ಸಂಗೀತ ಕ್ಷೇತ್ರದ ಅಪೂರ್ವ ಸಾಧಕ ಬಿ.ಭಾಸ್ಕರ ರಾವ್ ಅವರಿಗೆ “ಸ್ವಸ್ತಿಕ್ ಸಂಭ್ರಮ ಪುರಸ್ಕಾರ”

ಬಂಟ್ವಾಳ: ಸಂಗೀತ ವಿದ್ವಾನ್ ಡಾ.ಬಿ.ಸೋಮಸುಂದರ ರಾವ್ ಮತ್ತು ಲೀಲಾವತಿ ದೇವಿ ದಂಪತಿಯ ಪುತ್ರರಾದ ಬಿ.ಭಾಸ್ಕರ್ ರಾವ್ ಅವರದು ಸಂಗೀತ ಕ್ಷೇತ್ರದಲ್ಲಿ ಸುಮಾರು 40-45 ವರ್ಷಗಳ ಪಯಣ. ಗಾಯಕರಾಗಿ, ಸಂಗೀತ ನಿರ್ದೇಶಕರಾಗಿ, ಗೀತಾ ರಚನೆಕಾರರಾಗಿ, ಕೀ ಬೋರ್ಡು ಕಲಾವಿದರಾಗಿ ಭಾಸ್ಕರ್ ರಾವ್ ಅವರ ಸೇವೆ ಅನುಪಮವಾದುದು.
ಬಾಲ್ಯದಲ್ಲೇ ಸಂಗೀತದ ಬಗ್ಗೆ ವಿಶೇಷ ಒಲವು ತೋರಿದ್ದ ಇವರು ಆರಂಭದಲ್ಲಿ ನಾಟಕಗಳಿಗೆ ಹೆಣ್ಣು ಮತ್ತು ಗಂಡಿನ ಸ್ವರದಲ್ಲಿ ಹಾಡುವ ಮೂಲಕ ವಿಶೇಷ ಗಮನ ಸೆಳೆದಿದ್ದರು.
ನಂತರ ವೈಭವಿ ಆರ್ಕೆಸ್ಟ್ರಾ ಎಂಬ ತಂಡವನ್ನು ಕಟ್ಟಿಕೊಂಡು ಗಾಯಕರಾಗಿ, ನಿರ್ದೇಶಕರಾಗಿ, ಸಾಹಿತ್ಯ ರಚನೆಗಾರರಾಗಿ ರಾಜ್ಯ, ಹೊರರಾಜ್ಯದಲ್ಲೂ ಕಾರ್ಯಕ್ರಮ ನೀಡುವ ಮೂಲಕ ಪ್ರಬುದ್ಧ ಕಲಾವಿದರಾಗಿ ಮೂಡಿಬಂದವರು.
ಎಲ್ಲಾ ಪ್ರಕಾರದ ಗೀತೆಗಳನ್ನು ಬಲು ಸೊಗಸಾಗಿ, ತನ್ನ ಕಂಚಿನ ಕಂಠದೊಂದಿಗೆ ಹಾಡುತ್ತಾ ಕಲಾಭಿಮಾನಿಗಳನ್ನು ಅಕರ್ಷಿಸುವ ಇವರು ದೇಯಿ ಬೈದೆತಿ, ಪುಂಡಿಪಣವು, ವಿಕ್ರಾಂತ್, ರಾರಾ ಮೊದಲಾದ ಸಿನಿಮಾಗಳಲ್ಲೂ ಸಂಗೀತ ನಿರ್ದೇಶಕರಾಗಿ ಮತ್ತು ಗಾಯಕರಾಗಿ ಮಿಂಚಿದ್ದಾರೆ.

ಧ್ವನಿ ಸುರುಳಿಗಳು:

ವರ್ಕಾಡಿ ಸುಬ್ರಹ್ಮಣ್ಯ ಕ್ಷೇತ್ರ, ಅಡ್ಯಾರು ಮಹಾಲಿಂಗೇಶ್ವರ ಕ್ಷೇತ್ರ, ಭಕ್ತರದಾಸ ಭಗವಂತ, ಮಾಣೂರು ಸುಬ್ರಹ್ಮಣ್ಯ ಕ್ಷೇತ್ರ, ಕುಂದಾಪುರ ಹಲವು ಮಕ್ಕಳ ತಾಯಿ ಅಮೃತೇಶ್ವರೀ ಕ್ಷೇತ್ರ, ಶ್ರೀ ಧರ್ಮಸ್ಥಳ ಕ್ಷೇತ್ರ, ಗೋಳಿ ಗರಡಿ ಕ್ಷೇತ್ರ, ಮಳಲಿ ದುರ್ಗಾಪರಮೇಶ್ವರಿ ಕ್ಷೇತ್ರ, ಬಪ್ಪನಾಡು ದುರ್ಗಾಪರಮೇಶ್ವರೀ ಕ್ಷೇತ್ರ, ಬಿ.ಸಿ.ರೋಡು ಚಂಡಿಕಾಪರಮೇಶ್ವರೀ ಕ್ಷೇತ್ರದ ಧ್ವನಿ ಸುರುಳಿಗಳ ಸಹಿತ ಹಲವಾರು ಹಾಡಿನಲ್ಲಿ ಇವರ ಸಂಗೀತ ಹಾಗೂ ಗಾಯನ ಮೇಳೈಯಿಸಿದೆ. ಇವರ ಸ್ವರಚನೆಯ ಹಲವು ಗೀತೆಗಳೂ ಜನಪ್ರಿಯತೆ ಪಡೆದಿದೆ.


ಪ್ರಸ್ತುತ ಬಿ.ಸಿ.ರೋಡಿನಲ್ಲಿ ವೈಭವಿ ಆಡಿಯೋ ರೆಕಾರ್ಡಿಂಗ್ ಸ್ಟುಡಿಯೋ ಮುನ್ನಡೆಸುತ್ತಿರುವ ಭಾಸ್ಕರ್ ರಾವ್ ಅವರು ಸಂಗೀತ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರವಾದುದು.
ಇದೀಗ ಸಂಗೀತ ಕ್ಷೇತ್ರದ ಸಾಧನೆಗಾಗಿ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಕೊಡಮಾಡುವ ಸ್ವಸ್ತಿಕ್ ಸಂಭ್ರಮ ಪುರಸ್ಕಾರಕ್ಕೆ ಭಾಸ್ಕರ್ ರಾವ್ ಪಾತ್ರವಾಗಿದ್ದು ಭಾನುವಾರ ಪುಂಜಾಲಕಟ್ಟೆಯಲ್ಲಿ ನಡೆದ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿದ್ದಾರೆ.
ಇವರ ಮುಂದಿನ ಭವಿಷ್ಯ ಉಜ್ವಲವಾಗಲಿ, ಬದುಕು ಬಂಗಾರವಾಗಲಿ, ಸರ್ವಶಕ್ತಿಗಳ ಪೂರ್ಣಾನುಗ್ರಹ ಇವರ ಮೇಲಿರಲಿ ಎಂದು ಯುವಧ್ವನಿ ಬಳಗ ಶುಭ ಹಾರೈಸುತ್ತದೆ.