ಶುದ್ಧ ಹಸ್ತದ ಪ್ರಾಮಾಣಿಕ ರಾಜಕಾರಣಿ ಬಿ.ರಮಾನಾಥ ರೈಗಳ ವಿರುದ್ಧ ಆರೋಪ ಮಾಡಲು ವಿಷಯಗಳಿಲ್ಲದೆ ಬಿಜೆಪಿಗರು ಸುಳ್ಳು ಸುದ್ದಿಗಳನ್ನು ಹರಡುತ್ತಿದ್ದಾರೆ-ನ್ಯಾಯವಾದಿ ಅಶ್ವನಿ ಕುಮಾರ್ ರೈ ಆರೋಪ


ಬಂಟ್ವಾಳ: ಶುದ್ಧಹಸ್ತದ ಪ್ರಾಮಾಣಿಕ ರಾಜಕಾರಣಿ, ಅಭಿವೃದ್ಧಿಯ ಹರಿಕಾರ, ಸರಳ ಸಜ್ಜನಿಕೆಯ ಸ್ನೇಹಜೀವಿಯಾಗಿರುವ ಬಿ.ರಮಾನಾಥ ರೈಯವರ ವಿರುದ್ಧ ಆರೋಪ ಮಾಡಲು ವಿಷಯಗಳು ಸಿಗದೆ ಬಿಜೆಪಿಗರು ಪರದಾಡುತ್ತಿದ್ದಾರೆ. ಹೀಗಾಗಿ ಅವರು ರೈಯವರ ವಿರುದ್ಧ ಸುಳ್ಳು ವದಂತಿಗಳನ್ನು ಹರಡುವ ಕಾರ್ಯದಲ್ಲಿ ನಿರತರಾಗಿದ್ದಾರೆ ಎಂದು ಖ್ಯಾತ ನ್ಯಾಯವಾದಿ, ಕೆಪಿಸಿಸಿ ಮುಖಂಡ ಅಶ್ವನಿ ಕುಮಾರ್ ರೈ ಆರೋಪಿಸಿದ್ದಾರೆ.

ಪಲ್ಲಮಜಲುವಿನಲ್ಲಿ ನಡೆದ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ರೈ ಅವರು ಮಾದರಿ ಅಭಿವೃದ್ಧಿ ಕಾರ್ಯಗಳನ್ನು ನಡೆಸಿರುವುದು ಮತ್ತು ಅವರ ವ್ಯಕ್ತಿತ್ವ ಏನೆಂಬುವುದು ಕ್ಷೇತ್ರದ ಜನತೆಗೆ ಗೊತ್ತಿದೆ. ಸುಳ್ಳು ಹರಡಿ ಜನರನ್ನು ವಂಚಿಸಲು ಸಾಧ್ಯವಿಲ್ಲ ಎಂದರು. ಬಂಟ್ವಾಳದಲ್ಲಿ ಶಾಂತಿಯಿದೆ ಎಂದು ಬಿಜೆಪಿಗರು ಹೇಳುತ್ತಿದ್ದಾರೆ. ಆದರೆ, ಕಾಂಗ್ರೆಸ್ ಆಡಳಿತವಿರುವಾಗ ಬಂಟ್ವಾಳದ ಶಾಂತಿ ಕೆಡಿಸಿದವರು ಯಾರು ಎಂದೂ ಬಿಜೆಪಿಗರು ಹೇಳಬೇಕು. ಕಾಂಗ್ರೆಸಿಗರು ಯಾವುದೇ ಗಲಭೆ, ಹಿಂಸೆಯಲ್ಲಿ ಭಾಗಿಯಾದವರಲ್ಲ. ಬಂಟ್ವಾಳದಲ್ಲಿ ನಡೆದ ಹಿಂಸಾಚಾರಗಳಲ್ಲಿ ಒಬ್ಬನೇ ಒಬ್ಬ ಕಾಂಗ್ರೆಸ್ ಕಾರ್ಯಕರ್ತನ ಹೆಸರು ಆರೋಪಿಗಳ ಸ್ಥಾನದಲ್ಲಿಲ್ಲ. ಕಾಂಗ್ರೆಸ್ ಯಾವತ್ತೂ ಶಾಂತಿ ಮತ್ತು ಸೌಹಾರ್ಧತೆಯನ್ನು ಬಯಸುವ ಪಕ್ಷ. ಹೀಗಾಗಿ, ಕಳೆದ ಐದು ವರ್ಷದಲ್ಲಿ ಬಂಟ್ವಾಳದಲ್ಲಿ ಶಾಂತಿಯಿದೆ ಎಂದು ಅವರು ಹೇಳಿದರು. *

ನನ್ನ ಕನಸುಗಳು ಪೂರ್ಣಗೊಳ್ಳಲು ಆಶೀರ್ವಾದ ಮಾಡಿ-ರೈ
ಕಳೆದ ಚುನಾವಣೆಯಲ್ಲಿ ನನ್ನನ್ನು ಅಪಪ್ರಚಾರದಿಂದ ಸೋಲಿಸಲಾಯಿತು. ಸೋತ ಬಗ್ಗೆ ಬೇಸರವಿಲ್ಲ. ಸೋಲಿಸಿದ ವಿಧಾನದ ಬಗ್ಗೆ ಬೇಸರವಿದೆ. ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ. ನನ್ನ ಅಭಿವೃದ್ಧಿ ಕಾರ್ಯಗಳನ್ನು ಪರಿಗಣಿಸಿ ನನಗೆ ಮತ್ತೊಮ್ಮೆ ಆಶೀರ್ವಾದ ಮಾಡುತ್ತಾರೆ. ಕ್ಷೇತ್ರದಲ್ಲಿನ ಅಭಿವೃದ್ಧಿಗೆ ಸಂಬಂಧಿಸಿ ನನ್ನದೇ ಆದ ಕೆಲವೊಂದು ಕನಸುಗಳಿವೆ. ಆ ಕನಸುಗಳು ಪೂರ್ಣಗೊಂಡಿಲ್ಲ. ಇದು ನನ್ನ ಕೊನೆಯ ಚುನಾವಣೆ. ಮತ್ತೊಂದು ಅವಕಾಶ ನೀಡಿದರೆ, ಆ ಕನಸುಗಳನ್ನು ಪೂರ್ಣಗೊಳಿಸಲಿದ್ದೇನೆ ಎಂದು ರಮಾನಾಥ ರೈ ಭರವಸೆ ನೀಡಿದರು.


ಕ್ಷೇತ್ರದಲ್ಲಿ ಒಂಬತ್ತನೇ ಬಾರಿ ಸ್ಪರ್ಧಿಸುವ ಅವಕಾಶ ಸಿಕ್ಕಿದೆ. ಇಷ್ಟೊಂದು ಸುಧೀರ್ಘ ಅವಧಿಯಲ್ಲಿ ಜನಸೇವೆ ಮಾಡುವ ಅವಕಾಶ ಕಲ್ಪಿಸಿದ ನನ್ನ ಕ್ಷೇತ್ರದ ಜನತೆಯ ಋಣವನ್ನು ಜನ್ಮಜನ್ಮಾಂತರಕ್ಕೂ ಮರೆಯಲು ಸಾಧ್ಯವಿಲ್ಲ. ಆರು ಬಾರಿ ಶಾಸಕನಾಗಿದ್ದೇನೆ. ಜಿಲ್ಲೆಯಲ್ಲೇ ಅತಿಹೆಚ್ಚು ದೀರ್ಘಾವಧಿಗೆ ಸಚಿವನಾದ ಬಗ್ಗೆ ತೃಪ್ತಿಯಿದೆ. ನನ್ನ ಜನ ನನ್ನನ್ನು ಈ ಬಾರಿ ಕೈಬಿಡುವುದಿಲ್ಲ ಎಂಬ ದೃಢವಿಶ್ವಾಸದೊಂದಿಗೆ ಮತ್ತೊಮ್ಮೆ ಚುನಾವಣೆಗೆ ಸ್ಪರ್ಧಿಸಿದ್ದೇನೆ ಎಂದು ರೈ ಹೇಳಿದರು.
ಕೆಪಿಸಿಸಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ಬ್ಲಾಕ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ಪ್ರಮುಖರುಗಳಾದ ಬಿ.ಎಚ್. ಖಾದರ್, ರಾಕೇಶ್ ಮಲ್ಲಿ, ಸದಾಶಿವ ಬಂಗೇರ, ಅಬ್ಬಾಸ್ ಅಲಿ, ಬಿ., ಇಬ್ರಾಹಿಂ ಕೈಲಾರ, ಬಿ. ಮೋಹನ್, ಚಂದ್ರಶೇಖರ ಪೂಜಾರಿ, ಚಿತ್ತರಂಜನ್ ಶೆಟ್ಟಿ, ಪ್ರವೀಣ್ ಬಂಟ್ವಾಳ್, ಪಿ.ಎ. ರಹಿಂ, ಪ್ರೀತಿರಾಜ್ ದ್ರಾವಿಡ್, ಶಬೀರ್ ಸಿದ್ದಕಟ್ಟೆ, ಆನಂದ ಕುಲಾಲ್, ಬಶೀರ್ ಮತ್ತಿತರರು ಉಪಸ್ಥಿತರಿದ್ದರು.