ಅದ್ವಿತೀಯ ಪ್ರತಿಭೆ ಸಹನಾ ಎಂ.ಶೆಟ್ಟಿ ನರ್ವಲ್ದಡ್ಡ ಅವರಿಗೆ ಗ್ಲೋಬಲ್ ಆರ್ಯಭಟ ಇಂಟರ್ ನ್ಯಾಶನಲ್ ಎವಾರ್ಡ್

ಮಂಗಳೂರು: ವಿವಿಧ ಕ್ಷೇತ್ರದಲ್ಲಿ ಸಲ್ಲಿಸಿದ ಮಹೋನ್ನತ ಸಾಧನೆಗಾಗಿ ಸಹನಾ ಎಂ.ಶೆಟ್ಟಿ ನರ್ವಲ್ದಡ್ಡ ಅವರು ಪ್ರತಿಷ್ಠಿತ ಗ್ಲೋಬಲ್ ಆರ್ಯಭಟ ಇಂಟರ್ ನ್ಯಾಶನಲ್ ಎವಾರ್ಡ್ ಪುರಸ್ಕ್ರತರಾಗಿದ್ದಾರೆ.
ಏಶ್ಯಾ ವೇದಿಕ್ ಕಲ್ಚರ್ ಫೌಂಡೇಶನ್ ಸಹನಾ ಎಂ.ಶೆಟ್ಟಿ ಅವರು ವಿವಿಧ ಕ್ಷೇತ್ರಕ್ಕೆ ನೀಡಿದ ಅಸಾಧಾರಣ ಕೊಡುಗೆಯನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಿದ್ದು ಮದರಾಸಿನಲ್ಲಿ ನಡೆದ ಸಮಾರಂಭದಲ್ಲಿ ಸಹನಾ ಶೆಟ್ಟಿ ಪ್ರಶಸ್ತಿ ಸ್ವೀಕರಿಸಿದ್ದಾರೆ l


ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮೂಡುಪಡುಕೋಡಿ ಗ್ರಾಮದ ನರ್ವಲ್ದಡ್ಡ ನಿವಾಸಿಗಳಾದ ಸಿವಿಲ್ ಕಂಟ್ರಾಕ್ಟರ್ ಶ್ರೀ ಮೋಹನ್ ಶೆಟ್ಟಿ ಮತ್ತು ಶ್ರೀಮತಿ ಹರಿಣಾಕ್ಷಿ ಎಂ.ಶೆಟ್ಟಿ ದಂಪತಿಯ ಪುತ್ರಿಯಾದ ಸಹನಾ ಶೆಟ್ಟಿ ಪ್ರಸ್ತುತ ಬಂಟ್ವಾಳ ಎಸ್ ವಿ ಎಸ್ ಕಾಲೇಜಿನ ಅಂತಿಮ ಬಿ.ಕಾಂ.ವಿದ್ಯಾರ್ಥನಿ. ಕಲಾಬಾಗಿಲು ರಝಾನಗರ ಬುರೂಜ್ ಆಂಗ್ಲ ಮಾಧ್ಯಮ ಶಾಲೆಯ ಹಳೇ ವಿದ್ಯಾರ್ಥಿನಿಯಾಗಿರುವ ಈಕೆ ಎಳವೆಯಲ್ಲೇ ಕಲೆ, ಸಾಂಸ್ಕ್ರತಿಕ, ಕ್ರೀಡೆ ಮತ್ತಿತರ ಕ್ಷೇತ್ರದಲ್ಲಿ ವಿಶೇಷ ಸಾಧನೆಗೈದು ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಪಾತ್ರರಾದವಳು

ಕರಾಟೆ, ಸಂಗೀತ, ಭರತನಾಟ್ಯ, ಸ್ಕೌಟ್ಸ್- ಗೈಡ್ಸ್, ಸಾಮಾನ್ಯ ಜ್ಞಾನ, ವಿಜ್ಞಾನ ಮೊದಲಾದ ವಿಭಾಗಗಳಲ್ಲಿ ಪ್ರಾಥಮಿಕ ಹಂತದಲ್ಲೇ ಜಿಲ್ಲಾ,
ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಪದಕ ಗೆದ್ದ ಸಹನಾ ಶೆಟ್ಟಿ ಅಪ್ರತಿಮ ಪ್ರತಿಭೆ.ತನ್ನ ವಿಶೇಷ ಆಸಕ್ತಿ, ಪರಿಶ್ರಮ, ಸಾಧನಾಶೀಲ ಮನಸ್ಸಿನಿಂದ ಕರಾಟೆ ಮತ್ತು ಭರತನಾಟ್ಯ ಕ್ಷೇತ್ರದಲ್ಲಿ ಹಂತಹಂತವಾಗಿ ಮುನ್ನಡೆದ ಸಹನಾ ಶೆಟ್ಟಿಯ ಸಾಧನೆ ಅಮೋಘವಾದುದು.


ಭರತನಾಟ್ಯದಲ್ಲಿ ವಿದ್ವತ್ ಪಡೆದು ಹಲವಾರು ಸಮಾರಂಭಗಳಲ್ಲಿ ಪ್ರದರ್ಶನ ನೀಡಿ ಸೈ ಎನಿಸಿಕೊಂಡ ಸಹನಾ ಶೆಟ್ಟಿಯವರ ನಾಟ್ಯ ಶೈಲಿ, ಅಭಿನಯ, ಹಾವಭಾವ ನಿಜಕ್ಕೂ ಅತ್ಯಾಕರ್ಷಕವಾದುದು. ಕರಾಟೆಯಲ್ಲಿ ಬ್ಲ್ಯಾಕ್ ಬೆಲ್ಟ್ ಪಡೆದು ಸಾರ್ವಜನಿಕ ಶಿಕ್ಷಣ ಇಲಾಖೆ ನಡೆಸಿದ ರಾಷ್ಟ್ರೀಯ ಕರಾಟೆ ಛಾಂಪಿಯನ್ ಶಿಪ್ ನಲ್ಲಿ 7 ಬಾರಿ ಪ್ರತಿನಿಧಿಸಿರುವಿಕೆ, ಮಂಗಳೂರು ಯುನಿವರ್ಸಿಟಿಯನ್ನು ಪ್ರತಿನಿಧಿಸಿದ ಹೆಗ್ಗಳಿಕೆ ಸಹನಾ ಶೆಟ್ಟಿಯವರದ್ದು.
ಅತೀ ಕಿರಿಯ ವಯಸ್ಸಿನಲ್ಲೇ ನೇಪಾಲದ ಕಠ್ಮಂಡುವಿನಲ್ಲಿ ನಡೆದ ಅಂತರಾಷ್ಟ್ರೀಯ ಕರಾಟೆ ಛಾಂಪಿಯನ್ ಶಿಫ್ ನಲ್ಲಿ ಪಾಲ್ಗೊಂಡು ಬೆಳ್ಳಿಪದಕವನ್ನು ಮುಡಿಗೇರಿಸಿಕೊಂಡಿದ್ದ ಸಹನಾ, ಮಧ್ಯಪ್ರದೇಶ, ದೆಹಲಿ, ಹರಿಯಾಣ, ಪಂಜಾಬ್, ಮದರಾಸು ಮೊದಲಾದೆಡೆಗಳಲ್ಲಿ ನಡೆದ
ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಪಾಲ್ಗೊಂಡು ಗೋಲ್ಡ್ ಮೆಡಲ್ ಪಡೆದ ಅನನ್ಯ ಸಾಧಕಿ.
ತಂದೆ ತಾಯಿ ಮನೆಮಂದಿಯ ನಿರಂತರ ಪ್ರೋತ್ಸಾಹ, ಶಾಲಾ ಆಡಳಿತ ಮಂಡಳಿಗಳ ಸಹಕಾರ, ಶಿಕ್ಷಕ ವೃಂದ- ತರಬೇತುದಾರರ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿರುವ ಸಹನಾ ಪ್ರಸ್ತುತ ಮನೆಯಲ್ಲೇ ಆಸಕ್ತರಿಗೆ ಉಚಿತವಾಗಿ ಭರತನಾಟ್ಯ ಮತ್ತು ಕರಾಟೆ ತರಗತಿಯನ್ನು ನಡೆಸುತ್ತಿದ್ದಾರೆ.


ತೌಳವ ಕುಮಾರಿ ಎವಾರ್ಡ್, ಭಾರತ ಕಲಾರತ್ನ ಎವಾರ್ಡ್,
ಶಿಕ್ಷಣ ಇಲಾಖೆಯ ಗೌರವಗಳು ಮತ್ತು ನಾಡಿನ ಸಂಘಟನೆಗಳಿಂದ ಹಲವು ಪ್ರಶಸ್ತಿ, ಪುರಸ್ಕಾರಗಳಿಗೆ ಪಾತ್ರರಾಗಿರುವ ಸಹನಾ ಶೆಟ್ಟಿ ಅವರು ಸಹನೆ, ಸರಳತೆ, ಸಜ್ಜನಿಕೆಯ ಅಪರೂಪದ ಪ್ರತಿಭಾನ್ವಿತೆ.
ಇದೀಗ ತಮ್ಮ ಬಹುಮುಖಿ ಸಾಧನೆಗಾಗಿ ಗ್ಲೋಬಲ್ ಆರ್ಯಭಟ ಇಂಟರ್ ನ್ಯಾಶನಲ್ ಎವಾರ್ಡ್ ಸ್ವೀಕರಿಸಿದ ಸಹನಾ ಎಂ.ಶೆಟ್ಟಿಯವರ ಭವಿಷ್ಯ ಉಜ್ವಲವಾಗಲಿ ಎಂದು ಯುವಧ್ವನಿ ಮಾಧ್ಯಮ ಬಳಗ ಶುಭಹಾರೈಸುತ್ತದೆ.

?️ಗೋಪಾಲ ಅಂಚನ್, ಆಲದಪದವು
ಸಂಪಾದಕರು
ಯುವಧ್ವನಿ ನ್ಯೂಸ್