ಸಂಗೀತ ಪ್ರತಿಭೆ ಜನ್ಯಪ್ರಸಾದ್ ಅವರಿಗೆ ಚಿಣ್ಣರ ಪ್ರಶಸ್ತಿ

ಬಂಟ್ವಾಳ: ಚಿಣ್ಣರಲೋಕ ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್ ಕೊಡಮಾಡುವ “ಚಿಣ್ಣರ ಪ್ರಶಸ್ತಿ” ಗೆ ಸಂಗೀತ ಪ್ರತಿಭೆ ಜನ್ಯಪ್ರಸಾದ್ ಅನಂತಾಡಿ ಆಯ್ಕೆಯಾಗಿದ್ದಾರೆ.
ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಮತ್ತು ಚಿಣ್ಣರಲೋಕ ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್ ಆಶ್ರಯದಲ್ಲಿ
ಬಿ.ಸಿ.ರೋಡು ಗಾಣದಪಡ್ಪು ಬ್ರಹ್ಮಶ್ರೀ ನಾರಾಯಣ ಗುರು ಮಂದಿರದ ಬಳಿಯ ಮೈದಾನದಲ್ಲಿ
ಕೀರ್ತಿಶೇಷ ಪದ್ಮಶ್ರೀ ಡಾ. ಕದ್ರಿ ಗೋಪಾಲನಾಥ ವೇದಿಕೆಯಲ್ಲಿ ನಡೆಯುವ
ಕರಾವಳಿ ಕಲೋತ್ಸವದ ಉದ್ಘಾಟನಾ ಸಮಾರಂಭದಲ್ಲಿ (ಡಿ.21)
ಜನ್ಯಪ್ರಸಾದ್ ಅನಂತಾಡಿ ಅವರಿಗೆ ಚಿಣ್ಣರ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಅಧ್ಯಕ್ಷ ಸುದರ್ಶನ್ ಜೈನ್ ಮತ್ತು ಸಂಚಾಲಕ ಮೋಹನದಾಸ ಕೊಟ್ಟಾರಿ ತಿಳಿಸಿದ್ದಾರೆ.
ಬಂಟ್ವಾಳ ತಾಲೂಕಿನ ಅನಂತಾಡಿ ಗ್ರಾಮದ ಕೋಂಗಲಾಯಿ ನಿವಾಸಿಗಳಾದ ತೀರ್ಥಪ್ರಸಾದ್ ಮತ್ತು ಡಾ. ರೂಪಲತಾ ದಂಪತಿಗಳ ಪುತ್ರಿಯಾದ ಜನ್ಯಪ್ರಸಾದ್ ಬಾಲ್ಯದಲ್ಲೇ ಸಂಗೀತದ ಆಸಕ್ತಿಯನ್ನು ತೋರಿ ಸಂಗೀತ ಅಭ್ಯಾಸದಲ್ಲಿ ನಿರತರಾಗಿ ವೆಂಕಟಕೃಷ್ಣ ಭಟ್ ಅವರಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಮುಂದುವರೆಸಿ ಜ್ಯೂನಿಯರ್ ಪರೀಕ್ಷೆಯನ್ನು ಉನ್ನತ ಶ್ರೇಣಿಯಲ್ಲಿ ತೇರ್ಗಡೆಗೊಂಡವರು. ಚಿಣ್ಣರಲೋಕ ಮೋಕೆದ ಕಲಾವಿದೆರ್ ತಂಡದ ರಾಗರಂಜಿನಿ ರಸಮಂಜರಿ ತಂಡದಲ್ಲಿ ಬಾಲಗಾಯಕಿಯಗಿ ಸೇರ್ಪಡೆಗೊಂಡ ಇವರು ತಂಡದ ಮೂಲಕ ನಡೆದ ೪೦೦ಕ್ಕೂ ಹೆಚ್ಚು ಕಾರ‍್ಯಕ್ರಮಗಳಲ್ಲಿ ಹಾಡಿರುವುದಲ್ಲದೆ ನಾಡಿನ ಪ್ರಸಿದ್ಧ ಸಮಾರಂಭಗಳು, ಉತ್ಸವಗಳ ವೇದಿಕೆಯಲ್ಲಿ ಖ್ಯಾತ ಗಾಯಕ, ಗಾಯಕಿಯರೊಂದಿಗೆ ಹಾಡಿ ಸೈಎನಿಸಿಕೊಂಡವರು.
ಸಿದ್ಧಕಟ್ಟೆಯ ಅದ್ಧೂರಿ ಸಿಂಗಿಂಗ್ ರಿಯಾಲಿಟಿ ಶೋನಲ್ಲಿ ೨೦೦ಕ್ಕೂ ಹೆಚ್ಚಿನ ಸ್ಪರ್ಧಿಗಳಲ್ಲಿ ಜೂನಿಯರ್ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಜನ್ಯಪ್ರಸಾದ್, ಮಲ್ಪೆ ಬೀಚಿನಲ್ಲಿ ನಡೆದ ವಿಶ್ವ ದಾಖಲೆಯ “ವಂದೇ ಮಾತರಂ” ಗಾಯನ ಕಾರ‍್ಯಕ್ರಮದಲ್ಲಿ ನಾಡಿನ ಪ್ರಸಿದ್ಧ ಗಾಯಕರೊಂದಿಗೆ ಹಾಡಿ ದಾಖಲೆಗೆ ತಾನೂ ಸಾಕ್ಷಿಯಾದವರು.
ಪ್ರಸ್ತುತ ಪುತ್ತೂರಿನ ಸುದಾನ ರೆಸಿಡೆನ್ಸಿಯಲ್ ಸ್ಕೂಲ್‌ನಲ್ಲಿ ೯ನೇ ತರಗತಿ ವಿದ್ಯಾರ್ಥಿನಿಯಾಗಿರುವ ಜನ್ಯಪ್ರಸಾದ್, ವಿದ್ವಾನ್ ಕಾಂಚನ ಈಶ್ವರ ಭಟ್ ಅವರಲ್ಲಿ ಸೀನಿಯರ್ ಕರ್ನಾಟಕ ಶಾಸ್ತ್ರೀಯ ಸಂಗೀತ ಮತ್ತು ಪಂಡಿತ್ ರವಿಕಿರಣ್ ಮಣಿಪಾಲ ಅವರಲ್ಲಿ ಹಿಂದೂಸ್ತಾನಿ ಪ್ರಾರಂಭಿಕ ಅಭ್ಯಾಸ ಮಾಡುತ್ತಿದ್ದು ಚಿಣ್ಣರಲೋಕ ಸಿನಿ ಕ್ರಿಯೆಶನ್‌ನ ಐಸಿರಿ ಆಲ್ಬಸಾಂಗ್‌ಗೆ ಹಾಡಿರುವುದಲ್ಲದೆ ಹಲವಾರು ಸಮಾರಂಭಗಳ ಶೀರ್ಷಿಕೆ ಗೀತೆಗಳ ಗಾಯನ, ಪೆನ್ಸಿಲ್ ಬಾಕ್ಸ್ ಚಲನಚಿತ್ರದ ಹಾಡಿಗೆ ಧ್ವನಿ ನೀಡುವ ಮೂಲಕ ಸಂಗೀತ ಕ್ಷೇತ್ರದ ಪ್ರತಿಭಾನ್ವಿತ ಗಾಯಕಿಯಾಗಿ ಮಿಂಚಿದವರು.
ಝಿ ಕನ್ನಡ ಸರಿಗಮಪ ಸೀಸನ್ ೧೬ರಲ್ಲಿ ಮೆಗಾ ಆಡಿಶನ್‌ನ ಟಾಪ್ ೩೦ನೇ ಸ್ಪರ್ಧಿ ಎಂಬ ಹೆಗ್ಗಳಿಕೆಯೊಂದಿಗೆ ಅನಂತಾಡಿ ನವಭಾರತ್ ಯುವಕ ಸಂಘದಿಂದ ವರ್ಷದ ವ್ಯಕ್ತಿ ಪುರಸ್ಕಾರ, ಬೆಳ್ತಂಗಡಿಯ ಕರಾವಳಿ ಸ್ವರಸಂಗಮ, ಮಂಜೇಶ್ವರ ರಿದಂ ಕಲ್ಚರಲ್ ವಿಂಗ್ಸ್, ಬಾಯ್ಸ್ ಝೋನ್ ಮಂಗಳೂರು ಸರಿಗಮಪ, ಮೂಡಬಿದ್ರೆ ಗೀತ್ ಗಾತೆ ಚಲ್ ಜೇಸಿವೀಕ್, ಪುತ್ತೂರು ಗಾನಸಿರಿ ಕಾರ‍್ಯಕ್ರಮದಲ್ಲಿ ಪ್ರಶಸ್ತಿ ಪುರಸ್ಕಾರಗಳಿಗೆ ಪಾತ್ರರಾಗಿರುವ ಜನ್ಯಪ್ರಸಾದ್, ಚಿಣ್ಣರಲೋಕದ ೨೦೧೮ರ ಕಲೋತ್ಸವದಲ್ಲಿ ಸನ್ಮಾನಕ್ಕೆ ಪಾತ್ರರಾದವರು. ಇದೀಗ ಚಿಣ್ಣರ ಪ್ರಶಸ್ತಿಯ ಗರಿಯನ್ನು ಮುಡಿಗೇರಿಸಿಕೊಂಡವರು.

@ಗೋಪಾಲ ಅಂಚನ್
ಸಂಪಾದಕ, ಯುವಧ್ವನಿ