ಎಪ್ರಿಲ್ 17ರಂದು ರೈ ನೇತೃತ್ವದಲ್ಲಿ ನಾವೂರಿನಲ್ಲಿ ಬಂಟ್ವಾಳ‌ ಕಂಬಳ- ಭರದ ಸಿದ್ಧತೆ

ಬಂಟ್ವಾಳ: ಕಂಬಳ ಕ್ಷೇತ್ರದಲ್ಲೊಂದು ಹೊಸ ದಾಖಲೆಯನ್ನೇ ನಿರ್ಮಿಸಿ, ನಂತರ ಕಾರಣಾಂತರಗಳಿಂದ ನಿಂತು ಹೋಗಿದ್ದ ಮೂಡೂರು ಪಡೂರು ಕಂಬಳಕ್ಕೆ ಮತ್ತೆ ಭರದ ಸಿದ್ಧತೆ ನಡೆಯುತ್ತಿದೆ.


ದಶಕಗಳ ಕಾಲ ಅತ್ಯಂತ ವೈಭವಯುತವಾಗಿ, ಅನೇಕ ಹೊಸತನಗಳೊಂದಿಗೆ ರಾಷ್ಟ್ರೀಯ ಹೆದ್ದಾರಿ ಕಾವಳಕಟ್ಟೆ ಎನ್ ಸಿ ರೋಡಿನಲ್ಲಿ ನಡೆಯುತ್ತಿದ್ದ ಮೂಡೂರು ಪಡೂರು ಕಂಬಳ ಈ ಬಾರೀ ಬಂಟ್ವಾಳ ತಾಲೂಕಿನ ನಾವೂರು ಗ್ರಾಮದ ಕೂಡಿಬೈಲು ಎಂಬ ಗ್ರಾಮೀಣ ಪ್ರದೇಶದಲ್ಲಿ ಸಂಪನ್ನಗೊಳ್ಳಲಿದೆ.
ಮಾಜಿ ಸಚಿವ, ಧಾರ್ಮಿಕ- ಸಾಮಾಜಿಕ ರಂಗದ ನೇತಾರ ಬಿ.ರಮಾನಾಥ ರೈ ಅವರು ಕಾವಳಕಟ್ಟೆಯಲ್ಲಿ ಅದ್ಧೂರಿ ಮತ್ತು ಅರ್ಥಪೂರ್ಣವಾದ ಕಂಬಳಕೂಟವನ್ನು ಆಯೋಜಿಸಿ, ಕಂಬಳವನ್ನು ರಾಜ್ಯ-ರಾಷ್ಟ್ರಮಟ್ಟದಲ್ಲಿ ಗುರುತಿಸುವಂತೆ ಮಾಡಿದ್ದರು. ರಮಾನಾಥ ರೈ ಗೌರವಾಧ್ಯಕ್ಷ, ಬಿ.ಪದ್ಮಶೇಖರ ಜೈನ್ ಅಧ್ಯಕ್ಷರಾಗಿದ್ದ ಮೂಡೂರು ಪಡೂರು ಕಂಬಳ ಸಮಿತಿ ಕಾವಳಕಟ್ಟೆಯ ಮೂಡೂರು ಪಡೂರು ಕಂಬಳವನ್ನು ಜನಾಕರ್ಷಣೆಗೊಳಿಸಿತ್ತು.ನಂತರದ ದಿನಗಳಲ್ಲಿ ಬಹುತೇಕ ಕಂಬಳ ಸಮಿತಿಗಳು ಮೂಡೂರು ಪಡೂರು ಕಂಬಳದ ಮಾದರಿಯನ್ನು ಅನುಸರಿಸುವಂತಾಗಿತ್ತು. ಈ ನಡುವೆ ಮೂಡೂರು ಪಡೂರು ಕಂಬಳ ನಿಂತು ಹೋದದ್ದು ಕಂಬಳಾಭಿಮಾನಿಗಳಲ್ಲಿ ನಿರಾಶೆ ಮೂಡಿಸಿತ್ತು.
ಇದೀಗ ಇದೇ ಕಂಬಳ ಈ ವರ್ಷದ ಕೊನೆಯ ಕಂಬಳವಾಗಿ ಬಿ.ರಮಾನಾಥ ರೈ ಗೌರವಾಧ್ಯಕ್ಷ, ಪಿಯೂಸ್ ಎಲ್.ರೋಡ್ರಿಗಸ್ ಅಧ್ಯಕ್ಷತೆಯ ಕಂಬಳ ಸಮಿತಿ ವತಿಯಿಂದ ನಾವೂರಿನ ಕೂಡಿಬೈಲಿನಲ್ಲಿ ನಡೆಯುತ್ತಿರುವುದು ರೈ ಅಭಿಮಾನಿ ಬಳಗದಲ್ಲಿ ಮತ್ತು ಕಂಬಳಾಭಿಮಾನಿಗಳಲ್ಲಿ ಹೊಸ ಉಲ್ಲಾಸ- ಸಂಭ್ರಮ ಮೂಡಿಸಿದೆ.

ಎಪ್ರಿಲ್ 17 ರಂದು ಕಂಬಳ

ಕೆಲವೇ ದಿನಗಳ ಯೋಚನೆ- ಯೋಜನೆಯ ಫಲವೇ ಕೂಡಿಬೈಲಿನ ಕಂಬಳ. ಇದೀಗ ಕಂಬಳದ ಯಶಸ್ವಿಗಾಗಿ‌ ರಾತ್ರಿ ಹಗಲೆನ್ನದೆ ಭರದ ಸಿದ್ಧತೆ ನಡೆಯುತ್ತಿದೆ. ನೂರಾರು ಮಂದಿ ಸಿದ್ಧತೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಕಾವಳಕಟ್ಟೆಯ ಮೂಡೂರು ಪಡೂರು ಕಂಬಳದ ಮಾದರಿಯಲ್ಲೇ ನಾವೂರಿನಲ್ಲೂ ಕಂಬಳ ವೈಭವಯುತವಾಗಿ ಸಂಪನ್ನಗೊಳ್ಳಬೇಕೆಂಬ ನಿರೀಕ್ಷೆಯಲ್ಲಿ ವ್ಯಾಪಕ ಸಿದ್ಧತೆ ನಡೆಯುತ್ತಿದೆ.

ಇದು ಬಂಟ್ವಾಳ ಕಂಬಳ

ನಾವೂರಿನ ಕೂಡಿಬೈಲಿನಲ್ಲಿ ನಡೆಯುವ ಕಂಬಳ ಬಂಟ್ವಾಳ ಕಂಬಳವೆಂದು ಪ್ರಖ್ಯಾತಿ ಪಡೆಯಲಿದೆ. ಈ ಮೂಲಕ ಕಂಬಳದ ಸಾಲಿನಲ್ಲಿ ಬಂಟ್ವಾಳದ ಹೆಸರೂ ದಾಖಲೆಯಾಗಲಿದೆ ಎನ್ನುವುದು ರಮಾನಾಥ ರೈ ಅವರ ಅಭಿಮತ.

ಮೂಡೂರು ಪಡೂರು ಜೋಡುಕರೆಗಳು

ಕಾವಳಕಟ್ಟೆ ಕಂಬಳಕ್ಕಿದ್ದ ಕರೆಗಳ ಹೆಸರುಗಳೇ ಈ ಕಂಬಳದಲ್ಲೂ ಮುಂದುವರಿಯಲಿದೆ. ಕಾವಳಮೂಡೂರು ಮತ್ತು ಕಾವಳಪಡೂರು ಗ್ರಾಮಗಳನ್ನು ಪ್ರತಿನಿಧಿಸಿ ಕಾವಳಕಟ್ಟೆ ಕಂಬಳದ ಕರೆಗಳಿಗೆ ಮೂಡೂರು- ಪಡೂರು ಎಂದು ಹೆಸರಿತ್ತು. ಈ ಹೆಸರುಗಳೇ ಕಂಬಳ ಕೂಟದಲ್ಲೊಂದು ಹೊಸ ಆಕರ್ಷಣೆಯಾಗಿತ್ತು. ಇದೀಗ ನಾವೂರು ಗ್ರಾಮಕ್ಕೆ ಸಮೀಪವಾಗಿ ದೇವಸ್ಯ ಮೂಡೂರು ಮತ್ತು ದೇವಸ್ಯ ಪಡೂರು ಗ್ರಾಮಗಳು ಇರುವುದು ಹೊಸ ಕಂಬಳಕ್ಕೂ ಮೂಡೂರು ಪಡೂರು ಹೆಸರುಳಿಯಲು ಪುಷ್ಠಿ ಒದಗಿಸಿದೆ.

ಸೌಹಾರ್ದತೆಯ ಕಂಬಳ

ನಾವೂರು ಗ್ರಾಮದ ಪ್ರಾಕೃತಿಕ ಸೊಬಗಿನ ಹಚ್ಚಹಸಿರ ಸುಂದರ ಪರಿಸರದಲ್ಲಿ ಈ ಬಾರಿಯ ಕಂಬಳ ನಡೆಯಲಿದೆ. ಕಂಬಳ ನಡೆಯುವ ಜಾಗವು ಹಿಂದು, ಮುಸ್ಲಿಂ ಮತ್ತು ಕ್ರೈಸ್ತ ಸಮುದಾಯದವರ ವ್ಯಾಪ್ತಿಯಲ್ಲಿದೆ. ಅದ್ದರಿಂದ ಈ ಕಂಬಳ ಸೌಹಾರ್ದತೆಯ ಕಂಬಳವಾಗಿ ಗಮನ ಸೆಳೆಯಲಿದೆ ಎನ್ನುತ್ತಾರೆ ಕಂಬಳ ಸಮಿತಿಯ ಗೌರವಾಧ್ಯಕ್ಷ ಬಿ.ರಮಾನಾಥ ರೈ.

ಪಿಯೂಸ್ ಎಲ್.ರೋಡ್ರಿಗಸ್ ಸಾಥ್

ಮೂಡೂರು ಪಡೂರು ಜೋಡುಕರೆ ಕಂಬಳ ಸಮಿತಿ ಬಂಟ್ವಾಳದ ಅಧ್ಯಕ್ಷರಾಗಿ ಕಂಬಳದ ಯಶಸ್ವಿಯ ಹಿಂದೆ ಶ್ರಮಿಸುತ್ತಿರುವವರು ಕರ್ನಾಟಕ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಸದಸ್ಯ, ಉದ್ಯಮಿ ಪಿಯೂಸ್ ಎಲ್.ರೋಡ್ರಿಗಸ್.
ಹಲವು ಸಮಾರಂಭಗಳನ್ನು ಯಶಸ್ವಿಯಾಗಿ ಸಂಘಟಿಸಿದ್ದ ಪಿಯೂಸ್ ಎಲ್.ರೋಡ್ರಿಗಸ್, “ಬಂಟ್ವಾಳ ಕಂಬಳ” ಹೆಸರಿನಲ್ಲಿ ನಡೆಯುವ ಪ್ರಥಮ ಕಂಬಳದ ಪ್ರಥಮ ಅಧ್ಯಕ್ಷರಾಗಿದ್ದಾರೆ, ಕಂಬಳ ಕೂಟದ ಯಶಸ್ವಿಯ ಜವಾಬ್ಧಾರಿ ಹೊತ್ತಿದ್ದಾರೆ. ವಿವಿಧ ಕ್ಷೇತ್ರಗಳ ನಾಯಕರು, ಯುವಕರು, ಕಂಬಳಾಭಿಮಾನಿಗಳು ಜತೆಗೂಡಿದ್ದಾರೆ.

✍?ಗೋಪಾಲ ಅಂಚನ್,ಆಲದಪದವು
ಯುವಧ್ವನಿ ನ್ಯೂಸ್