ಹಿರಿಯ ಯಕ್ಷಗಾನ ಕಲಾವಿದ ಸರಪಾಡಿ ಅಶೋಕ ಶೆಟ್ಟಿ ಅವರಿಗೆ ಕರಾವಳಿ ಸೌರಭ ಪ್ರಶಸ್ತಿ

ಬಂಟ್ವಾಳ: ಚಿಣ್ಣರಲೋಕ ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್ ಕೊಡಮಾಡುವ ಕರಾವಳಿ ಸೌರಭ ಪ್ರಶಸ್ತಿಗೆ ಹಿರಿಯ ಯಕ್ಷಗಾನ ಕಲಾವಿದ, ಸಂಘಟಕ ಸರಪಾಡಿ ಅಶೋಕ ಶೆಟ್ಟಿ ಆಯ್ಕೆಯಾಗಿದ್ದಾರೆ.
ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಸಹಯೋಗದೊಂದಿಗೆ ಚಿಣ್ಣರಲೋಕ ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್ ಆಶ್ರಯದಲ್ಲಿ ಬಿ.ಸಿ.ರೋಡು ಗಾಣದಪಡ್ಪು ಬ್ರಹ್ಮಶ್ರೀ ನಾರಾಯಣ ಗುರು ಮಂದಿರ ಬಳಿಯ ಮೈದಾನದಲ್ಲಿ 12 ದಿನಗಳ ಕಾಲ ನಡೆಯುವ ಕರಾವಳಿ ಕಲೋತ್ಸವದ ಉದ್ಘಾಟನಾ ಸಮಾರಂಭ( ಡಿಸೆಂಬರ್21)ದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.
ಬಂಟ್ವಾಳ ತಾಲೂಕಿನ ಮಣಿನಾಲ್ಕೂರು ಗ್ರಾಮದ ಅಜಿಲಮೊಗರು ಆರುಮುಡಿ ನಿವಾಸಿಗಳಾದ ನಾರಾಯಣ ಶೆಟ್ಟಿ ಮತ್ತು ಸಂಕಮ್ಮ ಶೆಟ್ಟಿ ದಂಪತಿಗಳ ಪುತ್ರರಾದ ಸರಪಾಡಿ ಅಶೋಕ ಶೆಟ್ಟಿ ಬಾಲ್ಯದಲ್ಲೇ ಯಕ್ಷಗಾನದ ನಂಟು ಬೆಳೆಸಿಕೊಂಡು ಹಂತಹಂತವಾಗಿ ಪ್ರಬುದ್ಧತೆಯನ್ನು ಸಾಧಿಸುತ್ತಾ ಯಕ್ಷ ಕ್ಷೇತ್ರದಲ್ಲೇ ಬದುಕಿನ ಪಯಣವನ್ನು ಮುಂದುವರಿಸಿದವರು.
ಶ್ರೀ ಕಟೀಲು ಮೇಳದಲ್ಲಿ ಯಕ್ಷಗಾನ ಸೇವೆಯನ್ನು ಆರಂಭಿಸಿ ನಂತರ ಬೆಳ್ಮಣ್ಣು, ಬಪ್ಪನಾಡು, ಅಳದಂಗಡಿ, ಕದ್ರಿ, ಕಾಂತಾವರ, ಪುತ್ತೂರು, ಮಂಗಳಾದೇವಿ ಮೊದಲಾದ ಮೇಳಗಳಲ್ಲಿ ತನ್ನ ವಿಶೇಷ ಹಾವಭಾವ, ಅಭಿನಯ, ಅರ್ಥಗಾರಿಕೆಯಿಂದ ಪ್ರೇಕ್ಷಕರ ಅಭಿಮಾನದ ಕಲಾವಿದರಾಗಿ ಬೆಳೆದವರು.
ಕಲಾವಿದರಾಗಿ, ನಿರ್ದೇಶಕರಾಗಿ, ಸಂಘಟಕರಾಗಿ, ಪ್ರಸಂಗಕರ್ತರಾಗಿ ಯಕ್ಷಗಾನದ ಬಹುಮುಖಿ ಪ್ರತಿಭೆಯ ಕಲಾವಿದರಾಗಿ ಹೊರರಾಜ್ಯ, ಹೊರದೇಶಗಳಲ್ಲೂ ಯಕ್ಷಗಾನದ ಪ್ರೌಢಿಮೆಯನ್ನು ಪ್ರದರ್ಶಿಸಿದವರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಸದಸ್ಯರಾಗಿ, ಸಮಾಜಮುಖಿ ಕಾರ್ಯಕ್ರಮಗಳ ಸಂಘಟಕರಾಗಿ, ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಸಹಕಾರಿ ರಂಗದಲ್ಲಿಯೂ ಸೇವೆ ಸಲ್ಲಿಸುತ್ತಿರುವ ಸರಪಾಡಿ ಅಶೋಕ ಶೆಟ್ಟಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಅರ್ಯಭಟ ಪ್ರಶಸ್ತಿ ಸಹಿತ ಹಲವು ಪ್ರಶಸ್ತಿ ಪುರಸ್ಕಾರಗಳಿಗೆ ಪಾತ್ರರಾದವರು. ಇದೀಗ ಇವರ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿ ಕರಾವಳಿ ಸೌರಭ ಪ್ರಶಸ್ತಿ.

@ ಗೋಪಾಲ ಅಂಚನ್
ಸಂಪಾದಕ, ಯುವಧ್ವನಿ