ಅಜ್ಜಿಬೆಟ್ಟು ಶಿಶು ಮಂದಿರದಲ್ಲಿ ಬಂಟ್ವಾಳ ಪುರಸಭೆ ಬಿಜೆಪಿ ಮಹಾ ಶಕ್ತಿಕೇಂದ್ರದ ಕಾರ್ಯಕರ್ತರ ಸಭೆ ( ಗೋಪಾಲ ಅಂಚನ್, ಯುವಧ್ವನಿ ನ್ಯೂಸ್ ಕರ್ನಾಟಕ)

ಬಂಟ್ವಾಳ: ಅಜ್ಜಿಬೆಟ್ಟು ಶಿಶು ಮಂದಿರದಲ್ಲಿ ಬಂಟ್ವಾಳ ಪುರಸಭೆ ಬಿಜೆಪಿ ಮಹಾ ಶಕ್ತಿಕೇಂದ್ರದ ಕಾರ್ಯಕರ್ತರ ಸಭೆ ನಡೆಯಿತು. ಶಾಸಕ ರಾಜೇಶ್ ನಾಯ್ಕ್ ಮಾತನಾಡಿ, ಕಳೆದ ಅನೇಕ ವರ್ಷಗಳಿಂದ ಬಿಜೆಪಿ ಪಕ್ಷದ ಸಕ್ರೀಯ ಕಾರ್ಯಕರ್ತನಾಗಿ, ಪಕ್ಷದ ವಿವಿಧ ಜವಬ್ದಾರಿ ಮೂಲಕ ನಾಯಕತ್ವವನ್ನು ಮೈಗೂಡಿಸಿಕೊಂಡ ಸೈನಿಕ ಬ್ರಿಜೇಶ್ ಚೌಟ ಅವರ ಮುಂದೆ ಅನೇಕ ಅಭಿವೃದ್ಧಿಯ ಯೋಜನೆ, ಯೋಚನೆಗಳಿವೆ.
ಮೋದಿಯವರ ಅಧಿಕಾರವನ್ನು ಇನ್ನಷ್ಟು ಬಲಪಡಿಸುವ ನಿಟ್ಟಿನಲ್ಲಿ ಮತ್ತು ಯುವಜನತೆ ಕಂಡ ಜಿಲ್ಲೆಯ ಅನೇಕ ಕನಸುಗಳು ಸಾಕಾರಗೊಳ್ಳಲು ಅತ್ಯಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಬೇಕು, ಇದಕ್ಕಾಗಿ ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಕಾರ್ಯಕರ್ತರು ಚುನಾವಣೆವರೆಗೆ ವಿರಮಿಸದೆ ಕೆಲಸ ಮಾಡಿದರೆ ಮುಂದಿನ ಐದು ವರ್ಷಗಳವರೆಗೆ ನಮ್ಮ ಜೊತೆ ಇದ್ದು, ಕೇಂದ್ರದ ಯೋಜನೆಗಳನ್ನು ಜಿಲ್ಲೆಯಲ್ಲಿ ಅನುಷ್ಠಾನ ಮಾಡಲು ಅವಕಾಶ ನೀಡಿದಂತಾಗುತ್ತದೆ ಎಂದು ಹೇಳಿದರು.

ಮಂಗಳೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಮಾತನಾಡಿ, ಬಿಜೆಪಿಯ ವಿಚಾರಗಳಿಗೆ ಪೂರಕವಾಗಿ ಕೆಲಸ ಮಾಡಿ, ಜಿಲ್ಲೆಗೆ ಗೌರವ ತರುವ ಕೆಲಸ ಮಾಡುವ ಮಹತ್ತರವಾದ ಜವಾಬ್ದಾರಿ ಪಕ್ಷ ನೀಡಿದೆ ಎಂಬ ಅರಿವು ನನಗಿದೆ. ಹಿರಿಯರು ವಿಶ್ವಾಸವಿರಿಸಿ ನೀಡಿದ ಜವಾಬ್ದಾರಿಗೆ ಯಾವುದೇ ಚ್ಯುತಿ ಬರದಂತೆ ನಿಷ್ಠೆಯಿಂದ ಕಾರ್ಯವನ್ನು ‌ಮಾಡುತ್ತೇನೆ ಎಂದು ಭರವಸೆ ನೀಡಿದರು.
ಬಿಜೆಪಿಯ ವಿಚಾರವನ್ನು ಅನುಷ್ಠಾನ ತರಲು, ಜಿಲ್ಲೆಯ ಜನರ ಬೇಡಿಕೆಗಳನ್ನು ಪೂರೈಸಬೇಕಾದರೆ, ಕಾರ್ಯಕರ್ತರು ಮೈಮರೆತು ಕುಳಿತುಕೊಳ್ಳುವ ಸಮಯಲ್ಲ, ಬದಲಾಗಿ ಮುಂದಿರುವ ಕೆಲವೇ ದಿನಗಳನ್ನು ಗಂಭೀರವಾಗಿ ಪರಿಗಣಿಸಿ ಚುನಾವಣೆಯಲ್ಲಿ ಗೆಲುವು ಸಾಧಿಸಲು ಬೇಕಾದ ತಯಾರಿಗಳನ್ನು ಅತ್ಯಂತ ಶೃದ್ದೆಯಿಂದ ಮಾಡಬೇಕು ಎಂದು ತಿಳಿಸಿದರು.

ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಮಾತನಾಡಿ, ಪ್ರಧಾನಿ ಮೋದಿಯವರು ಜನಪರವಾದ ಆಡಳಿತ ನೀಡಿ ಆತ್ಮನಿರ್ಭರ ಭಾರತವನ್ನು ನಿರ್ಮಾಣ ಮಾಡಿದ್ದಾರೆ. ಹಾಗಾಗಿ ಈ ಬಾರಿಯ ಚುನಾವಣೆಯ ಪ್ರಚಾರವನ್ನು ಬಿಜೆಪಿಯ ಕಾರ್ಯಕರ್ತರು ಅತ್ಯಂತ ಧೈರ್ಯದಿಂದ ಮಾಡಬಹುದು, ಮತವನ್ನು ಕೇಳಬಹುದು ಎಂದು ಹೇಳಿದರು.

ಬಂಟ್ವಾಳ ಮಂಡಲದ ಅಧ್ಯಕ್ಷ ಚೆನ್ನಪ್ಪ ಕೋಟ್ಯಾನ್, ಮಾಜಿ ಶಾಸಕ‌ ಪದ್ಮನಾಭ ಕೊಟ್ಟಾರಿ, ಪಕ್ಷದ ಪ್ರಮುಖರಾದ ಹರಿಕೃಷ್ಣ ಬಂಟ್ವಾಳ, ದೇವಪ್ಪ ಪೂಜಾರಿ, ವಿಕಾಸ್ ಪುತ್ತೂರು, ರಾಮ್ ದಾಸ್ ಬಂಟ್ವಾಳ, ಗಣೇಶ್ ದಾಸ್, ಡೊಂಬಯ್ಯ ಅರಳ, ಮೀನಾಕ್ಷಿ ಗೌಡ, ಹರಿಪ್ರಸಾದ್, ಪ್ರಸಾದ್ ಕುಮಾರ್ ರೈ ಮತ್ತಿತರರು ಉಪಸ್ಥಿತರಿದ್ದರು.