ಸಾಮಾಜಿಕ ಅಂತರವಿರಲಿ… ಹೃದಯಗಳು ಹತ್ತಿರವಿರಲಿ…

ಕೊರೊನಾ ಸೃಷ್ಠಿಸಿದ ಸಾಮಾಜಿಕ ಅಂತರ ಬಿಗುವಾಗಲಿ.. ಮಾನವ ಸೃಷ್ಠಿಸಿದ ಸಾಮಾಜಿಕ ಅಂತರ ಸಡಿಲವಾಗಲಿ…

………….

ಹೌದು…ಕೊರೊನಾ ಮಹಾಮಾರಿ ಕಾಡುತ್ತಿರುವ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಾದದ್ದು ನಮ್ಮೆಲ್ಲರ ಜವಾಬ್ಧಾರಿ. ಆದರೆ ಇದೇ ಸಂದರ್ಭ ಮನುಷ್ಯರ ಹೃದಯಗಳ ನಡುವೆಯೂ ಅಂತರವಾಗುವುದು ತೀರಾ ಅಪಾಯಕಾರಿ.
ಸಾಮಾಜಿಕ ಅಂತರ ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟಲು ನೆರವಾದರೆ ಹೃದಯ ಹೃದಯಗಳ ನಡುವಿನ ಅಂತರ ಮನುಷ್ಯ ಮನುಷ್ಯರ ಮಧ್ಯೆ ಪ್ರೀತಿ ಹರಡುವುದಕ್ಕೆ ತಡೆಯಾಗಿ ಭೀತಿಯ ವಾತಾವರಣವನ್ನು ಸೃಷ್ಠಿಸುತ್ತದೆ. ಪರಸ್ಪರ ಪ್ರೀತಿ ಹರಡದಿದ್ದರೆ ಆ ಜಾಗದಲ್ಲಿ ದ್ವೇಷವೆಂಬ ವೈರಸ್ ತುಂಬಿಕೊಳ್ಳುತ್ತದೆ, ಈ ದ್ವೇಷದ ಕಿಡಿ ಕ್ಷಣಮಾತ್ರದಲ್ಲಿ ಸ್ಪೋಟಗೊಂಡು ಎಲ್ಲವನ್ನೂ ಸುಡಬಹುದು, ಮುಂದೆ ಇದು ಯಾವ ಔಷಧಿಯಿಂದಲೂ ಉಪಶಮನವಾಗದು..!?
ಪ್ರೀತಿಸಲು ಇದು ಸಕಾಲ
ನಿಜ..ಪ್ರೀತಿಸಲು ಇದುವೇ ಸಕಾಲ. ಸರ್ವರನ್ನೂ ಭೇದಭಾವವಿಲ್ಲದೆ ಒಂದೇ ತಕ್ಕಡಿಯಲ್ಲಿಟ್ಟು ತೂಗುತ್ತಾ ಮಾನವ ಬದುಕಿನ ನಶ್ವರತೆಯನ್ನು ಮತ್ತೆ ಮತ್ತೆ ಸಾರುವ ಕೊರೊನಾ ಎನ್ನುವ ಸೂಕ್ಷ್ಮಾಣುಜೀವಿಯೊಂದು ಇಡೀ ಮಾನವ ಕುಲವನ್ನೇ ತಲ್ಲಣಗೊಳಿಸುತ್ತಿರುವ ಪ್ರಸಕ್ತ ಸಂದರ್ಭದಲ್ಲಿ ಎಲ್ಲೆಲ್ಲೂ ಯಾವುದೇ ಶರತ್ತಿಲ್ಲದೆ, ಸ್ವಾರ್ಥವಿಲ್ಲದೆ ಹಂಚಿಕೆಯಾಗಬೇಕಾದ ಏಕೈಕ ದಿವೌಷಧಿಯೆಂದರೇ ಅದು ” ಪ್ರೀತಿ” ಒಂದೇ.
ಅದು ಸಮಾನವಾಗಿ ಹಂಚಿಕೆಯಾಗಬೇಕಾದರೆ ಹೊರಗಿನಿಂದಷ್ಟೇ ಸಾಮಾಜಿಕ ಅಂತರವಿರಬೇಕು, ಒಳಂಗಿದೊಳಗೆ ಹೃದಯಗಳು ಹತ್ತಿರವಾಗಲೇಬೇಕು.
ತನ್ನನ್ನು ತಾನು ಪ್ರೀತಿಸಬೇಕು
ಮೊದಲು ತನ್ನನ್ನು ತಾನು ಪ್ರೀತಿಸಬೇಕು, ತನ್ನೊಳಗನ್ನು ಅರಿತು ಸ್ವತಃ ಅನುಭವಿಸಬೇಕು, ತನ್ನೊಳಗೆ ತಾನು ಬದುಕಬೇಕು, ತನ್ನನ್ನು ತಾನೇ ಗೌರವಿಸಬೇಕು. ಅದಾಗಬೇಕಿದ್ದರೆ ತನ್ನನ್ನು ತಾನೇ ಒಮ್ಮೆ ಮೌಲ್ಯಮಾಪನಕ್ಕೆ ಒಳಪಡಿಸಬೇಕು. ತನ್ನಲ್ಲೇ ಸ್ವಾರ್ಥ, ಅಸೂಯೆ, ಮತ್ಸರ, ಕ್ರೋಧ, ಮದ, ಅಹಂಕಾರ, ಮಮಕಾರ ಮೊದಲಾದ ದುರ್ಗುಣಗಳೇ ತುಂಬಿದ್ದರೆ ತನ್ನನ್ನು ತಾನು ಪ್ರೀತಿಸುವುದಾದರೂ ಹೇಗೆ? ಇದು ನಮಗೇ ನಾವು ಕೇಳಿಕೊಳ್ಳಬೇಕಾದ ಬಲು ಮುಖ್ಯ ಪ್ರಶ್ನೆ. ನಮ್ಮೊಳಗಿದ್ದು ನಮ್ಮನ್ನೇ ಕಾಡುವ ಇಂತಹ ಪ್ರಶ್ನೆಗಳಿಗೇ ಉತ್ತರ ಕಂಡುಕೊಳ್ಳಲು ಇದು ಸದವಕಾಶ. ಹೊರಗಿನದೆಲ್ಲದಕ್ಕೂ ಪ್ರಶ್ನಿಸುವ, ಉತ್ತರಿಸುವ, ಟೀಕಿಸುವ, ಆರೋಪಿಸುವ ನಾವು ನಮ್ಮೊಳಗನ್ನು ಪ್ರಶ್ನಿಸದಿದ್ದರೆ, ಅದಕ್ಕೆ ಸರಿಯಾದ ಉತ್ತರವನ್ನು ಕಂಡುಕೊಳ್ಳದಿದ್ದರೆ ನಾವು ನಿಜಾರ್ಥದಲ್ಲಿ ಮಾನವರಾಗುವುದು ಹೇಗೆ? ಮತ್ತು ಯಾವಾಗ?.
ಹೌದು..ನಮ್ಮೊಳಗೆ ಅಂಟಿಕೊಂಡಿರುವ ಎಲ್ಲಾ ರೀತಿಯ ಕೊಳೆಯನ್ನು ಶುಚಿಗೊಳಿಸಿ ಆ ಜಾಗದಲ್ಲಿ ಮಾನವ ಸಹಜ ಮಾನವೀಯ ಗುಣಗಳಾದ ಪ್ರೀತಿ, ತಾಳ್ಮೆ, ಕ್ಷಮೆ, ನಿಸ್ವಾರ್ಥತೆ, ಪರೋಪಕಾರತೆ, ಸೌಹಾರ್ಧತೆಯ ಬೀಜಗಳನ್ನು ಈಗ ಬಿತ್ತಲೇಬೇಕು. ಆ ಬೀಜಗಳೇ ಮುಂದೆ ಮರವಾಗಿ, ಹೆಮ್ಮರವಾಗಿ ಬೆಳೆದು ಮನುಕುಲಕ್ಕೆ ನೆರಳಾದರೆ ಯಾವ ಮಹಾಮ್ಮಾರಿಯನ್ನಾದರೂ ಒಕ್ಕೊರಳಿನಿಂದ ಎದುರಿಸುವ ಶಕ್ತಿ ತನ್ನಿಂತಾನೆ ಬರುತ್ತದೆ..
ಎಲ್ಲರನ್ನೂ ಪ್ರೀತಿಸೋಣ
ನಮ್ಮಲ್ಲಿ ನಾವು ಮಾನವೀಯ ಗುಣಗಳನ್ನು ಬೆಳೆಸಿಕೊಂಡಾಗಲೇ ನಮ್ಮನ್ನು ನಾವು ಪ್ರೀತಿಸಲು, ಎಲ್ಲರನ್ನೂ ನಾವು ಪ್ರೀತಿಸಲು ಸಾಧ್ಯವಾಗುವುದು. ನಮ್ಮನ್ನು ನಾವು ಪ್ರೀತಿಸಬೇಕು, ನಮ್ಮ ಮನೆ ಮಂದಿಯನ್ನು, ಬಂಧುಮಿತ್ರರನ್ನು ಪ್ರೀತಿಸಬೇಕು, ಅದರಂತೆ ಈ ಭೂಮಿಯಲ್ಲಿರುವ ಎಲ್ಲಾ ಸಹಮಾನವರನ್ನು ಯಾವುದೇ ಭೇದಭಾವವಿಲ್ಲದೆ ಸಮಾನವಾಗಿ ಪ್ರೀತಿಸಲು ನಮ್ಮಿಂದ ಸಾಧ್ಯವಾಗಬೇಕು, ಅದಕ್ಕೆ ನಮ್ಮ ಹೃದಯಗಳು ತೀರಾ ಹತ್ತಿರವಾಗಲೇಬೇಕು. ಇದುವೇ ಇಂದಿನ ತುರ್ತು.
ಮಾನವ ಸೃಷ್ಠಿಸಿದ ಸಾಮಾಜಿಕ ಅಂತರ ದೂರವಾಗಲಿ
ಕೊರೊನಾ ವೈರಸ್ ಸೃಷ್ಠಿಸಿದ ಸಾಮಾಜಿಕ ಅಂತರ ಪಾಲಿಸಬೇಕಾದದ್ದು ಮತ್ತು ಅದು ಇನ್ನಷ್ಟು ಬಿಗಿಯಾಗಬೇಕಾದದ್ದು ತೀರಾ ಅನಿವಾರ್ಯ. ಇದು ತಾತ್ಕಾಲಿಕವೂ ಆಗಿರಬಹುದು. ಆದರೆ ಮಾನವರಾದ ನಾವು ಬಹುಕಾಲದಿಂದಲೇ ಸಾಮಾಜಿಕ ಅಂತರವನ್ನು ಕಾಪಿಡುತ್ತಾ ಬಂದಿದ್ದೇವೆಯಲ್ಲ, ಈ ಮಾನವ ಸೃಷ್ಠಿಯ ಸಾಮಾಜಿಕ ಅಂತರ ಸಡಿಲವಾಗಲು ಈ ಕೊರೊನಾ ಹಿನ್ನೆಲೆಯ ಸಾಮಾಜಿಕ ಅಂತರ ಪ್ರೇರಕ/ ಪೂರಕವಾಗಬಹುದೇ ಎನ್ನುವುದನ್ನು ನಾವೆಲ್ಲರೂ ಗಂಭೀರವಾಗಿ ಯೋಚಿಸಿದರೆ ಒಳಿತಲ್ಲವೇ..?
ಜಾತಿ, ಬಡವ ಶ್ರೀಮತ, ಭಾಷೆ, ಗಡಿ, ಮತ, ಧರ್ಮದ ನೆಲೆಯಲ್ಲಿ ಮಾನವರೇ ಈ ಮೊದಲು ಸೃಷ್ಠಿಸಿದ್ದ ಮತ್ತು ಈಗಲೂ ಸೃಷ್ಠಿಸುತ್ತಿರುವ ಸಾಮಾಜಿಕ ಅಂತರಕ್ಕೆ ಕೊನೆಯೆಲ್ಲಿ? ಇದು ಶಾಶ್ವತವಾಗಿ ಬಿಟ್ಟರೆ ಮನುಕುಲಕ್ಕೆ/ ಭಾರತಕ್ಕೆ ಭವಿಷ್ಯವೆಲ್ಲಿ? ಇದಕ್ಕೆ ನಿಷ್ಕಲ್ಮಶ ಪ್ರೀತಿಯೊಂದೇ ಉತ್ತರ. ಹಂಚುವುದಿದ್ದರೆ ಪ್ರೀತಿಯನ್ನು ಹಂಚೋಣ. ಹರಡಿಸುವುದಿದ್ದರೆ ಪ್ರೀತಿಯನ್ನು ಹರಡಿಸೋಣ.
ಎಲ್ಲವೂ ಮುಚ್ಚಲಿ

ಅಂಗಡಿ ಮುಗ್ಗಟ್ಟುಗಳು
ಮುಚ್ಚಿರಲಿ,
ಆದರೆ ಹೃದಯಗಳು ತೆರೆದಿರಲಿ.
ಸಂಗ್ರಹಿಸಿಡುವಷ್ಟು ಸೊತ್ತುಗಳು
ಸಿಗದಿರಲಿ,
ಆದರೆ ಬರಿದಾಗದಷ್ಟು ಪ್ರೀತಿ, ಪ್ರೇಮ, ಸದ್ಭಾವನೆ ಎಲ್ಲೆಲ್ಲೂ ಸಿಗುತ್ತಲಿರಲಿ.
ಯಾಕೆಂದರೆ ಲಾಕ್ ಡೌನ್ ಆಗಿರುವುದು ಹೊರಗೆ…
ಒಳಗಿನ ಒಡಲಲ್ಲಿ ಒಲುಮೆ ಬತ್ತದಿರಲಿ.
ಒಡಲಿಗೆ( ಹೃದಯಕ್ಕೆ)
ಲಾಕ್ ಡೌನ್ ಆದರೆ….
ಎಲ್ಲವೂ ಶೂನ್ಯ…ಮೌನ..

@ಗೋಪಾಲ ಅಂಚನ್