ಕರಾವಳಿ ಕಲೋತ್ಸವಕ್ಕೆ ವ್ಯಾಪಕ ಸಿದ್ಧತೆ

ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಬೆಂಗಳೂರು ಮತ್ತು ಚಿಣ್ಣರಲೋಕ ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್ ಬಂಟ್ವಾಳ ಆಶ್ರಯದಲ್ಲಿ ಡಿ.21 ರಿಂದ ಜ.1ರವರೆಗೆ ಬಿ.ಸಿ.ರೋಡು ಗಾಣದಪಡ್ಪು ಬ್ರಹ್ಮಶ್ರೀ ನಾರಾಯಣ ಗುರುಮಂದಿರದ ಬಳಿಯ ವಿಶಾಲ ಮೈದಾನದಲ್ಲಿ ಕೀರ್ತಿಶೇಷ ಪದ್ಮಶ್ರೀ ಡಾ.ಕದ್ರಿ ಗೋಪಾಲನಾಥ ವೇದಿಕೆಯಲ್ಲಿ ನಡೆಯಲಿರುವ ಕರಾವಳಿ ಕಲೋತ್ಸವ 2019-20ಕ್ಕೆ ವ್ಯಾಪಕ ಸಿದ್ಧತೆ ನಡೆಯುತ್ತಿದೆ.
ನಿರಂತರ 12 ದಿನಗಳ ಕಾಲ ನಡೆಯುವ ಸಾಂಸ್ಕ್ರತಿಕ ಹಬ್ಬಕ್ಕೆ ಬಿ.ಸಿ.ರೋಡು ನಗರ ಸಜ್ಜಾಗುತ್ತಿದ್ದು ಕಲೋತ್ಸವದ ಮೈದಾನದಲ್ಲಿ ಭರದ ಸಿದ್ಧತೆ ನಡೆಯುತ್ತಿದೆ.
ಉದ್ಘಾಟನಾ ಸಮಾರಂಭ
ಡಿ.21 ರಂದು ಸಂಜೆ 4.30 ಕ್ಕೆ ಬಿ.ಸಿ.ರೋಡು ಶ್ರೀ ಅನ್ನಪೂರ್ಣೇಶ್ವರಿ ಕಲಾಮಂಟಪದಿಂದ ಸಭಾಂಗಣದವರೆಗೆ ಜಾನಪದ ದಿಬ್ಬಣದ ವೈಭವಯುತ ಮೆರವಣಿಗೆ, ಸಂಜೆ 6ಕ್ಕೆ ಸಚಿವರು, ಶಾಸಕರು, ಗಣ್ಯರ ಸಮಕ್ಷಮದಲ್ಲಿ ಕರಾವಳಿ ಕಲೋತ್ಸವ- ಚಿಣ್ಣರೋತ್ಸವದ ಉದ್ಘಾಟನೆ, ಚಿಣ್ಣರ ಪ್ರಶಸ್ತಿ ಪ್ರದಾನ, ಯಕ್ಷಗಾನ ಕಲಾವಿದ ಸರಪಾಡಿ ಅಶೋಕ ಶೆಟ್ಟಿಯವರಿಗೆ ಕರಾವಳಿ ಸೌರಭ ಪ್ರಶಸ್ತಿ ಪ್ರದಾನ, ಜಾನಪದ ನೃತ್ಯ ಪ್ರದರ್ಶನ, ರಾಗರಂಜಿನಿ ಕಾರ್ಯಕ್ರಮ ನಡೆಯಲಿದೆ.
ಡಿ.22 ರಂದು ಬೆಳಿಗ್ಗೆ 9 ಕ್ಕೆ ಕರಾವಳಿ ಸರಿಗಮಪ – ಮೆಗಾ ಅಡಿಷನ್, ಮಧ್ಯಾಹ್ಮ 3ಕ್ಕೆ ಕರಾವಳಿ ಝೇಂಕಾರ ಚೆಂಡೆ ಸ್ಪರ್ಧೆಯ ಉದ್ಘಾಟನೆ, ರಾತ್ರಿ 8 ಕ್ಕೆ ಚೆಂಡೆ ಫೈನಲ್ ಸ್ಪರ್ಧೆ ನಡೆಯಲಿದೆ.
ಚಿಣ್ಣರೋತ್ಸವ
ಡಿ.,23ರಂದು ಚಿಣ್ಣರೋತ್ಸವ ಅಧ್ಯಕ್ಷ ಮಾ.ಅಶ್ಲೇಷ್ ಕೆ.ಅಧ್ಯಕ್ಷತೆಯಲ್ಲಿ ಚಿಣ್ಣರೋತ್ಸವ ನಡೆಯಲಿದ್ದು ಸಂಜೆ ಚಿಣ್ಣರಲೋಕ ಕಲಾವಿದರಿಂದ ಸಾಂಸ್ಕ್ರತಿಕ ವೈವಿಧ್ಯ, ಡಿ. 24 ರಂದು ಕರಾವಳಿ ಡ್ಯಾನ್ಸ್ ಧಮಾಕ, ಡಿ.25 ರಂದು ಕರಾವಳಿ ಸರಿಗಮಪ ವಿಶೇಷ ಸ್ಪರ್ಧಾ ಕಾರ್ಯಕ್ರಮಗಳು ನಡೆಯಲಿದೆ.
ನಾಟಕೋತ್ಸವ
ಡಿ.26 ರಂದು ನಾಟಕೋತ್ಸವ ಉದ್ಘಾಟನೆಗೊಳ್ಳಲಿದ್ದು ಡಿ.31 ರವರೆಗೆ ಪ್ರತೀ ದಿನ ಸಂಜೆ 7.30 ಕ್ಕೆ ತಾಲೂಕಿನ ಕಲಾತಂಡಗಳಿಂದ ನಾಟಕ ಪ್ರದರ್ಶನವಿದೆ. ಜ.1 ರಂದು ಸಂಜೆ ಸಮಾರೋಪ ಸಮಾರಂಭ, ಬಹುಮಾನ ವಿತರಣ,ಸಾಂಸ್ಕ್ರತಿಕ ಕಾರ್ಯಕ್ರಮಗಳೊಂದಿಗೆ ಕರಾವಳಿ ಕಲೋತ್ಸವವು ಸಮಾಪನಗೊಳ್ಳಲಿದೆ.
ಸನ್ಮಾನ,ಪುರಸ್ಕಾರ
ಉತ್ಸವದ ಪ್ರತೀ ದಿನಗಳಲ್ಲೂ ಗಣ್ಯರ ಉಪಸ್ಥಿತಿಯಲ್ಲಿ ಸಭಾ ಕಾರ್ಯಕ್ರಮ, ಸಾಧಕರಿಗೆ ಸನ್ಮಾನ, ಪ್ರತಿಭಾವಂತರಿಗೆ ಪುರಸ್ಕಾರ, ವಿವಿಧ ಕಲಾ ತಂಡಗಳಿಂದ ಸಾಂಸ್ಕ್ರತಿಕ ವೈಭವ, ಸಿನಿಮಾ ಅವಲೋಕನ, ಸಿನಿಮಾ ತಾರೆಯರ ಸಾಥ್ ಕರಾವಳಿ ಕಲೋತ್ಸವಕ್ಕೆ ಮೆರುಗು ನೀಡಲಿದೆ. ಕರಾವಳಿ ಕಲೋತ್ಸವ ಅಧ್ಯಕ್ಷ ಸುದರ್ಶನ್ ಜೈನ್, ಗೌರವಾಧ್ಯಕ್ಷ ಜಯರಾಮ ರೈ, ಪ್ರಧಾನ ಸಂಚಾಲಕ ಮೋಹನದಾಸ ಕೊಟ್ಟಾರಿ ಮುನ್ನೂರು ನೇತೃತ್ವದಲ್ಲಿ ಸಮಿತಿಯ ಪ್ರಮುಖರ ತಂಡ, ಉಪಸಮಿತಿಗಳು ಕರಾವಳಿ ಕಲೋತ್ಸವದ ಸಿದ್ಧತೆಯಲ್ಲಿ ತೊಡಗಿಸಿಕೊಂಡಿದೆ.