ಮೂಡುಪಡುಕೋಡಿ ವಿಭಿನ್ನ ಶಾಲಾ ಪ್ರಾರಂಭೋತ್ಸವ- ಪ್ರಶಸ್ತಿ ವಿಜೇತ ಶಿಕ್ಷಕರಿಗೆ ಸನ್ಮಾನ

ವಾಮದಪದವು: ಬಂಟ್ವಾಳ ತಾಲೂಕಿನ ಇರ್ವತ್ತೂರು ಗ್ರಾಮ ಪಂಚಾಯತು ವ್ಯಾಪ್ತಿಯ ಮೂಡುಪಡುಕೋಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ವಾಧ್ಯಘೋಷಗಳೊಂದಿಗೆ ಸ್ವಾಗತ, ವಿದ್ಯಾನಿಧಿಯ ಆರಂಭ, ನಿಕಟಪೂರ್ವ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಿಗೆ ಗೌರವಾರ್ಪಣೆ, ಪ್ರಶಸ್ತಿ ವಿಜೇತ ಶಿಕ್ಷಕರಿಗೆ ಸನ್ಮಾನ ಮೊದಲಾದ ವಿನೂತನ ಕಾರ್ಯಕ್ರಮಗಳೊಂದಿಗೆ ಶಾಲಾ ಪ್ರಾರಂಭೋತ್ಸವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಮಕ್ಕಳನ್ನು ವಾಧ್ಯಘೋಷಗಳೊಂದಿಗೆ ಶಾಲೆಗೆ ಬರಮಾಡಿಸಲಾಯಿತು.

ಬಳಿಕ ನಡೆದ ಸಮಾರಂಭದಲ್ಲಿ ಮಕ್ಕಳಿಗೆ ಪುಸ್ತಕ ವಿತರಣೆ, ಶಾಲಾ ವಿದ್ಯಾನಿಧಿಗೆ ಚಾಲನೆ, ಶಾಲಾಭಿವೃದ್ಧಿ ಸಮಿತಿಯ ಮಾಜಿ ಅಧ್ಯಕ್ಷ ಶ್ರೀನಿವಾಸ ಪೂಜಾರಿ ಅವರಿಗೆ ಗೌರವಾರ್ಪಣೆ, ಬಂಟ್ವಾಳ ತಾಲೂಕು‌ ಮಟ್ಟದ ಅತ್ಯುತ್ತಮ ಶಿಕ್ಷಕ‌ ಪ್ರಶಸ್ತಿ ಪುರಸ್ಕೃತರಾದ ಮೂಡುಪಡುಕೋಡಿ ಶಾಲಾ ಮುಖ್ಯ ಶಿಕ್ಷಕ ಸುನೀಲ್ ಸಿಕ್ವೇರಾ ಅವರಿಗೆ ಸನ್ಮಾನ ನಡೆಯಿತು.


ಇರ್ವತ್ತೂರು ಗ್ರಾಮ‌ ಪಂಚಾಯತು ಅಧ್ಯಕ್ಷ ಎಂ.ಪಿ.ಶೇಖರ್, ಪಿಲಾತಬೆಟ್ಟು ವ್ಯವಸಾಯ ಸೇವಾ ಸಹಕಾರಿ‌ ಸಂಘದ ಅಧ್ಯಕ್ಷ ಕೆ.ಲಕ್ಷ್ಮೀನಾರಾಯಣ ಉಡುಪ, ಪಾಂಗಲ್ಪಾಡಿ‌ ಶ್ರೀ ವಿಷ್ಣುಮೂರ್ತಿ‌ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ರಾಮಕೃಷ್ಣ ಎಸ್., ಕಂಬಳ ತೀರ್ಪುಗಾರ ರಾಜೀವ ಶೆಟ್ಟಿ ಎಡ್ತೂರು, ಪತ್ರಕರ್ತ ಗೋಪಾಲ ಅಂಚನ್, ಶಾಲಾಭಿವೃದ್ಧಿ ಸಮಿತಿ‌ ಅಧ್ಯಕ್ಷ ಸುರೇಶ್ ಪೂಜಾರಿ‌ ಕಯ್ಯಾಬೆ, ಗ್ರಾಮ ಪಂಚಾಯತು ಸದಸ್ಯರು, ಎಸ್ ಡಿಎಂಸಿ ಸದಸ್ಯರು, ಪೋಷಕರು ಭಾಗವಹಿಸಿದ್ದರು.