ಚೆನ್ನೈತ್ತೋಡಿ ಗ್ರಾ.ಪಂ.ವ್ಯಾಪ್ತಿಯ ಶ್ರೀನಿವಾಸ ನಗರ ಸರಕಾರಿ ಶಾಲೆಗೆ ಬೇಕು ಮೂಲಭೂತ ಸೌಲಭ್ಯಗಳು

ವಾಮದಪದವು: ಒಂದೆರೆಡು ವರ್ಷದಲ್ಲಿ ಬೆಳ್ಳಿಹಬ್ಬ ಸಂಭ್ರಮಕ್ಕೆ ಸಜ್ಜಾಗಬೇಕಿದ್ದ ಶ್ರೀನಿವಾಸನಗರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಂದೆ ಬೆಟ್ಟದಷ್ಟು ಬೇಡಿಕೆಯಿದೆ.
ಶಿಕ್ಷಕರ ಕೊರತೆ, ಕೊಠಡಿಗಳು,ಪೀಠೋಪಕರಣಗಳ ಸಹಿತ ಹಲವು ಮೂಲಭೂತ ಸೌಲಭ್ಯಗಳು ಈ ಶಾಲೆಗೆ ತುರ್ತು ಬೇಕಾಗಿದೆ.
ಬಂಟ್ವಾಳ ತಾಲೂಕಿನ ಚೆನ್ನೈತ್ತೋಡಿ ಗ್ರಾಮ ಪಂಚಾಯತು ವ್ಯಾಪ್ತಿಯ ಅಜ್ಜಿಬೆಟ್ಟು ಗ್ರಾಮದ ಶ್ರೀನಿವಾಸನಗರ ಎಂಬಲ್ಲಿ ಮುಖ್ಯ ರಸ್ತೆಯಂಚಿನಲ್ಲಿ ಕಾರ್ಯಾಚರಿಸುತ್ತಿರುವ ಈ ಶಾಲೆ ಗ್ರಾಮೀಣ ಪ್ರದೇಶದ ಬಡವರ ಮಕ್ಕಳ ಪಾಲಿಗೆ ವರದಾನವಾಗಿದೆ. 1998-99ರಲ್ಲಿ ಆರಂಭಗೊಂಡ ಈ ಶಾಲೆ ಇದುವರೆಗೂ ಸವಾಲುಗಳನ್ನು ಎದುರಿಸುತ್ತಲೇ ಮುಂದುವರಿದಿದ್ದರೂ ಸ್ಥಳೀಯಾಡಳಿತಗಳಾಗಲಿ, ಸ್ಥಳೀಯ ಜನಪ್ರತಿನಿಧಿಗಳಾಗಲಿ ಸ್ಪಂದಿಸದಿರುವುದು ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ.
ಪ್ರಸ್ತುತ 6 ತರಗತಿಗಳು ಇಲ್ಲಿರುವ ನಾಲ್ಕು ಕೊಠಡಿಯಲ್ಲಿ ನಡೆಯುತ್ತಿದ್ದು 7 ನೇ ತರಗತಿ ಮಂಜೂರಾತಿಯಾಗಿದ್ದರೂ ಸೌಲಭ್ಯಗಳ ಕೊರತೆಯಿಂದ ತರಗತಿ ಆರಂಭಿಸಲು ಸಾಧ್ಯವಾಗಿಲ್ಲ.

ಮಕ್ಕಳ ಸಂಖ್ಯೆ ಸಾಕಷ್ಟಿದ್ದರೂ ಸೌಲಭ್ಯಗಳಿಲ್ಲ:

ಸರಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕ್ಷೀಣಿಸುತ್ತಿರುವ ಪ್ರಸಕ್ತ ಸನ್ನಿವೇಶದಲ್ಲೂ ಈ ಶಾಲೆಯಲ್ಲಿ 1 ರಿಂದ 6 ನೇ ತರಗತಿಗಳಲ್ಲಿ ಒಟ್ಟು 61 ಮಕ್ಕಳಿದ್ದಾರೆ. ಇದ್ದ ವ್ಯವಸ್ಥೆಯಲ್ಲಿ ಉತ್ತಮ ಶಿಕ್ಷಣ ದೊರೆಯುತ್ತಿದ್ದರೂ ಮುಖ್ಯ ಮೂಲಭೂತ ಸೌಲಭ್ಯಗಳು ಲಭ್ಯವಿಲ್ಲದಿರುವುದು ಮಕ್ಕಳ ಗುಣಮಟ್ಟದ ಕಲಿಕೆ ಮತ್ತು ಶಾಲಾ ಬೆಳವಣಿಗೆಗೆ ತೊಡಕಾಗಿದೆ.
ಶಾಲೆಗೆ ಮೂರು ಶಿಕ್ಷಕ ಹುದ್ದೆ ಮಂಜೂರಾತಿಯಾಗಿದ್ದರೂ ಈಗ ಇರುವುದು ಒಬ್ಬರೇ. ಮಕ್ಕಳಿಗೆ ಪಾಠ- ಆಟ-ಊಟದ ವ್ಯವಸ್ಥೆ, ಶಾಲಾ ಆಡಳಿತ, ಸಭೆ-ಸಮಾರಂಭಗಳು, ಕಚೇರಿ ಕೆಲಸ..ಎಲ್ಲವನ್ನೂ ಒಬ್ಬರೇ ನೋಡಿಕೊಳ್ಳಬೇಕಾದ ಅನಿವಾರ್ಯ ಸ್ಥಿತಿ. ಪ್ರಭಾರ ಮುಖ್ಯ ಶಿಕ್ಷಕ ಲಕ್ಷ್ಮೀಕಾಂತ ಆಚಾರ್ಯ ಮತ್ತು ಗೌರವ ಶಿಕ್ಷಕಿಯಾಗಿ ಗೀತಾ ಸೇವೆ ಸಲ್ಲಿಸುತ್ತಿದ್ದಾರೆ. ಈ ಶಾಲೆಗೆ ಇಬ್ಬರು ಶಿಕ್ಷಕರನ್ನು ನಿಯೋಜಿಸಬೇಕೆಂಬ ಶಾಲಾಭಿವೃದ್ಧಿ ಸಮಿತಿ ಮತ್ತು ಪೋಷಕವೃಂದದ ಬೇಡಿಕೆಯಿನ್ನೂ ಈಡೇರಿಲ್ಲ.

ಕುಳಿತುಕೊಳ್ಳಲು ಬೆಂಚಿಲ್ಲ, ಬರೆಯಲು ಡೆಸ್ಕ್ ಇಲ್ಲ:

ಇತರ ಶಾಲಾ ಮಕ್ಕಳಂತೆ ಬೆಂಚಿನಲ್ಲಿ ಕುಳಿತು ಡೆಸ್ಕ್ ಆಧರಿಸಿ ಓದುವ ಬರೆಯುವ ಅವಕಾಶ ಈ ಶಾಲೆಯ ಬಹುತೇಕ ಮಕ್ಕಳಿಗಿಲ್ಲ. ಮಕ್ಕಳು ನೆಲದಲ್ಲಿ ಕುಳಿತು ಓದುವ ಬರೆಯುವ ಮತ್ತು ಪರೀಕ್ಷೆಯನ್ನೂ ನಿರ್ವಹಿಸಬೇಕಾದ ಶೋಚನೀಯ ಸ್ಥಿತಿ. ಕನಿಷ್ಠ 10 ಬೆಂಚುಗಳು ಮತ್ತು 10 ಡೆಸ್ಕುಗಳು ಈ ಶಾಲೆಗೆ ತುರ್ತು ಅಗತ್ಯವಿದ್ದು ಉಳಿದಂತೆ ತರಗತಿ ಕೊಠಡಿಗಳು, ವಾಚನಾಲಯ, ಪ್ರಯೋಗಾಲಯ, ಗ್ರೀನ್ ಬೋರ್ಡುಗಳು, ಪೀಠೋಪಕರಣಗಳು, ಕಪಾಟುಗಳು, ಕ್ರೀಡಾ ಸಲಕರಣೆಗಳು, ತರಗತಿಗಳಿಗೆ ಟೈಲ್ಸ್ ಅಳವಡಿಕೆ, ಮೇಜುಗಳು, ಶಾಲೆಗೆ ಸುಣ್ಣ ಬಣ್ಣದ ಅಲಂಕಾರ ಸಹಿತ ಬಹುತೇಕ ಬೇಡಿಕೆಗಳು ಈಡೇರಬೇಕಾಗಿದೆ.
ಶಾಲೆಯು ಭಾಗಶಃ ಆವರಣ ಗೋಡೆ ಹೊಂದಿದ್ದು ಅದು ಪೂರ್ಣಗೊಂಡು ಶಾಲಾ ಸೌಂದರೀಕರಣವಾಗಬೇಕಾಗಿದೆ. ಶಾಲೆಯು ಪ್ರಸ್ತುತ ಹಂಚಿನ ಹಳೆಯ ಮಾಡಿನ ಕಟ್ಟಡದಲ್ಲೇ ಕಾರ್ಯಾಚರಿಸುತ್ತಿದ್ದು ನೂತನ ಕಟ್ಟಡ ಸಹಿತ ಇತರ ಅಭಿವೃದ್ಧಿ ಕಾಮಗಾರಿಗಳು ಅನುಷ್ಠಾನಗೊಳ್ಳುವರೇ ಶಾಲಾ ನಿವೇಶನಕ್ಕೆ ಸಂಬಂಧಿಸಿದ ದಾಖಲೆಗಳನ್ನು ಒದಗಿಸಿಕೊಡುವಲ್ಲಿ ಸಂಬಂಧಿಸಿದ ಇಲಾಖೆಗಳು ವಿಶೇಷ ಮುತುವರ್ಜಿ ವಹಿಸಬೇಕಾಗಿದೆ.
ಶಾಲಾ ತುರ್ತು ಬೇಡಿಕೆಗಳನ್ನು ಈಡೇರಿಸಿಕೊಂಡು ಮುಂದಿನ ವರ್ಷದಲ್ಲಿ ಶಾಲಾ ಬೆಳ್ಳಿಹಬ್ಬವನ್ನು ಆಚರಿಸಲು ಶಿಕ್ಷಕ ವೃಂದ, ರೇಖಾ ಅಧ್ಯಕ್ಷತೆಯ ಎಸ್ ಡಿ ಎಂಸಿ ಹಾಗೂ ಪೋಷಕವೃಂದ ಯೋಚನೆ-ಯೋಜನೆ ರೂಪಿಸಿದೆ. ಗ್ರಾಮೀಣ ಪ್ರದೇಶದ ಈ ಸರಕಾರಿ ಶಾಲೆಯ ಉಳಿವು – ಬೆಳವಣಿಗೆಗಾಗಿ ಸರಕಾರ, ಶಿಕ್ಷಣ ಇಲಾಖೆ, ಸ್ಥಳೀಯಾಡಳಿತಗಳು, ಸಂಘಟನೆಗಳು ಹಾಗೂ ಶಿಕ್ಷಣಾಭಿಮಾನಿಗಳು ತುರ್ತು ಸ್ಪಂದಿಸಬೇಕಾದ ಅಗತ್ಯವಿದೆ.
…………
ಶಾಲೆಯಲ್ಲಿ ಪ್ರಸ್ತುತ 6 ನೇ ತರಗತಿವರೆಗೆ ಕಲಿಕೆಗೆ ಅವಕಾಶವಿದ್ದು 61 ಮಕ್ಕಳು ವಿದ್ಯಾರ್ಜನೆ ಮಾಡುತ್ತಿದ್ದಾರೆ. ಶಾಲೆಯ ಮುಖ್ಯ ಬೇಡಿಕೆಗಳು ಈಡೇರಿದ್ದಲ್ಲಿ ಶಾಲೆ ಇನ್ನಷ್ಟು ಉತ್ತಮ ರೀತಿಯಲ್ಲಿ ಮುನ್ನಡೆಯಲಿದೆ-

ಲಕ್ಷ್ಮೀಕಾಂತ ಆಚಾರ್ಯ, ಪ್ರಭಾರ ಮುಖ್ಯ ಶಿಕ್ಷಕರು
…………….

ಗ್ರಾಮೀಣ ಪ್ರದೇಶದ ಮಕ್ಕಳು ನಾನಾ ಕಡೆಗಳಿಂದ ಈ ಶಾಲೆಗೆ ಬರುತ್ತಿದ್ದಾರೆ. ಶಾಲೆಗೆ ಕೆಲವೊಂದು ಸೌಲಭ್ಯಗಳು ತುರ್ತು ಬೇಕಾಗಿದೆ. ಈ ನಿಟ್ಟಿನಲ್ಲಿ ಸರ್ವರ ಸಹಕಾರ ಅಗತ್ಯವಿದೆ-

ರೇಖಾ, ಅಧ್ಯಕ್ಷರು, ಎಸ್.ಡಿ.ಎಂ.ಸಿ.
…………..

ಗೋಪಾಲ ಅಂಚನ್,ಆಲದಪದವು
ಯುವಧ್ವನಿ ನ್ಯೂಸ್
9449104318
………….