ಚಿಣ್ಣರಲೋಕ ಸಂಸ್ಥಾಪಕ ಮೋಹನದಾಸ್ ಕೊಟ್ಟಾರಿ ಮುನ್ನೂರು ಅವರಿಗೆ ” ಸ್ವಸ್ತಿ ಸಿರಿ” ರಾಜ್ಯ ಪ್ರಶಸ್ತಿ

ಬಂಟ್ವಾಳ: ರಂಗಕಲಾವಿದ, ನಿರ್ದೇಶಕ, ಸಾಂಸ್ಕ್ರತಿಕ ಸಂಘಟಕ, ಚಿಣ್ಣರಲೋಕ ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್ ನ ಸ್ಥಾಪಕ ಸಂಚಾಲಕ ಮೋಹನದಾಸ್ ಕೊಟ್ಟಾರಿ ಮುನ್ನೂರು ಅವರು ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಕೊಡಮಾಡುವ ” ಸ್ವಸ್ತಿ ಸಿರಿ” ರಾಜ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.


ಮಾ.8 ರಂದು ಪುಂಜಾಲಕಟ್ಟೆಯಲ್ಲಿ ನಡೆಯುವ ಉಚಿತ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.
ನಾಟಕ ನಟರಾಗಿ, ರಚನೆಗಾರರಾಗಿ, ನಿರ್ದೇಶಕರಾಗಿ, ಸಂಘಟಕರಾಗಿ ಪರಿಚಿತರಾಗಿರುವ ಕೊಟ್ಟಾರಿ ತನ್ನ ತಂಡದ ಮೂಲಕ ಹಲವಾರು ನಾಟಕಗಳನ್ನು ಪ್ರದರ್ಶಿಸಿದವರು.
ಚಿಣ್ಣರಲೋಕ ಸಂಸ್ಥೆಯ ಮೂಲಕ ವಿವಿದೆಡೆಗಳಲ್ಲಿ ಮಕ್ಕಳಿಗೆ, ಯುವಜನತೆಗೆ ವಿವಿಧ ಕಲಾಪ್ರಕಾರಗಳಲ್ಲಿ ತರಬೇತಿ ನೀಡುತ್ತಾ, ಆ ಮೂಲಕ ಪ್ರತಿಭಾವಂತರನ್ನು ಸೇರಿಸಿಕೊಂಡು ಸಂಗೀತ, ನೃತ್ಯ, ಚೆಂಡೆ, ನಾಸಿಕ್ ಬ್ಯಾಂಡ್, ಗೊಂಬೆ ತಂಡಗಳನ್ನು ಕಟ್ಟಿಕೊಂಡು ರಾಜ್ಯ, ಅಂತರ್ ರಾಜ್ಯದಲ್ಲಿ ನಡೆದ ಬೃಹತ್ ಸಮಾರಂಭಗಳಲ್ಲಿ ಕಲಾಪ್ರದರ್ಶನ ನೀಡಿ ಕಲಾಲೋಕದಲ್ಲಿ ಪ್ರಶಂಸೆಗೆ ಪಾತ್ರರಾದವರು.
ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತ ಚಿಣ್ಣರಲೋಕ ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್ ಮಕ್ಕಳ ಪ್ರತಿಭಾ ಪ್ರದರ್ಶನಕ್ಕೆ ಪೂರಕವಾಗಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದು ಬಿ.ಸಿ.ರೋಡಿನಲ್ಲಿ ಪ್ರತೀ ವರ್ಷ ಚಿಣ್ಣರೋತ್ಸವ, ನಾಟಕೋತ್ಸವ, ಚಿಣ್ಣರ ಪ್ರಶಸ್ತಿ ಪ್ರದರ್ಶನ, ಸಾಧಕರಿಗೆ ಸನ್ಮಾನ, ಸಂಗೀತ- ನೃತ್ಯಗಳ ಸಮ್ಮಿಲನದೊಂದಿಗೆ ಕರಾವಳಿ ಕಲೋತ್ಸವವನ್ನು ಅದ್ಧೂರಿಯಾಗಿ ಸಂಘಟಿಸಲಾಗುತ್ತಿದ್ದು ಇದು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.
ಚಿತ್ರನಟರಾಗಿ, ಕಿರುತೆರೆ ನಟರಾಗಿ, ಯಕ್ಷಗಾನ ಕಲಾವಿದರಾಗಿ, ಆಲ್ಬಂ ಸಾಂಗ್- ಕಿರುಚಿತ್ರಗಳ ನಿರ್ದೇಶಕ-ನಿರ್ಮಾಪಕರಾಗಿಯೂ ಕಲಾಲೋಕದಲ್ಲಿ ಮಿಂಚುತ್ತಿರುವ ಕೊಟ್ಟಾರಿ ಅವರು ಕರಾವಳಿ ಕರ್ನಾಟಕ ರಂಗಕಲಾವಿದರ ಪರಿಷತ್ತು ಜಿಲ್ಲಾಧ್ಯಕ್ಷರಾಗಿ, ಕರ್ನಾಟಕ ಜಾನಪದ ಪರಿಷತ್ತಿನ ಬಂಟ್ವಾಳ ತಾಲೂಕು ಘಟಕದ ಅಧ್ಯಕ್ಷರಾಗಿ, ಬಂಟ್ವಾಳ ತುಳುಕೂಟ ಸಹಿತ ಹಲವಾರು ಸಾಂಸ್ಕ್ರತಿಕ, ಸಾಹಿತ್ಯಿಕ ಸಂಘಟನೆಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡವರು.