ಪಾನ್ ಕಾರ್ಡಿನೊಂದಿಗೆ ಆಧಾರ್ ಜೋಡಣೆಗೆ ದಂಡನೆ-ವಿನಾಯತಿ ಕೋರಿ ಪ್ರಭಾಕರ ಪ್ರಭು ಕೇಂದ್ರ ಸರಕಾರಕ್ಕೆ ಮನವಿ

ಬಂಟ್ವಾಳ: ಪಾನ್ ಕಾರ್ಡ್ ನೊಂದಿಗೆ ಆಧಾರ್ ಜೋಡಣೆಗೆ ವಿಧಿಸಲಾದ ದಂಡನೆಯನ್ನು ವಿನಾಯಿತಿ ಮಾಡುವಂತೆ ಬಂಟ್ವಾಳ ತಾಲೂಕು ಪಂಚಾಯತು ಮಾಜಿ ಸದಸ್ಯ ಪ್ರಭಾಕರ ಪ್ರಭು ಅವರು ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಿದ್ದಾರೆ.

ಕೇಂದ್ರ ಸರಕಾರ 2017 ಜುಲೈ ತಿಂಗಳ ಮುಂಚೆ ಪಾನ್ ಕಾರ್ಡ್ ಮಾಡಿಸಿಕೊಂಡವರು ತಮ್ಮ ಪಾನ್ ನೊಂದಿಗೆ ಆಧಾರ್ ಜೋಡಣೆಗೆ ಮಾರ್ಚ್ -2022 ಅಂತಿಮ ದಿನಾಂಕ ಎಂದೂ ಸಮಯಾವಕಾಶ ಕೋರಿ ಆದಾಯ ತೆರಿಗೆ ಇಲಾಖೆಯು ಆದೇಶ ಹೊರಡಿಸಿರುವುದು ಸಕಾರಾತ್ಮಕ ವಿಚಾರವಾಗಿದೆ. ಮುಂದುವರಿದು 2022 ಜುಲೈವರೆಗೆ ರೂ.500 ದಂಡದೊಂದಿಗೆ ಹಾಗೂ ಮಾರ್ಚ್ 2023ರವರೆಗೆ ರೂ.1000 ದಂಡದೊಂದಿಗೆ ಪಾನ್ ಅಧಾರ್ ಜೋಡಣೆಗೆ ಅವಕಾಶ ಕಲ್ಪಿಸಲಾಗಿದೆ.

ತೆರಿಗೆ ವಂಚನೆ, ಬೆನಾಮಿ ಆಸ್ತಿ, ಹೊರದೇಶಗಳಿಂದ ಬರುವ ಹಣಕಾಸು ಬಗ್ಗೆ ನಿಗಾ ಇಟ್ಟು ಆಕ್ರಮಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಜಾರಿಗೆ ತಂದಿರುವ ಈ ಜೋಡಿಸುವಿಕೆ ಸೂತ್ರ ಅರ್ಥಪೂರ್ಣವಾಗಿದ್ದು ಪಾರದರ್ಶಕತೆಗೆ ಪೂರಕವಾಗಿದೆ.

ಆದರೆ ದೇಶದಲ್ಲಿ ಅತೀ ಹೆಚ್ಚಿನ ಜನರು ಗ್ರಾಮಾಂತರ ಪ್ರದೇಶದ ಹಳ್ಳಿಗಾಡುಗಳಲ್ಲಿ ವಾಸಿಸುತ್ತಿರುವುದರಿಂದ ಸರ್ಕಾರದ ಆದೇಶದ ಮಾಹಿತಿಯು ಪರಿಪೂರ್ಣವಾಗಿ ಜನಸಾಮಾನ್ಯರಿಗೆ ತಲುಪಿರುವುದಿಲ್ಲ. ಇದರಿಂದ ಬಡ ಜನತೆಗೆ ದಂಡನೆ ಪಾವತಿಸಿ ಪಾನ್ ನೊಂದಿಗೆ ಆಧಾರ್ ಜೋಡಣೆ ಅಸಾಧ್ಯವಾಗಿದ್ದು ಪ್ರಗತಿ ಸಹ ಗುರಿ ಮುಟ್ಟಲು ಕಷ್ಟ ಸಾಧ್ಯವಾಗಿದೆ. ಈ ದಂಡನೆಯು ಸಾಮಾನ್ಯ ಜನತೆಗೆ ತುಂಬಾ ಹೊರೆಯಾಗಿದ್ದು ಜನಸಾಮಾನ್ಯರು ಸಂಕಷ್ಟದಲ್ಲಿದ್ದಾರೆ ಎಂದು ಪ್ರಭು ಅವರು ಪ್ರಧಾನ ಮಂತ್ರಿ, ಕೇಂದ್ರ ಹಣಕಾಸು ಸಚಿವರು ಹಾಗೂ ಮಂಗಳೂರು ಸಂಸದರಿಗೆ ಸಲ್ಲಿಸಿದ ಮನವಿಯಲ್ಲಿ ವಿವರಿಸಿದ್ದಾರೆ.

ಪಾನ್ ನೊಂದಿಗೆ ಆಧಾರ್ ಜೋಡಿಸುವಿಕೆಗೆ ದಂಡನೆ ವಿಧಿಸುವುದನ್ನು ಆದಾಯ ತೆರಿಗೆ ಇಲಾಖೆಯು ಕೈ ಬಿಟ್ಟು ವಿನಾಯಿತಿ ನೀಡಬೇಕು ಎಂದು ಅವರು ಮನವಿಯಲ್ಲಿ‌ ಒತ್ತಾಯಿಸಿದ್ದಾರೆ.

ವರದಿ: ಗೋಪಾಲ ಅಂಚನ್
ಸಂಪಾದಕರು:
ಯುವಧ್ವನಿ ನ್ಯೂಸ್ ಕರ್ನಾಟಕ
ಮೊ:9449104318