ಸಾಮಾಜಿಕ ಹಿತಚಿಂತಕ, ಕಲಾಪೋಷಕ, ಬಹುಮುಖಿ ಸಾಧಕ ಸದಾಶಿವ ಡಿ.ತುಂಬೆ ಅವರಿಗೆ “ಸ್ವಸ್ತಿ ಸಿರಿ” ರಾಜ್ಯ ಪ್ರಶಸ್ತಿ

ಮಂಗಳೂರು: ಸಾಮಾಜಿಕ ಹಿತಚಿಂತಕರಾಗಿ, ಕಲಾ ಪೋಷಕರಾಗಿ, ಬಹುಮುಖಿ ಕ್ಷೇತ್ರಗಳ ಸಾಧಕರಾಗಿ ಸಮಾಜದ ಗೌರವಾದರಗಳಿಗೆ ಪಾತ್ರರಾಗಿರುವ ಸದಾಶಿವ ಡಿ.ತುಂಬೆ ಅವರು ಪುಂಜಾಲಕಟ್ಟೆ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಕೊಡಮಾಡುವ “ಸ್ವಸ್ತಿ ಸರಿ” ರಾಜ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.


ಕಲೆ- ಸಾಂಸ್ಕ್ರತಿಕ ಕ್ಷೇತ್ರದ ಸಾಧನೆಗಾಗಿ ಈ ಪ್ರಶಸ್ತಿಗೆ ಭಾಜನರಾಗಿದ್ದು ಡಿ.19ರಂದು ಪುಂಜಾಲಕಟ್ಟೆಯಲ್ಲಿ ನಡೆಯುವ ಸಮಾರಂಭದಲ್ಲಿ ಗಣ್ಯರ ಸಮಕ್ಷಮದಲ್ಲಿ ಪ್ರಶಸ್ತಿ ಸ್ವೀಕರಿಸಲಿದ್ದಾರೆ.

ಸದಾಶಿವರ ರಂಗಪಯಣ:

ಕಲೆ, ಸಾಂಸ್ಕ್ರತಿಕ, ಸಾಹಿತ್ಯ ಕ್ಷೇತ್ರದ ಮೇಲೆ ಸದಾಶಿವರಿಗೆ ವಿಶೇಷ ಒಲವು. ವೃತ್ತಿ ಜೀವನದ ಒತ್ತಡದ ಮಧ್ಯೆಯೇ ಇವರು ಓರ್ವ ಉತ್ತಮ ಕಲಾವಿದರಾಗಿ, ಕಲಾ ಸಂಘಟಕರಾಗಿ, ಕಲಾಪೋಷಕರಾಗಿ ಬೆಳೆದವರು.


ಹಲವಾರು ತುಳು ನಾಟಕಗಳಲ್ಲಿ ಅಭಿನಯಿಸಿ ಕಲಾಪ್ರೇಕ್ಷಕರ ಪ್ರಶಂಸೆಗೆ ಪಾತ್ರರಾಗಿರುವ ಸದಾಶಿವ ತುಂಬೆಯವರ ಇಂಚರ ಕಲಾವಿದರು ತುಂಬೆ ಅಭಿನಯದಲ್ಲಿ ಪ್ರದರ್ಶನ ಕಂಡ ಬಯ್ಯ ಮಲ್ಲಿಗೆ ನಾಟಕಕ್ಕೆ ದೊರೆತ ಅದ್ಭುತ ಜನಮನ್ನಣೆ ಇವರ ಕಲಾಪ್ರಬುದ್ಧತೆಗೆ ಸಂದ ಗೌರವವೇ ಸರಿ.
ಒರಿಯರ್ದೊರಿ ಅಸಲ್ ತುಳು ಚಿತ್ರದಲ್ಲೂ ನಟನಾಗಿ ಮಿಂಚಿದವರು.

ಯಕ್ಷಗಾನಕ್ಕೂ ಸೈ:

ಯಕ್ಷಗಾನವನ್ನು ಉಳಿಸಿ ಬೆಳೆಸುವಲ್ಲಿ ತನ್ನದೇ ಆದ ಕೊಡುಗೆ ನೀಡಿರುವ ಸದಾಶಿವ ಡಿ.ತುಂಬೆ ಅವರು ಊರಿನ ಹವ್ಯಾಸಿ ಕಲಾವಿದರನ್ನು ಒಟ್ಟು ಸೇರಿಸಿ, ಹಲವೆಡೆ ಯಕ್ಷಗಾನವನ್ನು ಪ್ರದರ್ಶಿಸಿದವರು. ಮಹಿಷಾಸುರ, ಶುಂಭಾಸುರ, ಮುರಾಸುರ, ಸುಂದಾಸುರ, ತಾಟಕಿ, ಪೆರುಮಲ ಬಲ್ಲಾಳ, ಅಗ್ನಿ, ಶಂಭು ಕಲ್ಕುಡ ಮೊದಲಾದ ಪಾತ್ರಗಳಲ್ಲಿ ಇವರ ಅಭಿನಯವಂತೂ ಅಮೋಘವಾದುದು.

ಸಂಗೀತ ಸಾಧಕ

ಸದಾಶಿವರಿಗೆ ಬಾಲ್ಯದಿಂದಲೇ ಸಂಗೀತವೆಂದರೆ ವಿಶೇಷ ಆಸಕ್ತಿ. ಹಲವು ಸಂಗೀತ ಬಳಗದಲ್ಲಿ ಹವ್ಯಾಸಿ ಹಾಡುಗಾರರಾಗಿ ಗಮನ ಸೆಳೆದ ಇವರು ಅವಕಾಶ ವಂಚಿತ ಹಾಡುಗಾರರನ್ನು ಒಗ್ಗೂಡಿಸಿ “ಇಂಚರ ಕಲಾವಿದರು ತುಂಬೆ” ತಂಡದ ಮೂಲಕ ಹಲವೆಡೆ ರಸಮಂಜರಿ ಕಾರ್ಯಕ್ರಮಗಳನ್ನು ನೀಡಿದವರು. ಇಂಚರ ಮತ್ತು ಸದಾ ಸಿಂಚನ ಎಂಬ ಧ್ವನಿಮುದ್ರಿತ ಸಿಡಿಯನ್ನು ನಿರ್ಮಿಸಿ ಬಿಡುಗಡೆಗೊಳಿಸುವ ಮೂಲಕ ಸಂಗೀತ ಕ್ಷೇತ್ರದಲ್ಲೂ ಸಾಧಕರಾಗಿ ಮೆರೆದವರು.
ಭರತನಾಟ್ಯ ಕಲಾವಿದರಾಗಿಯೂ ರಾಜ್ಯ, ಹೊರರಾಜ್ಯದಲ್ಲಿ ತನ್ನ ಅಮೋಘ ಅಭಿನಯದೊಂದಿಗೆ ಕಲಾಭಿಮಾನಿಗಳ ಮನ ಸೆಳೆದವರು.

ಸಾಮಾಜಿಕ ಸೇವೆ:

ಸದಾಶಿವ ಡಿ.ತುಂಬೆ ಅವರು ಸರ್ವರ ಹಿತಚಿಂತಕರು. ಕಷ್ಟಕ್ಕೆ ಕರಗುವ ಮಧುರ ಮನಸ್ಸು. ಸರಳ ಸಜ್ಜನಿಕೆಯ ಸ್ನೇಹಜೀವಿ, ಸಹೃದಯಿ. ಬಡಬಗ್ಗರು, ವಿದ್ಯಾಬ್ಯಾಸಕ್ಕಾಗಿ ಕಷ್ಟದಲ್ಲಿರುವವರು, ಅನಾರೋಗ್ಯ ಪೀಡಿತರ ಮೇಲೆ ವಿಶೇಷ ಕಾಳಜಿ.
ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಮಕ್ಕಳ ದತ್ತು ಸ್ವೀಕಾರ, ಅನಾರೋಗ್ಯ ಪೀಡಿತರಿಗೆ ಆರ್ಥಿಕ ನೆರವು, ಸಂಕಷ್ಟದಲ್ಲಿರುವವರಿಗೆ ಸಹಾಯಹಸ್ತದ ಮೂಲಕ ಮಾನವೀಯತೆ ಮೆರೆಯುತ್ತಿರುವ ಸದಾಶಿವ ಡಿ.ತುಂಬೆಯವರು ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ, ಸಾಂಸ್ಕ್ರತಿಕ ಕಾರ್ಯಕ್ರಮಗಳಿಗೆ ತನ್ನದೇ ಆದ ರೀತಿಯಲ್ಲಿ ಕೊಡುಗೆ ನೀಡುತ್ತಾ ಸಾಮಾಜಿಕ ಪ್ರಗತಿಯ ಹಾದಿಯಲ್ಲಿ ಜತೆಯಾಗಿ ಮುನ್ನಡೆದವರು.

ವೃತ್ತಿ ಬದುಕು

ಬಂಟ್ವಾಳ ತಾಲೂಕಿನ ತುಂಬೆ ಗ್ರಾಮದ ಪೆರ್ಲಬೈಲು ನಿವಾಸಿಗಳಾದ ದೇಜಪ್ಪ ಬೆಳ್ಚಡ ಮತ್ತು ಕಾವೇರಿ ದಂಪತಿಯ ಪುತ್ರರಾದ ಸದಾಶಿವರು ಬಂಟ್ವಾಳ ಎಸ್.ವಿ.ಎಸ್.ಕಾಲೇಜಿನಲ್ಲಿ ಶಿಕ್ಷಣವನ್ನು ಮುಗಿಸಿ ನಂತರ ಮಂಗಳೂರು ಐಟಿಐಯಲ್ಲಿ ತಾಂತ್ರಿಕ ಶಿಕ್ಷಣ ಪಡೆದರು. ನಂತರ ಮುಂಬೈ, ಪಣಂಬೂರು, ಬಹರೈನ್, ಶಾರ್ಜಾ, ದುಬೈಯಲ್ಲಿ ಸೇವೆಯ ಬಳಿಕ ಮಂಗಳೂರು ಎಂಆರ್ ಪಿಎಲ್ ನಲ್ಲಿ ಮ್ಯಾನೇಜರ್ ಆಗಿ ಸೇವೆ ಸಲ್ಲಿಸಿ ಇತ್ತೀಚೆಗೆ ನಿವೃತ್ತಿ ಹೊಂದಿದವರು.
ಎಂಆರ್ ಪಿಎಲ್ ನಲ್ಲಿ ಸತತ ಮೂರು ಬಾರಿ “ಬೆಸ್ಟ್ ಹೌಟ್ ಸ್ಟ್ಯಾಂಡಿಂಗ್ ಪರ್ ಪಾರ್ಮರ್” ಪ್ರಶಸ್ತಿ ಪಡೆದಿರುವುದು ಇವರ ಅನನ್ಯ ಕರ್ತವ್ಯದಕ್ಷತೆಗೆ ಸಾಕ್ಷಿಯಾದುದು.


ಪತ್ನಿ ಶ್ರೀಮತಿ ಇಂದಿರಾ ಹಾಗೂ ಮಕ್ಕಳಾದ ಪೂಜಾ ಮತ್ತು ಪ್ರೀತಮ್ ಅವರೊಂದಿಗೆ ಸದಾಶಿವರದು ನೆಮ್ಮದಿಯ ಬದುಕು.
ತನ್ನ ಬಹುಮುಖಿ ಕ್ಷೇತ್ರದ ಸಾಧನೆಗಾಗಿ ಹಲವಾರು ಪ್ರಶಸ್ತಿ, ಸನ್ಮಾನಗಳಿಂದ ಪುರಸ್ಕೃತರಾಗಿರುವ ಸದಾಶಿವರ ಸಾಧನೆಯ ಕಿರೀಟಕ್ಕೆ ಇದೀಗ ಮತ್ತೊಂದು ಗರಿ “ಸ್ವಸ್ತಿ ಸಿರಿ”.
ಕರ್ತವ್ಯದಲ್ಲಿ ದಕ್ಷತೆ, ವ್ಯಕ್ತಿತ್ವದಲ್ಲಿ ಸನ್ನಡತೆ, ಸೇವೆಯಲ್ಲಿ ಪ್ರಾಮಾಣಿಕತೆ,
ಕಲೆಯಲ್ಲಿ ನಿಷ್ಠತೆ,
ಮಾತಿನಲ್ಲಿ ಮಧುರತೆ,
ಹೃದಯದಲ್ಲಿ ಮಾನವೀಯತೆ ಮೈದಳೆದಿರುವ ಸದಾಶಿವರ ಬದುಕು ಬಂಗಾರವಾಗಲಿ ಎಂಬ ಹಾರೈಕೆ ನಮ್ಮದು.
……………………
ಲೇಖನ:
ಗೋಪಾಲ ಅಂಚನ್, ಆಲದಪದವು
ಸಂಪಾದಕರು
ಯುವಧ್ವನಿ ನ್ಯೂಸ್
ಮಂಗಳೂರು