ಖ್ಯಾತ ಪೈಬರ್ ಆರ್ಟ್ ಕಲಾವಿದ, ಚಿತ್ರಕಲಾ ಲೋಕದ ಅಪೂರ್ವ ಸಾಧಕ ಮನೋಜ್ ಕನಪಾಡಿ ಅವರಿಗೆ ಸ್ವಸ್ತಿಕ್ ಸಂಭ್ರಮ ಪುರಸ್ಕಾರ (ಗೋಪಾಲ ಅಂಚನ್, ಯುವಧ್ವನಿ ನ್ಯೂಸ್, ಕರ್ನಾಟಕ)

ಬಂಟ್ವಾಳ: ಇವರ ಹೆಸರು ಮನೋಜ್ ಕನಪಾಡಿ. ಸೃಜನಶೀಲ ಮನಸ್ಸಿನ ಕಲಾವಿದರು. ಪೈಬರ್ ಆರ್ಟ್ ಕಲೆಯಲ್ಲಿ ಖ್ಯಾತನಾಮರು. ಚಿತ್ರಕಲಾ ಲೋಕದ ಅಪೂರ್ವ ಸಾಧಕರು. ಇವರ ಅನೇಕ ಕಲಾಕೃತಿಗಳು ನಾಡಿನ ಗಮನ ಸೆಳೆದಿದೆ. ಕಲಾಲೋಕದ ಪ್ರಶಂಸೆಗೆ ಪಾತ್ರವಾಗಿದೆ.
ಬಂಟ್ವಾಳ ತಾಲೂಕಿನ ಕಳ್ಳಿಗೆ ಗ್ರಾಮದ ಕನಪಾಡಿ ನಿವಾಸಿಯಾಗಿರುವ ಇವರು
ಕುಕ್ಕೆಶ್ರೀ ಆರ್ಟ್ಸ್ ಮತ್ತು ಫೈಬರ್ ಕ್ರಾಫ್ಟ್ ಹೆಸರಿನಲ್ಲಿ ಊರಿನಲ್ಲೇ ಕಲಾ ಸಂಸ್ಥೆಯನ್ನು ಮುನ್ನಡೆಸುತ್ತಾ ಎಲೆಮರೆಯ ಕಾಯಿಯಂತೆ ಸಾಧನೆಗೈಯುತ್ತಿದ್ದಾರೆ. ಇದೀಗ ಪುಂಜಾಲಕಟ್ಟೆಯ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಕೊಡಮಾಡುವ “ಸ್ವಸ್ತಿಕ್ ಸಂಭ್ರಮ ಪುರಸ್ಕಾರ”ಕ್ಕೆ ಪಾತ್ರವಾಗಿದ್ದು ಭಾನುವಾರ ಪುಂಜಾಲಕಟ್ಟೆಯಲ್ಲಿ ನಡೆದ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿದ್ದಾರೆ.

ಕಲಿಕಾ ಅನುಭವ:

ಕಳ್ಳಿಗೆ ತೊಡಂಬಿಲದ ಸೇಕ್ರೇಡ್ ಹಾರ್ಟ್ ವಿದ್ಯಾಸಂಸ್ಥೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ, ದೀಪಿಕಾ ಪ್ರೌಢ ಶಾಲೆ ಮೊಡಂಕಾಪುನಲ್ಲಿ ಫ್ರೌಡ ಶಿಕ್ಷಣ, ಸರಕಾರಿ ಪದವಿ ಪೂರ್ವ ಕಾಲೇಜು ಬೆಂಜನಪದವುನಲ್ಲಿ ಪಿಯುಸಿ ಶಿಕ್ಷಣ, ಮಂಗಳೂರಿನ ಮಹಾಲಸಾ ಚಿತ್ರಕಲಾ ಶಾಲೆಯಲ್ಲಿ ಚಿತ್ರಕಲಾ ಶಿಕ್ಷಣ (ಡಿಎಂಸಿ ಪದವಿ) ಪೂರೈಸಿರುವ ಮನೋಜ್ ಕನಪಾಡಿ ಮಂಗಳೂರಿನ ಪ್ರತಿಷ್ಠಿತ ಆರ್ಟ್ ಸಂಸ್ಥೆಗಳಾದ ನವಸುಮ ಆರ್ಟ್ಸ್ ಸಂಸ್ಥೆಯಲ್ಲಿ ಚಿತ್ರಕಾರರಾಗಿ, ಕಲಾವಿದರಾಗಿ ಕಾರ್ಯನಿರ್ವಹಣೆ ಆರಂಭಿಸಿದವರು.
ಬೆಂಗಳೂರು ಮತ್ತು ಮೈಸೂರು ಮೊದಲಾದ ಕಡೆಗಳಿಗೆ ತೆರಳಿ ನುರಿತ ಚಿತ್ರಕಾರರೊಂದಿಗೆ ಚಿಂತನ ಮಂಥನ-ಮಾಹಿತಿ ಮತ್ತು ಅನುಭವ ಪಡೆದು
ಮಂಗಳೂರಿನ ಪ್ರತಿಷ್ಠಿತ ಶಾರದಾ ವಿದ್ಯಾಲಯದ ಅಂಗ ಸಂಸ್ಥೆ ಶುಭೋದಯ ವಿದ್ಯಾಲಯದಲ್ಲಿ ಚಿತ್ರಕಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿದವರು.

ವೃತ್ತಿ ಪರಿಣತಿ:

ವಾಟರ್ ಕಲರ್ ಪೈಂಟಿಂಗ್,
ಲ್ಯಾಂಡ್ ಸ್ಕೇಪ್ ಪೈಂಟಿಂಗ್,
ಆಯಿಲ್ ಪೈಂಟಿಂಗ್,
ಪೋಟೇಟ್ ಪೈಂಟಿಂಗ್,
ಥರ್ಮೋಕೋಲ್ ಡಿಸೈನ್
ಮೂರ್ತಿ ಕೆತ್ತನೆ,
ಬಣ್ಣದ ಕಾಗದದಲ್ಲಿ ಹೂಗಳು ಮತ್ತು ಹೂಗುಚ್ಛ ರಚನೆ, ಆವೆ ಮಣ್ಣಿನ ಕಲಾಕೃತಿಗಳ ರಚನೆ,
ಫೈಬರ್ ಕಲಾ ಕೃತಿಗಳ ರಚನೆ,
ಫೈಬರ್ ಕಾರಂಜಿ ಮತ್ತು ಜಲಪಾತಗಳ ರಚನೆ,
ಫೈಬರ್ ಮಾಧ್ಯಮದಲ್ಲಿ ಸಂಗೀತ ಪರಿಕರ,ಚೆಂಡೆ, ವೀಣೆ ತಬಲ ಇತ್ಯಾದಿಗಳ ರಚನೆಯಲ್ಲಿ ಇವರು ವಿಶೇಷ ಪರಿಣತಿ ಪಡೆದವರು.

ಸಂಪನ್ಮೂಲ ವ್ಯಕ್ತಿಯಾಗಿ ಸೇವೆ:

ಮಕ್ಕಳ ಬೇಸಿಗೆ ಶಿಬಿರಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ,
ಮಂಗಳೂರಿನ ಪ್ರತಿಷ್ಠಿತ ಶಾಲೆಗಳಲ್ಲಿ ಹಲವಾರು ವರ್ಷಗಳ ಕಾಲ ಕಲಾ ಶಿಕ್ಷಕರಾಗಿ, ಹಲವು ಚಿತ್ರಕಲಾ ಶಿಬಿರಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ,
ಹಲವಾರು ಚಿತ್ರಕಲಾ ಸ್ಪರ್ಧೆ, ಕಲಾ ಕೃತಿಗಳ ರಚನಾ ಸ್ಪರ್ಧೆಯಲ್ಲಿ ತೀರ್ಪುಗಾರರಾಗಿ, ತಾಲೂಕು ಮತ್ತು ಜಿಲ್ಲಾ ಮಟ್ಟದ ಗೂಡುದೀಪ ಸ್ಪರ್ಧೆಗಳಲ್ಲಿ ತೀರ್ಪುಗಾರರಾಗಿ ಸೇವೆ ಸಲ್ಲಿಸಿದ ಹಿರಿಮೆ ಇವರದು.

ವಿಶೇಷ ಕಲಾಕೃತಿಗಳು:

ಅದ್ಭುತವಾಗಿ ಮೂಡಿ ಬಂದಿರುವ ಕಂಬಳದ ದೃಶ್ಯಾವಳಿ, ಕುದುರೆ ಮೇಲೆ ಕುಳಿತ ಶಿವಾಜಿ, ಗಾಂಧೀಜಿ ಪ್ರತಿಮೆ, ಬೃಹತ್ ಗಾತ್ರದ ಆನೆ ಕಲಾಕೃತಿ, ಗೊಂಬೆಗಳ ಮುಖವಾಡಗಳು ಇವರ ಕೈಚಳಕದಲ್ಲಿ ಮೂಡಿಬಂದ ವಿಶೇಷ ಕಲಾಕೃತಿಗಳಾಗಿ ಗುರುತಿಸಲ್ಪಟ್ಟಿದೆ. ಕಣ್ಮನ ಸೆಳೆಯುವ ಎತ್ತುಗಳೊಂದಿಗೆ ಉಳುವ ರೈತ, ನಿಂತ ಭಂಗಿಯಲ್ಲಿ ಶಿವಾಜಿ, ಸಜೀವ ಅಳತೆಯ ಜಿರಾಫೆ, ಬೃಹತ್ ಶಂಖದ ಆಕೃತಿಯೊಳಗೆ ಮರಿಯಮ್ಮ ದೇವರು, ಯಕ್ಷಗಾನ ಕಲಾಕೃತಿಗಳು, ತಫೋ ನಿರತ ವಾಲ್ಮೀಕಿ, ಗರುಡನ ಬೃಹತ್ ಕಲಾಕೃತಿ, ಕೃಷಿ ಪರಿಕರಗಳ ರಚನೆಗಳು, ಬಿದಿರಿನ ಬುಟ್ಟಿಗಳು, ಬೃಹತ್ ಗಾತ್ರದ ಗೊಮ್ಮಟೇಶ್ವರ ಮೊದಲಾದವುಗಳು ಕಲಾಲೋಕದ ಮೆಚ್ಚುಗೆಗೆ ಪಾತ್ರವಾಗಿದೆ. ಪ್ರತಿಯೊಂದು ಕಲಾಕೃತಿಗಳು ನೈಜ ಮಾದರಿಯಲ್ಲಿ ಮೈದಳೆದು ನೋಡುಗರನ್ನು ಬೆರಗುಗೊಳಿಸುತ್ತದೆ.

ತೊಡಗಿಸಿಕೊಂಡಿರುವ ಸಂಘ ಸಂಸ್ಥೆಗಳು:

ಮನೋಜ್ ಕನಪಾಡಿ ಅವರು ತಮ್ಮ ಕಲಾವೃತ್ತಿಯ ಬದುಕಿನ ನಡುವೆಯೂ
ರೋಟರಿ ಕ್ಲಬ್ ಬಂಟ್ವಾಳ ಟೌನ್ ನಲ್ಲಿ ಪದಾಧಿಕಾರಿಯಾಗಿ, ಜೆಸಿಐ ಬಂಟ್ವಾಳದಲ್ಲಿ ಕೋಶಾಧಿಕಾರಿಯಾಗಿ, ಸಂಸ್ಕೃತಿ ಸೇವಾ ಪ್ರತಿಷ್ಠಾನದ ಟ್ರಸ್ಟಿಯಾಗಿ,
ಶ್ರೀ ರಾಮ ಮೂಕಾಂಬಿಕ ಭಜನಾ ಮಂದಿರದ ಸೇವಾ ಸಮಿತಿ ಕಾರ್ಯದರ್ಶಿಯಾಗಿ,ದೇವಂದಬೆಟ್ಟು ಶ್ರೀ ಲಕ್ಷ್ಮೀವಿಷ್ಣುಮೂರ್ತಿ‌ ದೇವಸ್ಥಾನದ ಉತ್ಸವ ಸಮಿತಿ ಕಾರ್ಯದರ್ಶಿಯಾಗಿ, ಗ್ರಾಮಾಭಿವೃದ್ಧಿ ಸಂಘ ಕಳ್ಳಿಗೆಯ ಪ್ರಧಾನ ಕಾರ್ಯದರ್ಶಿಯಾಗಿ, ಶ್ರೀ ನಾರಾಯಣ ಗುರು ವಿಚಾರ ವೇದಿಕೆಯ ಸಂಚಾಲಕರಾಗಿ ಸಕ್ರೀಯರಾಗಿದ್ದು ಸಮಾಜಮುಖಿ ಸೇವೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ದೊರಕಿರುವ ಸನ್ಮಾನ ಪುರಸ್ಕಾರಗಳು:

ಶಾರದಾ ವಿದ್ಯಾಲಯ ಮಂಗಳೂರು ಇದರ 20 ವರ್ಷಾಚರಣೆಯ ಸಂಭ್ರಮ, ರೋಟರಿ ಕ್ಲಬ್ ಬಂಟ್ವಾಳ ಟೌನ್, ತುಳು ವಾಹಿನಿ ನಮ್ಮ ಕುಡ್ಲ, ದಯಾನಂದ ಪೈ ಸರಕಾರಿ ಕಾಲೇಜು ಮಂಗಳೂರು, ಶಿವಾಜಿ ಫ್ರೆಂಡ್ಸ್ ಕೋಡಿಕೆರೆ ಮತ್ತಿತರ ಕಡೆಗಳಲ್ಲಿ ಮನೋಜ್ ಕನಪಾಡಿ ಅವರ ಅಮೋಘ ಸಾಧನೆಗೆ ಸನ್ಮಾನ ಪುರಸ್ಕಾರಗಳು ಸಂದಿದೆ.

ಸೃಜನಶೀಲ ಮನಸ್ಸಿನ ಕಲಾವಿದ:

ಮನೋಜ್ ಕನಪಾಡಿ ಅವರು ಸರಳ ಸಜ್ಜನಿಕೆಯ ಸ್ನೇಹಜೀವಿ. ಸೃಜನಶೀಲ ಮನಸ್ಸಿನ‌ ಕಲಾವಿದರು. ನಿರಂತರ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಾ, ಅದರಲ್ಲಿ ಯಶಸ್ವಿ ಕಾಣುತ್ತಾ ಹೊಸ ರಚನೆಗಳಲ್ಲಿ ವೃತ್ತಿ ಸಾರ್ಥಕತೆಯನ್ನು ಕಾಣುವ ಪ್ರಬುದ್ಧ ಕಲಾವಿದರು. ವ್ಯಕ್ತಿತ್ವದಲ್ಲಿ ಸನ್ನಡತೆ, ಕರ್ತವ್ಯದಲ್ಲಿ ಬದ್ಧತೆ, ಸೇವೆಯಲ್ಲಿ ಪ್ರಾಮಾಣಿಕತೆ, ಹೃದಯದಲ್ಲಿ ಮಾನವೀಯತೆಯನ್ನು ಮೈಗೂಡಿಸಿಕೊಂಡ ಅಪರೂಪದ ಕಲಾವಿದರು.
ಶೀನ ಪೂಜಾರಿ ಮತ್ತು ಮೋಹಿನಿ ದಂಪತಿಗಳ ಪುತ್ರರಾದ ಇವರದು ಶ್ರೀಮತಿ ಸೌಮ್ಯ ಮತ್ತು ಪುತ್ರ
ಹೃತ್ವಿಕ್ ರೊಂದಿಗಿನ ಸಂತೃಪ್ತಿಯ ಸಾಂಸಾರಿಕ ಜೀವನ. ಇವರ ಮುಂದಿನ ಜೀವನ ಉಜ್ವಲವಾಗಲಿ, ಬದುಕು ಬಂಗಾರವಾಗಲಿ, ಸರ್ವಶಕ್ತಿಗಳ ಪೂರ್ಣಾನುಗ್ರಹ ಇವರ ಮೇಲಿರಲಿ ಎಂದು ಯುವಧ್ವನಿ ಬಳಗ ಶುಭ ಹಾರೈಸುತ್ತದೆ.