ಫೆ.6ರಂದು ಬಿ.ಸಿ.ರೋಡಿನಲ್ಲಿ “ತ್ರಿನೇತ್ರಾ: ವಿದ್ಯಾರ್ಥಿಗಳ ರಾಷ್ಟ್ರೀಯ ಸಂವಾದ ಕಾರ್ಯಾಗಾರ


ಬಂಟ್ವಾಳ: ಅಂತರಾಷ್ಟ್ರೀಯ ಲಯನ್ಸ್ ಸೇವಾ ಸಂಸ್ಥೆ ಜಿಲ್ಲೆ 317D ಆಶ್ರಯದಲ್ಲಿ ಯುವವಾಹಿನಿ ಬಂಟ್ವಾಳ ಘಟಕ ಮತ್ತು ಲಯನ್ಸ್ ಕ್ಲಬ್ ಬಂಟ್ವಾಳ ಆತಿಥ್ಯದಲ್ಲಿ ಫೆ.6ರಂದು ಬೆಳಿಗ್ಗೆ 9.30ರಿಂದ ಬಿ.ಸಿ.ರೋಡಿನ ಸ್ಪರ್ಶಾ ಕಲಾಮಂದಿರದಲ್ಲಿ *ತ್ರಿನೇತ್ರ: ನಾಳೆಗಳ ಭರವಸೆಯ ಕಣ್ಣುಗಳು
ಎಂಬ ಪರಿಕಲ್ಪನೆಯಡಿಯಲ್ಲಿ ಕಾಲೇಜು ವಿದ್ಯಾರ್ಥಿಗಳಿಗಾಗಿ ರಾಷ್ಟ್ರೀಯ ಸಂವಾದ ಆಯೋಜಿಸಲಾಗಿದೆ.
ಸಮಸ್ಯೆಯ ಸುಳಿಯೊಳಗೆ ಸಿಲುಕಿರುವ ಯುವ ಸಮುದಾಯದ ಜತೆಯಲ್ಲಿ ಪರಿಣತ ಸಂಪನ್ಮೂಲ ವ್ಯಕ್ತಿಗಳು ನೇರಾ ಸಂವಾದ ನಡೆಸಲಿದ್ದು ಕಾನೂನು ಸಂವಾದದಲ್ಲಿ ನಿವೃತ್ತ ಲೋಕಾಯುಕ್ತ ಜಸ್ಟಿಸ್ ಎನ್.ಸಂತೋಷ್ ಹೆಗ್ಡೆ ಮತ್ತು ದ.ಕ.ಜಿಲ್ಲಾ ಪೋಲೀಸ್ ಅಧೀಕ್ಷಕ ಲಕ್ಷ್ಮೀ ಪ್ರಸಾದ್, ರಾಜಕೀಯ ಸಂವಾದದಲ್ಲಿ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮತ್ತು ಮಾಜಿ ಶಾಸಕ ವೈ.ಎಸ್.ವಿ ದತ್ತಾ, ಮನಃಶಾಸ್ತ್ರ ಸಂವಾದದಲ್ಲಿ ಮನೋರೋಗ ತಜ್ಞ ಡಾ.ರವೀಶ ತುಂಗ ಮತ್ತು ಡಾ.ರಮೀಳಾ ಶೇಖರ್ ವಿದ್ಯಾರ್ಥಿಗಳ ಪ್ರಶ್ನೆಗೆ ಮುಖಾಮುಖಿಯಾಗಲಿದ್ದಾರೆ.
ಉದ್ಘಾಟನೆ: ಬೆಳಿಗ್ಗೆ 9.30ಕ್ಕೆ ದ.ಕ.ಜಿಲ್ಲಾಧಿಕಾರಿ ಸಿಂಧು ಬಿ.ರೂಪೇಶ್ ಸಂವಾದ ಉದ್ಘಾಟಿಸಲಿದ್ದು ತಹಶೀಲ್ದಾರೆ ರಶ್ಮಿ ಎಸ್.ಆರ್., ಲಯನ್ಸ್ ಜಿಲ್ಲಾ ಗವರ್ನರ್ ರೊನಾಲ್ಡ್ ಗೋಮ್ಸ್, ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ನರೇಶ್ ಕುಮಾರ್ ಸಸಿಹಿತ್ಲು, ಲಯನ್ಸ್ ಜಿಲ್ಲಾ ಪ್ರಥಮ ಉಪರಾಜ್ಯಪಾಲ ಡಾ.ಗೀತ್ ಪ್ರಕಾಶ್,ದ್ವಿತೀಯ ಉಪರಾಜ್ಯಪಾಲ ವಸಂತ್ ಕುಮಾರ್ ಶೆಟ್ಟಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಬಂಟ್ವಾಳ ಲಯನ್ಸ್ ಕ್ಲಬ್ ಅಧ್ಯಕ್ಷ ಶ್ರೀನಿವಾಸ ಪೂಜಾರಿ ಮೆಲ್ಕಾರ್ ಮತ್ತು ಯುವವಾಹಿನಿ ಬಂಟ್ವಾಳ ತಾಲೂಕು ಘಟಕದ ಅಧ್ಯಕ್ಷ ಇಂದಿರೇಶ್ ಬಿ.ಪ್ರಕಟಣೆಯಲ್ಲಿ ತಿಳಿಸಿದ್ದಾರೆ.