ನೆತ್ತರಕೆರೆ ನವೋದಯಕ್ಕೆ ರಾಜ್ಯೋತ್ಸವ ಪ್ರಶಸ್ತಿಯ ಗರಿ

ದ.ಕ.ಜಿಲ್ಲೆಯ ಬಂಟ್ವಾಳ ತಾಲೂಕಿನ ಕಳ್ಳಿಗೆ ಗ್ರಾಮದ ನೆತ್ತರಕೆರೆ ಎಂಬಲ್ಲಿ ಕಾರ್ಯಾಚರಿಸುತ್ತಿರುವ
ನವೋದಯ ಮಿತ್ರ ಕಲಾವೃಂದವು ಈ ಬಾರಿಯ ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಪಾತ್ರವಾಗಿದೆ.

ಯಶಸ್ವಿ ಮೂವತ್ತ ನಾಲ್ಕನೆಯ ವರ್ಷಕ್ಕೆ ಹೆಜ್ಜೆ ಇಡುತ್ತಿರುವ ನವೋದಯವು ಇದೀಗ ತನ್ನ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿಯೆಂಬಂತೆ ರಾಜ್ಯೋತ್ಸವ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.
ಸೇವೆಯಲ್ಲಿ ಸಾರ್ಥಕತೆ, ಸತ್ಯಕ್ಕೆ ಮಾನ್ಯತೆ ಎಂಬ ದ್ಯೇಯವಾಕ್ಯದಡಿ ಸಮಾಜದ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿರುವ ನವೋದಯ ಮಿತ್ರ ಕಲಾವೃಂದವು
ಸಾಮಾಜಿಕ, ಶೈಕ್ಷಣಿಕ, ಕಲೆ, ಧಾರ್ಮಿಕ, ಆರೋಗ್ಯ ಹಾಗೂ ಗ್ರಾಮ ವಿಕಾಸದ ಕೈಂಕರ್ಯದಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದೆ. ನವೋದಯ ಮಿತ್ರ ಕಲಾವೃಂದದ ಒಡನಾಡಿಯಾಗಿ ಅಸ್ಥಿತ್ವಕ್ಕೆ ಬಂದ ನೇತ್ರಾವತಿ ಮಾತೃ ಮಂಡಳಿಯು ಮಹಿಳಾ ಸ್ವಾವಲಂಬಿ ತತ್ವದಡಿಯಲ್ಲಿ ಜತೆಯಾಗಿ ಕಾರ್ಯನಿರ್ವಹಿಸುತ್ತಿದೆ

ಶೈಕ್ಷಣಿಕ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ:
ಕಳ್ಳಿಗೆ ನೆತ್ತರಕೆರೆ ದ.ಕ.ಜಿ.ಪ.ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಕೇಂದ್ರವಾಗಿಸಿಕೊಂಡು ಕಾರ್ಯಕ್ರಮವನ್ನು ಆಯೋಜಿಸುತ್ತಾ ಬಂದಿರುವ ನವೋದಯವು ಶಾಲೆ ಮತ್ತು ಮಕ್ಕಳ ಬೆಳವಣಿಗೆಯಲ್ಲಿ ವಿಶೇಷವಾಗಿ ಶ್ರಮಿಸಿದೆ
ಮಕ್ಕಳಿಗಾಗಿ ಹಲವು ಪಾಠೇತರ ಚಟುವಟಿಕೆಗಳ ಆಯೋಜನೆ, ಪ್ರತಿಭಾವಂತ ಮಕ್ಕಳಿಗೆ ಪುರಸ್ಕಾರ, ಸಾಧಕ ಶಿಕ್ಷಕರು- ವಿದ್ಯಾರ್ಥಿಗಳಿಗೆ ಸನ್ಮಾನ, ರಾಷ್ಟ್ರೀಯ ಹಬ್ಬಗಳ ಅರ್ಥಪೂರ್ಣ ಆಯೋಜನೆ ಮೊದಲಾದ ಕಾರ್ಯಕ್ರಮಗಳೊಂದಿಗೆ ಮಾದರಿ ಶಾಲೆಯಾಗಿ ಗುರುತಿಸುವಲ್ಲಿ ನವೋದಯ ಮಿತ್ರ ಕಲಾವೃಂದದ ಪ್ರಯತ್ನ ಗಮನಾರ್ಹವಾದುದು.
“ಈ ಶಾಲೆಯನ್ನು ಸರಕಾರಿ ನಿಯಮದಂತೆ ದತ್ತು ಸ್ವೀಕರಿಸಿ ಶಾಲೆಗೆ ಸುಮಾರು 50 ಲಕ್ಷ ರೂಪಾಯಿ ವೆಚ್ಚದಲ್ಲಿ ಕಟ್ಟಡ ಸಹಿತ ಮೂಲಭೂತ ಸೌಲಭ್ಯವನ್ನು ಒದಗಿಸಿಕೊಡುವ ಮೂಲಕ ನವೋದಯ ಮಿತ್ರ ಕಲಾವೃಂದವು ಶೈಕ್ಷಣಿಕ ವಲಯದ ಪ್ರಶಂಸೆಗೆ ಪಾತ್ರವಾಗಿದೆ.”

ನಿರಂತರ ಧಾರ್ಮಿಕ, ರಾಷ್ಟ್ರಪ್ರೇಮದ ಚಿಂತನೆಯ ಕಾರ್ಯಕ್ರಮಗಳ ಆಯೋಜನೆ,
ಆರೋಗ್ಯ ಶಿಬಿರಗಳು,
ರಕ್ತದಾನ ಶಿಬಿರಗಳು, ಸಂಕಷ್ಟದಲ್ಲಿರುವವರಿಗೆ
ಸಹಾಯಹಸ್ತ ಮೊದಲಾದ ಕಾರ್ಯಕ್ರಮಗಳನ್ನು ನವೋದಯವು ನಡೆಸುತ್ತಿದೆ.

ಕೃಷಿ/ಮನೆ ನಿರ್ಮಾಣ
ಹಡೀಲು ಬಿದ್ದ ಭೂಮಿಯಲ್ಲಿ ಕೃಷಿ ಚಟುವಟಿಕೆ, ಮೂರು ಕುಟುಂಬಗಳಿಗೆ ಸಂಘಟನೆಯ ವತಿಯಿಂದ ಮನೆ ನಿರ್ಮಾಣ, ಗ್ರಾಮೀಣ ಕ್ರೀಡಾಕೂಟದ ಸಂಘಟನೆ, ಪ್ರತಿಭಾವಂತರಿಗೆ ಪುರಸ್ಕಾರ, ಸಾಧಕರಿಗೆ ಸನ್ಮಾನ, ಸಂಘದ ಸದಸ್ಯರಿಂದ ಸಾಂಸ್ಕ್ರತಿಕ ವೈಭವ, ನಾಟಕಗಳ ಪ್ರದರ್ಶನ, ಗ್ರಾಮೀಣ ಕಲಾವಿದರಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ನಾಟಕ ಸ್ಪರ್ಧೆಯ ಆಯೋಜನೆ, ಆಟಿಡೊಂಜಿ ಗಮ್ಮತ್ತ್, ಕೆಸರುಗದ್ದೆಯ ಆಟಗಳ ಆಯೋಜನೆ, ಕಲಾವಿದರನ್ನು ಗುರುತಿಸಿ ಗೌರವಿಸುವಿಕೆ ಮೊದಲಾದವುಗಳೆಲ್ಲವೂ ನವೋದಯದ ಸಾಧನೆಯ ಹಾದಿಯಲ್ಲಿನ ಹೆಜ್ಜೆಗಳಾಗಿದೆ. ದಾಮೋದರ ನೆತ್ತರಕೆರೆ ಸಂಚಾಲಕತ್ವದಲ್ಲಿ ಮುನ್ನಡೆಯುತ್ತಿರುವ ಸಂಘಟನೆಯಲ್ಲಿ ಪ್ರಸ್ತುತ ಪಿ.ಸುಬ್ರಹ್ಮಣ್ಯ ರಾವ್ ಗೌರವಾಧ್ಯಕ್ಷರಾಗಿ, ಬಿ.ಸುರೇಶ್ ಭಂಡಾರಿ ಅರ್ಬಿ ಅಧ್ಯಕ್ಷರಾಗಿ, ಮೋಹನ್ ಕುಲಾಲ್ ಉಪಾಧ್ಯಕ್ಷರಾಗಿ, ಲೋಕೇಶ್ ನೆತ್ತರಕೆರೆ ಕಾರ್ಯದರ್ಶಿಯಾಗಿ, ಲೋಹಿತ್ ನೆತ್ತರಕೆರೆ ಕೋಶಾಧಿಕಾರಿಯಾಗಿದ್ದು ಹಿರಿಯರ ಮಾರ್ಗದರ್ಶನದೊಂದಿಗೆಸರ್ವಸದಸ್ಯರು ಸಕ್ರೀಯವಾಗಿ ತೊಡಗಿಸಿಕೊಂಡಿದ್ದಾರೆ.ನಾಟಕ ಸ್ಪರ್ಧೆಯಲ್ಲಿ ಪ್ರಶಸ್ತಿ, ನೆಹರು ಯುವಕೇಂದ್ರದ ಪ್ರಶಸ್ತಿ ಸೇರಿದಂತೆ ಸಂಘಟನೆಗೆ ಹಲವು ಪ್ರಶಸ್ತಿ, ಪುರಸ್ಕಾರಗಳು ಪ್ರಾಪ್ತವಾಗಿದ್ದು ಇದೀಗ ರಾಜ್ಯೋತ್ಸವ ಪ್ರಶಸ್ತಿ ನವೋದಯದ ಹೆಸರನ್ನು ಮತ್ತಷ್ಟು ಎತ್ತರಿಸಿದೆ.

ಲೇಖನ:
ಎ. ಗೋಪಾಲ ಅಂಚನ್