ಸೌಭಾಗ್ಯ ಸಂಭ್ರಮ, ಹೆಣ್ಣು ಮಕ್ಕಳ ಮದುವೆಗೆ ಆರ್ಥಿಕ ನೆರವು ನೀಡುವ ಅರ್ಥಪೂರ್ಣ ಸಮಾರಂಭ ಪಂಚಾಯತ್ ಸದಸ್ಯರೊಬ್ಬರಿಂದ ಮನಮೆಚ್ಚುವ ಕಾರ್ಯ

ಬಂಟ್ವಾಳ:
ಈ ಸಮಾರಂಭದ ಹೆಸರು “ಸೌಭಾಗ್ಯ ಸಂಭ್ರಮ”. ಬಂಟ್ವಾಳ ತಾಲೂಕಿನ ತೀರಾ ಗ್ರಾಮೀಣ ಪ್ರದೇಶವಾದ ಕಜೆಕಾರು ಎಂಬ ಊರಿನಲ್ಲಿ ಸಂಪನ್ನಗೊಳ್ಳಲಿದೆ ಈ ಅರ್ಥಪೂರ್ಣ ಸಮಾರಂಭ.
ಊರಿನ ಬಡ ಕುಟುಂಬದ ಹೆಣ್ಣು ಮಕ್ಕಳ ವಿವಾಹದ ಖರ್ಚಿಗೆಂದು ಸಹಾಯಧನ ನೀಡುವ ಈ ಮಹತಾಂಕ್ಷೆಯ ಸಮಾರಂಭವನ್ನು ಆಯೋಜಿಸಿದವರು ಓರ್ವ ಗ್ರಾಮ ಪಂಚಾಯತು ಸದಸ್ಯರು.
ಹೌದು..! ಸಂಘಟನೆಗಳು ಅಥವಾ ಸಾರ್ವಜನಿಕ ವ್ಯವಸ್ಥೆಗಳು ಮಾಡಬೇಕಾದ ಕೈಂಕರ್ಯವನ್ನು ಒಬ್ಬ ವ್ಯಕ್ತಿ ವೈಯಕ್ತಿಕ ನೆಲೆಯಲ್ಲಿ ಮಾಡುತ್ತಿರುವುದು ನಿಜಕ್ಕೂ ಸ್ವಾಗತಾರ್ಹ ಬೆಳವಣಿಗೆ.
ಬಂಟ್ವಾಳ ತಾಲೂಕಿನ ಬಡಗಕಜೆಕಾರು ಗ್ರಾಮ ಪಂಚಾಯತಿಯ ಸದಸ್ಯ ಗಂಗಾಧರ ಪೂಜಾರಿ ಅಂಬಡೆಮಾರು ಈ ಜನಹಿತ ಕಾರ್ಯಕ್ರಮವನ್ನು ಕೈಗೆತ್ತಿಕೊಂಡವರು.
ಕಳೆದ ಬಾರಿ ಪಂಚಾಯತ್ ಚುನಾವಣೆಯಲ್ಲಿ ವಿಜೇತರಾದ ಗಂಗಾಧರ ಪೂಜಾರಿ, ಕಳೆದ ಐದು ವರ್ಷದಲ್ಲಿ ಸರಕಾರದಿಂದ ಪಂಚಾಯತ್ ಸದಸ್ಯನ ನೆಲೆಯಲ್ಲಿ ಬಂದ ಗೌರವಧನ ಮತ್ತು ಅದಕ್ಕೆ ತನ್ನದು ಮತ್ತಷ್ಟು ಸೇರಿಸಿ ಬಡಕುಟುಂಬದ ಹುಡುಗಿಯರ ಮದುವೆಗೆ ದಾನ ಮಾಡಲು ನಿರ್ಧರಿಸಿದ್ದಾರೆ.
ಫೆ.7 ರಂದು ಕಜೆಕಾರು ಶ್ರೀ ಮಹಾದೇವದೇವೇಶ್ವರ ದೇವಸ್ಥಾನದ ಬಳಿ ” ಸೌಭಾಗ್ಯ ಸಂಭ್ರಮ” ಸಮಾರಂಭವು ಕನ್ಯಾಡಿಯ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಮತ್ತು ಗಣ್ಯರ ಉಪಸ್ಥಿತಿಯಲ್ಲಿ ನಡೆಯಲಿದ್ದು ಈ ಸಮಾರಂಭದಲ್ಲಿ ಕಜೆಕಾರು ವಲಯದ 13 ಹೆಣ್ಣು ಮಕ್ಕಳಿಗೆ ತಲಾ ಹದಿನೆಂಟು ಅಥವಾ ಇಪ್ಪತ್ತು ಸಾವಿರ ರೂಪಾಯಿಯಂತೆ ಸಹಾಯಧನ ನೀಡಲಿದ್ದಾರೆ.
ಈಗಾಗಲೇ ಪಂಚಾಯತ್ ಸದಸ್ಯತನದ ಗೌರವಧನವಾಗಿ ಇದುವರೆಗೆ 49 ಸಾವಿರ ರೂಪಾಯಿ ಬಂದಿದೆ, ಉಳಿದ ಮೊತ್ತ( ಅಂದಾಜು 2ಲಕ್ಷ ರೂಪಾಯಿ) ವನ್ನು ತನ್ನ ವೈಯಕ್ತಿಕ ನೆಲೆಯಲ್ಲಿ ಭರಿಸಲಾಗುವುದು ಎನ್ನುತ್ತಾರೆ ಗಂಗಾಧರ ಪೂಜಾರಿ.
ಗಂಗಾಧರ ಪೂಜಾರಿ ದೊಡ್ಡ ಶ್ರೀಮಂತರೇನಲ್ಲ, ಚಿಕ್ಕಮಟ್ಟದ ಕೃಷಿಕರು. ಪ್ರಸ್ತುತ 65 ರ ಹರೆಯದ ಗಂಗಾಧರ ಪೂಜಾರಿಯವರು ಕಳೆದ ಐದು ದಶಕಕ್ಕಿಂತಲೂ ಹೆಚ್ಚು ಕಾಲ ರಾಜಕೀಯ ಪಕ್ಷವೊಂದರ ಕಾರ್ಯಕರ್ತರಾಗಿ ಜನಸೇವೆಯಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡವರು. ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಸಹಕಾರಿ…ಈ ರೀತಿಯಾಗಿ ಬಹುಸ್ತರಗಳಲ್ಲಿ ಸೇವಾ ನಿರತರಾದವರು.ಎಲ್ಲಕ್ಕಿಂತ ಮಿಗಿಲಾಗಿ ಬಡವರ ಕಷ್ಟಕಂಡರೆ ಕರಗುವ ಹೃದಯವಂತರು.

38 ಮಂದಿಗೆ ಆರ್ಥಿಕ ನೆರವು*:

ಈಗಾಗಲೇ ಗಂಗಾಧರ ಪೂಜಾರಿಯವರು 38ಮಂದಿ ಬಡ ಹೆಣ್ಣುಮಕ್ಕಳ ಮದುವೆಗೆ ತನ್ನಿಂದಾದ ಆರ್ಥಿಕ ನೆರವು ನೀಡಿದ್ದಾರೆ. ಮದುವೆಯಲ್ಲಿಗೆ ಹೋಗಿ 5 ಸಾವಿರ, 10 ಸಾವಿರದ ಸಹಾಯ ಮಾಡಿದ್ದಾರೆ. ಇದೀಗ ಒಂದೇ ದಿನ 13 ಹೆಣ್ಮಕ್ಕಳಿಗೆ ಆರ್ಥಿಕ ನೆರವು ನೀಡುವ ಮೂಲಕ ಮಾದರಿಯಾಗುತ್ತಿದ್ದಾರೆ.

ಮಗನ ಮದುವೆಯ ಸಂಭ್ರಮದಲ್ಲಿ:

ಕಳೆದ ಮೂರು ವರ್ಷಗಳ ಹಿಂದೆ ತನ್ನ ಮಗನ ಮದುವೆಯ ಸಂಭ್ರಮದ ಜತೆಯಲ್ಲೇ ಊರಪರವೂರಿನ 42 ಮಂದಿ ದಂಪತಿಗಳಿಗೆ ಗೌರವಾರ್ಪಣೆ ಮಾಡಿರುವ ಗಂಗಾಧರ ಪೂಜಾರಿಯವರ ಕಾರ್ಯ ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಪಾತ್ರವಾಗಿತ್ತು.
ಇದೀಗ ಚಂದ್ರಾವತಿ ಮತ್ತು ಗಂಗಾಧರ ಪೂಜಾರಿ ದಾಂಪತ್ಯ ಜೀವನದ ನಲ್ವತ್ತರ ಹಾದಿಯಲ್ಲಿ 13 ಹೆಣ್ಣು ಮಕ್ಕಳ ಮದುವೆಗೆ ಆರ್ಥಿಕ‌ ನೆರವು ನೀಡಲಾಗುತ್ತಿದೆ.
ಅಂದ ಹಾಗೆ, ಈ ಹುಡುಗಿಯರೆಲ್ಲರೂ ಇಂದೋ ನಾಳೆಯೋ ಮದುವೆಗೆ ಸನ್ನಿಹಿತರಾದವರಲ್ಲ. ಈ ಹುಡುಗಿಯರ ಪೈಕಿ ಚಿಕ್ಕ ಬಾಲಕಿಯರೂ ಇದ್ದಾರೆ. ಆದರೆ ಈ ಮೊತ್ತ ಹೆಣ್ಮಕ್ಕಳ ಮದುವೆಗೆ ಉಪಯೋಗವಾಗಬೇಕೆಂಬ ದೃಷ್ಠಿಯಿಂದ ಮೊತ್ತವನ್ನು ಹುಡುಗಿಯರ ಬ್ಯಾಂಕು ಖಾತೆಗೆ ಜಮಾ ಮಾಡಲಾಗುತ್ತದೆ.

“ಸೌಭಾಗ್ಯ ಸಂಭ್ರಮಕ್ಕೆ ಮತ್ತಷ್ಟು ಮೆರಗು*

ಫೆ.7 ರಂದು ಬೆಳಿಗ್ಗೆ ಚೆಂಡೆ- ವಾದ್ಯ ವಾಲಗದೊಂದಿಗೆ ಮೆರವಣಿಗೆ, ಸ್ವಾಮೀಜಿ ಸಹಿತ ಗಣ್ಯಾತಿಗಣ್ಯರ ಉಪಸ್ಥಿತಿ, ಅವಿಭಕ್ತ ಕುಟುಂಬಕ್ಕೆ ಗೌರವಾರ್ಪಣೆ, ದಂಪತಿಗಳಿಗೆ ಸನ್ಮಾನ, ಭಜನಾ ಮಂಡಳಿ ಮತ್ತು ಪ್ರಗತಿ ಬಂಧು ತಂಡಗಳಿಗೆ ಅಭಿನಂದನೆ ಮೊದಲಾದ ಕಾರ್ಯಕ್ರಮಗಳು ಸೌಭಾಗ್ಯ ಸಂಭ್ರಮಕ್ಕೆ ವಿಶೇಷ ಮೆರಗು ನೀಡಲಿದೆ.

ಕಷ್ಟದಲ್ಲಿರುವವರಿಗೆ ಕೈಲಾದ ನೆರವು*
ಕಷ್ಟದಲ್ಲಿರುವವರಿಗೆ ಕೈಲಾದ ನೆರವು ನೀಡುವುದು ನಮ್ಮ ಧರ್ಮ. ನನ್ನಿಂದ ಸಾಧ್ಯವಾದಷ್ಟು ಮಟ್ಟಿಗೆ ಇಷ್ಟು ವರ್ಷಗಳಲ್ಲಿ ಸಹಾಯ ನೀಡುತ್ತಾ ಬಂದಿದ್ದೇನೆ. ಇದೀಗ 13 ಹೆಣ್ಮಕ್ಕಳಿಗೆ ಸಹಾಯ ಮಾಡುವ ಸೌಭಾಗ್ಯ ಸಂಭ್ರಮ ಕಾರ್ಯಕ್ರಮ ಮಾಡುತ್ತಿದ್ದೇನೆ- ಗಂಗಾಧರ ಪೂಜಾರಿ, ಅಂಬಡೆಮಾರು

ಗೋಪಾಲ ಅಂಚನ್