ಮಹಿಳೆಯರ ಸಮಗ್ರ ಶ್ರೇಯೋಭಿವೃದ್ಧಿಗೆ ಪೂರಕವಾದ ಪ್ರಣಾಳಿಕೆಯನ್ನು ಕಾಂಗ್ರೇಸ್ ಘೋಷಿಸಿದೆ- ಜಯಂತಿ ವಿ. ಪೂಜಾರಿ

ಬಂಟ್ವಾಳ: ಮಹಿಳೆಯರ ಸಮಗ್ರ ಶ್ರೇಯೋಭಿವೃದ್ಧಿಗೆ ಪೂರಕವಾದ ಪ್ರಣಾಳಿಕೆಯನ್ನು ಕಾಂಗ್ರೇಸ್ ಘೋಷಿಸಿದೆ. ಈ ಬಾರಿಯ ಪ್ರಣಾಳಿಕೆ ಮಹಿಳೆಯರಿಗೆ ಸುರಕ್ಷಿತ, ಸುಭದ್ರ ಮತ್ತು ಸಮೃದ್ಧಿದಾಯಕವಾಗಿದೆ. ಇಂತಹ ದೂರದೃಷ್ಟಿಯುಳ್ಳ ಕಾಂಗ್ರೆಸ್ ಗೆ ಭರ್ಜರಿ ಬಹುಮತ ನೀಡುವ ಮೂಲಕ ರಾಜ್ಯದಲ್ಲಿ ಸುಸ್ಥಿರ ಸರಕಾರ ರಚಿಸಲು ನೆರವಾಗಬೇಕಾಗಿದೆ ಎಂದು ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಮಹಿಳಾ ವಿಭಾಗದ ಅಧ್ಯಕ್ಷೆ ಜಯಂತಿ ವಿ. ಪೂಜಾರಿ ಮನವಿ ಮಾಡಿದ್ದಾರೆ.

ಬಂಟ್ವಾಳ ಕಾಂಗ್ರೆಸ್ ಚುನಾವಣಾ ಪ್ರಚಾರ ಕಚೇರಿಯಲ್ಲಿ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಕಾಂಗ್ರೆಸ್ ಐದು ಪ್ರಮುಖ ಗ್ಯಾರಂಟಿಗಳನ್ನು ಘೋಷಿಸಿದೆ. ಬೆಲೆ ಏರಿಕೆ ಗಗನಕ್ಕೇರಿರುವ ಇಂತಹ ಸಂದರ್ಭದಲ್ಲಿ ಮನೆ ನಿರ್ವಹಿಸಲು ಮಹಿಳೆಯರಿಗೆ ಅನುಕೂಲವಾಗುವಂತಹ ಗ್ಯಾರಂಟಿಗಳನ್ನು ಘೋಷಿಸಲಾಗಿದೆ. ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಮೊದಲ ಸಚಿವ ಸಂಪುಟ ಸಭೆಯಲ್ಲೇ ಈ ಗ್ಯಾರಂಟಿಗಳನ್ನು ಜಾರಿಗೊಳಿಸಲಾಗುವುದು ಎಂಬುದಾಗಿ ನಮ್ಮ ನಾಯಕರು ಭರವಸೆ ನೀಡಿದ್ದಾರೆ ಎಂದು ಅವರು ತಿಳಿಸಿದರು.

ಮನೆ ಯಜಮಾನಿಗೆ ತಿಂಗಳಿಗೆ ರೂ. 2,000, ಪ್ರತಿ ಮನೆಗೆ 200 ಯೂನಿಟ್ ವಿದ್ಯುತ್ ಉಚಿತ, ಪದವೀಧರ ನಿರುದ್ಯೋಗಿಗಳಿಗೆ ಯುವನಿಧಿ, ಪ್ರತಿ ಸದಸ್ಯನಿಗೆ ತಲಾ 10 ಕೆ.ಜಿ. ಅಕ್ಕಿ, ಮಹಿಳೆಯರಿಗೆ ಸರಕಾರಿ ಬಸ್ ಗಳಲ್ಲಿ ಉಚಿತ ಪ್ರಯಾಣ ಇವು ಕಾಂಗ್ರೆಸ್ ಗ್ಯಾರಂಟಿಗಳಾಗಿವೆ. ಇನ್ನುಳಿದಂತೆ, ವಿಧವಾ ಪಿಂಚಣಿ 2,500ಕ್ಕೆ ಹೆಚ್ಚಳ, ದುಡಿಯುವ ಮಹಿಳೆಯರಿಗೆ 100 ಹಾಸ್ಟೆಲ್ ಗಳ ನಿರ್ಮಾಣ, ಕೈಗಾರಿಕಾ ಪಾರ್ಕ್ ಗಳಲ್ಲಿ ಶೇ.20ರಷ್ಟು ನಿವೇಶನ ಮಹಿಳಾ ಉದ್ಯಮಿಗಳಿಗೆ ಮೀಸಲು, 5 ಸಾವಿರ ಸ್ತ್ರೀಶಕ್ತಿ ಕಿರು ಉದ್ಯಮಕ್ಕೆ ಸಹಕಾರ, ಹೈಸ್ಕೂಲ್- ಪಿಯುಸಿಗಳಲ್ಲಿ ವಿಧ್ಯಾಭ್ಯಾಸ ಕೈಬಿಟ್ಟ ಮಹಿಳೆಯರಿಗೆ ಆರ್ ಟಿಒಗಳಲ್ಲಿ ಉಚಿತ ವಾಹನ ಚಾಲನೆ ತರಬೇತಿ ಹಾಗೂ ಅವರಿಗೆ ಸಬ್ಸಿಡಿಯಲ್ಲಿ ಆಟೊರಿಕ್ಷಾ, ಕಾರು ನೀಡುವ ಭರವಸೆಗಳನ್ನು ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ನೀಡಲಾಗಿದೆ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರಿಗೂ ಹಲವಾರು ವಿಶೇಷ ಸೌಲಭ್ಯಗಳನ್ನು ಘೋಷಿಸಲಾಗಿದೆ.
ಈ ಎಲ್ಲಾ ಭರವಸೆಗಳು ಈಡೇರಬೇಕಾದರೆ, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕಾಗಿದೆ.ಅದಕ್ಕಾಗಿ ಎಲ್ಲಾ ಮಹಿಳೆಯರು ಸಂಘಟಿತ ಪ್ರಯತ್ನ ನಡೆಸಬೇಕಾಗಿದೆ ಎಂದು ಜಯಂತಿ.ವಿ.ಪೂಜಾರಿ ಹೇಳಿದರು.

ಪ್ರಾಮಾಣಿಕ ಜನಸೇವಕ ರಮಾನಾಥ ರೈಯವರನ್ನು ಬಹುಮತದಿಂದ ಗೆಲ್ಲಿಸಬೇಕು:

ನಮ್ಮ ಅಭ್ಯರ್ಥಿ, ಪ್ರಾಮಾಣಿಕ ಜನಸೇವಕ ಬಿ.ರಮಾನಾಥ ರೈಯವರನ್ನು ಬಹುಮತದಿಂದ ಗೆಲ್ಲಿಸಬೇಕು. ರೈಯವರು ಅತ್ಯಂತ ಪಾರದರ್ಶಕ, ಪ್ರಾಮಾಣಿಕ ವ್ಯಕ್ತಿತ್ವ ಹೊಂದಿದವರು. ಬಂಟ್ವಾಳದ ಸಮಗ್ರ ಅಭಿವೃದ್ಧಿ ರೈಯವರಿಂದ ಈಗಾಗಲೇ ದೊಡ್ಡ ಪ್ರಮಾಣದಲ್ಲಿ ನಡೆದಿದೆ. ಇನ್ನಷ್ಟು ಅಭಿವೃದ್ಧಿ ಹೊಂದಲು, ಕ್ಷೇತ್ರದ ಜನತೆಯ ಜೀವನ ಗುಣಮಟ್ಟ ಸುಧಾರಿಸಲು ಚುನಾವಣೆಯಲ್ಲಿ ಮತ್ತೊಮ್ಮೆ ಅವರನ್ನು ಗೆಲ್ಲಿಸೋಣ ಎಂದು ಜಯಂತಿ ವಿನಂತಿಸಿದರು.

ಬಂಟ್ವಾಳ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲವೀನಾ ಮೋರಸ್, ಪುರಸಭಾ ಮಾಜಿ ಅಧ್ಯಕ್ಷೆ ಜೋಸ್ಪಿನ್ ಡಿಸೋಜ, ಪುರಸಭಾ ಉಪಾಧ್ಯಕ್ಷೆ ಜೆಸಿಂತಾ ಡಿಸೋಜ, ಪುರಸಭಾ ಮಾಜಿ ಸದಸ್ಯರುಗಳಾದ ಧನವಂತಿ, ವಲರಿ, ಪಕ್ಷದ ಪ್ರಮುಖರುಗಳಾದ ಫೌಝಿಯಾ, ಫ್ಲೋಸಿ ಡಿಸೋಜ, ಶೋಭಾ ಶೆಟ್ಟಿ, ಶಭಾನ ಮತ್ತಿತರರು ಉಪಸ್ಥಿತರಿದ್ದರು.