ಹೊಕ್ಕಾಡಿಗೋಳಿ ಕಂಬಳ-ಜಾತಿ ನಿಂದನೆಗೆ ಸಿದ್ಧಕಟ್ಟೆ ಬಿಲ್ಲವ ಸಂಘ ಖಂಡನೆ( ಗೋಪಾಲ ಅಂಚನ್, ಯುವಧ್ವನಿ ನ್ಯೂಸ್ ಕರ್ನಾಟಕ)

ಬಂಟ್ವಾಳ: ಇತಿಹಾಸ ಪ್ರಸಿದ್ಧ ಹೊಕ್ಕಾಡಿಗೋಳಿ ವೀರ ವಿಕ್ರಮ ಕಂಬಳಕ್ಕೆ ಸಂಬಂಧಿಸಿದಂತೆ ನಡೆದ ಮಾಧ್ಯಮ ಚರ್ಚೆಯಲ್ಲಿ ವ್ಯಕ್ತಿಯೊಬ್ಬರು ಬಿಲ್ಲವ ಸಮುದಾಯದ ಹಿರಿಯರನ್ನು ಅವಮಾನಿಸಿರುವುದನ್ನು ಸಿದ್ಧಕಟ್ಟೆ ಬಿಲ್ಲವ ಸಮಾಜ ಸೇವಾ ಸಂಘ ಖಂಡಿಸಿದೆ.
ಕಂಬಳದ ಬಗ್ಗೆ ಮಾಧ್ಯಮವೊಂದರಲ್ಲಿ ಚರ್ಚೆ ನಡೆಯುವ ವೇಳೆ ಹೊಕ್ಕಾಡಿಗೋಳಿ ಕಂಬಳದ ರಶ್ಮಿತ್ ಶೆಟ್ಟಿ ಅವರ ಜತೆಗಿದ್ದ ಕುಟ್ಟಿ ಶೆಟ್ಟಿ ಎಂಬವರು ಮಾತಾನಾಡುತ್ತಾ, ಹಿಂದೆ ಡೊಂಬಯ್ಯ ಪೂಜಾರಿ ಕಂಬಳ ನಡೆಸಿದ್ದಾನಂತೆ, ಆಯೆ ರಾಂಪ ಪೂಜಾರಿ ಕಂಬಳಕ್ಕೆ ಕೋಣಗಳನ್ನು ಕಟ್ಟುತ್ತಿದ್ದನಂತೆ ಎಂದು ಏಕವಚನದಲ್ಲಿ ನಿಂದಿಸುವ ರೀತಿಯಲ್ಲಿ ಮಾತನಾಡಿದ್ದಾರೆ. ಇದು ಅಮಾನವೀಯ ಮತ್ತು ಖಂಡನಾರ್ಹ ಎಂದು ಸಿದ್ಧಕಟ್ಟೆಯಲ್ಲಿ ನಡೆದ ಸಭೆಯಲ್ಲಿ ಬಿಲ್ಲವ ನಾಯಕರು ಆಕ್ರೋಶ ವ್ಯಕ್ತಪಡಿಸಿದರು.
ಕಂಬಳ ಯಾವುದೇ ಒಂದು ಜಾತಿಗೆ ಸೀಮಿತವಲ್ಲ. ಆದರೆ ಈ ಮಾಧ್ಯಮ ಚರ್ಚೆಯಲ್ಲಿ ಜಾತಿ ಪ್ರಶ್ನೆ ಮೆರೆಯುವ ಹಾಗೂ ಮತ್ತೊಂದು ಜಾತಿಯನ್ನು ಅಪಮಾನಿಸುವ ರೀತಿಯಲ್ಲಿ ಮಾತನಾಡಲಾಗಿದೆ. ಇದು ಸರಿಯಲ್ಲ. ಹೊಕ್ಕಾಡಿಗೋಳಿ ಕಂಬಳಕ್ಕೆ ಬಿಲ್ಲವ ಸಮುದಾಯ ಗಣನೀಯ ಕೊಡುಗೆ ನೀಡಿದೆ. ಇದೀಗ ಕೇವಲ ಬಂಟ ಸಮುದಾಯದ ಅಸ್ಮಿತೆಯನ್ನು ಮೇಳೈಯಿಸಿ ಇತರರನ್ನು ಕಡೆಗಣಿಸಲಾಗುತ್ತಿದೆ. 60, 70 ವರ್ಷಗಳ ಹಿಂದೆ ಪಾಲ್ಜಾಲ್ ಡೊಂಬಯ್ಯ ಪೂಜಾರಿ ಎಂಬವರೇ ತಮ್ಮ ರಾಮಪ್ಪ ಪೂಜಾರಿ ಎಂಬವರೊಂದಿಗೆ ಈ ಕಂಬಳ ಸ್ಥಾಪಿಸಿದ್ದರು.
ನಂತರ ಬೇರೆ ಬೇರೆ ಕಾಲಘಟ್ಟದಲ್ಲಿ ಬಾಬು ಪೂಜಾರಿ, ಪದ್ಮಪೂಜಾರಿ, ಕೃಷ್ಣಪ್ಪ ಪೂಜಾರಿ ಮೊದಲಾದವರು ಬೇರೆ ಬೇರೆ ಸ್ಥಳಗಳಲ್ಲಿ ಹೊಕ್ಕಾಡಿಗೋಳಿ ಕಂಬಳದ ನೇತೃತ್ವದ ವಹಿಸಿ ಮುನ್ನಡೆಸಿದ್ದರು. ಹೊಕ್ಕಾಡಿಗೋಳಿ ಕಂಬಳ ನಿರಂತರ ಒಂದೇ ಕಡೆ ಮುಂದುವರಿಯಲಿಲ್ಲ. ನಾನಾ ಕಾರಣಕ್ಕಾಗಿ 12ನೇ ಕವಲು, ಪೂಂಜ, ಸಿದ್ಧಕಟ್ಟೆ ನಲ್ಲೂರಂಗಡಿ ಬಸದಿ, ಅಂಗರಕರಿಯ ಮೊದಲಾದೆಡೆಗಳಲ್ಲಿ ಕಂಬಳ ನಡೆದಿದೆ. ಸಹಜವಾಗಿ ಈ ಬಾರಿ ಎಲಿಯನಡುಗೋಡು ಗ್ರಾಮದ ಕೊಡಂಗೆ ದಿ.ರುಕ್ಮಯ ಪೂಜಾರಿ ಮಕ್ಕಳಾದ ಓಬಯ್ಯ ಪೂಜಾರಿ ಮತ್ತು ಕೊರಗಪ್ಪ ಪೂಜಾರಿಯವರ ಸ್ಥಳದಲ್ಲಿ ನಡೆಯುತ್ತಿದೆ. ಇದಕ್ಕೆ ಜಿಲ್ಲಾ ಕಂಬಳ ಸಮಿತಿ ಒಪ್ಪಿಗೆ ಕೂಡ ನೀಡಿದೆ. ಈ ಮಧ್ಯೆ ರಶ್ಮಿತ್ ಶೆಟ್ಟಿ ಬಳಗ ಮಾಧ್ಯಮಗಳಲ್ಲಿ ಗೊಂದಲ ಸೃಷ್ಠಿಸುವುದು ಅವರಿಗೆ ಶೋಭೆಯಲ್ಲ ಎಂದು ಸಭೆಯಲ್ಲಿ ಚರ್ಚಿಸಲಾಯಿತು.
ಮಾಧ್ಯಮದಲ್ಲಿ ಬಿಲ್ಲವ ಸಮುದಾಯವನ್ನು ಹೀನಾಯವಾಗಿ ಬಿಂಬಿಸಿದ ಕುಟ್ಟಿ ಶೆಟ್ಟಿ ಸಮುದಾಯದ ಕ್ಷಮೆ ಯಾಚಿಸಬೇಕು. ಮಾಧ್ಯಮದಲ್ಲಿದ್ದ ಜವಾಬ್ಧಾರಿಯುತ ಜನಪ್ರತಿನಿಧಿಗಳು ಸಮುದಾಯ ನಿಂದನೆಯ ನೈತಿಕ ಹೊಣೆಹೊತ್ತು ರಾಜೀನಾಮೆ ನೀಡಬೇಕು ಎಂದು ಸಭೆಯಲ್ಲಿ ಒತ್ತಾಯಿಸಲಾಯಿತು.
ಸಂಘದ ಅಧ್ಯಕ್ಷ ದಿನೇಶ್ ಸುಂದರ್ ಶಾಂತಿ ಅಧ್ಯಕ್ಷತೆ ವಹಿಸಿದ್ದರು.
ಬಿಲ್ಲವ ಸಮುದಾಯದ ಪ್ರಮುಖರಾದ
ಗೋಪಾಲಬಂಗೇರ ಉಳಿರೋಡಿ,
ಜನಾರ್ಧನ ಬಂಗೇರ ತಿಮರ್ದಡ್ಡ,
ಚಂದ್ರ ಶೇಖರ್ ಕೊಡಂಗೆ,
ಜಗದೀಶ್ ಕೊಯಿಲ,
ಉಮೇಶ್ ಹಿಂಗಾಣಿ,
ಹರೀಶ್ ಹಿಂಗಾಣಿ,
ಪ್ರೀತಿ ವಸಂತ,
ಭೋಜ ಪೂಜಾರಿ,
ಲಲಿತಾ ದೇವಸ,
ಸೀತಾರಾಮ್ ಶಾಂತಿ,
ದಾಮೋದರ್ ದೋಟ,
ಜಯಾನಂದ ಪೂಜಾರಿ ದೋಟ,
ರಮೇಶ್ ಸಾಲ್ಯಾನ್,
ಅರುಣಾ ವಿಶ್ವನಾಥ್,
ಲಕ್ಷ್ಮಿ ಮಾಲ್ಕೋಡಿ ಮೊದಲಾದವರು ಉಪಸ್ಥಿತರಿದ್ದರು.