ದುಡಿಮೆಯೊಂದಿಗೆ ಶಿಕ್ಷಣ, ಪಿಯುಸಿಯಲ್ಲಿ 94% ಅಂಕ ಪಡೆದ ಅಪ್ಪಟ ಸಾಧಕಿ ಅಶ್ವಿನಿ

ಮನೆಯ ಆರ್ಥಿಕ ಸಂಕಷ್ಟಕ್ಕೆ ಹೆಗಲಾಗಿ ದುಡಿಯುತ್ತಲೇ ಮತ್ತೊಂದೆಡೆ ಕಲಿಕೆಯಲ್ಲೂ ಅದ್ಭುತ ಸಾಧನೆ ತೋರಿದವಳು ಅಶ್ವಿನಿ.

ಪ್ರಥಮ ಪಿಯುಸಿ ನಂತರ ನಾಲ್ಕು ವರ್ಷ ದುಡಿದು ಮನೆಯ ಸಂಕಷ್ಟಕ್ಕೆ ನೆರವಾಗಿರುವ ಅಶ್ವಿನಿ, ಈ ಬಾರಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇಕಡಾ 94 ಅಂಕ ಪಡೆಯುವ ಮೂಲಕ ತನ್ನ ಕಾಲೇಜು ಮತ್ತು ಗ್ರಾಮದಲ್ಲಿ ವಿಶೇಷ ಗಮನ ಸೆಳೆದಿದ್ದಾಳೆ.

ಮುಲ್ಕಿಯ ವಿಜಯಾ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾಭ್ಯಾಸ ತರುವಾಯ ಕುಟುಂಬಕ್ಕೆರಗಿದ ಸಂಕಷ್ಟದ ಸನ್ನಿವೇಶದಲ್ಲಿ ಅಶ್ವಿನಿಗೆ ದುಡಿಯಲೇಬೇಕಾದ ಅನಿವಾರ್ಯತೆ ಎದುರಾಯಿತು. ಅದಕ್ಕಾಗಿ ನಾಲ್ಕು ವರ್ಷಗಳ ಕಾಲ ಮುಂಬೈಯಲ್ಲಿ ಮೊಬೈಲ್ ಅಂಗಡಿಯಲ್ಲಿ ದುಡಿದರೂ ಅಶ್ವಿನಿಯ ಕಲಿಕೆಯ ಹಂಬಲ ಬತ್ತಲಿಲ್ಲ.ನಾಲ್ಕು ವರುಷಗಳ ನಂತರ ಮತ್ತೆ ಬಂಟ್ವಾಳದ ಎಸ್.ವಿ.ಎಸ್.ಕಾಲೇಜಿನಲ್ಲಿ ದ್ವಿತೀಯ ಪಿ.ಯು.ಸಿ. ಕಾಮರ್ಸ್ ವಿಭಾಗಕ್ಕೆ ಪ್ರವೇಶ ಪಡೆದುಕೊಂಡ ಈಕೆ ಇದೀಗ ಶೇಕಡಾ 94 ಅಂಕದೊಂದಿಗೆ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗುವ ಮೂಲಕ ಬಡತನ, ದುಡಿಮೆ ಇವೆಲ್ಲವೂ ಕಲಿಕೆಗೆ ಅಡ್ಡಿಯಲ್ಲ ಎಂಬುದನ್ನು ಸಾಬೀತುಪಡಿಸಿದ್ದಾಳೆ.

ಮುಲ್ಕಿಯಲ್ಲಿ ಸರಕಾರಿ ಶಾಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆಯನ್ನು ಕನ್ನಡ ಮಾಧ್ಯಮದಲ್ಲೇ ಪೂರೈಸಿದ ಅಶ್ವಿನಿ, ತನ್ನಿಚ್ಛೆಯ ಸ್ಟಾಟಿಸ್ಟಿಕ್ಸ್ ವಿಷಯವೊಂದು ಪಿ.ಯು.ಸಿ.ಯಲ್ಲಿ ಸರಕಾರಿ ಕಾಲೇಜಿನಲ್ಲಿ ಲಭ್ಯವಾಗದ ಕಾರಣ ಖಾಸಗಿ ಕಾಲೇಜನ್ನು ಆಯ್ಕೆ ಮಾಡಬೇಕಾಯಿತು. ಪ್ರಥಮ ಪಿಯುಸಿ ಬಳಿಕ ನಾಲ್ಕು ವರ್ಷಗಳ ದುಡಿಮೆ, ನಂತರ ದ್ವಿತೀಯ ಪಿಯುಸಿಯಲ್ಲೂ ಅಮ್ಮನ ಬೀಡಿ ಕಟ್ಟುವ ಕಾಯಕದೊಂದಿಗೆ ತೊಡಗಿಸಿಕೊಂಡ ಅಶ್ವಿನಿ, ನಿರಂತರ ಪರಿಶ್ರಮದ ಫಲವಾಗಿ ಉತ್ತಮ ಫಲಿತಾಂಶವನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಕಲಿಕೆಯ ಮಧ್ಯದ ನಾಲ್ಕು ವರ್ಷಗಳ ಅಂತರದಿಂದ ಕೆಲವು ವಿಷಯದ ಪಠ್ಯಕ್ರಮದಲ್ಲಿ ಆದ ಬದಲಾವಣೆಗಳ ಮಧ್ಯೆಯೂ ಯಾವುದೇ ಟ್ಯೂಷನ್ ಇಲ್ಲದೇ ಸ್ವಂತ ಪರಿಶ್ರಮದಿಂದ 94% ಅಂಕ ಗಳಿಸಿ ಬಂಟ್ವಾಳದ ಎಸ್.ವಿ.ಎಸ್.ಪದವಿಪೂರ್ವ ಕಾಲೇಜು ಮತ್ತು ದಕ್ಷಿಣ ಕನ್ನಡ ಜಿಲ್ಲೆಗೆ ಗೌರವ ತಂದಿದ್ದಾರೆ.

ಅಶ್ವಿನಿ ಪಡೆದ ಅಂಕಗಳು
ಅರ್ಥಶಾಸ್ತ್ರದಲ್ಲಿ 100, ವ್ಯವಹಾರ ಶಾಸ್ತ್ರದಲ್ಲಿ 90, ಅಕೌಂಟೆನ್ಸಿಯಲ್ಲಿ 97, ಸ್ಟಾಟೆಸ್ಟಿಕ್ಸ್ ನಲ್ಲಿ 99, ಇಂಗ್ಲಿಷಿನಲ್ಲಿ 85 , ಕನ್ನಡದಲ್ಲಿ 93 ಅಂಕಗಳನ್ನು ಗಳಿಸಿ 600ರಲ್ಲಿ ಒಟ್ಟು 564 ಅಂಕಗಳನ್ನು ಪಡೆದು 94% ಅಂಕದೊಂದಿಗೆ ಡಿಸ್ಟಿಂಕ್ಷನ್ ನಲ್ಲಿ ಉತ್ತೀರ್ಣರಾಗಿದ್ದಾರೆ.

ಪ್ರಸ್ತುತ ಬಂಟ್ವಾಳ ತಾಲೂಕಿನ ಸಿದ್ಧಕಟ್ಟೆಯಲ್ಲಿ ತಾಯಿ ಸುನೀತಾ , ಚಿತ್ರಕಲಾವಿದರೂ ಎಮ್.ಕಾಮ್. ವಿದ್ಯಾರ್ಥಿಯೂ ಆಗಿರುವ ಅಣ್ಣ ಅಕ್ಷಯ್ ಮತ್ತು ಅಕ್ಕನೊಂದಿಗೆ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿರುವ ಅಶ್ಪಿನಿ, ಪಿ.ಯು.ಸಿ. ಫಲಿತಾಂಶ ಬರುವಾಗ
ಮೂಡಬಿದ್ರೆಯ ಗೇರುಬೀಜದ ಫ್ಯಾಕ್ಟರಿಯ ದುಡಿಮೆಯಲ್ಲಿ ತೊಡಗಿಸಿಕೊಂಡಿದ್ದರು.
ಫಲಿತಾಂಶ ಕಂಡು ಸಂಭ್ರಮ ಪಟ್ಟರೂ ಮುಂದಿನ ಪದವಿ ಶಿಕ್ಷಣದ ಕನಸು ನನಸಾದಿತೇ ಎಂಬ ಸವಾಲು ಅಶ್ವಿನಿಯ ಮುಂದಿದೆ.
ಮತ್ತೆ ಪದವಿ ಕನಸು ನನಸಾಗಿಸಲು ಕಾಲೇಜು ಶುಲ್ಕ ಒಗ್ಗೂಡಿಸಲು ಈಗ ದುಡಿಮೆಯಲ್ಲಿ ತೊಡಗಿದರೂ ಪದವಿ ತರಗತಿಗಳು ಶುರು ಆಗುವ ಹೊತ್ತಿಗೆ ಈ ದುಡಿಮೆಯ ಮೊತ್ತವೂ ಕೈಯ್ಯಲ್ಲಿ ಉಳಿಯುತ್ತೋ ಇಲ್ಲವೋ ಎನ್ನುವ ಚಿಂತೆಯೂ ಅಶ್ವಿನಿಯನ್ನು ಕಾಡುತ್ತಿದೆ.
ಲಾಕ್ಡೌನ್ ಸಂದರ್ಭ ಮನೆಮಂದಿಗೆಲ್ಲ ದುಡಿಮೆ ಕಡಿಮೆ ಇರುವಾಗ ಮನೆಬಾಡಿಗೆ ಮೊತ್ತ, ಮನೆವಾರ್ತೆ ಖರ್ಚು ಸರಿದೂಗಿಸಬೇಕಾದ ಜವಾಬ್ದಾರಿ ಕೂಡ ಅಶ್ವಿನಿಯ ಹೆಗಲ ಮೇಲಿದೆ. ಪೂರ್ಣ ಲಾಕ್ಡೌನ್ ಸಂದರ್ಭದಲ್ಲಂತೂ ತನಗೂ, ಮನೆಮಂದಿಗೂ ಬೀಡಿಯಲ್ಲದೇ ಬೇರೆ ದುಡಿಮೆಯೂ ಸಾಧ್ಯವಾಗದಿರುವಾಗ ಈ ಬೀಡಿ ಕಟ್ಟುವ ಕಾಯಕ ಮಾತ್ರದಿಂದ ಪದವಿ ಕನಸು ನನಸು ಮಾಡಿಕೊಳ್ಳುವುದು ಹೇಗೆಂಬ ಚಿಂತೆಯೂ ಜೊತೆಗಿದೆ.

ಮುಂದೆ ಪದವಿ ಕನಸು ಕಾಣುವುದೋ? ಮನೆಯ ಕಷ್ಟಕ್ಕೆ ಹೆಗಲಾಗುವುದೋ ಎನ್ನುವ ಗೊಂದಲದಲ್ಲಿರುವ ಅಶ್ವಿನಿಯ ಶಿಕ್ಷಣದ ಕನಸು ನನಸಾಗಲು ಸಹೃದಯಿ ದಾನಿಗಳ ನೆರವಿನ ಅಗತ್ಯವಿದೆ. ದಾನಿಗಳು 7039520266 ಅಥವಾ 8108599484 ಈ ಸಂಖ್ಯೆಯನ್ನು ಸಂಪರ್ಕಿಸಿ ಪ್ರೋತ್ಸಾಹ ನೀಡಬಹುದಾಗಿದೆ.

ಬಹುಮುಖಿ ಪ್ರತಿಭೆ ಅಶ್ವಿನಿ

ಅಶ್ವಿನಿ ಪಾಠದಲ್ಲಿ ಮಾತ್ರವಲ್ಲ, ಚಿಕ್ಕಂದಿನಿಂದಲೇ ಕ್ರೀಡೆ, ಸಂಗೀತ, ರಂಗೋಲಿ , ಚಿತ್ರ, ನೃತ್ಯ ಮೊದಲಾದ ಸೃಜನಶೀಲ ಚಟುವಟಿಕೆಗಳಲ್ಲೂ ಸದಾ ಮುಂಚೂಣಿಯಲ್ಲಿದ್ದ ಪ್ರತಿಭೆ. ಪ್ರೌಢಶಾಲೆಯಲ್ಲಿ ಖೋಖೋದಲ್ಲಿ ರಾಜ್ಯಮಟ್ಟದಲ್ಲೂ ಪ್ರತಿನಿಧಿಸಿದಾಕೆ. ವಿದ್ಯುತ್ ವ್ಯವಸ್ಥೆಯೂ ಇಲ್ಲದ ಮುಲ್ಕಿಯ ಮನೆಯಲ್ಲಿಕ ಬುಡ್ಡಿದೀಪದಲ್ಲೇ ಓದಿ ಎಸ್.ಎಸ್.ಎಲ್.ಸಿ.ಯಲ್ಲೂ 88 % ಗಳಿಸಿದ ಸಾಧನೆ ಈಕೆಯದು.

ಬರಹ: ವಿದ್ಯಾ ಕಾರ್ಕಳ