ಬಿಜೆಪಿ ಆಡಳಿತದಿಂದ ಕಂಗೆಟ್ಟ ಜನತೆಯ ಜೀವನ ಸುಧಾರಿಸಲು ಕಾಂಗ್ರೇಸ್ ಗ್ಯಾರಂಟಿ ಯೋಜನೆಗಳನ್ನು ನೀಡುತ್ತಿದೆ-ಸಿದ್ಧಕಟ್ಟೆ ಚುನಾವಣಾ ಪ್ರಚಾರ ಸಭೆಯಲ್ಲಿ ನ್ಯಾಯವಾದಿ ಪದ್ಮರಾಜ್ ರಾಮಯ್ಯ

ಬಂಟ್ವಾಳ: ಬಿಜೆಪಿಗೆ ಅಧಿಕಾರ ಕೊಟ್ಟು ನೋಡಿದ್ದೇವೆ. ಬೆಲೆ ಏರಿಕೆ ಗಗನಕ್ಕೇರಿದೆ. ಅದನ್ನು ನಿರ್ವಹಿಸುವಷ್ಟು ಆದಾಯ ವಿಲ್ಲದೆ ಜನಸಾಮಾನ್ಯರ ಬದುಕು ಕಷ್ಟವಾಗಿದೆ. ಇದನ್ನು ಮನಗಂಡ ಕಾಂಗ್ರೆಸ್ ಜನತೆಯ ಬದುಕು ಸುಧಾರಿಸಲು ಹಲವು ಗ್ಯಾರಂಟಿಗಳನ್ನು ಘೋಷಣೆ ಮಾಡಿದೆ. ಈ ಎಲ್ಲಾ ಗ್ಯಾರಂಟಿಗಳನ್ನು ಮೊದಲ ಸಚಿವ ಸಂಪುಟ ಸಭೆಯಲ್ಲೇ ಕಾಂಗ್ರೇಸ್ ಜಾರಿಗೊಳಿಸುತ್ತದೆ ಎಂದು ಖ್ಯಾತ ನ್ಯಾಯವಾದಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ರಾಮಯ್ಯ ಹೇಳಿದ್ದಾರೆ.

ಸಿದ್ಧಕಟ್ಟೆಯಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು ಬಿಜೆಪಿ ಆಡಳಿತದಿಂದ ಬೇಸತ್ತ ಜನತೆ ರಾಜ್ಯದಲ್ಲಿ ಕಾಂಗ್ರೇಸ್ ಪಕ್ಷವನ್ನು ಅಧಿಕಾರಕ್ಕೆ ತರಲಿದ್ದಾರೆ. ಬಂಟ್ವಾಳ ಕ್ಷೇತ್ರವನ್ನು ರಾಜ್ಯಕ್ಕೆ ಮಾದರಿಯಾಗಿ ರೂಪಿಸಿದ ಪ್ರಾಮಾಣಿಕ ಜನಸೇವಕ ಬಿ.ರಮಾನಾಥ ರೈಯವರನ್ನು ಕ್ಷೇತ್ರದ ಜನತೆ ಬಹುಮತದಿಂದ ಆರಿಸಲಿದ್ದಾರೆ ಎಂದರು.

ಜಿಲ್ಲೆಯಲ್ಲೇ ಅತ್ಯಧಿಕ ಕುಡಿಯುವ ನೀರಿನ ಯೋಜನೆ ಜಾರಿ-ರೈ:

ಈ ಸಂದರ್ಭ ಮಾತನಾಡಿದ ಕಾಂಗ್ರೇಸ್ ಅಭ್ಯರ್ಥಿ ಬಿ.ರಮಾನಾಥ ರೈ ನನ್ನ ಅವಧಿಯಲ್ಲಿ ಬಂಟ್ವಾಳದಲ್ಲಿ ಐದು ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಜಾರಿಯಾಗಿದೆ. ಇದು ಜಿಲ್ಲೆಯಲ್ಲೇ ಅತ್ಯಧಿಕ. ನನ್ನ ಅವಧಿಯಲ್ಲಿ ಆಗಿರುವ ಈ ಯೋಜನೆಗಳಿಂದಾಗಿ ಇಂದು ಬಂಟ್ವಾಳದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಹುತೇಕ ನಿವಾರಣೆಯಾಗಿದೆ. ಆದರೆ, ಈ ಬಾರಿ ಅವಧಿಗೆ ಮುನ್ನವೇ ಆಣೆಕಟ್ಟುಗಳಿಂದ ನೀರು ಬಿಟ್ಟಿರುವ ಕಾರಣ ಕ್ಷೇತ್ರದಲ್ಲಿ ನೀರಿನ ಸಮಸ್ಯೆ ಉದ್ಭವವಾಗಿದೆ ಎಂದರು.

ಬಡ್ಡಿ ಸಹಿತ ಗೆಲುವು ನೀಡಿ-ರೈ:

ಕ್ಷೇತ್ರದಲ್ಲಿ ಗರಿಷ್ಠ ಪ್ರಮಾಣದಲ್ಲಿ ಅಭಿವೃದ್ಧಿ ಕಾರ್ಯ ಮಾಡಿದ್ದರೂ ಕಳೆದ ಬಾರಿ ಅಪಪ್ರಚಾರದಿಂದ ನನಗೆ ಸೋಲಾಗಿದೆ. ಕ್ಷೇತ್ರದ ಜನತೆ ಸತ್ಯಾಸತ್ಯತೆಯನ್ನು ಅರಿತುಕೊಂಡು ಕಳೆದ ಬಾರಿಯ ಸೋಲಿಗೆ ಈ ಬಾರಿ ಬಡ್ಡಿ ಸಹಿತ ಗೆಲುವು ನೀಡುತ್ತಾರೆ ಎಂದು ರೈ ವಿಶ್ವಾಸ ವ್ಯಕ್ತಪಡಿಸಿದರು.

ಕೆಪಿಸಿಸಿ ವಕ್ತಾರ ಪದ್ಮಪ್ರಸಾದ್ ಜೈನ್, ಕೆಪಿಸಿಸಿ ಸದಸ್ಯರುಗಳಾದ ಪಿಯೂಸ್ ಎಲ್. ರೊಡ್ರಿಗಸ್, ಬಂಟ್ವಾಳ ಬ್ಲಾಕ್ ಅಧ್ಯಕ್ಷ ಬೇಬಿ ಕುಂದರ್, ಪ್ರಮುಖರುಗಳಾದ ಜಗದೀಶ್ ಕೊಯಿಲ, ಪಿಎ ರಹೀಮ್, ಡಾ. ಪ್ರಭಾಚಂದ್ರ ಜೈನ್, ಸುದರ್ಶನ್ ಜೈನ್, ದಿನೇಶ್ ಶೆಟ್ಟಿಗಾರ್, ಮೊಹಮ್ಮದ್ ಜೂಬಿ, ದೇವಪ್ಪ ಕರ್ಕೇರ, ಜಯಕರ ಶೆಟ್ಟಿ, ಶಿವಾನಂದ ರೈ, ಅಶೋಕ ಆಚಾರ್ಯ, ಸೀತಾರಾಮ್ ಶೆಟ್ಟಿ, ರಾಜೇಶ್ ಪೂಜಾರಿ, ಅಶೋಕ ಪೂಜಾರಿ, ಬೆನೆಡಿಕ್ಟ್ ಡಿಕೊಸ್ತಾ, ಜಲಜ, ಚಂದ್ರಶೇಖರ್ ಪೂಜಾರಿ, ಅಬ್ಬಾಸ್ ಅಲಿ, ಇಬ್ರಾಹಿಂ ಕೈಲಾರ್ ಮತ್ತಿತರರು ಉಪಸ್ಥಿತರಿದ್ದರು.