ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನಬಿತ್ತಿಲುಬ್ರಹ್ಮಕಲೋತ್ಸವ- ಬಂಟ್ವಾಳ ಸಮಾಲೋಚನಾ ಸಭೆ

ಬಂಟ್ವಾಳ: ಪುನರುತ್ಥಾನದ ಹಾದಿಯಲ್ಲಿರುವ ಮಾತೆ ದೇಯಿ ಬೈದೆತಿ, ಗುರು ಸಾಯನ ಬೈದ ಹಾಗೂ ವೀರ ಪುರುಷರಾದ ಕೋಟಿಚೆನ್ನಯರ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನಬಿತ್ತಿಲುನಲ್ಲಿ ಫೆ.24 ರಿಂದ ಮಾ.2 ರವೆರೆಗೆ ಐತಿಹಾಸಿಕ ಬ್ರಹ್ಮಕಲಶೋತ್ಸವ ಸಂಪನ್ನಗೊಳ್ಳಲಿದ್ದು ಈ ಹಿನ್ನೆಲೆಯಲ್ಲಿ ಬಂಟ್ವಾಳ ತಾಲೂಕು ಮಟ್ಟದ ಸಮಾಲೋಚನೆ ಸಭೆ ಭಾನುವಾರ ಬಿರ್ವ ಸೆಂಟರಿನಲ್ಲಿ ನಡೆಯಿತು.


ಕ್ಷೇತ್ರದ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಪೀತಾಂಬರ ಹೇರಾಜೆ, ಪ್ರಧಾನ ಕಾರ್ಯದರ್ಶಿ ಯಶವಂತ ದೇರಾಜೆಗುತ್ತು, ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಜಯಂತ ನಡುಬೈಲು, ಕಾರ್ಯದರ್ಶಿ ಸುಧಾಕರ ಸುವರ್ಣ, ಕ್ಷೇತ್ರದ ಯಜಮಾನ ಶ್ರೀಧರ ಪೂಜಾರಿ ಮೊದಲಾದವರು ಮಾತನಾಡಿ ಕ್ಷೇತ್ರದ ಅಭಿವೃದ್ಧಿ ಹಾಗೂ ಬ್ರಹ್ಮಕಲಶೋತ್ಸವದ ಯಶಸ್ವಿಯಲ್ಲಿ ಸರ್ವರೂ ಕೈಜೋಡಿಸುವಂತೆ ಮನವಿ ಮಾಡಿದರು.


ಕ್ಷೇತ್ರದ ವಿನ್ಯಾಸಗಾರ ಕೆ.ಸಂತೋಷ್ ಕುಮಾರ್, ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷ ಮಾಯಿಲಪ್ಪ ಸಾಲ್ಯಾನ್, ಬಂಟ್ವಾಳ ತಾಲೂಕು ಸಮಿತಿಯ ಗೌರವಾಧ್ಯಕ್ಷರಾದ ಕೆ.ಸಂಜೀವ ಪೂಜಾರಿ, ಚೆನ್ನಪ್ಪ ಕೋಟ್ಯಾನ್, ಬೇಬಿ ಕುಂದರ್, ರಾಜೇಶ್ ಸುವರ್ಣ ಮೊದಲಾದವರಿದ್ದರು.
ಬಂಟ್ವಾಳ ತಾಲೂಕು ಸಮಿತಿ ಅಧ್ಯಕ್ಷ ಪ್ರೇಮನಾಥ್ ಕೆ.ಸ್ವಾಗತಿಸಿದರು. ಪ್ರಚಾರ ಸಮಿತಿ ಸಂಚಾಲಕ ಜಗದೀಶ ಕೊಯಿಲ ವಂದಿಸಿದರು.ಪತ್ರಕರ್ತ ಗೋಪಾಲ ಅಂಚನ್ ಕಾರ್ಯಕ್ರಮ ನಿರೂಪಿಸಿದರು.


ಫೆ.24ರಂದು ವಿವಿಧ ವೈಧಿಕ ಕಾರ್ಯಕ್ರಮಗಳು, 25 ರಂದು ವೈಭವಯುತ ಹೊರೆಕಾಣಿಕೆ ಮೆರವಣಿಗೆ, 26 ರಂದು ನೂತನ ಕೊಡಿಮರ ಪ್ರತಿಷ್ಠೆ, ಧೂಮಾವತಿ ಮತ್ತು ಸ್ವಪರಿವಾರ ದೈವಗಳ ಪ್ರತಿಷ್ಠೆ, 27 ರಂದು ನಾಗಪ್ರತಿಷ್ಠೆ, 28 ರಂದು ಮೂಲಸ್ಥಾನ ಗರಡಿ ಮತ್ತು ದೈಯಿ ಬೈದೆತಿ ಮಾತೆಯ ಸತ್ಯಧರ್ಮ ಚಾವಡಿಯಲ್ಲಿ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಅಭೂತಪೂರ್ವವಾಗಿ ಸಂಪನ್ನಗೊಳ್ಳಲಿದೆ.

ಅದೇ ದಿನ ಸಾಯನ ಬೈದ್ಯರ ಗುರುಪೀಠ ಸ್ಥಾಪನೆ, ದೇಯಿ ಬೈದೆತಿ ಮಹಾಸಮಾಧಿಯಲ್ಲಿ ಆರಾಧನಾ ಮಹೋತ್ಸವ, ಚಾರಿತ್ರಿಕ ಸರೋಳಿ ಸೈಮಂಜ ಕಟ್ಟೆಯ ಅನಾವರಣ ನಡೆಯಲಿದೆ.ಫೆ. 29 ರಂದು ಬೆಳಿಗ್ಗೆ ಧೂಮಾವತಿ ನೇಮೋತ್ಸವ, ರಾತ್ರಿ ಸಪರಿವಾರ ದೈವಗಳ ನೇಮೋತ್ಸವ, ಮಾ.1ರಂದು ರಾತ್ರಿ ಮೂಲಸ್ಥಾನ ಗರಡಿ ನೇಮೋತ್ಸವ, ಮಾತೆ ದೇಯಿ ಬೈದೆತಿ ದರ್ಶನ ಸೇವೆ, ತಾಯಿ ಮಕ್ಕಳ ಅಪೂರ್ವ ಸಮಾಗಮದ ಮಹೋತ್ಸವ ಸಂಪನ್ನಗೊಳ್ಳಲಿದೆ. ಮಾ.2 ರಂದು ಬೆಳಿಗ್ಗೆ ದೇಯಿ ಬೈದೆತಿ ನೇಮೋತ್ಸವ ನಡೆದು ಪ್ರಸಾದ ವಿತರಣೆ ನಡೆಯಲಿದೆ. ಸುಮಾರು 12 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯ ಸಹಿತ ಬ್ರಹ್ಮಕಲಶೋತ್ಸವ ನಡೆಯಲಿದ್ದು ಉತ್ಸವದ ಪ್ರತಿ ದಿನ ಧಾರ್ಮಿಕ, ಸಾಂಸ್ಕ್ರತಿಕ, ಸಭಾ ಕಾರ್ಯಕ್ರಮ, ಅನ್ನಸಂತರ್ಪಣೆ ನಡೆಯಲಿದ್ದು ಊರಪರವೂರ ಲಕ್ಷೋಪಲಕ್ಷ ಭಕ್ತರು ಸಮಾವೇಷಗೊಳ್ಳಲಿದ್ದಾರೆ ಎಂದು ಕ್ಷೇತ್ರ ಸಮಿತಿಗಳ ಪ್ರಮುಖರು ಮಾಹಿತಿ ನೀಡಿದರು. ಇದೇ ಸಂದರ್ಭ ಬ್ರಹ್ಮಕಲಶೋತ್ಸವದ ವಿಜ್ಞಾಪನಾ ಪತ್ರವನ್ನು ಬಿಡುಗಡೆಗೊಳಿಸಲಾಯಿತು.

@ ಗೋಪಾಲ ಅಂಚನ್
ಸಂಪಾದಕರು, ಯುವಧ್ವನಿ