ಧಾರ್ಮಿಕ ಮುಂದಾಳು, ಕೊಡುಗೈ ದಾನಿ, ಬಿಲ್ಲವ ಸಮಾಜದ ಹಿರಿಯಣ್ಣ, ಕುತ್ತಿಲ ಗುರುದಾಸ್ ಕರ್ಕೆರಾ ಇನ್ನಿಲ್ಲ..

ಪುಂಜಾಲಕಟ್ಟೆ: ಧಾರ್ಮಿಕ‌ ನೇತಾರರಾಗಿ, ಕೊಡುಗೈ ದಾನಿಯಾಗಿ, ಬಿಲ್ಲವ ಸಮಾಜದ ಹಿರಿಯಣ್ಣನಾಗಿ ಸಮಾಜಮುಖಿ ಸೇವಾ ಕಾರ್ಯಗಳಲ್ಲಿ ಸಕ್ರೀಯರಾಗಿದ್ದ ಕುತ್ತಿಲ ಗುರುದಾಸ್ ಕರ್ಕೆರಾ ( 63)
ಶುಕ್ರವಾರ ನಮ್ಮನ್ನಗಲಿದ್ದಾರೆ.
ಕುತ್ತಿಲ ಶ್ರೀ ಕೊಡಮಣಿತ್ತಾಯ ಬ್ರಹ್ಮ ಬೈದರ್ಕಳ ಗರಡಿಯ ಅನುವಂಶೀಕ ಆಡಳಿತ ಮೊಕ್ತೇಸರರಾಗಿ ಗರಡಿಯ ಅಭಿವೃದ್ಧಿ ಸಹಿತ ಉತ್ಸವಾದಿಗಳ ಪ್ರಮುಖ ರೂವಾರಿಯಾಗಿದ್ದ ಅವರು ಧಾರ್ಮಿಕ, ಸಾಮಾಜಿಕ ಚಟುವಟಿಕೆಗಳ ಮಾರ್ಗದರ್ಶಕರಾಗಿ, ಹಲವಾರು ಜನೋಪಯೋಗಿ ಸೇವಾ ಕಾರ್ಯಗಳ ಪೋಷಕರಾಗಿ ಗುರುತಿಸಿಕೊಂಡಿದ್ದರು.
ಧಾರ್ಮಿಕ, ಸಾಮಾಜಿಕ, ಸಹಕಾರಿ ಸಂಘಟನೆಗಳಲ್ಲಿ ಸಕ್ರೀಯರಾಗಿದ್ದ ಕರ್ಕೆರ ಅವರು ಸರ್ವರ ಹಿತಚಿಂತಕರಾಗಿ, ಸರಳ ಸಜ್ಜನಿಕೆಯ ಸ್ನೇಹಜೀವಿಯಾಗಿ ಜನಾನುರಾಗಿಯಾಗಿದ್ದರು.
ದೈವದೇವರ ಮೇಲೆ ಅಪಾರ ಭಕ್ತಿ ಹೊಂದಿದ್ದ ಕರ್ಕೆರಾ ಹಲವಾರು ಧಾರ್ಮಿಕ ಕ್ಷೇತ್ರಗಳ ಜೀರ್ಣೋದ್ಧಾರದಲ್ಲಿಯೂ ವಿಶೇಷ ಕೊಡುಗೆ ನೀಡಿದವರು.
ಹಲವಾರು ವರ್ಷಗಳಿಂದ ಮಂಗಳೂರಿನಲ್ಲಿ ಕರ್ಕೇರಾ ಟ್ರೇಡಿಂಗ್ ಕಂಪನಿ ಎಂಬ ಉದ್ಯಮವನ್ನು ನಡೆಸುತ್ತಿದ್ದ ಗುರುದಾಸ್ ಕರ್ಕೇರಾ ಅವರು ಹಲವು ಕುಟುಂಬಗಳಿಗೆ ಉದ್ಯೋಗದಾತರೂ ಆಗಿದ್ದರು.
ಸಂಸಾರ ಸಹಿತ ಮಂಗಳೂರಿನಲ್ಲಿ ನೆಲೆಸಿದ್ದ ಇವರು ಆಗಾಗ್ಗೆ ಕುತ್ತಿಲಕ್ಕೆ ಬಂದು ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗುತ್ತಿದ್ದರು.
ಅಲ್ಪಕಾಲದ ಅಸೌಖ್ಯದಿಂದ ಇಂದು ನಿಧನರಾದ ಕರ್ಕೇರಾ ಪತ್ನಿ, ಪುತ್ರ, ಪುತ್ರಿ ಸಹಿತ ಅಪಾರ ಬಂಧುವರ್ಗವನ್ನು ಅಗಲಿದ್ದಾರೆ.
ಕರ್ಕೆರಾ ನಿಧನಕ್ಕೆ ಕುತ್ತಿಲ ಗರಡಿಯ ವ್ಯವಸ್ಥಾಪನಾ ಸಮಿತಿ, ಭಕ್ತಾದಿಗಳು, ಕರ್ಕೆರಾ ಟ್ರೇಡಿಂಗ್ ಸಂಸ್ಥೆಯ ಸಿಬ್ಬಂದಿ ವರ್ಗ, ಬಿಲ್ಲವ ಸಮಾಜ ಸೇವಾ ಸಂಘ ಹಾಗೂ ಅಪಾರ ಮಂದಿ ಸಂತಾಪ ವ್ಯಕ್ತಪಡಿಸಿದ್ದಾರೆ.