ಕೊರೊನಾ ಮಾತ್ರವಲ್ಲ, ಚಾನಲ್ ಗಳ ಬಗ್ಗೆಯೂ ಎಚ್ಚರಿಕೆ ಇರಲಿ ಭಯಬೇಡ, ಕಂಟ್ರೋಲ್ ನಿಮ್ಮ ಕೈಯಲ್ಲಿದೆ

ಜಗತ್ತಿನೆಲ್ಲೆಡೆ ಕೊರೊನಾ ಮಹಾಮ್ಮಾರಿ ಹರಡುತ್ತಿರುವ ಹಿನ್ನೆಲೆಯಲ್ಲಿ ಮನುಕುಲಕ್ಕೆ ಎದುರಾಗಿರುವ ಆತಂಕವನ್ನು ಕೆಲವು ದೃಶ್ಯ ಮಾಧ್ಯಮಗಳು ( ನ್ಯೂಸ್ ಚಾನಲ್ ಗಳು) ಮತ್ತಷ್ಟು ಹೆಚ್ಚಿಸುವ ಮೂಲಕ ಮಾನವ ಬದುಕಿನಲ್ಲಿ ಚೆಲ್ಲಾಟವಾಡುತ್ತಿರುವುದು ನಿಜಕ್ಕೂ ನಮ್ಮ ನಾಡಿನ ದುರಂತವೆಂದರೂ ತಪ್ಪಲ್ಲ. ಬಹುಶಃ ಬಹುತೇಕ ವ್ಯವಸ್ಥೆಗಳಿರುವ ಲಾಕ್ ಡೌನ್ ಇಂತಹ ಕೆಲವು ದೃಶ್ಯಮಾಧ್ಯಮಗಳಿಗೂ ಅನ್ವಯವಾಗುತ್ತಿದ್ದರೆ ಜನಸಾಮಾನ್ಯರು ಸ್ವಲ್ಪ ಮಟ್ಟಿನ ಸಮಾಧಾನದಿಂದಲಾದರೂ ಬದುಕುತ್ತಿದ್ದರೇನೋ ಎಂದು ಅನಿಸಿದರೂ ತಪ್ಪಲ್ಲ.
ಇಂತಹ ಸವಾಲಿನ ಸಂದರ್ಭದಲ್ಲಿ ಜನರಲ್ಲಿ ಜಾಗೃತಿ ಮೂಡಿಸಿ, ಜತೆಯಲ್ಲಿ ಒಂದಷ್ಟು ಆತ್ಮಸ್ಥೈರ್ಯ, ಬದುಕಿನ ಬಗೆಗಿಷ್ಟು ಭರವಸೆ ತುಂಬಿಸಬೇಕಾದ ಮಾಧ್ಯಮಗಳು ಸಾವು ನೋವುಗಳನ್ನೇ ಅಸ್ತ್ರವಾಗಿಸಿಕೊಂಡು ಅದನ್ನೇ ವೈಭವೀಕರಿಸುವ ಮೂಲಕ ಕೊರೊನಾ ವೈರಸ್ ಗಿಂತಲೂ ಅಪಾಯಕಾರಿಯಾದ ರೀತಿಯಲ್ಲಿ ಭೀತಿಯನ್ನು ಸೃಷ್ಠಿಸುತ್ತಿರುವುದು ಧೃಶ್ಯಮಾಧ್ಯಮಗಳ ಮನೋಧೋರಣೆಯನ್ನು ಜನ ಪ್ರಶ್ನಿಸುವಂತಾಗಿದೆ.
ಮನುಷ್ಯನ ಯೋಚನೆ, ಭಾವನೆ, ಆತ್ಮವಿಶ್ವಾಸ, ಮಾನಸಿಕ ಸ್ಥಿತಿಯ ಮೇಲೆಯೇ ಮಾರಕ ಪರಿಣಾಮ ಬೀರುತ್ತಾ ಕೊರೊನಾ ಬದಲು ಇತರ ಮಾನಸಿಕ ಕಾಯಿಲೆಗಳ ಸೃಷ್ಠಿಗೆ ಪರೋಕ್ಷ ಕಾರಣವಾಗುವ ಇಂತಹ ದೃಶ್ಯ ಮಾಧ್ಯಮಗಳಿಗೆ ಕಡಿವಾಣವಿಲ್ಲವೇ? ಸಾವನ್ನೂ ಸಂಭ್ರಮಿಸುವ ಇಂತಹ ಮಾಧ್ಯಮಗಳಿಗೆ ತನ್ನದೇ ಆದ ನೀತಿ ನಿಯಮಗಳು ಇಲ್ಲವೇ? ಎಂಬಿತ್ಯಾದಿ ನೂರಾರು ಪ್ರಶ್ನೆಗಳು ಪ್ರಜ್ಞಾವಂತ ನಾಗರಿಕರನ್ನು ಹಿಂದೆಂದಿಗಿಂತಲೂ ಹೆಚ್ಚು ಈಗ ಕಾಡತೊಡಗಿದೆ.
ನಿಜ, ಇಂತಹ ಸವಾಲಿನ ಸಂದರ್ಭದಲ್ಲಿ ಮಾಧ್ಯಮಗಳ ಪಾತ್ರ ಹಿರಿದಾದುದು, ಅಷ್ಟೇ ಸೂಕ್ಷ್ಮವಾದುದು ಕೂಡ. ಒಂದೆಡೆ ಜನಸಮುದಾಯಕ್ಕೆ ಕಾಲಕಾಲಕ್ಕೆ ಸರಿಯಾದ ಮಾಹಿತಿ ನೀಡಬೇಕು, ಜಾಗೃತಿ ಮೂಡಿಸಬೇಕು, ಜನರು ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಎಚ್ಚರಿಕೆ ನೀಡಬೇಕು, ವಸ್ತುಸ್ಥಿತಿಯ ಬಗ್ಗೆ ವಾಸ್ತವಿಕ ನೆಲೆಗಟ್ಟಿನಲ್ಲಿ ಬೆಳಕು ಚೆಲ್ಲಬೇಕು, ಸರಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ವಸ್ತುನಿಷ್ಠವಾದ ವಿವರಣೆ ನೀಡಬೇಕು, ಜನರ ಅನಿಸಿಕೆ ಅಭಿಪ್ರಾಯಗಳಿಗೆ ಬೆಲೆ ನೀಡಬೇಕು…ಇತ್ಯಾದಿ ಇತ್ಯಾದಿ ಹಲವು ಮಹತ್ತರ ಜವಾಬ್ಧಾರಿಗಳು ಮಾಧ್ಯಮಗಳ ಮುಂದಿದೆ.
ಕೆಲವು ದೃಶ್ಯ ಮಾಧ್ಯಮಗಳಂತೂ ಇಂತಹ ಜವಾಬ್ಧಾರಿಗಳೊಂದಿಗೆ ಇನ್ನಷ್ಟು ಹೆಚ್ಚುವರಿ ಜವಾಬ್ಧಾರಿಗಳನ್ನು ಹೆಗಲೇರಿಸಿಕೊಂಡು ಪ್ರಾಮಾಣಿಕವಾಗಿ ನಿಭಾಯಿಸಿ ಜನರ ವಿಶ್ವಾಸಕ್ಕೆ ಪಾತ್ರರಾಗುತ್ತಿರುವುದು ಶ್ಲಾಘನೀಯ ಅಂಶ. ಆದರೆ ಕೆಲವು ದೃಶ್ಯ ಮಾಧ್ಯಮಗಳು ದಿನವಿಡೀ ಸಾವು ನೋವುಗಳನ್ನು ವಿಜೃಂಭಿಸುತ್ತಾ, ಒಂದಷ್ಟು ತಪ್ಪು ಸಂದೇಶಗಳನ್ನು ನೀಡುತ್ತಾ, ಮುಂದೇನಾಗುತ್ತದೆ ಎಂಬ ತಮ್ಮದೇ ಆದ ಭ್ರಮೆಗಳನ್ನು ಬಿತ್ತರಿಸುತ್ತಾ ಜನರಲ್ಲಿ ಮತ್ತಷ್ಟು ಆತಂಕವನ್ನು ಸೃಷ್ಠಿಸುತ್ತಾ ಜನರು ಬದುಕಿನ ಮೇಲೆ ನಂಬಿಕೆಯನ್ನೇ ಕಳೆದುಕೊಳ್ಳುವಂತೆ ಮಾಡುತ್ತಿರುವುದು ನಿಜಕ್ಕೂ ಅಘಾತಕಾರಿ ಬೆಳವಣಿಗೆ.
ಇಂತಹ ಬೆಳವಣಿಗೆಯಿಂದ ಈ ಮಾಧ್ಯಮಗಳು ಸಾಧಿಸುವುದಾದರೂ ಏನನ್ನು? ಜನರ ಮೇಲೆ ಬೀರುತ್ತಿರುವ ಪ್ರಭಾವವೇನು? ಯಾರನ್ನೂ ಮೆಚ್ಚಿಸಲು ನಾವು ಇದನ್ನು ಮಾಡುತ್ತಿದ್ದೇವೆ? ಇತ್ಯಾದಿ ಪ್ರಶ್ನೆಗಳನ್ನು ತಮಗೆ ತಾವೇ ಕೇಳದಿದ್ದರೆ, ಒಂದು ಬಾರಿಯಾದರೂ ಆತ್ಮವಿಮರ್ಶೆ ಮಾಡದಿದ್ದರೆ ಕೊರೊನಾಗಿಂತಲೂ ” ಮಾಧ್ಯಮಗಳೇ ಡೇಂಜರ್” ಎನ್ನುವ ಜನಾಭಿಪ್ರಾಯ ಅಕ್ಷರಶಃ ಸತ್ಯವಾಗಿ ಶಾಶ್ವತವಾಗಿ ಬಿಡುವುದರಲ್ಲಿ ಯಾವುದೇ ಸಂದೇಹವೂ ಇಲ್ಲ.
ಕೊರೊನಾ ಮಹಾಮ್ಮಾರಿಯಿಂದ ಜನರು ಕಂಗಾಲಾಗಿದ್ದಾರೆ, ಕೆಲವರು ಈಗಾಗಲೇ ಆತಂಕ ಉದ್ವೇಗ ಖಿನ್ನತೆಗೊಳಗಾಗಿದ್ದಾರೆ, ಈ ಮೊದಲೇ ಅನಾರೋಗ್ಯದಿಂದ ಬಳಲುತ್ತಿದ್ದವರು ಈಗ ಮತ್ತಷ್ಟು ಕುಗ್ಗಿ ಹೋಗಿದ್ದಾರೆ, ಪ್ರತಿಯೊಂದು ಮನೆಯಲ್ಲೂ ಸಹಜವಾಗಿಯೇ ಜನರು ಭಯದಿಂದಲೇ ಬಳಲಿದ್ದಾರೆ. ಇಂತಹ ಸಂದರ್ಭದಲ್ಲಿ ಜನರ ಪಾಲಿಗೆ ಭರವಸೆಯ ಬೆಳಕಾಗಬೇಕಾದ ಮಾಧ್ಯಮಗಳೇ ಕನಿಷ್ಟ ಕಾಮನ್ ಸೆನ್ಸ್ ಗಳನ್ನೇ ಕಳೆದುಕೊಂಡು ಅದ್ಯಾವುದೋ ಪ್ರತಿಷ್ಠೆ, ಸ್ಪರ್ಧೆ, ಟಿ ಆರ್ ಪಿಯ ಅಮಲಿನಲ್ಲಿ ಜನರ ಜೀವನ ಮಟ್ಟವನ್ನೇ ಕುಸಿಯುವಂತೆ ಮಾಡುವುದು ಯಾವ ನ್ಯಾಯ? ಇದೆಂತಹ ಮಾಧ್ಯಮ ನೀತಿ? ಇದ್ಯಾವ ಮಾಧ್ಯಮ ಧರ್ಮ?.
ಮತ್ತೆ ಮತ್ತೆ ಕಾಡುವ ಕೆಲವು ಪ್ರಶ್ನೆಗಳು
ಮುಖ್ಯಾಂಶವೆನ್ನುವ ಕೆಲವು ತುಣುಕು/ ಹೇಳಿಕೆಗಳನ್ನು/ವಿಷಯಗಳನ್ನು ಹತ್ತಾರು ಬಾರಿ ವಾಕ್ಯ/ ಫ್ಯಾರವನ್ನು ತುಂಡರಿಸಿ ಬೇರೆ ಬೇರೆ ಶೈಲಿಯಲ್ಲಿ ಹೇಳುವ ಉದ್ಧೇಶವಾದರೂ ಏನು? ಒಮ್ಮೆ ಹೇಳಿದ್ದು ಅರ್ಥವಾಗದಷ್ಟು ಜನರು ಮೂರ್ಖರೇ, ಅಲ್ಲ ಕಿವುಡರೇ?.
ವಿಶೇಷ ಸುದ್ದಿ, ಸ್ಪೋಟಕ, ಬಾಂಬ್ ಎಂಬಿತ್ಯಾದಿ ಭಯಾನಕ ನಾಮವಿಶೇಷಣಗಳನ್ನಿಟ್ಟು ಮಾಮೂಲಿಯಾದ ಸುದ್ದಿಗಳನ್ನೇ ಮತ್ತೆ ಮತ್ತೆ ದಿನವಿಡೀ, ಮತ್ತೆ ಕೆಲವು ದಿನಗಳಲ್ಲಿ ಅದನ್ನೇ ಚಿಂಗಾಮಿನಂತೆ ಎಳೆಯುವ ಹುಚ್ಚು ಯಾಕೆ?.
ಪ್ರತೀ ಸುದ್ದಿಗೂ ಅದ್ಯಾವ ಸಂಗೀತ ನಿರ್ದೇಶಕ ಮಾಡಿದ ಕರ್ಕಶ ಮ್ಯೂಸಿಕ್, ಅಷ್ಟೇ ಕರ್ಣ ಕಠೋರ ಸ್ವರ, ಅರ್ಥಾತ್ ತುಳುವಿನಲ್ಲಿ ಹೇಳುವ ಬೊಬ್ಬೆ ಪಾಡುನಿ, ನೋಡುಗರ ಕಿವಿ ತಮಟೆ ಒಡೆಯುವ ಹಾಗೆ, ಬಿಪಿ ಇದ್ದವರ ಹೃದಯವೇ ಒಡೆಯುವ ಹಾಗೆ ಪ್ರತೀ ಸುದ್ದಿವಾಹಕರಿಗೂ ಅರಚುವ, ಕಿರುಚುವ, ಬೊಬ್ಬಿಡುವ ಗೀಳು ಯಾಕೆ?. ಯಾವ ಸುದ್ದಿಯನ್ನು ಯಾವ ಸ್ವರಮಟ್ಟದಲ್ಲಿ ಬಿತ್ತರಿಸಬೇಕು, ಎಲ್ಲಿ ಒತ್ತುಕೊಡಬೇಕು, ಧ್ವನಿಯ ಏರಿಳಿತ, ಧ್ವನಿ ಸ್ಪಷ್ಟತೆ, ಉಚ್ಚಾರಣೆ ಇದ್ಯಾವುದರ ಪರಿಜ್ಞಾನವೇ ಇಲ್ಲದೆ ” ಅವರಂತೆ ನಮ್ಮದು ಕೂಡ” ಎಂಬ ಚಟಕ್ಕೆ ಬಿದ್ದು ಎಲ್ಲಾ ಸುದ್ದಿಗಳನ್ನು ಒಂದೇ ರೀತಿಯಲ್ಲಿ ವಾಕರಿಸುವ ಇಂತವರನ್ನು ನಿರೂಪಕರೆಂದೋ, ಹ್ಯಾಂಕರ್ ಗಳೆಂದೋ ಕರೆಯುವುದಾದರೂ ಯಾವ ಮಾನದಂಡದಲ್ಲಿ?.
“ಮುಂದೆ ಭಾರತಕ್ಕೆ ಕಂಟಕ, ಭಾರತದ ಭವಿಷ್ಯ ಏನಾಗಲಿದೆ, ಭಾರತದಲ್ಲಿ ಸೋಂಕಿತರ ಸಂಖ್ಯೆ ಲಕ್ಷಲಕ್ಷ ದಾಟಲಿದೆ, ಅಮೆರಿಕಾ ಆಗಲಿದೆ ಭಾರತ, ಭಾರತ ಇತಿಹಾಸಕ್ಕೆ ಸೇರಲಿದೆಯೇ, ಕರುನಾಡಿಗೆ ಕಂಟಕ, ಕರಾವಳಿಗೆ ಕಾದಿದೆ ಅಪಾಯ” ಎಂಬಿತ್ಯಾದಿ ಭವಿಷ್ಯ ಹೇಳಲು ಇವರೇನು, ಜ್ಯೋತಿಷಿಗಳೇ, ಪವಾಡ ಪುರುಷರೇ?.
ಸೋಂಕಿತರ ಸಂಖ್ಯೆಯನ್ನು ಅಲ್ಲಿ 200, ಇಲ್ಲಿ 500 ಎಂದು ದಿನವಿಡೀ ಬಗೆಬಗೆಯಾಗಿ ಚುನಾವಣಾ ಫಲಿತಾಂಶದಂತೆ, ಕ್ರಿಕೆಟ್ ಕಮೆಂಟ್ರಿಯಂತೆ ಬಿತ್ತರಿಸುವ ಮಾಧ್ಯಮಗಳು ಗುಣಮುಖರಾದ ಸುದ್ದಿಯನ್ನು ಹೆಚ್ಚು ಫೋಕಸ್ ಮಾಡದಿರುವ ಉದ್ಧೇಶವಾದರೂ ಏನು?.
ಸ್ಪರ್ಧೆಯ ತೆವಲಿನಲ್ಲಿ ಅದ್ಯಾವುದೋ ಸುಳ್ಳು ಸುದ್ದಿಗಳನ್ನು ಬಿತ್ತರಿಸಿ ಕೆಲಕ್ಷಣದಲ್ಲೇ ಅದು ಸುಳ್ಳೆಂದು ಜಗಜ್ಜಾಹಿರಾದಾಗ ಮೌನವಾಗುವುದಾದರೂ ಯಾಕೆ? ಜನರಲ್ಲಿ ಕನಿಷ್ಠ ಕ್ಷಮೆಯಾದರೂ ಕೇಳಬಹುದಲ್ಲವೇ?.
” ದಮ್ಮು ಕಟ್ಟಿ ಸಾಯುತ್ತೀರಿ, ಉಸಿರುಗಟ್ಟಿ ಸಾಯುತ್ತೀರಿ, ಕುಳಿತಲ್ಲೇ ಸಾವು, ನಿಮ್ಮ ಮನೆಬಾಗಿಲಲ್ಲೇ ಸಾವು, ನಿಮಗಿದೋ ಭಯಾನಕ ಸಾವು” ಎಂಬಿತ್ಯಾದಿ ಘೋಷಣೆಗಳೊಂದಿಗೆ ಸ್ವತಃ ಸಾವನ್ನು ಅನುಭವಿಸಿದವರಂತೆ, ಯಮರಾಯನಂತೆ ಸಾವಿನ ವಿಧಾನಗಳನ್ನೂ ಜನರ ಮುಂದಿಡುವುದು ಘೋರಪಾಪವಲ್ಲದೆ ಮತ್ತೇನು?.
” ನೀವು ಜೋಪಾನವಾಗಿರಿ, ನಿಮಗೆ ಕಾದಿದೆ ಅಪಾಯ, ನೀವು ಮನೆಯಲ್ಲಿರಿ, ನಿಮ್ಮ ಸಾವು ಸಮೀಪಿಸಿದೆ, ನೀವು ಆರಾಮವಾಗಿರಿ, ನಾವಿದ್ದೇವೆ” ಹೀಗೆ ಭರವಸೆ ನೀಡಲು ಇವರೇನು ವೈಧ್ಯರೇ? ಪೋಲೀಸರೇ? ಅಥವಾ ಜನಪ್ರತಿನಿಧಿಗಳೇ?. “ನೀವು, ನಿಮಗೆ” ಎಂದರೆ ನಮಗೆ ಮಾತ್ರ ಸೋಂಕು ಹರಡುವುದು, ಸ್ಟುಡಿಯೋದಲ್ಲಿರುವ ಇವರ ಬಳಿಯಿಂದ ಇವರೇ ಹುಟ್ಟಿಸುವ ಭಯಕ್ಕೆ ಹೆದರಿ, ಇವರ ಅಪಾಯದಿಂದ ಪಾರಾಗುತ್ತೇವೆ ಎಂದು ಕೊರೊನಾ ವೈರಸ್ ಓಡುತ್ತದೆ ಎಂದು ಅರ್ಥವೇ?.
ಯಾವುದೋ ಒಂದು ಸುದ್ದಿಗೋಷ್ಠಿ, ಯಾರದೋ ಒಂದು ಹೇಳಿಕೆ, ಯಾವುದೋ ಒಂದು ಘಟನೆಯ ಸಂದರ್ಭ ತಾಮುಂದು, ನಾಮುಂದು ಎಂದು ಗುಂಪು ಗುಂಪಾಗಿ ಮುಗಿಬೀಳುವ “ಇವರೂ” ಲಾಕ್ ಡೌನ್ ನಿಯಮಗಳನ್ನು ಉಲ್ಲಂಘಿಸಬಹುದೇ?.
ಕೊನೆಯ ಮಾತು
ಹೌದು. ಕೆಲವು ಮಾಧ್ಯಮಗಳ ವಿರುದ್ಧ ಜನರು ಆಕ್ರೋಶ ಪಡುತ್ತಿದ್ದರೂ ಏನು ಮಾಡಲಾಗದ ಅಸಹಾಯಕ ಸ್ಥಿತಿ. ಇಂತಹ ಮಾಧ್ಯಮ ಮಂದಿಯಲ್ಲಿ ಜನ ಪ್ರಶ್ನಿಸಿದರೂ ” ನಾವು ನಮ್ಮ ಕರ್ತವ್ಯವನ್ನು ಮಾಡುತ್ತೇವೆ, ನಿಮಗೆ ಬೇಕಾದ್ದನ್ನು ನೋಡಿ” ಎಂಬ ಉಢಾಪೆಯ ಉತ್ತರವಷ್ಟೇ. ನಿಜ, ಈ ಸಮಸ್ಯೆಗಳಿಗೆ ಉತ್ತರವಿದೆ. ಕೊರೊನಾಕ್ಕೆ ಸದ್ಯ ಮದ್ದಿಲ್ಲದಿದ್ದರೂ ಭಯ ಹುಟ್ಟಿಸುವ ಚಾನಲ್ ಗಳೆಂಬ ಅಪಾಯಕಾರಿ ವೈರಸ್ ಗೆ ನಮ್ಮ ಕೈಯಲ್ಲೇ ಮದ್ದಿದೆ. ನಮಗೆ ಬೇಕಾದ ಒಳ್ಳೆಯ ಚಾನಲ್ ಗಳನ್ನು ಆಯ್ಕೆ ಮಾಡುವ ಸ್ವಾತಂತ್ರ ನಮಗಿದೆ. ಬೇಡವಾದದ್ದನ್ನು ಆಫ್ ಮಾಡುವ ರಿಮೊರ್ಟ್ ಕಂಟ್ರೋಲು ನಮ್ಮ ಕೈಯಲ್ಲೇ ಇದೆಯಲ್ಲ, ಮತ್ಯಾಕೆ ತಡ? ನಮ್ಮ ಆತ್ಮಸ್ಥೈರ್ಯವನ್ನು ಹೆಚ್ಚಿಸುವ, ನಮ್ಮ ಮೇಲೆ ಧನಾತ್ಮಕ ಪರಿಣಾಮ ಬೀರುವ ಚಾನಲ್ ಗಳನ್ನಷ್ಟೇ ನೋಡೋಣ, ಭಯಮುಕ್ತರಾಗೋಣ, ಇರುವಷ್ಟು ದಿನ ಬದುಕನ್ನು ಹಾಯಾಗಿ ಅನುಭವಿಸೋಣ..ಏನಂತೀರಿ….?
ಗೋಪಾಲ ಅಂಚನ್
ಪತ್ರಕರ್ತ
9449104318