ಸಮಾಜಮುಖಿ ಚಿಂತನೆಯ ಕ್ರಿಯಾಶೀಲ ಪತ್ರಕರ್ತ, ಬಹುಮುಖಿ ಸಾಧಕ ಸಂದೀಪ್ ಸಾಲ್ಯಾನ್ ಅವರಿಗೆ “ಸ್ವಸ್ತಿಕ್ ಸಂಭ್ರಮ ಪುರಸ್ಕಾರ” ( ಗೋಪಾಲ ಅಂಚನ್, ಯುವಧ್ವನಿ ನ್ಯೂಸ್ ಕರ್ನಾಟಕ)

ಬಂಟ್ವಾಳ: ಸಮಾಜಮುಖಿ ಚಿಂತನೆಯ ಕ್ರಿಯಾಶೀಲ ಪತ್ರಕರ್ತರಾಗಿ, ಬಹುಮುಖಿ ಸಾಧಕರಾಗಿ, ಜನೋಪಯೋಗಿ ಯೋಜನೆಗಳ ರೂವಾರಿಯಾಗಿ ಗುರುತಿಸಿಕೊಂಡಿರುವ ಸಂದೀಪ್ ಸಾಲ್ಯಾನ್ ಅವರು ಪುಂಜಾಲಕಟ್ಟೆ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಕೊಡಮಾಡುವ ” ಸ್ವಸ್ತಿಕ್ ಸಂಭ್ರಮ ಪುರಸ್ಕಾರ” ಕ್ಕೆ ಪಾತ್ರರಾಗಿದ್ದಾರೆ.

ಬಂಟ್ವಾಳ ತಾಲೂಕಿನ ಸಜೀಪಮೂಡ ನಿವಾಸಿಯಾಗಿರುವ ಸಂದೀಪ್ ಸಾಲ್ಯಾನ್, ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ಹಾಗೂ ರಾಜ್ಯಶಾಸ್ತ್ರದಲ್ಲಿ ಎಂ.ಎ. ಪದವೀಧರರು. ಪ್ರಸ್ತುತ ವಿಜಯವಾಣಿ ಮತ್ತು ವಿ4 ನ್ಯೂಸ್ ನ ವರದಿಗಾರರು, ಅಕ್ಷರ ವೆಬ್ ನ್ಯೂಸ್ ಸಂಪಾದಕರು,
ಅಕ್ಷರ ಪಬ್ಲಿಸಿಟಿಯ ಮಾಲಕರು.

ಪತ್ರಿಕಾರಂಗಕ್ಕೆ ಪಾದಾರ್ಪಣೆ:

ಕಳೆದ 20 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಸಂದೀಪ್ ಸಾಲ್ಯಾನ್ 2004 ರಲ್ಲಿ ಅಮೃತ ಶಂಕರ ಭಟ್ ಸಂಪಾದಕತ್ವದ ವ್ಯವಸ್ಥೆಯ ಪ್ರತಿಬಿಂಬ ಪತ್ರಿಕೆಯಲ್ಲಿ ಮಾಧ್ಯಮ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿ ವೃತ್ತಿ ಜೀವನ ಆರಂಭಿಸಿದವರು.
ಕನ್ನಡ ಪ್ರಭ ದಿನ ಪತ್ರಿಕೆಯಲ್ಲಿ ಜಿಲ್ಲಾ ಹಾಗೂ ಬಂಟ್ವಾಳ ತಾಲೂಕು ವರದಿಗಾರರಾಗಿ, ನಮ್ಮ ಟಿ.ವಿ., ಮುಕ್ತ ಟಿವಿ, ಸಹಾಯ ಟಿವಿ, ನಮ್ಮ ಬಂಟ್ವಾಳ, ವಂಶ ಪತ್ರಿಕೆಯಲ್ಲಿ ವರದಿಗಾರನಾಗಿ ಸೇವೆ ಸಲ್ಲಿಸಿದ ಅನುಭವವುಳ್ಳವರು. ಮಂಗಳೂರು ಆಕಾಶವಾಣಿಯಲ್ಲಿ ತುಳು ವಾರ್ತವಾಚಕರಾಗಿ ಕರ್ತವ್ಯ ನಿರ್ವಹಿಸಿದ್ದು
ತರಂಗ, ಮಂಗಳ ಮತ್ತಿತರ ಪತ್ರಿಕೆಯಲ್ಲಿ ಇವರ ಲೇಖನಗಳು ಪ್ರಕಟಗೊಂಡಿದೆ. ಮಾನವೀಯ ಮೌಲ್ಯ ಹಾಗೂ ಸಮಾಜಮುಖಿ ಚಿಂತನೆಯ ಇವರ ಬಹುತೇಕ ಬರಹಗಳು ನಾಡಿನ ಗಮನ ಸೆಳೆದಿದೆ.

ಸಂಘ ಸಂಸ್ಥೆಗಳಲ್ಲಿ ಸೇವೆ:

ಜೆಸಿಐ ಬಂಟ್ವಾಳದ ಅಧ್ಯಕ್ಷರಾಗಿ,
ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ,
ಜನಜಾಗೃತಿ ವೇದಿಕೆ ಪಾಣೆಮಂಗಳೂರು ವಲಯದ ಸದಸ್ಯರಾಗಿ, ನಂದಾವರ ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯದರ್ಶಿಯಾಗಿ ಸಂದೀಪ್ ಸಾಲ್ಯಾನ್ ಸಲ್ಲಿಸಿದ ಸೇವೆ ಗಮನಾರ್ಹವಾದುದು.
ಬಂಟ್ವಾಳ ಪುರಸಭೆಯ ಸ್ವಚ್ಚತಾ ರಾಯಭಾರಿಯಾಗಿ,
ಪಂಚಾಯತ್ ರಾಜ್ ಯೋಜನೆಯ ರಾಜ್ಯ ತರಬೇತುದಾರರಾಗಿ, ರಾಷ್ಟ್ರೀಯ ಸೇವಾ ಯೋಜನೆ ಶಿಬಿರಗಳು ಹಾಗೂ ಮಕ್ಕಳ ಶಿಬಿರಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ, ರಂಗ ಕಲಾವಿದರಾಗಿಯೂ ಅನುಪಮ ಸೇವೆ ಸಲ್ಲಿಸಿದವರು.

ಸಮಾಜ ಸೇವೆ:

ಸಂದೀಪ್ ಸಾಲ್ಯಾನ್ ಅವರ ಸಾಮಾಜಿಕ ಸೇವೆ ಎಲೆ ಮರೆಯ ಕಾಯಿಯಂತೆ. ಸಾಮಾಜಿಕವಾಗಿ ಹಿಂದುಳಿದವರು, ದೀನದುರ್ಬಲರ ಸೇವೆಯಲ್ಲೇ ಬದುಕಿನ ಸಾರ್ಥಕತೆಯನ್ನು ಕಾಣುತ್ತಿರುವವರು. ಪತ್ರಿಕೋಧ್ಯಮದ ಒತ್ತಡದ ಬದುಕಿನ ನಡುವೆಯೂ ಇವರ ಸಮಾಜ ಸೇವೆ ನಿಜಕ್ಕೂ ಶ್ಲಾಘನೀಯವಾದುದು.
18 ಬಾರಿ ಸ್ವಯಂ ಪ್ರೇರಿತರಾಗಿ ರಕ್ತದಾನ,
ಕಳ್ಳಿಗೆ ಗ್ರಾಮದ‌ ಜಾರಂದಗುಡ್ಡೆಯ ಬಡ ನಾಗಮಜ್ಜಿ ಕುಟುಂಬಕ್ಕೆ ಮನೆ ನಿರ್ಮಾಣ ಮತ್ತು ಸಜೀಪಮೂಡ ಸರಕಾರಿ ಪ್ರೌಢಶಾಲೆಯ ರಂಗ ಮಂದಿರ ನಿರ್ಮಾಣದ ರೂವಾರಿಯಾಗಿ,
ಕ್ಯಾನ್ಸರ್ ಪೀಡಿತ ಪುಟ್ಟ ಬಾಲಕಿಯ ಚಿಕಿತ್ಸೆಗಾಗಿ ಸಾಮಾಜಿಕ ಜಾಲಾತಾಣದ ಮೂಲಕ‌ 40 ಲಕ್ಷ ರೂಪಾಯಿ ಹಣ ಸಂಗ್ರಸುವಲ್ಲಿ ನೇತೃತ್ವ ವಹಿಸಿ ಯಶಸ್ವಿಯಾಗಿರುವುದು ಸಂದೀಪ್ ಸಾಲ್ಯಾನ್ ಸಾಧನೆಯ ಹೆಗ್ಗುರುತುಗಳು.

ಪ್ರಶಸ್ತಿಗಳ ಸರಮಾಲೆ:

ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗಾಗಿ ಕರೆಂಕಿ ಶ್ರೀ ಪ್ರಶಸ್ತಿ,
ಸಮಾಜಮುಖಿ ಸೇವೆಗಾಗಿ jci ಸಂಸ್ಥೆಯಿಂದ ರಾಷ್ಟ್ರೀಯ “ಕಮಲಪತ್ರ ಪ್ರಶಸ್ತಿ” (2021),
ಜೇಸಿ ಸಂಸ್ಥೆಯಿಂದ ಸಾಧನ ಶ್ರೀ ಪ್ರಶಸ್ತಿ,
ಸೆಲ್ಯುಟ್ ಟು ಸೈಲೆಂಟ್ ವರ್ಕರ್ ಪ್ರಶಸ್ತಿ, out standing new JCI member of zone award ಸಹಿತ ಹಲವು ಸಂಘಟನೆಗಳಿಂದ ಸನ್ಮಾನ, ಪುರಸ್ಕಾರಗಳು ಸಂದೀಪ್ ಸಾಧನೆಗೆ ಸಂದಿದೆ.

ವೃತ್ತಿಯಲ್ಲಿ ಬದ್ಧತೆ, ಕರ್ತವ್ಯದಲ್ಲಿ ದಕ್ಷತೆ, ವ್ಯಕ್ತಿತ್ವದಲ್ಲಿ ಸನ್ನಡತೆ, ಸೇವೆಯಲ್ಲಿ ಪ್ರಾಮಾಣಿಕತೆಯ ತತ್ವವನ್ನು ಮೈಗೂಡಿಸಿಕೊಂಡು ಕ್ರಿಯಾಶೀಲ ಪತ್ರಕರ್ತರಾಗಿ, ಬಹುಮುಖಿ ಸಾಧಕರಾಗಿರುವ ಸಂದೀಪ್ ಸಾಲ್ಯಾನ್ ಇತರರಿಗೆ ಮಾದರಿಯಾಗಿ ನಿಲ್ಲುವ ವ್ಯಕ್ತಿತ್ವ.
ಸಂದೀಪ್ ಅವರ ಸಾಧನೆಗೆ ಸಹಜವಾಗಿಯೇ ಪ್ರಶಸ್ತಿ ಒಲಿದು ಬಂದಿದ್ದು ಮಾ.24ರಂದು ಪುಂಜಾಲಕಟ್ಟೆಯಲ್ಲಿ ನಡೆಯುವ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಲಿದ್ದಾರೆ.
ಇವರ ಮುಂದಿನ ಜೀವನ ಉಜ್ವಲವಾಗಲಿ, ಬದುಕು ಬಂಗಾರವಾಗಲಿ, ಸರ್ವಶಕ್ತಿಗಳ ಪೂರ್ಣಾನುಗ್ರಹ ಸದಾ ಅವರ ಮೇಲಿರಲಿ ಎಂದು ಯುವಧ್ವನಿ ಬಳಗ ಶುಭ ಹಾರೈಸುತ್ತದೆ.
—-++++++——–+++++++


…..