ಕಲಾವಿದರ ಕಲಾ ಅಸ್ತ್ರ ಸ್ಥಗಿತವಾಗಿದೆ


ತೆರೆಯ ಮರೆಯಲ್ಲಿ ಕಂಬನಿ ಸುರಿಸುತಿದ್ದಾರೆ ಅವಿಭಜಿತ ದ.ಕ.ಜಿಲ್ಲೆಯ ತುಳು ರಂಗಭೂಮಿಯ ವ್ರತ್ತಿಪರ ನಾಟಕ ಕಲಾವಿದರು ಮತ್ತು ಇತರ ಕಲಾಪ್ರಾಕರದ ಕಲಾವಿದರು, ಈ ಸೀಸನ್ ಸಮಯದಲ್ಲೇ ಆಕ್ರಮಿಸಿದ ಕರೋನ ಎನ್ನುವ ಮಹಾಮಾರಿ ರೋಗದಿಂದ ಜಗತ್ತೇ ತಲ್ಲಣಿಸಿದೆ ಸತ್ಯ. ಆದರೆ ವರ್ಷದ ನಾಲ್ಕು ತಿಂಗಳು ಎಡೆಬಿಡದೆ ನಡೆಯುವ ಕಾರ್ಯಕ್ರಮಕ್ಕೆ ಮನೊರಂಜನೆಗೆ ಸಿದ್ದವಾಗಿದ್ದ ವ್ರತ್ತಿಪರ ನಾಟಕ ತಂಡಗಳ ನಾಟಕಗಳು ಈ ವರ್ಷ ಕೋವಿಡ್-19 ನ ಮರಣ ಮ್ರದಂಗಕ್ಕೆ ಆಹುತಿಯಾಗಿದೆ, ಲಾಕ್ ಡೌನ್ ನ ವ್ಯವಸ್ಥೆಗೆ ಬಲಿಯಾಗಿದೆ.‌ ಕಾರ್ಯಕ್ರಮಗಳು, ಉತ್ಸವಾದಿಗಳು, ವಾರ್ಷಿಕ ಸಮಾರಂಭಗಳು ನಿಂತು ಕಲಾವಿದರು ದಿಗಂತದತ್ತ ದ್ರಷ್ಟಿ ಹಾಯಿಸುವಂತಾಗಿದೆ ಕಲಾವಿದರ ಈ ವರ್ಷದ ಕಲಾ ಸೇವೆಯ ಸಂಭಾವನೆ ಲಾಕ್ ಡೌನ್ ನ ಪಾಲಾಗಿದೆ.
ಈ ನೋವು ಕಲಾವಿದರಿಗೆ ಮಾತ್ರವಲ್ಲ ಎಲ್ಲಾ ಸ್ತರಗಳ, ಉಧ್ಯಮಗಳ, ಸ್ವಂತ ವ್ಯವಹಾರ, ಸಣ್ಣ ದೊಡ್ಡ ಖಾಸಾಗಿ ಕಾರ್ಮಿಕರ ಬದುಕಿಗೆ ಬರೆಯನ್ನೇ ನೀಡಿದೆ. ಆದರೆ ವರ್ಷದ ಅರ್ಧ ತಿಂಗಳು ಮಾತ್ರ ದುಡಿಯುವ ನಮ್ಮ ಜಿಲ್ಲೆಯ ರಂಗ ಕಲಾವಿದರು,ಸಂಗೀತ ಕಲಾವಿದರು, ತಂತ್ರಜ್ಙರು,ರಂಗಾಲಂಕಾರ,ವರ್ಣಾಲಂಕಾರ ಕಲಾವಿದರು, ನಿರೂಪಕರು, ರೆಕಾರ್ಡಿಂಗ್ ಉದ್ಘೋಷಕರು, ರೆಕಾರ್ಡಿಂಗ್ ಸ್ಟುಡಿಯೋ ಕಾರ್ಮಿಕರು, ಈಗೆ ಚೈನ್ ಸಿಸ್ಟಮ್ ನಂತೆ ಒಬ್ಬರನ್ನು ನಂಬಿ ಒಬ್ಬರಂತೆ ಬದುಕು ಸಾಗಿಸುತ್ತಾರೆ. ಇಂತಹ ಕಾರ್ಯಕ್ರಮದ ಜತೆಯಲ್ಲಿ ಅದರೊಂದಿಗೆ ಸೇರುತ್ತದೆ ಲೈಟ್ಸ್, ಸೌಂಡ್ಸ್, ಬ್ಯಾಂಡ್, ವಾದ್ಯ, ನಾಸಿಕ್ ಬ್ಯಾಂಡ್, ಗೊಂಬೆ ಕುಣಿತ, ಸಂಗೀತ ಕಲಾವಿದರು, ಗಾಯಕರು, ಸಮೂಹ ನ್ರತ್ಯ ಕಲಾವಿದರು, ಛಾಯಾಗ್ರಹಕರು, ಸಂತೆಯವರು ಇತ್ಯಾದಿ.. ಇತ್ಯಾದಿ ಜನರು ದುಡಿದು ಕುಣಿದು ಬದುಕು ಸಾಗಿಸುತ್ತಾರೆ, ಸಂಸಾರದ ತೇರನ್ನೆಳೆಯುತ್ತಾರೆ, ಆದರೆ ಈ ವರ್ಷ 2020 ಎಲ್ಲಾ ಕಲಾವಿದರ ಬದುಕಲ್ಲಿ ಟ್ವೆಂಟಿ ಟ್ವೆಂಟಿ ಮ್ಯಾಚ್ ನಂತಾಗಿ ಇತ್ತ ಗೆಲುವು ಇಲ್ಲದೆ ಅತ್ತ ಸೋಲು ಇಲ್ಲಾ ಗೆಲುವು ಇಲ್ಲದ ಸ್ಥಿತಿ ಕಲಾವಿದರದ್ದು..!
ಯಾರಾದರು ಕೇಳಬಹುದು ಕಲಾ ವ್ರತ್ತಿಯನ್ನು ಆಯ್ದದ್ದು ಯಾಕೆ? ಅದು ಜೀವನದ ಅಂತ್ಯದವರೆಗೆ ನಮ್ಮ ಜತೆ ಇರುವುದಿಲ್ಲ..! ಹೌದು..ಗೊತ್ತಿದ್ದು ವ್ರತ್ತಿಪರ ಕಲಾವಿದನಾಗಿ ಎಂಟ್ರಿ ಕೊಡುತ್ತಾರೆ, ಅದುವೆ ಅವನ ಕಾಯಕವಾಗುತ್ತದೆ, ಅದನ್ನು ನಂಬಿಯೆ ಜೀವನವಾಗುತ್ತದೆ. ಆರಂಭದಲ್ಲಿ ಕಲೆಯೆ ಆಕರ್ಷಣೆ, ಅದಕ್ಕಾಗಿ ಶ್ರಮ.ಹಿತೈಷಿಗಳ ಪ್ರೋತ್ಸಾಹದಿಂದ ಪ್ರಚೋದನೆ ಪಡೆದು ಕಲಾರಂಗಕ್ಕೆ ಇಳಿದ ಕಲಾವಿದ ತನ್ನೊಳಗಿನ ಪ್ರತಿಭೆಯನ್ನು ಬೆಳಕಿಗೆ ತಂದು ಕಲಾಬಿಮಾನಿಗಳಿಂದ ದೀಕ್ಷೆಯನ್ನು ಪಡೆದು ರಂಗಭೂಮಿಗೆ ಎಂಟ್ರಿಯಾಗುತ್ತಾನೆ.‌ ಆರಂಭದಲ್ಲಿ ಹವ್ಯಾಸಿಯಾದವ ಹೆಸರು ಮಾಡಿದ ನಂತರ ಪೂರ್ಣ ಪ್ರಮಾಣದ ವ್ರತ್ತಿಪರ ಕಲಾವಿದನಾಗಿ ರಂಗಭೂಮಿಗೆ ಒಡ್ಡುತ್ತಾನೆ.!
ಕಲಾವಿದ ವ್ರತ್ತಿಯಲ್ಲಿ ಕಲಾವಿದನಾದರು ಕೆಲವರಿಗೆ ಉಪವ್ರತ್ತಿಯೂ ಉಂಟು ಅಂತವರಿಗೂ ಇಂದಿನ ಸ್ಥಿತಿ ಕಾಲು ಕಟ್ಟಿದೆ, ಆದರೆ ರಂಗಭೂಮಿ ಕಲಾವಿದರಿಗೆ ಕಲಾವಿದನಾಗಿ ಇತರ ವ್ರತ್ತಿ ನಿಭಾಯಿಸುವುದು ಕಷ್ಟ. ರಾತ್ರೆ ನಿದ್ದೆ ಇಲ್ಲದೆ, ಹಗಲು ನಿದ್ದೆಗೆ ಶರಣಾಗಿ ಮತ್ತೆ ಸಂಜೆ ಬೇಗ ಕಲಾಸೇವೆಗೆ ಪಯಣ ಆರಂಬಿಸಬೇಕು.
ಕಲಾವಿದರಿಗೆ ಜಾತಿ ಧರ್ಮವಿಲ್ಲ, ಮೇಲ್ವರ್ಗ ಕಳವರ್ಗವಿಲ್ಲ, ಎ.ಪಿ.ಎಲ್ ಹಾಗು ಬಿ.ಪಿ.ಎಲ್ ಜತೆ ಸೌಲಭ್ಯ ಪಡೆದು ವರ್ಷದ ಕೆಲವು ತಿಂಗಳು ನಾಟಕದೊಂದಿಗೆ ದುಡಿದು, ಉಳಿದ ತಿಂಗಳಲ್ಲಿ ಉಳಿಸಿದ್ದನ್ನು ಬಳಸಿ, ಬದುಕು ಸಾಗಿಸುವುದು ಕಲಾವಿದನಿಗೆ ಅನಿವಾರ್ಯ. ಕಲಾವಿದರಲ್ಲೂ ಬೇಕಾದಷ್ಟು ಸ್ಥಿತಿವಂತರೂ ಇದ್ದಾರೆ , ಟೈಂಪಾಸ್ ಗಾಗಿ ಕಲೆಯನ್ನು ಮೆಚ್ಚಿಕೊಂಡವರು ಇದ್ದಾರೆ ಆದರೆ ಕಲೆಯನ್ನೇ ನಂಬಿದ ಕಲಾವಿದರ ಕಲಾವಿದೆಯರ ಬದುಕು ಈ ಸಲ ಹೈರಣಾದಂತೆ.
ಇದ್ದಾಗ ಬದುಕು ಇಲ್ಲದಾಗ ಹುಡುಕು ಎನ್ನುವ ಸೂತ್ರವನ್ನು ಪಾಲಿಸಲು ಕಲಾವಿದನಿಗೆ ಅಸಾಧ್ಯ. ಚಾಪೆ ಇದ್ದಷ್ಟೇ ಕಾಲು ಚಾಚಲು ಕಲಾವಿದನಿಗೆ ಸಾಧ್ಯವಾಗದು, ಕಲಾವಿದ ಸಮಾಜದಲ್ಲಿ ಮಾದರಿಯಾಗಿರುತ್ತಾನೆ, ಮತ್ತೊಬ್ಬರಿಗೆ ಆದರ್ಶವಾಗಿರುತ್ತಾನೆ ಅವನಿಗೆ ಅವನದೇ ಆದ ಸ್ಥಾನಮಾನವಿರುತ್ತದೆ, ಆತನಿಗೆ ತಿಳಿಯದೆ ಅಭಿಮಾನಿಗಳು ಸುತ್ತ ತುಂಬಿರುತ್ತಾರೆ, ಅನಾವಶ್ಯಕ ಮರ್ಯಾದೆಗೆ ಕುಂದು ಬಂದಾಗ ಸಮಾಜದಲ್ಲಿ ಕುಗ್ಗದೆ ಬದುಕಲ್ಲಿ ತಲೆ ಎತ್ತಿ ನಡೆಯುವ ಅನಿವಾರ್ಯತೆ ಕಲಾವಿದನದ್ದು. ಅದಕ್ಕೆ ವೇದಿಕೆಯಲ್ಲಿ ಕಲಾವಿದ ಎಲ್ಲರನ್ನೂ ನಗಿಸುತ್ತಾನೆ, ಉಕ್ಕಿನ ಮನುಷ್ಯನಾಗಿ ಖಳನಾಗುತ್ತಾನೆ, ಮಮತೆಯ ಮೂರ್ತಿಯಾಗುತ್ತಾನೆ, ಲಕ್ಷ-ಕೋಟಿ ವ್ಯವಹಾರದ ಧನಿಕನಾಗುತ್ತಾನೆ ತೆರೆಮರೆಗೆ ಬಂದಾಗ ಆತ/ಅವಳು ಬಡ ಕಲಾವಿದನಾಗುತ್ತಾನೆ(ಳೆ) ಕಲಾವಿದ ಬರಿಕೈದಾಸನಾದರೂ ಸಿರಿವಂತನೆಂದು ಫೋಸ್ ಕೊಡಲಾರ, ಉಳಿಸಿಟ್ಟ ಹಣದಿಂದ ಕಷ್ಟ ಕಾಲದಲ್ಲಿ ಧಾನ ಮಾಡುವ ಗುಣ ಕಲಾವಿದನಲ್ಲಿದೆ..
ಹಣತೆಯಂತೆ ರಂಗದಲ್ಲಿ ಕಲೆಯ ಬೆಳಕನ್ನು ಪ್ರೇಕ್ಷರಿಗೆ ನೀಡಿ, ತಾನು ಬತ್ತಿಯಂತೆ ಸುಟ್ಟು ಜೀವನ ಎನ್ನುವ ಎಣ್ಣೆಯನ್ನು ದಿನಂಪ್ರತಿ ಕರಗಿಸಿ ಬಾಳ್ವೆಯ ಪಥದಲ್ಲಿ ಸಾಗುವ ಕಲಾವಿದ ಇಂದಿನ ದಿನವನ್ನು ಕಳೆದು ನಾಳಿನ ನಿರೀಕ್ಷೇಯಲ್ಲಿರುತ್ತಾನೆ.
ಈ ವರ್ಷ ಕಾಲ ಬದಲಾಗಿದೆ..! ಜೀವನದ ಯಾಣಕ್ಕೆ ದುಡಿಯುವ ಕಾಲದಲ್ಲೇ ಕೊರೋನಾ ಪ್ರವೇಶಿಸಿದೆ, ದೇಶ ಲಾಕ್ ಡೌನ್ ಆಗಿದೆ ಕಲಾವಿದರ ರಂಗ ಕರ್ಮಿಗಳ ಬದುಕೇ ಮೇಲೇಳಲಾಗದೆ ಲಾಕ್ ಆಗಿದೆ. ಆದರೂ ಬದುಕಲೇ ಬೇಕು. ಈ ಸವಾಲಿನಲ್ಲಿ ನಾವು ಗೆಲ್ಲಲೇ ಬೇಕು..! ಇದು ಒಬ್ಬನ ಮನೆಯ ಕತೆಯಲ್ಲ ದೇಶ ಪ್ರಪಂಚದ ವ್ಯಥೆ. ಬದುಕಲ್ಲಿ ಪ್ರಥಮವಾಗಿ ಬಂದ ಆಕಸ್ಮಿಕವಾದ್ದರಿಂದ ಬದುಕು ಅಸ್ತವ್ಯಸ್ತವಾಗಿದೆ ಹೊಂದಿಕೊಳ್ಳಲು ಕಷ್ಟವಾಗಿದೆ! ನಮ್ಮ ದೇಶಕ್ಕೆ ಅದನ್ನು ಎದುರಿಸುವ ಶಕ್ತಿ ಇದೆ, ರಾಜ್ಯಕ್ಕೆ ಮಹಾಮಾರಿಯನ್ನು ಮಣಿಸುವ ಏಕತೆಯ ಬಲ ಇದೆ, ಜಿಲ್ಲೆಗೆ ದೈವ ದೇವರ ವರಪ್ರಸಾದ ಇದೆ.
ಹೌದು…! ಆದರೂ ವಿಭಿನ್ನ ಚಿಂತನೆಯಲ್ಲಿ ಕಲಾವಿದರ ಕಲಾ ನಿರ್ದೇಶನದಲ್ಲಿ ನಟರ ರಂಗಾಬಿನಯದಲ್ಲಿ ಮೂಡಿಬಂದ ಅದೆಷ್ಟೋ ಕಲಾವಿದರ ತಂಡದ ಕಲಾಸ್ತ್ರಗಳು ಸೀಸನ್ ನ ತಿರುಗಾಟದಲ್ಲೇ ಕೊರೋನಾ ವೈರಸ್ ಗೆ ಬಲಿಯಾಗಿ ಕಮರಿದೆ. ಇದು ಇನ್ನು ಪುನರ್ಜೀವಗೊಂಡು ರಂಗದಲ್ಲಿ ಸಾಕ್ಷಾತ್ಕಾರಗೊಳ್ಳುವುದು ಎಂದೋ..? ಯಾವಾಗವೋ.,..?! ಏನಂತೀರಾ…..!??
ಎಚ್ಕೆ, ನಯನಾಡು