ರಣಬಿಸಿಲು-ವಿಪರೀತ ಸೆಕೆ: ಮುನ್ನೆಚ್ಚರಿಕೆ ಪಾಲಿಸಲು ಪ್ರಾಧಿಕಾರದ ಸೂಚನೆ( ಗೋಪಾಲ ಅಂಚನ್, ಯುವಧ್ವನಿ ನ್ಯೂಸ್ ಕರ್ನಾಟಕ

)

ಬಂಟ್ವಾಳ: ಬಿಸಿಲಿನ ಹಿನ್ನೆಲೆಯಲ್ಲಿ ಸಾರ್ವಜನಿಕರು ಬಿಸಿಲು ಇರುವಾಗ ಕೊಡೆ ಬಳಸಿ ಹಾಗೂ ಸಾಧ್ಯವಾದಷ್ಟು ತಂಪಾದ ಸ್ಥಳಗಳಲ್ಲಿ ಉಳಿಯಲು ಪ್ರಯತ್ನಿಸಬೇಕು. ತೆಳುವಾದ ಸಡಿಲವಾದ ಹತ್ತಿಯ ಉಡುಪುಗಳನ್ನು ಧರಿಸಬೇಕು, ಆದಷ್ಟು ಬಿಳಿ ಬಣ್ಣದ ಬಟ್ಟೆಗಳ ಬಳಕೆ ಒಳ್ಳೆಯದು ಎಂದು ಪ್ರಾಧಿಕಾರ ತಿಳಿಸಿದೆ.

ಹತ್ತಿಯ ಅಥವಾ ಟರ್ಬನ್ ಟೋಪಿ ಹಾಗೂ ಕೂಲಿಂಗ್ ಗ್ಲಾಸ್ ಧರಿಸುವುದು ಉತ್ತಮ. ಹಿರಿಯ ನಾಗರಿಕರು ಮತ್ತು ಮಕ್ಕಳು ಹೆಚ್ಚು ನೀರು ಕಡಿಯಬೇಕಾಗಿದೆ.
ಬೆಳಗ್ಗೆ 11 ರಿಂದ ಸಂಜೆ 4 ರವರೆಗೆ ಹೊರಾಂಗಣ ದೈಹಿಕ ಚಟುವಟಿಕೆಯನ್ನು ಕಡಿಮೆ ಮಾಡುವುದು ಅಗತ್ಯ. ಸಾಕಷ್ಟು ನೀರು, ಮಜ್ಜಿಗೆ ಮತ್ತು ಗ್ಲೋಕೋಸ್ (ಒಆರ್‌ಎಸ್) ನಂತಹ ದ್ರವ ಪದಾರ್ಥಗಳನ್ನು ಹೆಚ್ಚು ಉಪಯೋಗಿಸಬೇಕು. ಕೊಠಡಿಗಳ ತಾಪಮಾನ ಕಡಿಮೆ ಮಾಡಲು ಸೂಕ್ತ ಕ್ರಮ ವಹಿಸುವ ಮುನ್ನೆಚ್ಚರಿಕೆ ‌ನೀಡಲಾಗಿದೆ.

ಹೊರಾಂಗಣದಲ್ಲಿ ಬಿಸಿಲಿನಲ್ಲಿ ಕೆಲಸ ಮಾಡುವವರಿಗೆ ಕಡ್ಡಾಯ ವಿರಾಮ ಪಡೆಯಬೇಕು. ಬಿಸಿಲಿನಿಂದ ವಿಟಮಿನ್ ‘ಸಿ’ ಕೊರತೆ ಎದುರಾಗುವುದರಿಂದ ಹೆಚ್ಚು ನಿಂಬೆ ಹಣ್ಣಿನ ಜ್ಯೂಸ್ ಕುಡಿಯುವುದು ಉತ್ತಮ ಹಾಗೂ ಸಕ್ಕರೆ ಬದಲು ಬೆಲ್ಲವನ್ನು ಬಳಸುವುದು ಸೂಕ್ತ. ಬೆಳಗ್ಗೆ ಎದ್ದ ತಕ್ಷಣ ತುಳಸಿ ಎಲೆಗಳನ್ನು ಮಿಕ್ಸಿಯಲ್ಲಿ ರುಬ್ಬಿಕೊಂಡು ಎರಡು ಲೋಟದಷ್ಟು ನೀರನ್ನು ಬೆರೆಸಿ ಕುಡಿಯುವುದರಿಂದ ಕೆಲಸ ಮಾಡುವಾಗ ಸುಸ್ತಾಗುವುದಿಲ್ಲ. ಆಹಾರದಲ್ಲಿ ಮಸಾಲೆ ಪದಾರ್ಥಗಳನ್ನು ಹೆಚ್ಚು ಬಳಸಬಾರದು
5 ವರ್ಷ ಒಳಗಿನ ಮಕ್ಕಳಿಗೆ ಪ್ರತಿ ಅರ್ಧ ಗಂಟೆಗೊಮ್ಮೆ ಒಂದು ಚಿಟಿಕೆಯಷ್ಟು ಅಯೋಡಿಯನ್ ಉಪ್ಪು ಬೆರೆಸಿದ ನೀರನ್ನು ಕುಡಿಯಬೇಕು. ಬೇಸಿಗೆ ದಿನಗಳಲ್ಲಿ ತಣ್ಣೀರಿನ ಸ್ನಾನ ಆರೋಗ್ಯಕ್ಕೆ ಹಿತಕರ ಎಂದು ದ.ಕ.ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರ ಕಚೇರಿ ಪ್ರಕಟನೆ ತಿಳಿಸಿದೆ.