ಮಗುವಿನ ಹುಟ್ಟುಹಬ್ಬಕ್ಕೆ ನಿಮ್ಮದೇನು ಉಡುಗೊರೆ…???

“ಇವತ್ತು ನಿಮ್ಮ ಮನೆಯಲ್ಲಿ ಎಂಟೋ, ಹತ್ತೋ ವರ್ಷದ ನಿಮ್ಮ ಮಗ ಅಥವಾ ಮಗಳ ಹುಟ್ಟುಹಬ್ಬ. ನೀವು ನಿಮ್ಮ ಮಗ ಅಥವಾ ಮಗಳಿಗೆ ಏನು ಉಡುಗೊರೆ ನೀಡುತ್ತೀರಿ…?”.
ಸುಮಾರು ನಲ್ವತ್ತು ಮಂದಿ ಪೋಷಕರಿಗೆ ಅಲ್ಲಿ ನಾನು ನಡೆಸುತ್ತಿದ್ದ ” ಪರಿಣಾಮಕಾರಿ ಪೋಷಕರು” ವಿಷಯಾಧಾರಿತ ತರಬೇತಿಯಲ್ಲಿ ಮೇಲಿನ ಪ್ರಶ್ನೆಯನ್ನು ಮುಂದಿಟ್ಟೆ.
ಪೋಷಕರು ಒಂದಷ್ಟು ಹೊತ್ತು ನಿಶ್ಯಬ್ಧರಾದರೂ, ನಾನು ಮತ್ತೆ ಅದೇ ಪ್ರಶ್ನೆಯನ್ನು ಕೇಳಿದಾಗ ಸುಮ್ಮನಿರಲಾಗದೇ ಉತ್ತರಿಸತೊಡಗಿದರು.
“ನಾನು ಮಗನಿಗೆ ಸೈಕಲ್ ಕೊಡಿಸುತ್ತೇನೆ, ನಾನು ಚೆಸ್ ಬೋರ್ಡು ತಂದು ಕೊಡುತ್ತೇನೆ, ಹೊಸ ಚಪ್ಪಲು, ಚಾಕಲೇಟ್, ಬಾಲು…ಬ್ಯಾಟು…ಹೊಸ ಡ್ರೆಸ್…ಕೇಕ್…ಹೀಗೆ, ಒಬ್ಬೊಬ್ಬರು ಒಂದೊಂದು ವಸ್ತುವನ್ನು ತಂದು ಕೊಡುವುದಾಗಿ ಹೇಳಿದರು.
ಅದೇ ಪೋಷಕರ ಪೈಕಿ ಒಂದು ದಂಪತಿ ತರಬೇತಿಗೆ ಬರುವಾಗ ತನ್ನ ಏಳು ವರ್ಷದ ಮಗಳನ್ನು ಜತೆಗೆ ಕರೆ ತಂದಿದ್ದರು. ಆ ಹುಡುಗಿಯನ್ನು ನನ್ನ ಹತ್ತಿರ ಕರೆದೆ.
” ಮಗು, ಇವತ್ತು ನಿನ್ನ ಬರ್ತ್ ಡೆ. ನೀನೀಗ ಮನೆಯಲ್ಲಿದ್ದೀಯ. ನಿನ್ನ ತಂದೆ ತಾಯಿಯು ನಿನ್ನ ಜತೆ ಇದ್ದಾರೆ. ನೀನು ಇವತ್ತು ತಂದೆ ತಾಯಿಯಿಂದ ಯಾವ ಉಡುಗೊರೆಯನ್ನು ನಿರೀಕ್ಷೆ ಮಾಡುತ್ತೀಯ..?” ಎಂದು ಹುಡುಗಿಯನ್ನು ಕೇಳಿದೆ.
ಆ ಹುಡುಗಿ ಸ್ವಲ್ಪ ಹೊತ್ತು ನನ್ನನ್ನೂ, ಮತ್ತೆ ಕೆಲವು ಕ್ಷಣ ಆಕೆಯ ತಂದೆ ತಾಯಿಯನ್ನೇ ನೋಡಿದಳು. ನಾನು ಸುಮ್ಮನಾಗದೇ ಆಕೆಗೆ ಮತ್ತೆ ಆದೇ ಪ್ರಶ್ನೆಯನ್ನು ಕೇಳಿದೆ.
“ನನಗೆ ಇವತ್ತು ಯಾವ ಗಿಫ್ಟ್ ಕೊಡುವುದು ಬೇಡ. ನನ್ನ ತಂದೆ ತಾಯಿ ಯಾವತ್ತೂ ನನ್ನೊಡನೆ ಇರುವುದಿಲ್ಲ. ಇವತ್ತು ನನ್ನ ಬರ್ತ್ ಡೇ ಯ ದಿನವಾದರೂ ಅವರಿಬ್ಬರೂ ನನ್ನೊಡನೆ ಇದ್ದರೆ ಸಾಕು.’ ಎಂದು ಆ ಹುಡುಗಿ ಮೆಲುದನಿಯಲ್ಲಿ ಉತ್ತರಿಸಿದಾಗ ನಾನೂ ಸಹಿತ ಅಲ್ಲಿದ್ದ ಪೋಷಕರು
ಅರೇಕ್ಷಣ ಮೌನವಾದೆವು.

ಮತ್ತೊಂದು ಘಟನೆ:

ಒಂದು ಮನೆಯಲ್ಲಿ ಗಂಡ ಹೆಂಡತಿ ಇಬ್ಬರೂ ಉದ್ಯೋಗಸ್ಥರು. ಯಾವಾಗಲೂ ಬ್ಯುಸಿ ಬ್ಯುಸಿ. ಒಬ್ಬನೇ ಮಗ ಅನುಷ್ 5 ನೇ ತರಗತಿಯಲ್ಲಿ ಓದುತ್ತಿದ್ದಾನೆ. ಸಂಜೆ ಸ್ಕೂಲಿನಿಂದ ಬರುವ ಅನುಷ್ ತಂದೆ ತಾಯಿ ಕೆಲಸ ಮುಗಿಸಿ ಬರುವ ತನಕ ನೆರೆಮನೆಯಲ್ಲಿ ಕಾಲ ಕಳೆಯುವುದು, ರಾತ್ರಿ ಹೊತ್ತಿಗೆ ಬರುವ ತಂದೆ ತಾಯಿ ಮಗನನ್ನು ಮನೆಗೆ ಕರೆದೊಯ್ಯುವುದು, ಬಗಬಗನೇ ಮಗನೊಂದಿಗೆ ತಾವು ತಿಂದು ಮಲಗುವುದು ನಿತ್ಯದ ಪದ್ಧತಿ. ತನ್ನ ಒಬ್ಬಂಟಿತನದ ಬಗ್ಗೆ ಅನುಷ್ ಆಗೊಮ್ಮೆ ಈಗೊಮ್ಮೆ ದು:ಖ ತೋಡಿಕೊಂಡರೆ ” ನೋಡು, ನಾವು ದುಡಿಯುವುದು ನಿನಗೋಸ್ಕರ, ನಿನ್ನ ಒಳಿತಿಗಾಗಿ. ನಿನಗೆ ಒಳ್ಳೆಯ ಡ್ರೆಸ್, ಸೈಕಲ್, ಆಟದ ಸಾಮಾನು ಎಲ್ಲಾ ತರಬೇಕಲ್ವ. ನಿನ್ನ ಹತ್ತನೇ ವರ್ಷದ ಬರ್ತ್ ಡೇಯನ್ನು ಗ್ರ್ಯಾಂಡಾಗಿ ಮಾಡಬೇಕಲ್ವ..? ಅದಕ್ಕೆ ನಾವಿಬ್ಬರೂ ರಾತ್ರಿ ಹಗಲು ದುಡಿಯುತ್ತೇವೆ. ಈಗ ನಿನಗೆ ದಿನಾಲೂ ಹತ್ತು ರೂಪಾಯಿ ಕೊಡುತ್ತೇವೆ. ನೀನು ಇದನ್ನು ಡಬ್ಬಿಯಲ್ಲಿ ಹಾಕಿಟ್ಟು ಜೋಪಾನ ಮಾಡಿಡು. ಅದರಲ್ಲಾಗುವ ದುಡ್ಡೆಲ್ಲ ನಿನ್ನ ಬರ್ತ್ ಡೆ ಯ ಖರ್ಚಿಗೆ.” ಎಂದು ತಂದೆ ತಾಯಿ ಇಬ್ಬರೂ ಮಗನನ್ನು ಸಮಾಧಾನ ಪಡಿಸುತ್ತಿದ್ದರು. ತನಗಾಗಿ ನನ್ನ ತಂದೆ ತಾಯಿ ಎಷ್ಟೆಲ್ಲಾ ಕಷ್ಟ ಪಡುತ್ತಿದ್ದಾರೆ ಎಂದುಕೊಂಡ ಅನುಷ್ ಪಾಲಕರ ಮಾತಿಗೆ ತಲೆ ತೂಗುತ್ತಿದ್ದ.
ಅಂದು ಭಾನುವಾರ. ಅನುಷ್ ನ ಹತ್ತನೇ ವರ್ಷದ ಹುಟ್ಟು ಹಬ್ಬ. ಅನುಷ್ ತನ್ನ ಸ್ನೇಹಿತರೊಂದಿಗೆ ವಾರದ ಹಿಂದೆಯೇ ಹೇಳಿಕೊಂಡು ಸಂಭ್ರಮಿಸುತ್ತಿದ್ದ. ಬೆಳಿಗ್ಗೆಯಾಗುತ್ತಲೇ ಅನುಷ್ ಹಬ್ಬದ ವಾತಾವರಣಕ್ಕೆ ಸಜ್ಜಾಗಿದ್ದ. ಗಂಟೆ 9 ಆಗುತ್ತಲೇ ತಂದೆ ಬೈಕಿನ ಕೀ ಹಿಡಿದುಕೊಂಡು ಮನೆ ಹೊರಗೆ ಬರುತ್ತಲೇ ಅನುಷ್, ತಂದೆಗೆ ತನ್ನ ಹುಟ್ಟುಹಬ್ಬವನ್ನು ನೆನಪಿಸಿದ.
“ನನಗೆ ಮರೆತೇ ಹೋಗಿತ್ತು. ನಾನು ರಾತ್ರಿ ಬರುತ್ತೇನೆ. ನೀನು ನಿನ್ನ ಅಮ್ಮ ಮತ್ತು ಸ್ನೇಹಿತರೊಂದಿಗೆ ಬರ್ತ್ ಡೇ ಆಚರಿಸು. ನಾನಿವತ್ತು ಕೆಲಸಕ್ಕೆ ಹೋಗದಿದ್ದರೆ ನನ್ನ ತಿಂಗಳ ಸಂಬಳದಲ್ಲಿ ಹಣವನ್ನೂ ಕಟ್ ಮಾಡುತ್ತಾರೆ.” ಎಂದ ತಂದೆ ಹೊರಡುತ್ತಿದ್ದಂತೆ ಒಳಗಿನಿಂದ ಬಂದ ಅನುಷ್ ತಾಯಿ, ” ರೀ ನಿಲ್ಲಿರೀ ಅಲ್ಲಿ ತನಕ ನಾನೂ ಬರುತ್ತೇನೆ. ನನಗೂ ಇವತ್ತು ಡ್ಯೂಟಿ ಇದೆ. ಹೋಗದಿದ್ದರೆ ನನಗೇ ನಷ್ಟ.” ಎಂದು ವೇಗದ ನಡಿಗೆಯಲ್ಲಿ ಹೊರಗೆ ಹೆಜ್ಜೆ ಇಟ್ಟರು.
ಇದನ್ನೆಲ್ಲ ಗಮನಿಸಿದ ಅನುಷ್ ಅಳುತ್ತಲೇ ದೇವರ ಕೋಣೆಗೆ ಹೋದ. ಅಲ್ಲಿದ್ದ, ತಾನು ದಿನಾಲೂ ಹಣ ಹಾಕುತ್ತಿದ್ದ ಡಬ್ಬಿಯನ್ನು ತಂದ. ತುಂಬಿದ್ದ ಡಬ್ಬಿಯನ್ನು ತಂದೆ ತಾಯಿಯ ಎದುರಲ್ಲೇ ಅಂಗಳಕ್ಕೆಸೆದ. ಐದು ಹತ್ತರ ನೋಟುಗಳು, ನಾಣ್ಯಗಳು ಚೆಲ್ಲಾಪಿಲ್ಲಿಯಾಯಿತು.
” ನೋಡಿ, ಈ ಡಬ್ಬಿಯಲ್ಲಿ ಎಷ್ಟು ಹಣವಿದೆಯೋ ನನಗೆ ಗೊತ್ತಿಲ್ಲ. ನಿಮ್ಮಿಬ್ಬರ ಈ ದಿನದ ಸಂಬಳಕ್ಕಾಗಿ ಈ ಹಣವನ್ನು ನೀವೇ ತೆಗೆದುಕೊಳ್ಳಿ. ನನಗೆ ಈ ಹಣದಿಂದ ಏನನ್ನೂ ತರವುದು ಬೇಡ. ನೀವು ನನ್ನ ಬರ್ತ್ ಡೇ ಗಾಗಿ ಖರ್ಚು ಮಾಡುವುದು ಬೇಡ. ಆದರೆ ನೀವಿಬ್ಬರೂ ಇವತ್ತು ನನ್ನೊಡನೆ ಇದ್ದರೆ ಸಾಕು.” ಎಂದು ದುಃಖ, ಕೋಪ ಮಿಶ್ರಿತ ಧ್ವನಿಯಲ್ಲಿ ಅನುಷ್ ಹೇಳುತ್ತಿದ್ದಂತೆ ತಂದೆ ತಾಯಿಗಳ ಕಣ್ಣುಗಳು ನೆಲ ನೋಡುತ್ತಿತ್ತು. ನೆಲದಲ್ಲಿದ್ದ ನಾಣ್ಯಗಳು ಅವರನ್ನೇ ನೋಡಿ ನಗುತ್ತಿತ್ತು.
ನಿಜ, ಸ್ನೇಹಿತರೇ. ನಾವು ಮಕ್ಕಳಿಗಾಗಿ ಕೊಡುವ ಯಾವುದೇ ವಸ್ತುಗಳು, ಗಿಫ್ಟ್ ಗಳು, ದುಡ್ಡು…ಇದ್ಯಾವುದೂ ಮಕ್ಕಳಿಗೆ ಶಾಶ್ವತ ಸಂತೋಷ ನೀಡುವಂತದ್ದಲ್ಲ.
ನಾವು ಮಕ್ಕಳಿಗಾಗಿ ಕೊಡುವ ಸಮಯವೇ ಮಕ್ಕಳ ಪಾಲಿಗೆ ಬಲುದೊಡ್ಡ ಉಡುಗೊರೆ.
ಭೌತಿಕ ವಸ್ತುಗಳನ್ನು ಕೊಟ್ಟು ಮಕ್ಕಳನ್ನು ತಾತ್ಕಾಲಿಕವಾಗಿ ಸಮಾಧಾನ ಪಡಿಸಿ ನಾವು ಸಂತೋಷ ಪಡುವ ಬದಲು ಮಕ್ಕಳೊಡನೆ ಆಟ, ಮಾತು, ಕತೆಗಾಗಿ ದಿನದ ಒಂದಿಷ್ಟು ಸಮಯವನ್ನು ನಾವು ಮೀಸಲಿಡುವ ಮೂಲಕ ನಾವು ಮತ್ತು ನಮ್ಮ ಮಕ್ಕಳು ಶಾಶ್ವತವಾಗಿ ಸಂತೋಷದಿಂದಿರಬಹುದಲ್ವೇ……???

ಆಲದಪದವು ಗೋಪಾಲ ಅಂಚನ್