ಡಿಸೆಂಬರ್ 24ರಂದು ಚೆನ್ನೈತ್ತೋಡಿ ಗ್ರಾಮ ಪಂಚಾಯತು ಎದುರು ಬಡಮಹಿಳೆಯಿಂದ ಅಮರಣಾಂತ ಉಪವಾಸ ಸತ್ಯಾಗ್ರಹ

ಬಂಟ್ವಾಳ: ಸರಕಾರ ನೀಡಿದ ನಿವೇಶನದಲ್ಲಿ ಮನೆ ಕಟ್ಟುವರೇ ಅಡ್ಡಿಪಡಿಸಿ ಅನಾಮಧೇಯ ವ್ಯಕ್ತಿಯೊರ್ವ ದೂರು ನೀಡಿರುವ ಹಿನ್ನೆಲೆಯಲ್ಲಿ ಬಡ ಮಹಿಳೆ ಮನೆ ಕಟ್ಟದಂತೆ ಮಾನಸಿಕ ಹಿಂಸೆ ನೀಡುತ್ತಿರುವ ಚೆನ್ನೈತ್ತೋಡಿ ಗ್ರಾಮ ಪಂಚಾಯತಿಯ ಅಮಾನವೀಯ ಧೋರಣೆಯನ್ನು ಖಂಡಿಸಿ ಡಿ.24 ರಂದು ಬಡ ಮಹಿಳೆ ಸಂಸಾರ ಸಹಿತ ಚೆನ್ನೈತ್ತೋಡಿ ಗ್ರಾಮ ಪಂಚಾಯತು ಕಚೇರಿ ಎದುರು ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸಲು ನಿರ್ಧರಿಸಿದ್ದಾರೆ.
ನಮ್ಮ ನಿವೇಶನಕ್ಕೆ ಸಂಬಂಧವೇ ಪಡದ ವ್ಯಕ್ತಿಯೊರ್ವ ನಾವು ಮನೆ ಕಟ್ಟಲು ಅಡ್ಡಿ ಪಡಿಸಿ ಗ್ರಾಮ ಪಂಚಾಯತಿಗೆ ದೂರು ನೀಡಿದ್ದು ಗ್ರಾಮ ಪಂಚಾಯತು ಇತನನ್ನು ಬೆಂಬಲಿಸುತ್ತಾ ನಮಗೆ ಮನೆ ಕಟ್ಟದಂತೆ ತಡೆವೊಡ್ಡುತ್ತಿದ್ದಾರೆ. ಇದರಿಂದ ವಯೋವೃದ್ಧಳಾದ ಮತ್ತು ಅನಾರೋಗ್ಯ ಪೀಡಿತಳಾದ ನಾನು ಮಾನಸಿಕವಾಗಿ ನೊಂದಿದ್ದು ಸಂಸಾರ ಸಮೇತ ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸಲು ತೀರ್ಮಾನಿಸಿದ್ದೇನೆ ಎಂದು
ಚೆನ್ನೈತ್ತೋಡಿ ಗ್ರಾಮ ಪಂಚಾಯತು ವ್ಯಾಪ್ತಿಯ ಅಜ್ಜಿಬೆಟ್ಟು ಗ್ರಾಮದ ಆಲದಪದವು ಶ್ರೀನಿವಾಸ ನಗರ ನಿವಾಸಿ ರೋಹಿಣಿ ಪೂಜಾರ್ತಿ ದ.ಕ.ಜಿಲ್ಲಾಧಿಕಾರಿಯವರಿಗೆ ಸಲ್ಲಿಸಿದ ಮನವಿಯಲ್ಲಿ ತಿಳಿಸಿದ್ದಾರೆ.
ಚೆನ್ನೈತ್ತೋಡಿ ಗ್ರಾಮ ಪಂಚಾಯತು ವ್ಯಾಪ್ತಿಯ ಅಜ್ಜಿಬೆಟ್ಟು ಗ್ರಾಮದ ಆಲದಪದವು ಶ್ರೀನಿವಾಸ ನಗರ ಎಂಬಲ್ಲಿ ನಾನು,
ನನ್ನ ಗಂಡ, ಮಗ, ಸೊಸೆ ಸಹಿತ ಮೊಮ್ಮಕ್ಕಳು ಕಳೆದ 38 ವರ್ಷಗಳಿಂದ ವಾಸವಿದ್ದೇವೆ.
ನಾನು ಇತ್ತೀಚೆಗೆ ನನ್ನ ಹಳೇ ಮನೆ ಬೀಳುವ ಸ್ಥಿತಿಯಲ್ಲಿದ್ದರಿಂದ ಅದನ್ನು ತೆರವುಗೊಳಿಸಿ ಹೊಸ ಮನೆ ಕಟ್ಟುತ್ತಿದ್ದೇವೆ. ಸ್ಥಳಕ್ಕೆ ಸಂಬಂಧಿಸಿದಂತೆ ಎಲ್ಲಾ ದಾಖಲೆಗಳಿದ್ದು ಹೊಸ ಮನೆ ಕಟ್ಟುವರೇ ಚೆನ್ನೈತ್ತೋಡಿ ಗ್ರಾಮ ಪಂಚಾಯತು ಪರವಾನಿಗೆ ನೀಡಿದೆ.
ಈ ಹಿನ್ನೆಲೆಯಲ್ಲಿ ಬ್ಯಾಂಕು ಸಾಲ ಮಾಡಿ ಕಳೆದ 2021ರ ಸೆಪ್ಟಂಬರ್ 3 ರಂದು ಮನೆ ಕೆಲಸ ಆರಂಭಿದ್ದು ಕಾಮಗಾರಿ ಪೂರ್ಣ ಹಂತಕ್ಕೆ ತಲುಪಿದೆ.


ಈ ಮಧ್ಯೆ ಅಜ್ಜಿಬೆಟ್ಟು ಗ್ರಾಮದ ದೋಟ ನಿವಾಸಿಯಾದ ಆದಪ್ಪ ಮಡಿವಾಳ ಎಂಬವರು ಕಳೆದೆರಡು ತಿಂಗಳಿನಿಂದಲೂ ನಮ್ಮ ಮನೆ ನಿರ್ಮಾಣ ಕಾರ್ಯಕ್ಕೆ ವಿನಾಕಾರಣ ಅಡ್ಡಿ ಪಡಿಸುತ್ತಿದ್ದು ಆಗಾಗ್ಗೆ ಬಂದು ಪೋಟೋ ತೆಗೆಯುವುದು, ಬೇರೆ ಬೇರೆ ಕಡೆಗಳಿಗೆ ದೂರು ನೀಡಿ ನಮ್ಮ ಕೆಲಸವನ್ನು ವಿಳಂಬ ಮಾಡಿಸುವುದು, ನಮ್ಮ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡುವ ಮೂಲಕ ಈಗಾಗಲೇ ಅನಾರೋಗ್ಯ ಪೀಡಿತಳಾದ ನನಗೆ ಮತ್ತಷ್ಟು ಮಾನಸಿಕ ಹಿಂಸೆ ನೀಡುತ್ತಿದ್ದಾರೆ. ಈ ಬಗ್ಗೆ
ತಾಲೂಕು ಪಂಚಾಯತು ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮನೆ ನಿರ್ಮಾಣಕ್ಕೆ ಅವಕಾಶ ನೀಡಿದ್ದರೂ ಸ್ಥಳೀಯ ಗ್ರಾಮ ಪಂಚಾಯತು ಯಾವುದೇ ಕ್ರಮ ಕೈಗೊಂಡಿಲ್ಲ. ಸೆಪ್ಪಂಬರ್ 27ರಂದು ನಮ್ಮ ಮನೆಗೆ ಆದಪ್ಪ ಮಡಿವಾಳ ಅಡ್ಡಿಪಡಿಸುವ ಬಗ್ಗೆ ನಾನು ಪಂಚಾಯತಿಗೆ ದೂರು ನೀಡಿದ್ದರೂ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಮನೆ ನಿರ್ಮಾಣ ಸಂಬಂಧಿಸಿ ಗ್ರಾಮ ಪಂಚಾಯತ್ ಕೈಗೊಂಡಿರುವ ಯಾವುದೇ ಕ್ರಮದ ಬಗ್ಗೆಯೂ ನಮಗೆ ಮಾಹಿತಿ ನೀಡಿಲ್ಲ. ನಮ್ಮನ್ನು ಐದಾರು ಬಾರಿ ವಿಚಾರಣೆಗೆ ಕರೆದಂತೆ ನಾವು ಹಾಜರಾದರೂ ದೂರುದಾರರು ಇದುವರೆಗೆ ಯಾವುದೇ ವಿಚಾರಣೆಗೆ ಹಾಜರಾಗಿಲ್ಲ. ನಾಲ್ಕೈದು ಬಾರಿ ವಿಚಾರಣೆಗೆ ಹಾಜರಾಗದಿದ್ದರೂ ದೂರುದಾರರ ದೂರನ್ನು ಗ್ರಾಮ ಪಂಚಾಯತ್ ರದ್ದು ಮಾಡಿಲ್ಲ. ಬದಲಾಗಿ ದೂರುದಾರರು ನಿತ್ಯ ನಮ್ಮ ಮನೆ ಕೆಲಸದ ಬಗ್ಗೆ ಪೋಟೋ ತೆಗೆದು ವಾಟ್ಸಾಪ್ ಮಾಡುವ ವಿಷಯಗಳನ್ನೇ ಗಂಭೀರವಾಗಿ ಪರಿಗಣಿಸಿ ಪಂಚಾಯತು ಅಧ್ಯಕ್ಷರ ಸಹಿತ ಅಭಿವೃದ್ಧಿ ಅಧಿಕಾರಿಗಳು ಪೋನ್ ಮಾಡುವುದು, ರಾತ್ರಿ ಹೊತ್ತು ನಮ್ಮ ಸೈಟಿಗೆ ಭೇಟಿ ನೀಡಿ ಒತ್ತಡ ತರುವುದು, ಕೆಲಸ ನಿಲ್ಲಿಸುವಂತೆ ಕರೆ ಮಾಡುವುದು ನಿರಂತರ ನಡೆಯುತ್ತಿದೆ.
ಈ ರೀತಿ ಮಾನಸಿಕ ಹಿಂಸೆ ನೀಡುತ್ತಿರುವುದರಿಂದ ವಯೋವೃದ್ಧಳಾದ ನಾನು ತೀವ್ರ ಅಘಾತಕ್ಕೀಡಾಗಿದ್ದೇನೆ. ಅದ್ದರಿಂದ ಗ್ರಾಮ ಪಂಚಾಯತು ಕಚೇರಿ ಎದುರು ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸಲು ತೀರ್ಮಾನಿಸಿದ್ದೇನೆ. ಇದರಿಂದ ನನ್ನ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಯಾವುದೇ ರೀತಿಯಲ್ಲಿ ತೊಂದರೆಯಾದಲ್ಲಿ ಸಂಬಂಧಪಟ್ಟವರೇ ಹೊಣೆಗಾರರು ಎಂದು ತಿಳಿಸಬಯಸುತ್ತೇನೆ ಎಂದು ರೋಹಿಣಿ ಪೂಜಾರಿ ದ.ಕ.ಜಿಲ್ಲಾಧಿಕಾರಿಯವರಿಗೆ ಸಲ್ಲಿಸಿದ ಮನವಿಯಲ್ಲಿ ತಿಳಿಸಿದ್ದಾರೆ.