ಕಲಾವಿದರ ಶ್ರೇಯೋಬಿವೃದ್ಧಿಗಾಗಿ ಸಂಘಟನೆ- ಕಿಶೋರ್ ಡಿ.ಶೆಟ್ಟಿ

ಬಂಟ್ವಾಳ: ತುಳು ರಂಗಭೂಮಿ‌ ಕಲಾವಿದರ ಶ್ರೇಯೋಭಿವೃದ್ಧಿಯ ಉದ್ಧೇಶವನ್ನಿಟ್ಟುಕೊಂಡು ಕಳೆದ ಹದಿನೇಳು ವರ್ಷಗಳ ಹಿಂದೆ ಮಂಗಳೂರಿನಲ್ಲಿ ಹಿರಿಯ ಕಲಾವಿದರಿಂದ ಅಸ್ಥಿತ್ವಕ್ಕೆ ಬಂದ ತುಳು ನಾಟಕ ಕಲಾವಿದರ ಒಕ್ಕೂಟದ ವತಿಯಿಂದ ನಿರಂತರ ಕಲಾವಿದರ ಬದುಕಿಗೆ ಸಹಾಯವಾಗುವ ಹಲವಾರು ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗಿದೆ. ಇದೀಗ ತುಳುನಾಡಿನಾದ್ಯಾಂತವಿರುವ ರಂಗಕಲಾವಿದರರನ್ನು ಒಗ್ಗೂಡಿಸಿ ಸಂಘಟನೆಯನ್ನು ಬಲಪಡಿಸಲು ಉದ್ದೇಶಿಸಲಾಗಿದ್ದು ಆ ಮೂಲಕ ಗ್ರಾಮೀಣ ಪ್ರದೇಶದಲ್ಲಿರುವ ಕಲಾವಿದರ ಶ್ರೇಯೋಭಿವೃದ್ಧಿಗೂ ಹಲವಾರು ಯೋಜನೆಗಳನ್ನು ರೂಪಿಸಲಾಗಿದೆ ಎಂದು ತುಳು ನಾಟಕ ಕಲಾವಿದರ ಒಕ್ಕೂಟದ ಅಧ್ಯಕ್ಷ ಕಿಶೋರ್.ಡಿ.ಶೆಟ್ಟಿ ಹೇಳಿದರು.
ಬಿ.ಸಿ.ರೋಡಿನ ಸ್ಪರ್ಶಾ ಕಲಾಮಂದಿರದಲ್ಲಿ ಒಕ್ಕೂಟದ ವತಿಯಿಂದ ಭಾನುವಾರ ನಡೆದ ಬಂಟ್ವಾಳ ತಾಲೂಕು ಮಟ್ಟದ ರಂಗಕಲಾವಿದರ ವಿಶೇಷ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ‌ ಮಾತನಾಡಿದರು.


ಈಗಾಗಲೇ ಒಕ್ಕೂಟದ ವತಿಯಿಂದ ಅಸಕ್ತ ಕಲಾವಿದರಿಗೆ ಸಹಾಯಧನ, ಸಾಧಕರಿಗೆ ಸನ್ಮಾನ, ಪ್ರಶಸ್ತಿ ಪ್ರದಾನ, ಅನಾರೋಗ್ಯ ಪೀಡಿತರಿಗೆ ಆರ್ಥಿಕ ನೆರವು, ಮದುವೆ,ಶಿಕ್ಷಣ ಮತ್ತಿತರ ಸಂದರ್ಭಗಳಲ್ಲಿ ಸೂಕ್ತ ನೆರವು ನೀಡಲಾಗಿದೆ, ಇದೀಗ ಸಂಘಟನೆಯನ್ನು‌ ಪ್ರತೀ ತಾಲೂಕಿಗೂ ವಿಸ್ತರಿಸುವ ಮೂಲಕ ಆಯಾ ಪ್ರದೇಶದ ಕಲಾವಿದರ ಸಮಸ್ಯೆಗಳಿಗೂ ಸ್ಪಂದಿಸುವ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು‌ ಕಿಶೋರ್ ಡಿ.ಶೆಟ್ಟಿ ಹೇಳಿದರು.
ಒಕ್ಕೂಟದ ಪದಾಧಿಕಾರಿಗಳಾದ ಜೀವನ್ ಉಲ್ಲಾಳ್, ಮೋಹನ್ ಕೊಪ್ಪಳ, ಶೋಭಾ ಶೆಟ್ಟಿ ಒಕ್ಕೂಟದ ಕಾರ್ಯ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.
ಹಿರಿಯ ರಂಗ ಕಲಾವಿದರಾದ ಮಂಜು ವಿಟ್ಲ, ಬಿ.ಆರ್.ಕುಲಾಲ್,ರಮಾ ಬಿ.ಸಿ.ರೋಡು, ಟಿ.ಶೇಷಪ್ಪ ಮೂಲ್ಯ, ಭುವನೇಶ್ ಪಚ್ಚಿನಡ್ಕ, ಸುಭಾಶ್ಚಂದ್ರ ಜೈನ್, ಎಚ್ಕೆ.ನಯನಾಡು, ಗೋಪಾಲ ಅಂಚನ್, ಅರುಣ್ ಚಂದ್ರ ಬಿ.ಸಿ.ರೋಡು, ನಾರಾಯಣ ಪೆರ್ನೆ ಮೊದಲಾದವರಿದ್ದು ಸಲಹೆ ಸೂಚನೆ ನೀಡಿದರು.
ತಾಲೂಕಿನ ವಿವಿಧ ನಾಟಕ ತಂಡಗಳ ಕಲಾವಿದರು, ರಚನೆಗಾರರು, ನಿರ್ದೇಶಕರು, ಸಂಚಾಲಕರು ಸಭೆಯಲ್ಲಿ ಭಾಗವಹಿಸಿದ್ದರು.