ಬಂಟ್ವಾಳದಲ್ಲಿ ಸರಕಾರದ ಸಿಮಂಟ್ ಕಳ್ಳತನ ಮಾಡುವವರ ಜಾಲವನ್ನು ಪತ್ತೆಹಚ್ಚಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು-ಜಗದೀಶ್ ಕೊಯಿಲ ಆಗ್ರಹ

ಬಂಟ್ವಾಳ: ಬಂಟ್ವಾಳದಲ್ಲಿ ಸರಕಾರದ ಸಿಮಂಟ್ ಕಳ್ಳತನ ಮಾಡುವವರ ಜಾಲವನ್ನು ಪತ್ತೆಹಚ್ಚಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಅಧಿಕಾರಿಗಳು ಈ ಬಗ್ಗೆ ರಾಜಕೀಯ ಒತ್ತಡಕ್ಕೆ ಒಳಗಾಗದೆ ನಿಕ್ಷಪಕ್ಷಪಾತ ತನಿಖೆ ನಡೆಸಿ ಸಿಮೆಂಟ್ ಹಗರಣವನ್ನು ಬಯಲಿಗೆಳೆಯಬೇಕು ಎಂದು
ರಾಜೀವ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಗದೀಶ್ ಕೊಯಿಲ ಆಗ್ರಹಿಸಿದ್ದಾರೆ.

ಬಿ.ಸಿ.ರೋಡಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಗದೀಶ್ ಕೊಯಿಲ, ಇಂತಹ ಹಗರಣ ರಾಜರೋಷವಾಗಿ ಆಗಬೇಕಾದರೆ ಇದರ ಹಿಂದೆ ಯಾರಿದ್ದಾರೆ? ಎನ್ನುವುದು ಗೊತ್ತಾಗಬೇಕು ಎಂದರು.

ಮಾರಾಟಕ್ಕೆ ಅಲ್ಲದ ಸಿಮೆಂಟ್‌ಗಳನ್ನು ಬಿಜೆಪಿ ಮುಖಂಡನ ಮನೆಯಲ್ಲಿ ಅಕ್ರಮವಾಗಿ ದಾಸ್ತನಿರಿಸಿದ್ದಲ್ಲದೆ ಇದೇ ಸಿಮೆಂಟ್ ಬಳಸಿ ಎರಡು ಮನೆಗಳನ್ನು ನಿರ್ಮಿಸಲಾಗಿದೆ. ಈ ಬಗ್ಗೆ ಸೂಕ್ತ ಕಾನೂನು ತನಿಖೆ ನಡೆಯಬೇಕು ಎಂದು ಜಗದೀಶ್ ಕೊಯಿಲ ಒತ್ತಾಯಿಸಿದರು.

ಘಟನೆಯ ವಿವರ:

ಇತ್ತೀಚೆಗೆ ಬಿ. ಮೂಡ ಗ್ರಾಮದ ಪಲ್ಲಮಜಲು ಎಂಬಲ್ಲಿ ಖಾಸಗಿ ವ್ಯಕ್ತಿಯ ಮನೆ ನಿರ್ಮಾಣದ ಸಂದರ್ಭ ತಹಶೀಲ್ದಾರ್ ನೇತೃತ್ವದ ಅಧಿಕಾರಿಗಳ ತಂಡ ದಾಳಿ ನಡೆಸಿ 21 ಗೋಣಿ ಸಿಮೆಂಟ್ ಅನ್ನು ವಶಕ್ಕೆ ಪಡೆದುಕೊಂಡಿದೆ. ಈ ನಿರ್ಮಾಣ ಹಂತದಲ್ಲಿರುವ ಕಟ್ಟಡವು ಬಂಟ್ವಾಳ ಬಿಜೆಪಿ ಮುಖಂಡನ ಸಂಬಂಧಿಯ ಮನೆಯಾಗಿದೆ. ಇದೇ ಸಂದರ್ಭ ಅರಳದಲ್ಲಿರುವ ಬಿಜೆಪಿ ಮುಖಂಡನ ಮನೆಗೆ ದಾಳಿ ಮಾಡಿದಾಗ ನಿರ್ಮಾಣ ಹಂತದಲ್ಲಿರುವ ಮನೆಯಲ್ಲೂ 39 ಗೋಣಿ ಸಿಮೆಂಟ್ ಚೀಲಗಳು ಸಿಕ್ಕಿದ್ದು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದರು. ಈ ವೇಳೆ ಖಾಸಗಿ ಕಟ್ಟಡ ನಿರ್ಮಾಣಕ್ಕೆ ಬಳಕೆ ಮಾಡಿದ ಸಿಮೆಂಟ್‌ನ ಖಾಲಿ ಚೀಲಗಳನ್ನು ಬೆಂಕಿ ಹಾಕಿ ಸುಟ್ಟು ಹಾಕಲಾಗಿದೆ. ರಸ್ತೆ ನಿರ್ಮಾಣಕ್ಕೆ ಬಳಸಲು ಬಂದಿದ್ದ ಸಿಮೆಂಟನ್ನು ಬಿಜೆಪಿ ಮುಖಂಡ ಖಾಸಗಿ ಮನೆ ನಿರ್ಮಾಣಕ್ಕೆ ಬಳಸಲು ಅವಕಾಶ ಇದೆಯೇ? ಎಂದು ಜಗದೀಶ್ ಕೊಯಿಲ ಪ್ರಶ್ನಿಸಿದರು.

ಸುದ್ದಿಗೋಷ್ಟಿಯಲ್ಲಿ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ಹಿಂದುಳಿದ ವರ್ಗಗಳ ಸಮಿತಿಯ ಜಿಲ್ಲಾ ಪದ್ಮನಾಭ ಸಾಮಂತ, ಬಂಟ್ವಾಳ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಸುರೇಶ್ ಪೂಜಾರಿ ಜೋರಾ ಉಪಸ್ಥಿತರಿದ್ದರು.

ವರದಿ:ಗೋಪಾಲ ಅಂಚನ್
ಸಂಪಾದಕರು:
ಯುವಧ್ವನಿ ನ್ಯೂಸ್ ಕರ್ನಾಟಕ
ಮೊ:9449104318