ಕೆದ್ದಳಿಕೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೆಪ್ಟಂಬರ್ 24 ಮತ್ತು 25ರಂದು ರಜತ ಮಹೋತ್ಸವ ಸಂಭ್ರಮ

ಯುವಧ್ವನಿ ನ್ಯೂಸ್, ಕರ್ನಾಟಕ

ಮಂಗಳೂರು: ಹಲವಾರು ವಿಶಿಷ್ಠ ಸಾಧನೆಗಳೊಂದಿಗೆ ರಾಜ್ಯ-ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿರುವ ಕೆದ್ದಳಿಕೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೀಗ ರಜತ ಮಹೋತ್ಸವ ಸಂಭ್ರಮ.

ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕಾವಳಮೂಡೂರು ಗ್ರಾಮದ ಕೆದ್ದಳಿಕೆ ಎಂಬ ಪ್ರಕೃತಿ ರಮಣೀಯ ಸುಂದರ ಪರಿಸರದಲ್ಲಿರುವ ಈ ಶಾಲೆಯಲ್ಲಿ ಸೆ.24 ಮತ್ತು 25ರಂದು ರಜತ ಮಹೋತ್ಸವ ಸಂಭ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲು ವ್ಯಾಪಕ ಸಿದ್ಧತೆ ನಡೆಯುತ್ತಿದೆ.

ಪ್ರತೀ ವರ್ಷ ಆಕರ್ಷನೀಯ ರೀತಿಯಲ್ಲಿ ಶಾಲಾ ಆರಂಭೋತ್ಸವ ಸಹಿತ ಮಕ್ಕಳ ಗುಣಾತ್ಮಕ ಶಿಕ್ಷಣಕ್ಕಾಗಿ ಹಲವು ವಿನೂತನ ಪ್ರಯೋಗಗಳನ್ನು ನಡೆಸಿ ರಾಜ್ಯ-ರಾಷ್ಟ್ರಮಟ್ಟದ ಗಮನ ಸೆಳೆದ ಕೆದ್ದಳಿಕೆ ಶಾಲೆ ತಾಲೂಕು, ಜಿಲ್ಲೆ, ರಾಜ್ಯ ಮಟ್ಟದಲ್ಲಿ ಹಲವು ಪ್ರಶಸ್ತಿ, ನಾಡಿನ ಶಿಕ್ಷಣ ತಜ್ಞರಿಂದ ಮೆಚ್ಚುಗೆ ಪಡೆದಿರುವ ಜತೆಯಲ್ಲಿ ಇಲ್ಲಿಯ ಮುಖ್ಯ ಶಿಕ್ಷಕರಾಗಿದ್ದ ಕೆ.ರಮೇಶ ನಾಯಕ್ ರಾಯಿ ಅವರಿಗೆ ರಾಷ್ಟ್ರಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ದೊರೆತಿರುವುದು ಈ ಶಾಲೆಯ ಹೆಗ್ಗಳಿಕೆಯಾಗಿದೆ.

1996ರಲ್ಲಿ ಆರಂಭಗೊಂಡ ಕೆದ್ದಳಿಕೆ ಶಾಲೆಯು ಶಿಕ್ಷಣ ಇಲಾಖೆ,ಸ್ಥಳೀಯಾಡಳಿತ,ಜನಪ್ರತಿನಿಧಿಗಳು, ಶಿಕ್ಷಕವೃಂದ, ಶಾಲಾಭಿವೃದ್ಧಿ ಸಮಿತಿ, ಪೋಷಕವೃಂದ ಹಾಗೂ ಸಮುದಾಯದ ಸಹಭಾಗಿತ್ವದಿಂದ ಹಂತಹಂತವಾಗಿ ಬೆಳೆದು ಶೈಕ್ಷಣಿಕ ವಲಯದಲ್ಲಿ ವಿಶೇಷ ಛಾಪು ಮೂಡಿಸಿದೆ.

ಮಕ್ಕಳ ಅಚ್ಚುಮೆಚ್ಚಿನ ಕಲಿಕಾ ತಾಣ

ಗ್ರಾಮೀಣ ಪ್ರದೇಶದಲ್ಲಿರುವ ಈ ಶಾಲೆಯು ಸುಸಜ್ಜಿತ ಸುಂದರ ಕಟ್ಟಡ, ಶೈಕ್ಷಣಿಕ ಮಾಹಿತಿ ನೀಡುವ ಅಂದಚೆಂದದ ಗೋಡೆ ಬರಹಗಳು, ಚಿತ್ರ ಚಿತ್ತಾರಗಳು, ಆಕರ್ಷನೀಯ ಹೂದೋಟ, ತರಕಾರಿ ತೋಟ, ವಿವಿಧ ಹಣ್ಣುಗಳ ತೋಟ, ತೆಂಗಿನ ತೋಟದೊಂದಿಗೆ ವಿಶೇಷ ಗಮನ ಸೆಳೆಯುತ್ತಿದೆ.

ಮಕ್ಕಳ ಅಚ್ಚುಮೆಚ್ಚಿನ ಕಲಿಕಾ ತಾಣವಾಗಿ, ವಿದ್ಯಾಭಿಮಾನಿಗಳ ಪಾಲಿಗೆ ವಿದ್ಯಾದೇಗುಲವಾಗಿ ವಿಶೇಷ ಆಕರ್ಷಣೆ ಪಡೆದಿರುವ ಕೆದ್ದಳಿಕೆ ಶಾಲೆಯಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುವರೇ ಸಕಲ ಮೂಲಭೂತ ಸೌಲಭ್ಯಗಳ ಜತೆಯಲ್ಲಿ ತಂತ್ರಜ್ಞಾನದ ಅಳವಡಿಕೆ, ಆಂಗ್ಲಭಾಷಾ ಮತ್ತು ಗೌರವ ಶಿಕ್ಷಕಿಯರ ನೇಮಕ, ಕಲೆ-ಸಾಹಿತ್ಯ-ಸಾಂಸ್ಕ್ರತಿಕ ಪ್ರಕಾರಗಳ ತರಬೇತಿಗಳೊಂದಿಗೆ ಮಕ್ಕಳ ಸಮಗ್ರ ವಿಕಸನಕ್ಕೆ ಪೂರಕವಾದ ಸಕಲ ವ್ಯವಸ್ಥೆಗಳು ಅನುಷ್ಠಾನಗೊಂಡಿದೆ.

ಮುಂದಿನ ಯೋಜನೆಗಳು

ಶಾಲಾ ವಾಹನ ವ್ಯವಸ್ಥೆ, ಶಾಲಾ ಪೀಠೋಪಕರಣ, ಕಂಪ್ಯೂಟರ್ ಕಲಿಕಾ ವ್ಯವಸ್ಥೆ ಮತ್ತು ಸ್ಮಾರ್ಟ್ ಕ್ಲಾಸ್, ಕೃಷಿ ಅಭಿವೃದ್ಧಿಗಾಗಿ ನೀರು ಸಂಗ್ರಹಣಾ ತೊಟ್ಟಿ, ಆವರಣ ಗೋಡೆ ನಿರ್ಮಾಣ, ಪ್ರಯೋಗಾಲಯ ಕೊಠಡಿ ನಿರ್ಮಾಣ, ಅಕ್ಷರ ದಾಸೋಹ ಉಗ್ರಾಣ ಕೊಠಡಿ ನಿರ್ಮಾಣ ಸಹಿತ ಹಲವು ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ಶಾಲೆಯು ಯೋಜನೆ ರೂಪಿಸಿದೆ.

ರಜತ ಮಹೋತ್ಸವ ಸಂಭ್ರಮ

ಸೆ.24 ಮತ್ತು 25ರಂದು ರಜತ ಮಹೋತ್ಸವವು ಗಣ್ಯಾತಿಗಣ್ಯರು, ಊರ ವಿದ್ಯಾಭಿಮಾನಿಗಳ ಸಮಕ್ಷಮದಲ್ಲಿ ಪ್ರತಿಭಾ ಪುರಸ್ಕಾರ, ಶಾಲಾ ವಿದ್ಯಾರ್ಥಿಗಳು ಮತ್ತು ಹಳೇ ವಿದ್ಯಾರ್ಥಿಗಳಿಂದ ಸಾಂಸ್ಕ್ರತಿಕ ವೈವಿಧ್ಯ, ಯಕ್ಷ ಗಾನ ವೈಭವ, ತುಳು ನಾಟಕ, ಯಕ್ಷಗಾನ ಬಯಲಾಟ, ಸಾಧಕರಿಗೆ ಸನ್ಮಾನ ಮೊದಲಾದ ಕಾರ್ಯಕ್ರಮಗಳೊಂದಿಗೆ ವೈಭವಯುತವಾಗಿ ಸಂಪನ್ನಗೊಳ್ಳಲಿದೆ.ಶಾಲಾ ಬೆಳ್ಳಿ ಹಬ್ಬ ಊರ ಹಬ್ಬವಾಗಿ ರೂಪುಗೊಳ್ಳುವರೇ ಸಕಲ ಸಿದ್ಧತೆಗಳು ನಡೆಯುತ್ತಿದೆ.

ದಿನೇಶ್ ಶೆಟ್ಟಿ ಕಾವಳಕಟ್ಟೆ ಅಧ್ಯಕ್ಷ, ರತ್ನಾ ತುಕಾರಾಮ ಗೌಡ ಉಪಾಧ್ಯಕ್ಷೆಯಾಗಿರುವ ಶಾಲಾಭಿವೃದ್ಧಿ ಸಮಿತಿ, ಬಿ.ಪದ್ಮಶೇಖರ ಜೈನ್ ಗೌರವಾಧ್ಯಕ್ಷ, ಜಗನ್ನಾಥ ಶೆಟ್ಟಿ ಕೆದ್ದಳಿಕೆ ಅಧ್ಯಕ್ಷ, ರಮೇಶ ನಾಯಕ್ ರಾಯಿ, ದಿವಾಕರ ದಾಸ್, ಅಜಿತ್ ಶೆಟ್ಟಿ, ಪುರುಷೋತ್ತಮ ಗೌಡ ದೇವಸ್ಯ ಉಪಾಧ್ಯಕ್ಷರಾಗಿರುವ ರಜತ ಮಹೋತ್ಸವ ಸಮಿತಿ, ಕುಮಾರ್ ಸಿ. ಮುಖ್ಯ ಶಿಕ್ಷಕರು ಮತ್ತು ಶಿಕ್ಷಕವೃಂದ, ಪ್ರಿತೇಶ್ ನಾಯಕನಾಗಿರುವ ಶಾಲಾ ವಿದ್ಯಾರ್ಥಿ ವೃಂದ, ದಯಾನಂದ ಅಧ್ಯಕ್ಷ, ಶ್ರೀ ಹರಿ ಕಾರ್ಯದರ್ಶಿಯಾಗಿರುವ ಹಳೇ ವಿದ್ಯಾರ್ಥಿ ಸಂಘ, ಪೋಷಕ ವೃಂದ ಹಾಗೂ ಶಿಕ್ಷಣಾಭಿಮಾನಿಗಳ ತಂಡ ಶಾಲೆಯ ಅಭಿವೃದ್ಧಿ ಮತ್ತು ರಜತ ಮಹೋತ್ಸವದ ಯಶಸ್ವಿಯಲ್ಲಿ ತೊಡಗಿಸಿಕೊಂಡಿದೆ.

?️ಗೋಪಾಲ ಅಂಚನ್, ಆಲದಪದವು
ಸಂಪಾದಕರು
ಯುವಧ್ಚನಿ ನ್ಯೂಸ್, ಕರ್ನಾಟಕ
ಮೊ:9449104318