ಇಲ್ಲಿ ಕಲಶ ಸ್ನಾನವೇ ಪ್ರಧಾನ- ಭಕ್ತರನ್ನು ಆಕರ್ಷಿಸುತ್ತಿದೆ ಕುತ್ತಿಲ ಶ್ರೀ ಪಟ್ಟದ ಕಲ್ಲುರ್ಟಿಯ ತಾಣ

ಯುವಧ್ವನಿ ವಿಶೇಷ

ಬಂಟ್ವಾಳ: ಇಲ್ಲಿ ಕಲಶ ಸ್ನಾನ ಸೇವೆಯೇ ಪ್ರಧಾನ. ಭಕ್ತರು ಭಕ್ತಿಯಿಂದ ಕಲಶ ಸ್ನಾನಗೈದು ತಮ್ಮ ಸಂಕಷ್ಟ ಪರಿಹರಿಸಿಕೊಳ್ಳುವ ನೆಲೆಯಿದು. ಹೌದು…ಕುತ್ತಿಲದ ಶ್ರೀ ಪಟ್ಟದ ಕಲ್ಲುರ್ಟಿಯ ಸಾನಿಧ್ಯವೀಗ ನಾಡಿನ ಭಕ್ತರ ಆಕರ್ಷಣೆಯ ಆರಾಧನಾ ತಾಣವಾಗಿ ಕಂಗೊಳಿಸುತ್ತಿದೆ.
ಬಂಟ್ವಾಳ ತಾಲೂಕಿನ ಪಿಲಾತಬೆಟ್ಟು ಗ್ರಾಮದ ಕುತ್ತಿಲ ಎಂಬ ಪ್ರಕೃತಿ ರಮಣೀಯ ಸುಂದರ ಪರಿಸರದಲ್ಲಿರುವ ಈ ಸಾನಿಧ್ಯವು ಅಗೇಲು, ಕೋಲ ಸೇವೆಯ ಜತೆಯಲ್ಲಿ ವಿಶೇಷವಾಗಿ ಕಲಶ ಸ್ನಾನದ ಸೇವೆಯ ಮೂಲಕ ಭಕ್ತರ ಕಷ್ಟ ಪರಿಹಾರದ ನೆಲೆಯಾಗಿ ಭಕ್ತರನ್ನು ಸೆಳೆಯುತ್ತಿದೆ
.


.
ಕುತ್ತಿಲದ ಮಣ್ಣು

ಕುತ್ತಿಲ ಬರ್ಕೆ, ಕುತ್ತಿಲಗುತ್ತು ಎಂದು ಕರೆಯಲ್ಪಡುವ ಕುತ್ತಿಲದ ಮಣ್ಣು ದೈವದೇವರುಗಳ ನೆಲೆಬೀಡಾಗಿಯೇ ಪ್ರಸಿದ್ಧಿ. ಈ ಮಣ್ಣಿನ ಒಂದು ಪಾರ್ಶ್ವದಲ್ಲಿ ಸಾರ್ವಜನಿಕವಾಗಿ ಆಚರಿಸಲ್ಪಡುವ ಪ್ರಮುಖ ದೈವಗಳ ಸಹಿತ ಕೋಟಿ ಚೆನ್ನಯರ ಗರಡಿ ಇದೆ. ಇನ್ನೊಂದೆಡೆ ಕುತ್ತಿಲ ಬರ್ಕೆ/ ಗುತ್ತಿಗೆ ಸಂಬಂಧಪಟ್ಟ ದೈವಗಳು ಇಲ್ಲಿ ನೆಲೆಯಾಗಿದ್ದಾರೆ.
ಈ ಪೈಕಿ ಪಟ್ಟದ ಕಲ್ಲುರ್ಟಿ, ಕಾರಣಿಕದ ಕಲ್ಲುರ್ಟಿ, ಕುತ್ತಿಲದ ಕಲ್ಲುರ್ಟಿ ಎಂದು ಪ್ರಸಿದ್ಧಿ ಪಡೆದಿರುವ ಕಲ್ಲುರ್ಟಿಯ ಸಾನಿಧ್ಯವೀಗ ಸಾರ್ವಜನಿಕವಾಗಿ ಭಕ್ತರ ಆರಾದನೆಯ ಕೇಂದ್ರವಾಗಿದೆ.

ಕುತ್ತಿಲ ಗುತ್ತಿನ ಹಿರಿಯಣ್ಣ
ಗುರುದಾಸ ಕರ್ಕೇರ

ಸುಮಾರು ಆರುನೂರು ವರ್ಷಗಳ ಹಿಂದಿನ ಅನಾದಿಕಾಲದಿಂದಲೂ ಇಲ್ಲಿ ಕಲ್ಲುರ್ಟಿ ದೈವವನ್ನು ಆರಾದಿಸಿಕೊಂಡು ಬರಲಾಗುತ್ತಿತ್ತು ಎಂಬ ಐತಿಹ್ಯ ಇದ್ದು ಇದೀಗ ಕಳೆದ ಎರಡು ವರ್ಷದಿಂದ ಸಾರ್ವಜನಿಕ ಸೇವೆಯನ್ನು ಸ್ವೀಕರಿಸುವ ಮೂಲಕ ಭಕ್ತರ ಕಷ್ಟಕಾರ್ಪಣ್ಯಗಳನ್ನು ಪರಿಹರಿಸುತ್ತಿದ್ದಾಳೆ. ಭಕ್ತರ ಅನುಕೂಲಕ್ಕಾಗಿ ಹಲವು ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದೆ ಎಂದು ಕುತ್ತಿಲ ಗುತ್ತಿನ ಯಜಮಾನ ಗುರುದಾಸ ಕರ್ಕೇರ ಹೇಳುತ್ತಾರೆ.
ಇತ್ತೀಚೆಗೆ ಊರುಪರವೂರಿನಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಈ ಸಾನಿಧ್ಯಕ್ಕೆ ಬರುತ್ತಿದ್ದಾರೆ. ಕಲಶ ಸ್ನಾನ, ಅಗೇಲು ಸೇವೆ, ಕೋಲ ಸೇವೆ ಕಾಲಕಾಲಕ್ಕೆ ಭಕ್ತರಿಂದ ನಡೆಯುತ್ತಿದೆ ಎನ್ನುತ್ತಾರೆ ಕರ್ಕೇರ.

ಸೇವಾಕರ್ತ ಸುರೇಶ್ ಪೂಜಾರಿ ಕಯ್ಯಾಬೆ

ಸಾನಿಧ್ಯದಲ್ಲಿ ಕಲ್ಲುರ್ಟಿಯ ಸೇವಾಕರ್ತರಾಗಿ ಸೇವೆ ಸಲ್ಲಿಸುತ್ತಿರುವವರು ದೈವಂಗುಳು ದೈವದ ಪಾತ್ರಿಯಾದ ಸುರೇಶ ಪೂಜಾರಿ ಕಯ್ಯಾಬೆ.
ಸಾನಿಧ್ಯದಲ್ಲಿ ತಾಯಿಯ ನಡೆಯಲ್ಲಿ ಹೇಳಲಾಗುವ ನುಡಿಗಳು ಸತ್ಯವಾಗುತ್ತಿದೆ. ಸಾಕಷ್ಟು ಸಂಖ್ಯೆಯಲ್ಲಿ ಭಕ್ತರ ಸಂಕಷ್ಟಗಳು ನಿವಾರಣೆಯಾಗಿ ಇಷ್ಟಾರ್ಥಗಳು ಈಡೇರಿದೆ. ವಿವಾಹ ಯೋಗ, ಸಂತಾನ ಭಾಗ್ಯ, ಆರೋಗ್ಯ ರಕ್ಷಣೆ ದೊರೆತಿದೆ ಎನ್ನುತ್ತಾರೆ ಸುರೇಶ್ ಪೂಜಾರಿ.

ಸಂಕ್ರಮಣ ವಿಶೇಷ ಸೇವೆಗಳು.

ಪ್ರತೀ ಭಾನುವಾರ ಊರಪರವೂರಿನ ಭಕ್ತರು ಇಲ್ಲಿ ಬಂದು ತಾಯಿಯ ನಡೆಯಲ್ಲಿ ಪ್ರಾರ್ಥಿಸಿ ಸಂಕಷ್ಟವನ್ನು ಪರಿಹರಿಸಿಕೊಳ್ಳುತ್ತಿದ್ದಾರೆ.
ಸಂಕ್ರಮಣದಂದು ತಾಯಿಗೆ ವಿಶೇಷ ಪೂಜೆ, ಭಕ್ತರ ಸಂಕಷ್ಟ ಪರಿಹಾರಕ್ಕಾಗಿ ಕಲಶ ಸ್ನಾನ ಸೇವೆ, ಸಾರ್ವಜನಿಕ ಅಗೇಲು ಸೇವೆ, ಅನ್ನಸಂತರ್ಪಣೆ ನಡೆಯುತ್ತಿದೆ. ನಿಗದಿತ ದಿನದಂದು ಭಕ್ತರಿಂದ ಕಲ್ಲುರ್ಟಿಗೆ ಹರಕೆ ಕೋಲ ಸೇವೆಯು ನಡೆಯುತ್ತಿದೆ.

ಲೇಖನ:
ಗೋಪಾಲ ಅಂಚನ್, ಆಲದಪದವು