ಜನರು ಇಷ್ಟಪಟ್ಟದ್ದರಿಂದ ರಾಜೇಶ್ ನಾಯ್ಕ್ ಮತ್ತೊಮ್ಮೆ ಶಾಸಕರಾಗಿದ್ದಾರೆ- ಶಾಸಕರ ಕಚೇರಿ ಉದ್ಘಾಟಿಸಿ ಡಾ. ಕಲ್ಲಡ್ಕ ಪ್ರಭಾಕರ ಭಟ್

ಬಂಟ್ವಾಳ: ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರ ಕಚೇರಿಯನ್ನು ಬಿ.ಸಿ.ರೋಡಿನಲ್ಲಿ ಸೋಮವಾರ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ ಭಟ್ ಉದ್ಘಾಟಿಸಿದರು

.

ಈ ಸಂದರ್ಭ ಮಾತನಾಡಿದ ಅವರು ರಾಜೇಶ್ ನಾಯ್ಕ್ ಅವರನ್ನು ಜನರು ಇಷ್ಟಪಟ್ಟ ಹಿನ್ನೆಲೆಯಲ್ಲಿ ಅವರು ಮತ್ತೊಮ್ಮೆ ಶಾಸಕರಾಗಿದ್ದಾರೆ. ಜನ ಅಪೇಕ್ಷೆ ಪಡುವವರೇ ನಾಯಕರಾಗಬೇಕು. ಕಳೆದ ಐದು ವರ್ಷಗಳಲ್ಲಿ ರಾಜೇಶ್ ನಾಯ್ಕ್ ಮಾಡಿದ ಸಮಾಜಮುಖಿ ಕೆಲಸಗಳಿಂದ ಜನ ಬಿಜೆಪಿಯನ್ನು ಮತ್ತು ರಾಜೇಶ್ ನಾಯ್ಕ್ ಅವರನ್ನು ಒಪ್ಪಿಕೊಂಡಿದ್ದಾರೆ ಎಂದರು.

ಎಲ್ಲಿ ಸಮಸ್ಯೆ ಇದೆ, ಎಲ್ಲಿ ಲೋಪ ಇದೆ, ಅಲ್ಲಿ ಧಾವಿಸುವ ಪ್ರವೃತ್ತಿ ರಾಜೇಶ್ ನಾಯ್ಕ್ ಅವರಿಗಿದೆ. ವಿಜಯೋತ್ಸವ ಮೆರವಣಿಗೆಗೆ ಮಾಡುವ ಖರ್ಚನ್ನು ಸಂಕಷ್ಟದಲ್ಲಿರುವವರ ಮನೆಗೆ ನೀಡುವ ರಚನಾತ್ಮಕ ಕಾರ್ಯಕ್ಕೆ ರಾಜೇಶ್ ನಾಯ್ಕ್ ಮುಂದಾಗಿದ್ದು ಇದು ಇತರರಿಗೆ ಮಾದರಿಯಾಗಿದೆ ಎಂದು ಭಟ್ ಹೇಳಿದರು.

ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಮಾತನಾಡಿ, ನಾನು ಕಳೆದ ಹತ್ತು ವರ್ಷಗಳಿಂದ ಜನರೊಂದಿಗಿದ್ದು ಕೆಲಸ ಮಾಡಿದ್ದೇನೆ. ಇದೀಗ ಎರಡನೇ ಬಾರಿ ಶಾಸಕನಾಗಿ ಆಯ್ಕೆಯಾಗಿದ್ದು, ಹಿರಿಯರ ಮಾರ್ಗದರ್ಶನ ಹಾಗೂ ಜನತೆಯ ಆಶೀರ್ವಾದದ ಮೂಲಕ ಕೆಲಸ ಮಾಡುತ್ತೇನೆ ಎಂದು ಹೇಳಿದರು.

ಬಿಜೆಪಿ ಕ್ಷೇತ್ರಾಧ್ಯಕ್ಷ ದೇವಪ್ಪ ಪೂಜಾರಿ, ಮಾಜಿ ಶಾಸಕ ಎ.ರುಕ್ಮಯ ಪೂಜಾರಿ, ಪ್ರಮುಖರಾದ ಹರಿಕೃಷ್ಣ ಬಂಟ್ವಾಳ, ಸುಲೋಚನಾ ಜಿ.ಕೆ.ಭಟ್, ದೇವದಾಸ್ ಶೆಟ್ಟಿ, ಸುದರ್ಶನ ಬಜ, ರವೀಶ್ ಶೆಟ್ಟಿ ಕರ್ಕಳ, ಗೋವಿಂದ ಪ್ರಭು, ಮಾಧವ ಮಾವೆ ಸಹಿತ ಪಕ್ಷದ ವಿವಿಧ ಮುಖಂಡರು ಉಪಸ್ಥಿತರಿದ್ದು ಶುಭ ಹಾರೈಸಿದರು.