ಪ್ರತಿಯೊಬ್ಬರನ್ನೂ ಕರೆದು ಮಾತಾಡುವ ಗುಣ ಹೊಂದಿರುವ ಬಿ.ರಮಾನಾಥ ರೈಯವರನ್ನು ಬಹುಮತದಿಂದ ಗೆಲ್ಲಿಸಿ-ಕೆ.ಎಂ.ಇಬ್ರಾಹಿಂ

ಬಂಟ್ವಾಳ: ಬಿ.ರಮಾನಾಥ
ರೈಯವರು ಬಂಟ್ವಾಳ ಕ್ಷೇತ್ರದ ಮೂಲೆ ಮೂಲೆಗೂ ಚಿರಪರಿಚಿತರು. ಕ್ಷೇತ್ರದ ಸಮಗ್ರ ಅಭಿವೃದ್ಧಿಯನ್ನು ಮಾಡಿದವರು. ಪ್ರತಿಯೊಬ್ಬರನ್ನೂ ಕರೆದು ಮಾತನಾಡಿಸುವ ದೊಡ್ಡ ಗುಣ ಅವರಲ್ಲಿದೆ. ಎಲ್ಲರನ್ನೂ ಸಮಾನವಾಗಿ ಪ್ರೀತಿಸುವ ಇಂತಹ ವ್ಯಕ್ತಿತ್ವವನ್ನು ಮತ್ತೊಮ್ಮೆ ಗೆಲ್ಲಿಸುವ ಹೊಣೆ ಕ್ಷೇತ್ರದ ಮತದಾರರ ಮೇಲಿದೆ ಎಂದು ಮಾಜಿ ಶಾಸಕ, ಕೆಪಿಸಿಸಿ ಉಪಾಧ್ಯಕ್ಷ ಕೆ.ಎಂ. ಇಬ್ರಾಹಿಂ ಹೇಳಿದರು.

ಬಂಟ್ವಾಳ ಕಾಂಗ್ರೆಸ್ ಅಭ್ಯರ್ಥಿ ಬಿ.ರಮಾನಾಥ ರೈ ಅವರ ಚುನಾವಣಾ ಪ್ರಚಾರ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಬಂಟ್ವಾಳದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿರುವ ಎಲ್ಲಾ ಅಭ್ಯರ್ಥಿಗಳು ಬಂಟ್ವಾಳ ವಿಧಾನಸಭಾ ಕ್ಷೇತ್ರದಿಂದ ಹೊರಗಿನ ಕ್ಷೇತ್ರದ ಮತದಾರರು. ಬಿ.ರಮಾನಾಥ ರೈ ಒಬ್ಬರೇ ಸ್ವಕ್ಷೇತ್ರದವರು. ಕ್ಷೇತ್ರದ ಸರ್ವಜನತೆಯ ಹಿತ ಕಾಯಲು ಬದ್ಧನಾಗಿರುವ ಬಿ.ರಮಾನಾಥ ರೈ ಗೆದ್ದರೆ ಮಾತ್ರ ಕ್ಷೇತ್ರದ ಸಮಗ್ರ ಅಭಿವೃದ್ಧಿಯೊಂದಿಗೆ ಶಾಂತಿ-ಸೌಹಾರ್ಧತೆಯ ಬಂಟ್ವಾಳ ನಿರ್ಮಾಣವಾಗುತ್ತದೆ ಎಂದು ಇಬ್ರಾಹಿಂ ಹೇಳಿದರು.

ಯಾರೇ ಬಂದು ತಮ್ಮ ಮನೆ ಅಥವಾ ಸಂಸ್ಥೆಗಳ ಯಾವುದೇ ಕಾರ್ಯಕ್ರಮಕ್ಕೆ ಆಹ್ವಾನಿಸಿದರೆ ರೈಯವರು ತಪ್ಪದೆ ಭಾಗವಹಿಸುತ್ತಾರೆ. ಅದು ಅವರ ಸದ್ಗುಣ. ಕಳೆದ ಬಾರಿ ಅಪಪ್ರಚಾರದಿಂದ ಅವರಿಗೆ ಸೋಲಾಗಿದೆ. ಆದರೆ ಈ ಬಾರಿ ಮತದಾರರು ಜಾಗೃತರಾಗಬೇಕು. ಸರಳ, ಸಜ್ಜನಿಕೆಯ, ಸ್ನೇಹಮಯಿ ವ್ಯಕ್ತಿತ್ವದ ಬಿ.ರಮಾನಾಥ ರೈಯವರನ್ನು ಈ ಚುನಾವಣೆಯಲ್ಲಿ ಮತ್ತೊಮ್ಮೆ ಗೆಲ್ಲಿಸುವಂತೆ ಮತದಾರರಲ್ಲಿ ನಾನು ಮನವಿ ಮಾಡುತ್ತೇನೆ ಎಂದು ಇಬ್ರಾಹಿಂ ಹೇಳಿದರು.

ಕೆ.ಪಿ.ಸಿ.ಸಿ. ಸದಸ್ಯ ಪಿಯೂಸ್ ಎಲ್. ರೊಡ್ರಿಗಸ್, ಕಾಂಗ್ರೇಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಬೀರ್ ಸಿದ್ದಕಟ್ಟೆ, ಪರಿಶಿಷ್ಟ ಪಂಗಡಗಳ ಘಟಕದ ಜಿಲ್ಲಾಧ್ಯಕ್ಷ ನಾರಾಯಣ ನಾಯ್ಕ್, ಮಹಿಳಾ ವಿಭಾಗದ ಅಧ್ಯಕ್ಷೆ ಜಯಂತಿ ವಿ. ಪೂಜಾರಿ, ಪುರಸಭಾ ಮಾಜಿ ಅಧ್ಯಕ್ಷೆ ಜೋಸ್ಪಿನ್ ಡಿಸೋಜ, ಪ್ರಮುಖರುಗಳಾದ ಅಬ್ಬಾಸ್ ಅಲಿ, ಮೊಹಮ್ಮದ್ ನಂದರಬೆಟ್ಟು, ಲೋಲಾಕ್ಷ ಶೆಟ್ಟಿ, ಜೆಸಿಂತಾ ಡಿಸೋಜಾ, ಪರಮೇಶ್ವರ್ ಮೂಲ್ಯ, ಬಿ.ಮೋಹನ್ ಮತ್ತಿತರರು ಉಪಸ್ಥಿತರಿದ್ದರು.