ ಬಂಗೇರ, ಹಸೈನಾರ್ ಶಾಂತಿಅಂಗಡಿ, ಸುರೇಶ್ ಬಿ.ನಾವೂರು, ಲೋಲಾಕ್ಷ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಬಾಲಕೃಷ್ಣ ಆಳ್ವ ಕೊಡಾಜೆ ಕಾರ್ಯಕ್ರಮ ನಿರೂಪಿಸಿದರು.