ಕಾರಂಬಡೆ ಶ್ರೀ ಮಹಾಮ್ಮಾಯಿ ಕ್ಷೇತ್ರ: ಭರದಿಂದ ಸಾಗುತ್ತಿದೆ ನೂತನ ದೇವಸ್ಥಾನ ನಿರ್ಮಾಣ ಕಾರ್ಯ

ಲೇಖನ: ಗೋಪಾಲ ಅಂಚನ್
ಬಂಟ್ವಾಳ: ದ.ಕ.ಜಿಲ್ಲೆಯ ಬಂಟ್ವಾಳ ತಾಲೂಕಿನ ಬಂಟ್ವಾಳ ಕಸಬಾ ಗ್ರಾಮದ ಪ್ರಕೃತಿ ರಮಣೀಯ ಸುಂದರ ಪರಿಸರದಲ್ಲಿರುವ ಕಾರಂಬಡೆ ಶ್ರೀ ಮಹಮ್ಮಾಯಿ ಕ್ಷೇತ್ರದಲ್ಲಿ ನೂತನ ದೇವಾಲಯ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ. ಈಗಾಗಲೇ ಮಹಾಮ್ಮಾಯಿ ಅಮ್ಮನವರ ಗರ್ಭಗುಡಿ, ಧೂಮಾವತಿ ದೈವದ ಗುಡಿಯ ಕಾರ್ಯ ಬಹುತೇಕ ಪೂರ್ಣ ಹಂತಕ್ಕೆ ತಲುಪಿದ್ದು ಮರದ ಕಾರ್ಯ ಪ್ರಗತಿಯಲ್ಲಿದೆ. ಸುತ್ತುಪೌಳಿ, ಕೆರೆ ನಿರ್ಮಾಣ, ಪರಿವಾರ ಸಾನಿಧ್ಯಗಳಿಗೆ ಕಟ್ಟೆ ನಿರ್ಮಾಣ ಸಹಿತ ಹಲವು ಅಭಿವೃದ್ಧಿ ಕಾರ್ಯಗಳು ನಡೆಯಲಿದ್ದು 2.5ಕೋಟಿ ರೂಪಾಯಿ ವೆಚ್ಚದಲ್ಲಿ ಕ್ಷೇತ್ರವು ನಿರ್ಮಾಣಗೊಳ್ಳಲಿದೆ.
ಶ್ರೀ ಮಹಮ್ಮಾಯಿ ಕ್ಷೇತ್ರವು ಊರ-ಪರವೂರ ಭಕ್ತರ ಇಷ್ಠಾರ್ಥ ಸಿದ್ಧಿಸುವ ಪುಣ್ಯಕ್ಷೇತ್ರವಾಗಿ ಪ್ರಸಿದ್ಧಿ ಪಡೆದಿದೆ.


ಸುಮಾರು 800 ವರ್ಷಗಳ ಹಿಂದೆ ಈ ಪ್ರದೇಶದಲ್ಲಿ ವಾಸವಾಗಿದ್ದ ಮಾಲಿಂಗ ಪೂಜಾರಿ ( ಮಾಲಿಂಗ ಗುರು) ಎಂಬವರ ಅಪಾರ ಭಕ್ತಿಗೆ ಒಲಿದ ಮಾರಿಯಮ್ಮ ಇಲ್ಲಿ ನೆಲೆಯಾದರೆಂದು ಐತಿಹ್ಯವಿದ್ದು ನಂತರ ಮಾಲಿಂಗ ಪೂಜಾರಿಯವರ ವಂಶಸ್ಥರೇ ತಾಯಿಯನ್ನು ಆರಾಧಿಸಿಕೊಂಡು ಬಂದಿದ್ದಾರೆ ಎಂದು ಅಷ್ಟಮಂಗಳ ಪ್ರಶ್ನೆಯಲ್ಲಿ ತಿಳಿದು ಬಂದಿದೆ.
ಕ್ಷೇತ್ರದಲ್ಲಿ ಶ್ರೀ ಮಹಾಮ್ಮಾಯಿಯೊಂದಿಗೆ ಶ್ರೀ ಗಣಪತಿ ದೇವರು, ಶ್ರೀ ಗುರು, ಶ್ರೀ ನಾಗಬ್ರಹ್ಮ, ರಕ್ತೇಶ್ವರೀ, ಗುಳಿಗ, ಮಹಾಮ್ಮಾಯಿ ಗುಳಿಗ, ಕಾಲಭೈರವ, ಕಲ್ಲುರ್ಟಿ, ಪಂಜುರ್ಲಿ, ಧೂಮಾವತಿ, ಬಂಟ, ಮಾಡಕೊರತಿ, ಕುಪ್ಪೆಟ್ಟು ಪಂಜುರ್ಲಿ, ಮಂತ್ರದೇವತೆ, ಸತ್ಯದೇವತೆ, ಸಂಕೊಲೆ ಗುಳಿಗ, ರಾಹುಗುಳಿಗ, ಕೊರಗಜ್ಜ ಮೊದಲಾದ ದೈವಗಳ ಸಾನಿಧ್ಯವಿದೆ. ಸಿಡುಬು ಮೊದಲಾದ ಅಂಟುರೋಗಗಳು, ಜಾನುವಾರು ರೋಗಗಳು, ಕಷ್ಟಕಾರ್ಪಣ್ಯಗಳ ನಿವಾರಣೆ ಸಹಿತ ವಿವಾಹ ಸಂಬಂಧ, ಸಂತಾನ ಭಾಗ್ಯ ಕೂಡಿ ಬರುವರೇ ಭಕ್ತಾದಿಗಳು ಈ ಕ್ಷೇತ್ರಕ್ಕೆ ಹರಕೆ ಸಲ್ಲಿಸಿ ತಮ್ಮ ಇಷ್ಠಾರ್ಥಗಳನ್ನು ಸಿದ್ಧಿಸಿಕೊಳ್ಳುತ್ತಿದ್ದಾರೆ. ದೇವಿಗೆ ನಿತ್ಯ ಪೂಜೆ, ವಿಶೇಷ ಪೂಜೆಗಳು, ಕಾಳಬೈರವನಿಗೆ ಕೋಳಿ-ಕುರಿ ಬಲಿಗಳ ಸೇವೆ, ಮಹಾನವಮಿಯ ಒಂಬತ್ತು ದಿನ ವಿಶೇಷ ಉತ್ತವ, ಮಾರಿಪೂಜೆ, ರಾಶಿಪೂಜೆಗಳು ವಿಧಿವತ್ತಾಗಿ ನಡೆದುಕೊಂಡು ಬರುತ್ತಿದೆ.

ನೂತನ ದೇವಾಲಯ ಸಂಕಲ್ಪ
ಕ್ಷೇತ್ರದಲ್ಲಿ ನಡೆದಿರುವ ಅಷ್ಟಮಂಗಳ ಪ್ರಶ್ನೆಯಲ್ಲಿ ಕಂಡು ಬಂದ ಪ್ರಕಾರ ಶ್ರೀ ಕ್ಷೇತ್ರವು ೮೦೦ ವರ್ಷಗಳ ಇತಿಹಾಸವಿರುವ ಅತ್ಯಂತ ಪುರಾತನವಾದ ಕಾರಣೀಕ ಕ್ಷೇತ್ರವಾಗಿದ್ದು ಶಿಥಿಲಾವಸ್ಥೆಯಲ್ಲಿರುವ ಈ ಕ್ಷೇತ್ರವನ್ನು ಪುನರ್‌ನಿರ್ಮಿಸಿ ಪ್ರತಿಷ್ಠೆ, ಬ್ರಹ್ಮಕಲಶಾಧಿಗಳನ್ನು ನಡೆಸಿ, ವಿಧಿವತ್ತಾಗಿ ಪೂಜೆ, ಉತ್ಸವಾದಿಗಳನ್ನು ನಡೆಸಿಕೊಂಡು ಬಂದಲ್ಲಿ ಊರಿಗೆ ಕ್ಷೇಮವಾಗುವುದಲ್ಲದೆ ಊರಪರವೂರ ಭಕ್ತಾದಿಗಳ ಸಂಕಷ್ಟಾದಿಗಳು ಪರಿಹಾರಗೊಂಡು ಸಕಲ ಸೌಭಾಗ್ಯಗಳು ಕೂಡಿಬರುವುದೆಂದು ತಿಳಿದು ಬಂದಿದೆ.


ಈ ಹಿನ್ನೆಲೆಯಲ್ಲಿ ಊರವರು ಸೇರಿ ಜೀರ್ಣೋದ್ಧಾರ ಸಮಿತಿ ರಚಿಸಿ ಶ್ರೀ ಮಹಾಮ್ಮಾಯಿ ಅಮ್ಮನವರಿಗೆ ನೂತನ ದೇವಸ್ಥಾನ ನಿರ್ಮಾಣ ಸಹಿತ ಪರಿವಾರ ದೈವದೇವರುಗಳಿಗೆ ಸಾನಿಧ್ಯವನ್ನು ನಿರ್ಮಿಸಲು ಸಂಕಲ್ಪಿಸಲಾಗಿದೆ ಎಂದು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಹರೀಶ್ ಕೋಟ್ಯಾನ್ ಶುಕ್ರವಾರ ಕ್ಷೇತ್ರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಕ್ಷೇತ್ರದ ಪುನರ್‌ನಿರ್ಮಾಣ ಸಹಿತ ಎಲ್ಲಾ ಅಭಿವೃದ್ಧಿ ಯೋಜನೆಗಳಿಗೆ ಸುಮಾರು ೨.೫ಕೋಟಿ ರೂಪಾಯಿ ಖರ್ಚಾಗಬಹುದೆಂದು ಅಂದಾಜಿಸಲಾಗಿದೆ.
ತೀರಾ ಗ್ರಾಮೀಣ ಪ್ರದೇಶದಲ್ಲಿರುವ ಈ ಕ್ಷೇತ್ರದ ಅಭಿವೃದ್ಧಿ ಕಾರ‍್ಯಗಳು ಯಶಸ್ವಿಯಾಗಿ ನಡೆಯುವರೇ ಭಕ್ತಾದಿಗಳ ಸರ್ವ ರೀತಿಯ ಸಹಕಾರವನ್ನು ನಿರೀಕ್ಷಿಸಲಾಗಿದೆ ಎಂದು ಅವರು ಹೇಳಿದರು.

*ಭಕ್ತರ ಭಕ್ತಿಗೆ ಒಲಿವ ತಾಯಿ
ಇಲ್ಲಿ ಹಿಂದೆ ಭಕ್ತರ ಭಕ್ತಿಗೆ ಒಲಿದು ಬಂದ ಮಹಾಮ್ಮಾಯಿ ಈಗಲೂ ಭಕ್ತಿಗೆ ಒಲಿದು ಸಮಸ್ತ ಭಕ್ತರನ್ನು ಹರಸುತ್ತಿದ್ದಾರೆ. ಸಂಕಷ್ಟಗಳು ಬಂದಾಗ ಭಕ್ತರು ಶ್ರದ್ಧಾಭಕ್ತಿಪೂರ್ವಕವಾಗಿ ಪ್ರಾರ್ಥಿಸಿ ಹರಕೆ ಹೇಳಿ ತೀರಿಸಿದ್ದಲ್ಲಿ ಸಂಕಷ್ಟಗಳು ದೂರವಾದ ಸಾಕಷ್ಟು ನಿದರ್ಶನಗಳಿದೆ ಎಂದು ಪುರೋಹಿತ, ಕ್ಷೇತ್ರದ ಗೌರವಾಧ್ಯಕ್ಷ ಕೇಶವ ಶಾಂತಿ ನಾಟಿ ಹೇಳಿದರು


ಕ್ಷೇತ್ರದ ಆಡಳಿತ ಮೊಕ್ತೇಸರ ಅರುಣ್ ಕುಮಾರ್, ಸಮಿತಿ ಪ್ರಮುಖರಾದ ನಾಗೇಶ್ ದರ್ಬೆ, ಗೋಪಾಲ ಅಂಚನ್, ಜಯಶಂಕರ ಕಾನ್ಸಾಲೆ, ಕೊರಗಪ್ಪ ಕೊಳಂಬೆಬೈಲು, ಪುರುಷೋತ್ತಮ ಪೂಜಾರಿ, ಕೇಶವ ಪಾಲಡ್ಕ, ಭಾರತಿ ಮೊದಲಾದವರು ಸುದ್ದಿಗೋಷ್ಠಿಯಲ್ಲಿದ್ದರು.