ಕೊಳವೆ ಗುಂಡಿಗೆ ಮುಕ್ತಿ, ದ.ಕ‌.ಜಿಲ್ಲಾಧಿಕಾರಿ ಮತ್ತು ಚೆನ್ನೈತ್ತೋಡಿ ಗ್ರಾಮ ಪಂಚಾಯತ್ ಕ್ರಮಕ್ಕೆ ನಾಗರಿಕರ ಕೃತಜ್ಞತೆ

ವಾಮದಪದವು: ಕೊಳವೆ ಬಾವಿ ಗುಂಡಿಯೊಂದು ಬಾಯ್ದೆರೆದು ನಿಂತು ಅಪಾಯಕ್ಕೆ ಆಹ್ವಾನಿಸುತ್ತಿರುವ ಬಗ್ಗೆ ನಾಗರಿಕರು ನೀಡಿದ ದೂರಿಗೆ ದ.ಕ.ಜಿಲ್ಲಾಧಿಕಾರಿವರು ತಕ್ಷಣ ಸ್ಪಂದಿಸಿದ್ದು ಚೆನ್ನೈತ್ತೋಡಿ ಗ್ರಾಮ ಪಂಚಾಯತ್ ಆಡಳಿತ ಬುಧವಾರ ಬೆಳಿಗ್ಗೆ ಗುಂಡಿಯನ್ನು ಮುಚ್ಚುವ ಮೂಲಕ ಸಂಭಾವ್ಯ ಅಪಾಯಕ್ಕೆ ಮುಕ್ತಿ ನೀಡಿದೆ.


ಚೆನ್ನೈತ್ತೋಡಿ ಗ್ರಾಮ ಪಂಚಾಯತು ವ್ಯಾಪ್ತಿಯ ಅಜ್ಜಿಬೆಟ್ಟು ಗ್ರಾಮದ ಶ್ರೀನಿವಾಸ ನಗರ ಎಂಬಲ್ಲಿ
ಅಂಗನವಾಡಿ, ಶಾಲೆಯ ಮಕ್ಕಳ ಸಹಿತ ನಿತ್ಯ ನೂರಾರು ಮಂದಿ ಸಂಚರಿಸುವ ಸ್ಥಳದಲ್ಲೇ ಈ ಗುಂಡಿಯಿದ್ದು ಅಪಾಯ ಸಂಭವಿಸುವ ಸಾಧ್ಯತೆ ಇರುವ ಬಗ್ಗೆ ಸ್ವಾಭಿಮಾನ್ ಕರ್ನಾಟಕದ ವಾಮದಪದವು ವಲಯ ಘಟಕ ಮತ್ತು ಶ್ರೀನಿವಾಸ ನಗರ ನಿವಾಸಿಗಳು ದ.ಕ.ಜಿಲ್ಲಾಧಿಕಾರಿಯವರಿಗೆ ಮಂಗಳವಾರ ದೂರು ನೀಡಿದ್ದರು.


ಜಿಲ್ಲಾಧಿಕಾರಿಯವರು ತಕ್ಷಣ ಸ್ಪಂದಿಸಿದ್ದು ಇದೀಗ ಪಂಚಾಯತ್ ಆಡಳಿತ ಬೆಳಿಗ್ಗೆ ಗುಂಡಿಯನ್ನು ಮುಚ್ಚಿದೆ. ನಾಗರಿಕರ ಮನವಿಗೆ ಸ್ಪಂದಿಸಿದ ದ.ಕ.ಜಿಲ್ಲಾಧಿಕಾರಿ ಹಾಗೂ ಚೆನ್ನೈತ್ತೋಡಿ ಗ್ರಾಮ ಪಂಚಾಯತಿಗೆ ಶ್ರೀನಿವಾಸ ನಗರ ನಿವಾಸಿಗಳು ಕೃತಜ್ಞತೆ ಸಲ್ಲಿಸಿದ್ದಾರೆ.