ಅಪಾಯಕ್ಕೆ ಆಹ್ವಾನಿಸುತ್ತಿದೆ ಕೊಳವೆ ಬಾವಿ ಗುಂಡಿ, ಚೆನ್ನೈತ್ತೋಡಿ ಗ್ರಾಮ ಪಂಚಾಯತು ನಿರ್ಲಕ್ಷ್ಯ, ಸಾರ್ವಜನಿಕರಿಂದ ಡಿಸಿಗೆ ದೂರು

ವಾಮದಪದವು: ಕೊಳವೆ ಬಾವಿ ಗುಂಡಿಯೊಂದು ಬಾಯ್ದೆರೆದು ನಿಂತಿದ್ದು ಅಪಾಯಕ್ಕೆ ಆಹ್ವಾನಿಸುತ್ತಿದೆ. ಅಂಗನವಾಡಿ, ಶಾಲೆಯ ಮಕ್ಕಳ ಸಹಿತ ನಿತ್ಯ ನೂರಾರು ಮಂದಿ ಸಂಚರಿಸುವ ಸ್ಥಳದಲ್ಲೇ ಈ ಗುಂಡಿಯಿದ್ದು ಸ್ಥಳೀಯರು ಹಲವು ಬಾರಿ ಸ್ಥಳೀಯಾಡಳಿತಕ್ಕೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಳ್ಳದಿರುವುದರಿಂದ ಇದೀಗ ಸ್ವಾಭಿಮಾನ್ ಕರ್ನಾಟಕದ ವಾಮದಪದವು ವಲಯ ಘಟಕ ದ.ಕ.ಜಿಲ್ಲಾಧಿಕಾರಿಯವರಿಗೆ ದೂರು ನೀಡಿದೆ.


ದ.ಕ.ಜಿಲ್ಲೆಯ ಬಂಟ್ವಾಳ ತಾಲೂಕಿನ ಚೆನ್ನೈತ್ತೋಡಿ ಗ್ರಾಮ ಪಂಚಾಯತು ವ್ಯಾಪ್ತಿಯ ಅಜ್ಜಿಬೆಟ್ಟು ಗ್ರಾಮದ ಆಲದಪದವು ಶ್ರೀನಿವಾಸ ನಗರ ಎಂಬಲ್ಲಿ ಈ ಕೊಳವೆ ಬಾವಿಯ ಗುಂಡಿ ಬಾಯ್ದೆರೆದು ನಿಂತಿದೆ. ರಾಯಿ- ಮೂರ್ಜೆಯ ರಸ್ತೆಯ ಅಂಚಿನಲ್ಲೇ ಈ ಗುಂಡಿ ಇದ್ದು ದಿನನಿತ್ಯ ನೂರಾರು ಮಂದಿ ಬಸ್ಸು ಸಂಪರ್ಕಕ್ಕಾಗಿ ಇಲ್ಲಿ ಕಾಯುತ್ತಾರೆ. ಈ ಗುಂಡಿಯ ಎದುರಿನಲ್ಲೇ ಶ್ರೀನಿವಾಸ ನಗರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಅಂಗನವಾಡಿ ಕೇಂದ್ರಗಳಿದ್ದು ನೂರಾರು ಮಕ್ಕಳು ಈ ಗುಂಡಿಯ ಸನಿಹದಲ್ಲೇ ಸಂಚರಿಸುತ್ತಿದ್ದಾರೆ.
ಅನೇಕ ವರ್ಷಗಳ ಹಿಂದೆ ಈ ಬೋರ್ ವೆಲ್ ಕೆಟ್ಟು ಹೋಗಿದ್ದು ಬೋರ್ ವೆಲ್ ನ ಮೇಲ್ಭಾಗವನ್ನು ತೆರವುಗೊಳಿಸಿದ್ದರೇ ವಿನ: ಗುಂಡಿಯನ್ನು ಇನ್ನೂ ಮುಚ್ಚಿಲ್ಲ. ಈ ಗುಂಡಿ ಗ್ರಾಮ ಪಂಚಾಯತ್ ರಸ್ತೆಯ ಆರಂಭದಲ್ಲಿದ್ದು ಖಾಸಗಿ ವಾಹನಗಳ ಮೀತಿ ಮೀರಿದ ಸಂಚಾರದಿಂದಾಗಿ ಗುಂಡಿಯ ಮೇಲ್ಮೈ ಮತ್ತಷ್ಟು ಅಗಲವಾಗುತ್ತಿದೆ.
ಈ ಬಗ್ಗೆ ಶ್ರೀನಿವಾಸ ನಗರ ನಿವಾಸಿಗಳು ಹಲವು ಬಾರಿ ಚೆನ್ನೈತ್ತೋಡಿ ಗ್ರಾಮ ಪಂಚಾಯತಿಯ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿರುವ ಶ್ರೀನಿವಾಸ ನಗರ ನಿವಾಸಿಗಳು ಅಕಸ್ಮಾತ್ ಈ ಗುಂಡಿಗೆ ಮಕ್ಕಳು ಇಲ್ಲವೇ ಪ್ರಾಣಿಗಳು ಬಿದ್ದು ಅಪಾಯ ಸಂಭವಿಸಿದರೆ ಯಾರು ಹೊಣೆ ಎಂದು ಜಿಲ್ಲಾಧಿಕಾರಿಯವರಿಗೆ ಸಲ್ಲಿಸಿದ ಮನವಿಯಲ್ಲಿ ಪ್ರಶ್ನಿಸಿದ್ದಾರೆ.
ಕೆಟ್ಟು ಹೋದ ಕೊಳವೆ ಬಾವಿಯ ಗುಂಡಿಯನ್ನು ಇನ್ನೂ ಮುಚ್ಚದಿರುವುದರಿಂದ ಸ್ಥಳೀಯ ನಾಗರಿಕರು, ಶಾಲೆ, ಅಂಗನವಾಡಿ ಸಹಿತ ಪರಿಸರದಲ್ಲಿ ಭಯದ ವಾತಾವರಣ ನಿರ್ಮಾಣಗೊಂಡಿದ್ದು ಸೂಕ್ತ ಕ್ರಮಕ್ಕಾಗಿ ಸಂಘಟನೆಗಳ ಸಹಿತ ಸ್ಥಳೀಯರ ನಿಯೋಗ ದ.ಕ.ಜಿಲ್ಲಾಧಿಕಾರಿಯವರಿಗೆ ದೂರು ನೀಡಿದೆ.