ಕೋವಿಡ್ ವಾರಿಯರ್ ರೇಣುಕಾ ಎಸ್.ನಾಟಿಕಾರ ಸೇವೆಗೆ ಶ್ಲಾಘನೆ


ಬಂಟ್ವಾಳ: ಪ್ರಸ್ತುತ ಸವಾಲಿನ ಸ್ಥಿತಿಯಲ್ಲಿ ಕೋವಿಡ್ ವಾರಿಯರ್ ಆಗಿ ದುಡಿಯುತ್ತಿರುವವರ ಸೇವೆ ನಿಜಕ್ಕೂ ಶ್ಲಾಘನೀಯ. ತಮ್ಮ ಸ್ವಂತ ಬದುಕಿನ ಹಿತವನ್ನು ಬದಿಗೊತ್ತಿ ದಿನವಿಡೀ ಕೋವಿಡ್ ಸೋಂಕಿತರ ಸೇವೆಗೈಯುತ್ತಿರುವ ಡಾಕ್ಟರ್, ನರ್ಸ್, ಆರೋಗ್ಯ ಇಲಾಖೆಯ ಸೇವೆಯಂತೂ ಮೆಚ್ಚಲೇ ಬೇಕಾದದ್ದು, ಅಭಿನಂದಿಸಲೇ ಬೇಕಾದದ್ದು.


ಈ ರೀತಿ ಆರೋಗ್ಯ ಇಲಾಖೆಯಲ್ಲಿದ್ದುಕೊಂಡು ಕೋವಿಡ್ ವಾರಿಯರ್ ಆಗಿ ಸೇವೆ ಸಲ್ಲಿಸುತ್ತಿರುವ ರೇಣುಕಾ ಎಸ್.ನಾಟಿಕಾರ ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಪಾತ್ರರಾದವರು.
ಬಂಟ್ವಾಳ ತಾಲೂಕಿನ ಬಿ.ಮೂಡ ಗ್ರಾಮದ ಬಿ.ಸಿ.ರೋಡು ನಿವಾಸಿಯಾದ ರೇಣುಕಾ ಎಸ್.ನಾಟಿಕಾರ ಕಳೆದ ಹನ್ನೆರಡು ವರ್ಷಗಳಿಂದ ಮಂಗಳೂರಿನ ಸರಕಾರಿ ವೆನ್ಲಾಕ್ ಅಸ್ಪತ್ರೆಯಲ್ಲಿ ನರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.
ಕಳೆದ ಎರಡೂವರೆ ತಿಂಗಳಿಂದ ಕೋವಿಡ್ ವಾರಿಯರ್ ಆಗಿ ಸೇವೆ ಸಲ್ಲಿಸುತ್ತಿರುವ ತನ್ನ ಕರ್ತವ್ಯದಕ್ಷತೆ, ಸೇವಾನಿಷ್ಠತೆಯಿಂದ ಜನರ ಪ್ರೀತಿ, ಅಭಿಮಾನಕ್ಕೆ ಪಾತ್ರರಾಗಿದ್ದಾರೆ.


ವೆನ್ಲಾಕ್ ಅಸ್ಪತ್ರೆಯ ಕೊರೊನಾ ಪಾಸಿಟಿವ್ ವಾರ್ಡಿನ ಐಸಿಯುನಲ್ಲಿ ಕರ್ತವ್ಯ ನಿರ್ವಹಣೆಯ ಜವಾಬ್ಧಾರಿ ಹೊಂದಿರುವ ರೇಣುಕಾ ಅವರು ಪ್ರತಿದಿನ ನಾಲ್ಕು ಗಂಟೆ ಪಿಪಿಇ ಧರಿಸಿ ಕೊರೊನಾ ಸೋಂಕಿತರ ಸೇವೆಯನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತಿದ್ದಾರೆ.


ಗ್ರಾಮ ಲೆಕ್ಕಾಧಿಕಾರಿ ಶಿವಾನಂದ ನಾಟಿಕಾರ ಅವರ ಪತ್ನಿಯಾಗಿರುವ ರೇಣುಕಾ ಸಧ್ಯ ಮನೆಯ ಹಿತವನ್ನು ಬದಿಗೊತ್ತಿ ನಿರಂತರ ಅಸ್ಪತ್ರೆಯಲ್ಲೇ ಇದ್ದುಕೊಂಡು ರೋಗಿಗಳ ಸೇವೆಗೈಯುತ್ತಿದ್ದಾರೆ. ಇವರಿಗೆ ಒಳಿತಾಗಲಿ ಎನ್ನುವುದೇ ನಮ್ಮೆಲ್ಲರ ಹರಕೆ- ಹಾರೈಕೆ.