ವಿಕಲಚೇತನ ಯುವಕನ ಬದುಕಿಗೆ ನೆರವಾಗಿ ಮಾನವೀಯತೆ ಮೆರೆದ ಜಿಲ್ಲಾಧಿಕಾರಿ

ಪುಂಜಾಲಕಟ್ಟೆ: ದ.ಕ.ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ.ಅವರು ಸಾಮಾಜಿಕ ಕಾರ್ಯಕರ್ತರೊಬ್ಬರ ಮನವಿಗೆ ಸ್ಪಂದಿಸಿ ವಿಕಲಚೇತನ ಯುವಕನೊರ್ವನ ಬದುಕಿಗೆ ನೆರವಾಗುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
18 ವರ್ಷಗಳಿಂದ ಸರ್ಕಾರದ ಸೌಲಭ್ಯಗಳಿಂದ ವಂಚಿತವಾದ ಸಂಪೂರ್ಣ ಅಂಗವೈಕಲ್ಯ ಹೊಂದಿದ ಯುವಕನ ಬದುಕಿಗೆ ಜಿಲ್ಲಾಧಿಕಾರಿ ರಕ್ಷಣೆಯಾಗಿದ್ದಾರೆ. ಬಂಟ್ವಾಳ ತಾಲೂಕಿನ ಪಿಲಾತಬೆಟ್ಟು ಗ್ರಾಮಪಂಚಾಯತ್ ವ್ಯಾಪ್ತಿಯ ನಯನಾಡು ಆಸಿಸಿ ನಿವಾಸ್ ಕಾನ್ವೆಂಟಿನಲ್ಲಿ ಸುನಿತಾ ಡಿ’ಸೋಜ ಕುಟುಂಬ ವಾಸ್ತವ್ಯವಿದ್ದು ಹಿರಿಯ ಮಗ ಜೋಸೆಫ್ ಡಿ’ಸೋಜ ಸಂಪೂರ್ಣ ವಿಕಲಚೇತನನಾಗಿರುತ್ತಾನೆ. ಜೋಸೆಫ್ ಡಿ’ಸೋಜ ರವರು ಹುಟ್ಟಿನಿಂದಲೇ ಸಂಪೂರ್ಣ ವಿಕಲಚೇತನನಾಗಿದ್ದು ಅವರ ಹೆಸರು ರೇಷನ್ ಕಾರ್ಡ್ ನಲ್ಲಿ ಇರಲಿಲ್ಲ, ಆಧಾರ್ ಕಾರ್ಡ್ ಆಗಿರಲಿಲ್ಲ. ಇದ್ಯಾವ ದಾಖಲೆಗಳು ಇಲ್ಲದ ಕಾರಣ ಸರ್ಕಾರದಿಂದ ಬರುವ ಯಾವುದೇ ಸವಲತ್ತು ಗಳಿಂದ ಸಂಪೂರ್ಣ ವಂಚಿತರಾಗಿದ್ದರು. ರೇಷನ್ ಕಾರ್ಡ್ ಮತ್ತು ಆಧಾರ್ ಕಾರ್ಡು ಮಾಡಲು ಸಂಬಂಧಪಟ್ಟವರು ಹಲವು ಬಾರಿ ಪ್ರಯತ್ನ ಪಟ್ಟಿದ್ದರೂ ಅದು ಸಾಧ್ಯವಾಗಿರಲಿಲ್ಲ.
ಈ ಬಗ್ಗೆ ಪಿಲಾತಬೆಟ್ಟು ಗ್ರಾಮಪಂಚಾಯತಿಯ ಸದಸ್ಯ ನೆಲ್ವಿ ಸ್ಟಾರ್ ಪಿಂಟೊ ಅವರು ಸಾಮಾಜಿಕ‌ ಕಾರ್ಯಕರ್ತ ಪದ್ಮನಾಭ ಸಾಮಂತ್ ವಾಮದಪದವು ಇವರಿಗೆ ತಿಳಿಸಿದ್ದು ಪದ್ಮನಾಭ ಸಾವಂತ್ ಅವರು ವಿಷಯದ ಬಗ್ಗೆ ಸಮಗ್ರ ಮಾಹಿತಿ ಸಂಗ್ರಹಿಸಿ ದ.ಕ.ಜಿಲ್ಲಾಧಿಕಾರಿಯವರಿಗೆ ಮನವಿ‌ ಮಾಡಿದ್ದರು. ಅಲ್ಲದೆ ವಾಟ್ಸಾಪ್ ಮೂಲಕ ಯುವಕನ ವಿವರವನ್ನು ಕಳುಹಿಸಿದ್ದರು. ಜಿಲ್ಲಾಧಿಕಾರಿಗಳು ತುರ್ತು ಕ್ರಮ ಕೈಗೊಂಡು ಸಂಬಂಧಪಟ್ಟ ಇಲಾಖಾಧಿಕಾರಿಗಳಿಗೆ ಆದೇಶ ನೀಡಿ ಆಧಾರ್ ಕಾರ್ಡು ದೊರಕಿಸಿಕೊಟ್ಟದಲ್ಲದೆ ಯುವಕನಿಗೆ ಸಿಗಬೇಕಾದ ಸರಕಾರಿ ಸವಲತ್ತುಗಳು ದೊರೆಯುವಂತಾಗಲು ವ್ಯವಸ್ಥೆ ಕಲ್ಪಿಸಿದ್ದಾರೆ.
ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿಯವರಿಗೆ ಹಾಗೂ ಇದಕ್ಕಾಗಿ ಪ್ರಯತ್ನಿಸಿದ ಪದ್ಮನಾಭ ಸಾವಂತ್ ಅವರಿಗೆ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ದಾರೆ.