12 ವರ್ಷಗಳ ಹಿಂದೆ ವರ್ಷಾಂತ್ಯ ಸಂಭ್ರಮಾಚರಣೆಯ ನೆಲೆ-ಈಗ ರಾಮಾಂಜನೇಯ ಭಜನಾ ಮಂದಿರದ ಅಲೆ ಬಂಟ್ವಾಳ ತಾಲೂಕಿನ ಕುಡಂಬೆಟ್ಟು ಗ್ರಾಮದ ಹಲೆಪ್ಪಾಡಿ ಯುವಕರ ಸಾಧನೆಗೆ ಶ್ಲಾಘನೆ

ವಾಮದಪದವು: ಕಳೆದ 12 ವರ್ಷಗಳ ಹಿಂದೆ ಊರಿನ ಯುವಕರು ಮತ್ತು ಮಕ್ಕಳು ಸೇರಿ ವರ್ಷಾಂತ್ಯದ ತಿಂಗಳ ಕೊನೆಯ ದಿನವನ್ನು ಸಂಭ್ರಮಿಸುತ್ತಿದ್ದ ಬಂಟ್ವಾಳ ತಾಲೂಕಿನ ಕುಡಂಬೆಟ್ಟು ಗ್ರಾಮದ ಹಲೆಪ್ಪಾಡಿ ಎಂಬ ಸ್ಥಳವೀಗ ಶ್ರೀ ರಾಮಾಂಜನೇಯ ಭಜನಾ ಮಂದಿರವಾಗಿ ಪರಿವರ್ತನೆಗೊಂಡಿದೆ.
ಪ್ರತಿವರ್ಷ ಹೊಸ ವರ್ಷ ಜನವರಿಯನ್ನು ಸ್ವಾಗತಿಸುವ ನೆಪದಲ್ಲಿ ಕೆಲ ಯುವಕರು ಮತ್ತು ಮಕ್ಕಳು ಸೇರಿ ಡಿಸೆಂಬರ್ ತಿಂಗಳ ಕೊನೆದಿನದಲ್ಲಿ ಅಜ್ಜನನ್ನು ಹೊತ್ತಿಸಿ ಸಂಭ್ರಮಿಸುತ್ತಿದ್ದ ಜಾಗದಲ್ಲಿಯೇ ಇದೀಗ ಹಿರಿಯರು ಮತ್ತು ಯುವಕರು ಸೇರಿ ಶ್ರೀ ರಾಮಾಂಜನೇಯ ಭಜನಾ ಮಂದಿರವನ್ನು ನಿರ್ಮಿಸಿದ್ದು ಸಾರ್ವಜನಿಕರ ಶ್ಲಾಘನೆಗೆ ಪಾತ್ರವಾಗಿದೆ.

ಮಂದಿರ ಸ್ಥಾಪನೆಯ ಹಿನ್ನೆಲೆ:

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಾಮದಪದವು ಸಮೀಪದ ಕುಡಂಬೆಟ್ಟು ಗ್ರಾಮದ ಹಲೆಪ್ಪಾಡಿ ಎಂಬ ಊರು ತೀರಾ ಹಳ್ಳಿ ಪ್ರದೇಶ. ಇಲ್ಲಿರುವ ಒಂದು ಅಂಗಡಿಯ ಎದುರುಗಡೆ ಕೆಲವು ವರ್ಷಗಳಿಂದ ಯುವಕರು, ಮಕ್ಕಳು ಸೇರಿ ವರ್ಷಾಂತ್ಯದ ತಿಂಗಳ ಕೊನೆಯ ದಿನದಂದು ಹಳೆಯ ವರ್ಷವನ್ನು ಮರೆಯುವ, ಹೊಸ ವರ್ಷವನ್ನು ಸ್ವಾಗತಿಸುವ ನೆಪದಲ್ಲಿ ಸಂಭ್ರಮಾಚರಣೆ ನಡೆಸುತ್ತಿದ್ದರು. ಇದು ಕೆಲವು ವರ್ಷಗಳಿಂದ ನಡೆದುಕೊಂಡು ಬರುತ್ತಿತ್ತು.
ಇದನ್ನು ಕಂಡ ಆ ಪರಿಸರದ ಹಿರಿಯರಾದ ದಿ.ಬೂಬ ಪೂಜಾರಿ ಕುದ್ಕಂದೋಡಿ ಮತ್ತು ಆ ಊರಿನ ಹಿರಿಯರು ವರ್ಷಾಂತ್ಯದ ನೆಪದಲ್ಲಿ ಸಂಭ್ರಮಿಸುವ ಯುವಕರಿಗೆ, ಮಕ್ಕಳಿಗೆ ಬುದ್ದಿ ಮಾತು ಹೇಳಿದರು.
” ಪಾಶ್ಚಾತ್ಯ ಸಂಸ್ಕ್ರತಿಯ ಇಂತಹ ಕಾರ್ಯಕ್ರಮಗಳನ್ನು ನಮ್ಮ ಹಳ್ಳಿಯಲ್ಲಿ ಮಾಡಬಾರದು, ಇದರ ಬದಲಾಗಿ ಊರಿಗೆ ಒಳಿತಾಗುವಂತಹ ಅರ್ಥಪೂರ್ಣ ಕಾರ್ಯಕ್ರಮಗಳನ್ನು ನೀವು ನಡೆಸುವುದಾದರೆ ನಾವು ನಿಮಗೆ ಎಲ್ಲಾ ರೀತಿಯ ಸಹಕಾರ ನೀಡುತ್ತೇವೆ” ಎಂದ ಹಿರಿಯರ ಮಾತು ಯುವಕರ ಕಣ್ಣು ತೆರೆಸಿತು. ಹಿರಿಯರ ಮಾತಿನಿಂದ ಪ್ರೇರಿತರಾದ ಯುವಕರು ಅಲ್ಲಿದ್ದ ಖಾಲಿ ಅಂಗಡಿ ಕೋಣೆಯೊಂದರಲ್ಲಿ ಪ್ರತೀ ಶನಿವಾರ ಭಜನಾ ಸೇವೆಯನ್ನು ಆರಂಭಿಸಿದರು. ಒಂದೊಂದು ದಿನ ಒಂದೊಂದು ಮನೆಯವರ ಸೇವೆ, ಹರಕೆ ಭಜನಾ ಸೇವೆಗಳು 12 ವರ್ಷಗಳ ಕಾಲ ನಿರಂತರ ನಡೆದು ಊರಲ್ಲೊಂದು ಶ್ರದ್ಧಾಭಕ್ತಿಯ ವಾತಾವರಣ ನಿರ್ಮಾಣವಾಯಿತು.

ಮಂದಿರ ನಿರ್ಮಾಣ ಸಂಕಲ್ಪ:

ಶ್ರೀ ರಾಮಾಂಜನೇಯ ಭಜನಾ ಮಂಡಳಿ ಹೆಸರಿನಲ್ಲಿ ಸಂಘಟಿತರಾಗಿದ್ದ ಹಿರಿಯರು, ಯುವಕರು ಸೇರಿ ಕಳೆದ ಐದು ವರ್ಷಗಳ ಹಿಂದೆ ಇಲ್ಲಿ ಶ್ರೀ ರಾಮಾಂಜನೇಯ ಭಜನಾ ಮಂದಿರ ನಿರ್ಮಿಸಲು ಸಂಕಲ್ಪಿಸಿದ್ದು ನಿಧಾನಗತಿಯಲ್ಲಿ ಸಾಗಿದ ಕಾಮಗಾರಿ ಇದೀಗ ಪೂರ್ಣಗೊಂಡು ಲೋಕಾರ್ಪಣೆಗೆ ಸಜ್ಜಾಗಿದೆ.
ಸುಮಾರು 12 ಲಕ್ಷ ರೂಪಾಯಿ ವೆಚ್ಚದಲ್ಲಿ ಸುಂದರವಾಗಿ ನಿರ್ಮಾಣಗೊಂಡ ಭಜನಾ ಮಂದಿರ ಈ ಪರಿಸರದ ನೂರಾರು ಮನೆಗಳ ಭಕ್ತಿ, ಶ್ರದ್ಧೆಯ ಆರಾದನಾ ಕೇಂದ್ರವಾಗಿ ಕಂಗೊಳಿಸುತ್ತಿದೆ.
ಚೇತನ್ ಕುದ್ಕಂದೋಡಿ
ಗೌರವಾಧ್ಯಕ್ಷರು, ಕಿರಣ್ ಕೋಟ್ಯಾನ್ ಹಲೆಪ್ಪಾಡಿ ಅಧ್ಯಕ್ಷರು, ವಿನೋದ್ ಪೂಜಾರಿ ಹಲೆಪ್ಪಾಡಿ ಪ್ರಧಾನ ಕಾರ್ಯದರ್ಶಿ,ನಾಗೇಶ್ ಶೆಟ್ಟಿ ಎರ್ಮೆನಾಡು ಸಂಘಟನಾ ಕಾರ್ಯದರ್ಶಿ, ಪ್ರಕಾಶ್ ಶೆಟ್ಟಿ ಕಕ್ಕಿಬೆಟ್ಟು ಕೋಶಾಧಿಕಾರಿ ಮತ್ತು ಪದಾಧಿಕಾರಿಗಳ ತಂಡ ಹಾಗೂ ಸಂದ್ಯಾ ಎಸ್.ಕೋರ್ನಾಯ ಗೌರವಾಧ್ಯಕ್ಷರು, ಪ್ರಶಾಂತ್ ದೇವಾಡಿಗ ಹಲೆಪ್ಪಾಡಿ ಅಧ್ಯಕ್ಷರು, ಪುನೀತ್ ಹಲೆಪ್ಪಾಡಿ ಮತ್ತು ಪ್ರವೀಣ್ ಹಲೆಪ್ಪಾಡಿ ಕಾರ್ಯದರ್ಶಿಗಳಾಗಿರುವ ಭಜನಾ ಮಂಡಳಿ, ಮಂದಿರ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿದೆ.

ಮೆ.15ರಂದು ಶ್ರೀ ರಾಮಾಂಜನೇಯ ಭಜನಾ ಮಂದಿರ ಉದ್ಘಾಟನೆ ಹಾಗೂ ಶ್ರೀ ದೇವರ ಪ್ರತಿಷ್ಠೆ:

ನೂತನವಾಗಿ ನಿರ್ಮಾಣಗೊಂಡ ಶ್ರೀ ರಾಮಾಂಜನೇಯ ಭಜನಾ ಮಂದಿರದ ಉದ್ಘಾಟನೆ ಹಾಗೂ ಶ್ರೀ ದೇವರ ಪ್ರತಿಷ್ಠೆಯು ಮೆ.15ರಂದು ನಡೆಯಲಿದೆ.
ಬೆಳಿಗ್ಗೆ 8 ರಿಂದ ಆಶ್ಲೇಷಾ ಬಲಿ ಪೂಜೆ, ಗಣಹೋಮ, ರಾಮತಾರಕ ಮಂತ್ರ ಹೋಮ, 10.30ಕ್ಕೆ ಶ್ರೀ ರಾಮ ದೇವರ ಪ್ರತಿಷ್ಠೆ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ 7 ಕ್ಕೆ ಭಜನಾ ಮಂಗಳ, ಮಹಾಪೂಜೆ ನಡೆಯಲಿದೆ.
ಬೆಳಿಗ್ಗೆ 11ರಿಂದ ಧಾರ್ಮಿಕ ಸಭೆ ನಡೆಯಲಿದ್ದು ಕರಿಂಜೆ ಕ್ಷೇತ್ರದ ಶ್ರೀ ಮುಕ್ತಾನಂದ ಸ್ವಾಮೀಜಿ ಆಶೀರ್ವಚನ ನೀಡುವರು. ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅಧ್ಯಕ್ಷತೆ ವಹಿಸುವರು. ಪುಂಜಾಲಕಟ್ಟೆ ಶ್ರೀ ರಾಮ ಭಜನಾ ಮಂದಿರದ ಗೌರವಾಧ್ಯಕ್ಷ ಎಂ.ತುಂಗಪ್ಪ ಬಂಗೇರಾ, ಕಕ್ಯಪದವು ಬ್ರಹ್ಮಬೈದರ್ಕಳ ಗರಡಿ ಅಧ್ಯಕ್ಷ ಮಾಯಿಲಪ್ಪ ಸಾಲ್ಯಾನ್, ರಾಜ್ಯ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಿರ್ದೇಶಕಿ ಸುಲೋಚನಾ ಜಿ.ಕೆ.ಭಟ್, ಡಾ.ವರದರಾಜ ಪೈ, ದೀರಜ್ ನಾಯ್ಕ್ ನಡಿಗುತ್ತು, ಭಾರತಿ ರಾಜೇಂದ್ರ, ಎಂ.ಪಿ.ಶೇಖರ್, ಪುರುಷೋತ್ತಮ ಶೆಟ್ಟಿ ಬಾರೆಕ್ಕಿನಡೆ, ಮೋನಪ್ಪ ಪೂಜಾರಿ ಕಂಡೆತ್ಯಾರು, ಜಗನ್ನಾಥ ಶೆಟ್ಟಿ ಕೆದ್ದಳಿಕೆ, ಶ್ರೀನಿವಾಸ ಪಿ.ಅತ್ತಾಜೆ, ಜಯಾನಂದ ಪಿ., ಯಶೋಧರ ಸಾಲ್ಯಾನ್, ಮೋಹನ್ ಶೆಟ್ಟಿ ನರ್ವಲ್ದಡ್ಡ ಮೊದಲಾದವರು ಅತಿಥಿಗಳಾಗಿ ಭಾಗವಹಿಸುವರು.
……………..
“ಈ ಪ್ರದೇಶದಲ್ಲಿ ಕಳೆದ 12 ವರ್ಷಗಳಿಂದ ಹಿರಿಯರು, ಯುವಕರು, ಮಕ್ಕಳು ಸೇರಿ ಭಜನಾ ಸೇವೆಯನ್ನು ನಡೆಸಿಕೊಂಡು ಬರುತ್ತಿದ್ದರು.
ಈ ಪ್ರದೇಶದಲ್ಲಿರುವ ಚಿಕ್ಕದಾದ ಅಂಗಡಿ ಕೋಣೆಯಲ್ಲಿ ಭಜನಾ ಸೇವೆ ನಡೆಯುತ್ತಿದ್ದು, ಈ ಭಾಗದಲ್ಲಿ ಜನತೆಗೆ ಶ್ರದ್ಧಾಕೇಂದ್ರವೊಂದು ಬೇಕು ಎಂಬು ಉದ್ಧೇಶದಿಂದ ಶ್ರೀ ರಾಮಾಂಜನೇಯ ಭಜನಾ ಮಂದಿರದ ನಿರ್ಮಾಣದ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿತ್ತು.
ಇದೀಗ ಅಂದಾಜು ಸುಮಾರು 12 ಲಕ್ಷ ರೂಪಾಯಿ ವೆಚ್ಚದಲ್ಲಿ ಸುಂದರವಾದ ಭಜನಾ ಮಂದಿರ ನಿರ್ಮಾಣಗೊಂಡು ಲೋಕಾರ್ಪಣೆಗೆ ಸಜ್ಜಾಗಿದೆ.”
ಡಾ.ರಾಮಕೃಷ್ಣ ಎಸ್.

  • ಉಪಾಧ್ಯಕ್ಷರು, ಶ್ರೀ ರಾಮಾಂಜನೇಯ ಭಜನಾ ಮಂದಿರ, ಹಲೆಪ್ಪಾಡಿ

…………………..
✍?ಗೋಪಾಲ ಅಂಚನ್, ಆಲದಪದವು
…………………….