ಶ್ರೀ ಅಗ್ನಿದುರ್ಗೆ ಬ್ರಹ್ಮಲಿಂಗೇಶ್ವರ ದೇವಸ್ಥಾನ ಬಾಂಬಿಲ ನೂತನ ಗರ್ಭಗುಡಿಗಳ ನಿರ್ಮಾಣ ಸಹಿತ ಜೀರ್ಣೋದ್ಧಾರಕ್ಕೆ ಯೋಜನೆ

ಬಂಟ್ವಾಳ: ಪುರಾಣದಲ್ಲಿ ಪವಿತ್ರ ಸಿದ್ಧಿ ಕ್ಷೇತ್ರವಾಗಿ ವೈಭವದಿಂದ ಮೆರೆದ ಐತಿಹ್ಯವಿರುವ ಬಾಂಬಿಲ ಶ್ರೀ ಅಗ್ನಿದುರ್ಗೆ ಬ್ರಹ್ಮಲಿಂಗೇಶ್ವರ ಕ್ಷೇತ್ರದಲ್ಲಿ ನೂತನ ಗರ್ಭಗುಡಿಗಳ ನಿರ್ಮಾಣ ಸಹಿತ ಸಮಗ್ರ ಜೀರ್ಣೋದ್ಧಾರ ಕಾರ್ಯ ನಡೆಸಲು ಯೋಚಿಸಲಾಗಿದೆ.

ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪ್ರಕೃತಿ ರಮಣೀಯ ಸುಂದರ ಪರಿಸರದಲ್ಲಿರುವ ಬಾಂಬಿಲ ಶ್ರೀ ಅಗ್ನಿದುರ್ಗೆ ಬ್ರಹ್ಮಲಿಂಗೇಶ್ವರ ಕ್ಷೇತ್ರ ಭಕ್ತರ ಇಷ್ಠಾರ್ಥ ಸಿದ್ಧಿಸುವ ಪುಣ್ಯಕ್ಷೇತ್ರವಾಗಿ ಪ್ರಸಿದ್ಧಿ ಪಡೆದಿದ್ದು ಇದೀಗ ಸಾನಿಧ್ಯಾಭಿವೃದ್ಧಿ ಹಾಗೂ ಭಕ್ತಾದಿಗಳ ಅನುಕೂಲಕ್ಕಾಗಿ ಕ್ಷೇತ್ರವನ್ನು ಜೀರ್ಣೋದ್ಧಾರಗೊಳಿಸಲು ಚಿಂತನೆ ನಡೆಸಲಾಗಿದೆ.

ಶ್ರೀ ಕ್ಷೇತ್ರದಲ್ಲಿ ಶ್ರೀ ಅಗ್ನಿದುರ್ಗೆ, ಶ್ರೀ ಬ್ರಹ್ಮಲಿಂಗೇಶ್ವರ ದೇವರು, ಸುಬ್ರಹ್ಮಣ್ಯ, ಗುರು ಶಂಕರಾಚಾರ್ಯರು, ವನದುರ್ಗೆ, ನಾಗದೇವರು, ಕ್ಷೇತ್ರ ಚಾಮುಂಡಿ ಸಹಿತ ಪರಿವಾರ ದೈವದೇವರ ಸಾನಿಧ್ಯವಿದೆ.

ಇದೀಗ ಕ್ಷೇತ್ರದ ಪ್ರಾಂಗಣದೊಳಗಿರುವ ಬ್ರಹ್ಮಲಿಂಗೇಶ್ವರ ದೇವರಿಗೆ ಹೊರಾಂಗಣದಲ್ಲಿ ಅಂದರೆ ಮೂಲದಲ್ಲಿ ಆರಾಧಿಸಲ್ಪಡುತ್ತಿದ್ದ ಸ್ಥಳದಲ್ಲಿ ಸಾನಿಧ್ಯ ನಿರ್ಮಿಸಲು ಉದ್ಧೇಶಿಸಲಾಗಿದೆ. ಜತೆಯಲ್ಲಿ ಕ್ಷೇತ್ರದೊಳಗಿರುವ ಅಗ್ನಿದುರ್ಗೆ ಮತ್ತು ಬ್ರಹ್ಮಲಿಂಗೇಶ್ವರ ದೇವರ ಗರ್ಭಗುಡಿಗಳನ್ನು ತೆರವುಗೊಳಿಸಿ, ಮಧ್ಯ ಭಾಗದಲ್ಲಿ ಶ್ರೀ ಅಗ್ನಿದುರ್ಗೆಗೆ ಪ್ರಧಾನ ಗರ್ಭಗುಡಿಯನ್ನು ನಿರ್ಮಿಸುವ ಯೋಜನೆ ಇದೆ.
ನೂತನ ಅನ್ನಛತ್ರ ನಿರ್ಮಾಣ, ಮುಖಮಂಟಪದ ಅಭಿವೃದ್ಧಿ ಸಹಿತ ಹಲವಾರು ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಗೊಳಿಸುವ ಬಗ್ಗೆ ಯೋಚನೆ ಇದೆ ಎನ್ನುತ್ತಾರೆ ಕ್ಷೇತ್ರದ ಧರ್ಮದರ್ಶಿ ಶ್ರೀ ರಾಘವ ಸುವರ್ಣ ಅವರು.

ಕ್ಷೇತ್ರದ ವಿಶೇಷತೆಗಳು:

ಪುರಾಣಕಾಲದಲ್ಲಿ ಜಲದುರ್ಗೆಯು ಅಗ್ನಿದುರ್ಗೆಯಾಗಿ ದುಷ್ಟರ ಸಂಹಾರ ಮಾಡಿರುವ ಸ್ಥಳವೆನ್ನುವ ಪ್ರತೀತಿ ಇರುವ ಕ್ಷೇತ್ರವಿದು. ಜಲದುರ್ಗೆ ವನದುರ್ಗೆಯಾಗಿ ಬಂಬಾಸುರ ಎಂಬ ದುಷ್ಟನ ಮರ್ಧನಕ್ಕಾಗಿ ಅಗ್ನಿದುರ್ಗೆಯಾಗಿ ಆದಿಶಕ್ತಿ ಅವತಾರ ಎತ್ತಿದ ಪುಣ್ಯನೆಲೆ ಇದು. ಇದರಿಂದಾಗಿಯೇ ಈ ಕ್ಷೇತ್ರಕ್ಕೆ ಬಾಂಬಿಲ ಎಂಬ ಹೆಸರು ಬಂತೆಂಬ ಪ್ರತೀತಿಯೂ ಇದೆ.


ಜಲದುರ್ಗೆ ಅವತರಿಸಿದ ಶಂಖಾಕೃತಿಯ ಕೆರೆ, ಕೋಲ ಮಹರ್ಷಿಗಳು ತಪಸ್ಸು ಮಾಡಿದ ಸ್ಥಳ, ಭೀಮನು ಧ್ಯಾನಗೈದ ಗುಹೆ ಇತ್ಯಾದಿ ಪೌರಾಣಿಕ ಸಾಕ್ಷ್ಯಗಳು ಕ್ಷೇತ್ರದ ಸನಿಹದಲ್ಲಿದ್ದು ಕ್ಷೇತ್ರದ ಮಹಿಮೆಯನ್ನು ಸಾರುತ್ತಿದೆ.


ಚರ್ಮವ್ಯಾದಿ, ನಾಗದೋಷ, ಮಾಂಗಲ್ಯ ದೋಷ, ಮಾನಸಿಕ ಕಾಯಿಲೆ, ಶತ್ರುಭಾದೆ ಮೊದಲಾದ ಕಷ್ಟಕಾರ್ಪಣ್ಯಗಳನ್ನು ನಿವಾರಿಸಿ, ಇಷ್ಟಾರ್ಥವನ್ನು ಸಿದ್ಧಿಸುವ ಭಕ್ತಿ-ಭಾವೈಕ್ಯದ ಆರಾದನಾ ತಾಣವಾಗಿ ನಾಡಿನ ಭಕ್ತರ ಗಮನ ಸೆಳೆದ ಕ್ಷೇತ್ರವಾಗಿದೆ. ವಿಶೇಷವಾಗಿ ಎಲ್ಲಾ ಜಾತಿ,ಮತ, ಧರ್ಮದವರು ಭೇಟಿ ನೀಡಿ, ಪ್ರಾರ್ಥನೆ ಸಲ್ಲಿಸಿ, ಇಷ್ಠಾರ್ಥಗಳನ್ನು ಈಡೇರಿಸುವ ಸರ್ವಧರ್ಮಿಯರ ಆಕರ್ಷಣೆಯ ಕ್ಷೇತ್ರವಾಗಿ ಬೆಳಗುತ್ತಿದೆ.


ಕ್ಷೇತ್ರದಲ್ಲಿ ನಿತ್ಯಸೇವೆ, ವಿಶೇಷ ಪೂಜಾ ಸೇವೆ, ವಾರ್ಷಿಕ ಉತ್ಸವಾದಿಗಳ ಸಹಿತ ಸಂಕಷ್ಟ ಪರಿಹಾರ ಸೇವೆಗಳು, ಅನ್ನದಾನ ಸೇವೆ ನಡೆಯುತ್ತಿದೆ.

ಧರ್ಮನಿಷ್ಠೆಯ ಧರ್ಮದರ್ಶಿ ಶ್ರೀ ರಾಘವ ಸುವರ್ಣ:

ಶ್ರೀ ರಾಘವ ಸುವರ್ಣ ಅವರ ಅಪಾರವಾದ ಶ್ರದ್ಧೆ, ಭಕ್ತಿ, ತ್ಯಾಗ ಮತ್ತು ಪರಿಶ್ರಮದ ಫಲವೇ ಶ್ರೀ ಕ್ಷೇತ್ರ ಬಾಂಬಿಲ. ತನ್ನ ವಂಶಸ್ಥರು ಮೂಲದಿಂದ ಆರಾಧಿಸಿಕೊಂಡು ಬಂದ ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರನನ್ನು ರಾಘವ ಸುವರ್ಣ ಅವರು ಬಾಲ್ಯದಿಂದಲೇ ಭಕ್ತಿಯಿಂದ ಆರಾಧಿಸಿಕೊಂಡು ಬಂದವರು. ನಂತರದ ದಿನಗಳಲ್ಲಿ ಕಷ್ಟ ಹೇಳಿಕೊಂಡು ತನ್ನ ಬಳಿ ಬಂದ ಭಕ್ತರಿಗೆ ಸಾಂತ್ವನ ನೀಡಿದವರು. ಕೆಲವು ವರ್ಷಗಳ ಹಿಂದೆ ಬಾಂಬಿಲಕ್ಕೆ ಬಂದ ಅವರು ಬ್ರಹ್ಮಲಿಂಗೇಶ್ವರ ಸ್ವಾಮಿಯ ಭಾವಚಿತ್ರ ಇಟ್ಟು ಪೂಜಿಸುತ್ತಾ ಬಂದಿದ್ದು ನಂತರ ಭಕ್ತಾದಿಗಳ ಸಹಕಾರದಿಂದ ನೂತನ ಕ್ಷೇತ್ರ ನಿರ್ಮಿಸಿ ಶ್ರೀ ಅಗ್ನಿದುರ್ಗೆ ಬ್ರಹ್ಮಲಿಂಗೇಶ್ವರ ಕ್ಷೇತ್ರದ ಧರ್ಮದರ್ಶಿಯಾಗಿ ಕ್ಷೇತ್ರವನ್ನು ಮುನ್ನಡೆಸುತ್ತಾ ಬಂದರು. ತನ್ನ ವಿಶೇಷವಾದ ಪ್ರಾರ್ಥನೆ, ಸಂಕಲ್ಪ ಶಕ್ತಿ, ಸಿದ್ಧಿ ಸಾಧನೆಯ ಮೂಲಕ ಭಕ್ತರ ಬದುಕಿಗೆ ಬೆಳಕಾದ ರಾಘವ ಸುವರ್ಣ ಅವರು ಇದೀಗ ಮತ್ತೆ ಕ್ಷೇತ್ರವನ್ನು ಜೀರ್ಣೋದ್ಧಾರ ಮಾಡುವ ಸಂಕಲ್ಪ ತೊಟ್ಟಿದ್ದಾರೆ.
ಕ್ಷೇತ್ರ ಜೀರ್ಣೋದ್ಧಾರದ ಕಾರ್ಯದ ಯಶಸ್ವಿಗಾಗಿ
ಊರಪರವೂರ ದಾನಿಗಳು ಮತ್ತು ಭಕ್ತಾದಿಗಳ ನೆರವನ್ನು ನಿರೀಕ್ಷಿಸುತ್ತಿದ್ದಾರೆ.

ಮಾಹಿತಿಗಾಗಿ: ಶ್ರೀ ಕ್ಷೇತ್ರಕ್ಕೆ ನೆರವು ನೀಡುವವರು ಕಾರ್ಪೊರೇಶನ್ ಬ್ಯಾಂಕ್ ಬಂಟ್ವಾಳ ಶಾಖೆಯ ಉಳಿತಾಯ ಖಾತೆ ಸಂಖ್ಯೆ 020400101014697( IFSC-CORP0000204) ಗೆ ಪಾವತಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಶ್ರೀ ರಾಘವ ಸುವರ್ಣ, ಆಡಳಿತ ಧರ್ಮದರ್ಶಿಗಳು, ಶ್ರೀ ಅಗ್ನಿದುರ್ಗೆ ಬ್ರಹ್ಮಲಿಂಗೇಶ್ವರ ದೇವಸ್ಥಾನ ಬಾಂಬಿಲ, ಮೊಬೈಲ್: 9449481761 ನ್ನು ಸಂಪರ್ಕಿಸಬಹುದಾಗಿದೆ.

ಲೇಖನ:
ಗೋಪಾಲ ಅಂಚನ್, ಆಲದಪದವು
9449104318