ಅಜ್ಜಿಬೆಟ್ಟು ಕಾಪು ಮಹಾತೋಬಾರ ಶ್ರೀ ಉಮಾಮಹೇಶ್ವರ ದೇವಸ್ಥಾನ ಪುನರ್ ನಿರ್ಮಾಣ ಸಂಕಲ್ಪ-ಜನವರಿ 26, 27ರಂದು ಬಾಲಾಲಯ ಪ್ರತಿಷ್ಠೆ

ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಾಮದಪದವು ಸಮೀಪದ ಅಜ್ಜಿಬೆಟ್ಟು ಗ್ರಾಮದ ಕಾಪು ಮಹಾತೋಭಾರ ಶ್ರೀ ಉಮಾಮಹೇಶ್ವರ ದೇವಸ್ಥಾನವನ್ನು ಮಾಗಣೆಯ ಭಕ್ತಾದಿಗಳು ಪುನರ್ ನಿರ್ಮಿಸಲು ಸಂಕಲ್ಪಿಸಿದ್ದು ಈ ಹಿನ್ನೆಲೆಯಲ್ಲಿ ಜನವರಿ 26, 27 ರಂದು ಬಾಲಾಲಯ ಪ್ರತಿಷ್ಠೆಯು ವೈದಿಕ ವಿಧಾನಗಳೊಂದಿಗೆ ಸಂಪನ್ನಗೊಳ್ಳಲಿದೆ.


ಇತಿಹಾಸದಲ್ಲಿ ವೈಭವದಿಂದ ಮೆರೆದು ನಂಬಿ ಬಂದ ಭಕ್ತರ ಇಷ್ಟಾರ್ಥ ಸಿದ್ಧಿಸುವ ಪುಣ್ಯ ಕ್ಷೇತ್ರವಾಗಿದ್ದ ಈ ಶಿವ ಸಾನಿಧ್ಯವು ನಂತರ ಕಾಲಚಕ್ರದ ಸುಳಿಗೆ ಸಿಕ್ಕಿ ನಾಶವಾಗಿದ್ದು ಇದೀಗ ಅಷ್ಟಮಂಗಳ ಪ್ರಶ್ನೆಯಲ್ಲಿ ಕಂಡು ಬಂದಂತೆ ಮಹಾತೋಭಾರ ಶ್ರೀ ಉಮಾಮಹೇಶ್ವರ ದೇವಸ್ಥಾನವನ್ನು ನೂತನವಾಗಿ ನಿರ್ಮಿಸಲು ಚಿಂತನೆ ನಡೆಸಲಾಗಿದೆ.

Join


ಈ ಹಿನ್ನೆಲೆಯಲ್ಲಿ ದೇವರ ಬಾಲಾಲಯ ಪ್ರತಿಷ್ಠೆಯು
ಜ. 27 ರಂದು ರಂದು ನಡೆಯಲಿದ್ದು ಪೂರ್ವಭಾವಿಯಾಗಿ ಜ.26ರಂದು ಬೆಳಿಗ್ಗೆ 10 ಗಂಟೆಗೆ ಪಚ್ಚೇರಿಯಿಂದ ಮೂಲ ಶಿವಲಿಂಗವನ್ನು ಕ್ಷೇತ್ರಕ್ಕೆ ಭವ್ಯ ಮೆರವಣಿಗೆಯೊಂದಿಗೆ ತಂದ ಬಳಿಕ ವಿವಿಧ ವೈದಿಕ ವಿಧಿವಿದಾನಗಳು ನಡೆಯಲಿದೆ. ಜ.27ರಂದು ಬೆಳಿಗ್ಗೆ 7 ರಿಂದ ಗಣಹೋಮ, ವಿವಿಧ ವೈಧಿಕ ಕಾರ್ಯಕ್ರಮಗಳೊಂದಿಗೆ ಬಾಲಾಲಯ ಪ್ರತಿಷ್ಠೆ ನಡೆಯಲಿದೆ.
ಕಾಪು ಎಂಬ ಸ್ಥಳದಲ್ಲಿ ಪ್ರಕೃತಿ ರಮಣೀಯ ಸುಂದರ ಪರಿಸರದಲ್ಲಿ ಮರ, ಗಿಡಗಂಟಿಗಳಿರುವ ಕಾನನದೊಳಗೆ ಶಿವಕ್ಷೇತ್ರವಿದ್ದ ಐತಿಹಾಸಿಕ ಪಳೆಯುಳಿಕೆಗಳು ಹಂತ ಹಂತವಾಗಿ ಗೋಚರಿಸಿದ್ದು ಈ ಹಿನ್ನೆಲೆಯಲ್ಲಿ ಊರಿನ ಭಕ್ತ ಜನತೆ ಕ್ಷೇತ್ರ ನಿರ್ಮಾಣಕ್ಕೆ ಮುಂದಡಿಯಿಟ್ಟಿದ್ದಾರೆ.


ಸದ್ರಿ ಸ್ಥಳದಲ್ಲಿ ಅಷ್ಟಮಂಗಳ ಪ್ರಶ್ನಾ ಚಿಂತನೆ ನಡೆದಿದ್ದು ಅನೇಕ ಐತಿಹಾಸಿಕ ಅಂಶಗಳು ಗೋಚರಿಸಿದೆ.
ವಿಶೇಷವಾಗಿ ಈ ಸ್ಥಳ ಶ್ರೀ ಉಮಾಮಹೇಶ್ವರನ ಸಾನಿಧ್ಯವಾಗಿದ್ದು ಸುಮಾರು 1418 ವರ್ಷಗಳ ಪುರಾತನ ಐತಿಹಾಸಿಕ ಹಿನ್ನೆಲೆ ಇದೆ.
ಸದ್ರಿ ಜಾಗ ಋಷಿ ಮುನಿಗಳ ತಪೋಭೂಮಿಯಾಗಿದ್ದು ಶ್ರೀ ಉಮಾಮಹೇಶ್ವರ ದೇವರು ಋಷಿಗಳ ತಪಸ್ಸಿಗೆ ಮೆಚ್ಚಿ ಒಲಿದವರಾಗಿದ್ದಾರೆ.


ಪೂರ್ವಕಾಲದಲ್ಲಿ ಹುಲ್ಲಿನ ಕ್ಷೇತ್ರವಾಗಿದ್ದ ಶ್ರೀ ಸಾನಿಧ್ಯವು ನಂತರ ರಾಜವಂಶಜರ ಕಾಲದಲ್ಲಿ ಕಗ್ಗಲ್ಲಿನಿಂದ ಜೀರ್ಣೋದ್ಧಾರಗೊಂಡಿತ್ತು.
ಪ್ರಕೃತಿ ವಿಕೋಪ ಮತ್ತಿತರ ಕಾರಣಗಳಿಂದಾಗಿ ಶ್ರೀ ಕ್ಷೇತ್ರವು ನಾಶಗೊಂಡಿದೆ ಎಂದು ಅಷ್ಟಮಂಗಳ ಪ್ರಶ್ನೆಯಲ್ಲಿ ತಿಳಿದು ಬಂದಿದೆ.
ಅಜಿಲಸೀಮೆಗೆ ಸಂಬಂಧಪಟ್ಟ 4 ಶಿವಕ್ಷೇತ್ರಗಳ ಪೈಕಿ
ಶ್ರೀ ಉಮಾಮಹೇಶ್ವರ ದೇವಸ್ಥಾನವೂ ಒಂದಾಗಿದ್ದು ಅಜಿಲಸೀಮೆಯ ಮಾಗಣೆ ಕ್ಷೇತ್ರವಾಗಿ ಅಜ್ಜಿಬೆಟ್ಟು, ಚೆನ್ನೈತ್ತೋಡಿ, ಪಿಲಿಮೊಗರು, ಕುಡಂಬೆಟ್ಟು, ಮೂಡುಪಡುಕೋಡಿ, ಪಿಲಾತಬೆಟ್ಟು ಹಾಗೂ ಇರ್ವತ್ತೂರುಗಳೆಂಬ 7 ಗ್ರಾಮಗಳ ಭಕ್ತರ ಆರಾಧನಾ ಕ್ಷೇತ್ರವಾಗಿದೆ.
ಕ್ಷೇತ್ರವು ಗಜಪೃಷ್ಟಾಕಾರದಲ್ಲಿ ನಿರ್ಮಾಣಗೊಳ್ಳಬೇಕಾಗಿದ್ದು ಪ್ರಧಾನ ಶಕ್ತಿ ಶ್ರೀ
ಉಮಾಮಹೇಶ್ವರ ಸಹಿತ ಶ್ರೀ ಗಣಪತಿ ದೇವರ ಗುಡಿ, ಶ್ರೀ ಸುಬ್ರಹ್ಮಣ್ಯ ದೇವರ ಗುಡಿ, ನಮಾಸ್ಕಾರ ಮಂಟಪ, ಗೋಪುರ, ಸುತ್ತು ಪೌಳಿ, ಅಯ್ಯಂಗಾಯಿ ಕಲ್ಲು, ನಂದಿ‌ ಪ್ರತಿಷ್ಠೆ, ಕೊಡಿಮರ( ಧ್ವಜಸ್ತಂಭ) ಪ್ರತಿಷ್ಠೆ, ಕ್ಷೇತ್ರಪಾಲ ಕಲ್ಲು, ಸಪ್ತಮಾತೃಗಳು, ಗುರುಪೀಠ, ತೀರ್ಥಭಾವಿ ಮೊದಲಾದ ಅಂಗಗಳಿರುವ ಕ್ಷೇತ್ರವನ್ನು ನಿರ್ಮಾಣ ಮಾಡಬೇಕಾಗಿದೆ.
ಕ್ಷೇತ್ರದ ಈಶಾನ್ಯ ಭಾಗದಲ್ಲಿ ಜಲಕದ ಕೆರೆಯಿದ್ದು ಇದನ್ನು ಅಭಿವೃದ್ಧಿ ಪಡಿಸಬೇಕಾಗಿದೆ. ನೈರುತ್ಯ ಭಾಗದಲ್ಲಿ ವನ ಶಾಶ್ತಾವಿ ಮತ್ತು ವನದುರ್ಗಾ ಸಾನಿಧ್ಯವಿದೆ. ಈ ಶಕ್ತಿಗಳಿಗೆ ಕಟ್ಟೆ ನಿರ್ಮಿಸಿ ಶಿಲಾ ಪ್ರತಿಷ್ಟೆ ಮಾಡಬೇಕಾಗಿದೆ.
ಕ್ಷೇತ್ರದ ಸನಿಹದಲ್ಲೇ ಇರುವ ದೇವರ ಗುಂಡಿಯಲ್ಲಿ ಶಿವಲಿಂಗವಿದೆ ಎಂದು ಪ್ರಶ್ನಾಚಿಂತನೆಯಲ್ಲಿ ಕಂಡು ಬಂದಿದ್ದು ಅದರಂತೆ ಇತ್ತೀಚೆಗೆ ನಡೆದ ಉತ್ಖನನ ವೇಳೆ ಶಿವಲಿಂಗ ಪತ್ತೆಯಾಗಿದೆ.
ಇದೀಗ ದೇವರ ಬಾಲಾಲಯ ಪ್ರತಿಷ್ಠೆಗೆ ಕ್ಷೇತ್ರವು ಸಜ್ಜುಗೊಂಡಿದೆ.
ಶ್ರೀ ಕ್ಷೇತ್ರದ ಪುನರ್ ನಿರ್ಮಾಣದ ಹಿನ್ನೆಲೆಯಲ್ಲಿ ನಡೆಯುವ ಈ ಪುಣ್ಯಪ್ರಧವಾದ ಕೈಂಕರ್ಯದಲ್ಲಿ ಮಾಗಣೆಯ ಸಮಸ್ತ ಭಕ್ತಜನತೆ ತ್ರಿಕರಣ ಪೂರ್ವಕ ಶ್ರದ್ಧಾಭಕ್ತಿಯಿಂದ ಪಾಲ್ಗೊಳ್ಳಬೇಕಾಗಿ ಭಕ್ತವಂದ ವಿನಂತಿಸಿದೆ.

ಲೇಖನ: ಗೋಪಾಲ ಅಂಚನ್, ಆಲದಪದವು
ಸಂಪಾದಕರು, ಯುವಧ್ವನಿ ನ್ಯೂಸ್
M: 9449104318