ಜನರು ಬಿಜೆಪಿಯ ಕುತಂತ್ರಗಳನ್ನು ಮೆಟ್ಟಿ ನಿಂತು ಕಾಂಗ್ರೇಸ್ಸನ್ನು ಭಾರೀ ಬಹುಮತದಿಂದ ಗೆಲ್ಲಿಸಲಿದ್ದಾರೆ-ಬಿ.ರಮಾನಾಥ ರೈ

ಬಂಟ್ವಾಳ: ಕಳೆದ ಐದು ವರ್ಷಗಳಲ್ಲಿ ಬಿಜೆಪಿಯ ಅಭಿವೃದ್ಧಿ ಶೂನ್ಯವಾಗಿದೆ. ಜನರ ಮುಂದೆ ಮಾತನಾಡುವುದಕ್ಕೆ ಅವರ ಬಳಿ ವಿಷಯಗಳಿಲ್ಲ. ಹೀಗಾಗಿ ಈ ಬಾರಿ ಕೂಡ ಅವರು ಸುಳ್ಳು, ವದಂತಿಗಳ ಮೂಲಕವೇ ಚುನಾವಣೆ ಗೆಲ್ಲುವ ತಂತ್ರ ಹೂಡಿದ್ದಾರೆ. ಆದರೆ, ವಾಮಮಾರ್ಗದಲ್ಲಿ ಗೆಲ್ಲುವ ಬಿಜೆಪಿ ತಂತ್ರಕ್ಕೆ ಈ ಬಾರಿ ಯಶಸ್ಸು ಸಿಗಲಾರದು. ಜನರು ಬಿಜೆಪಿಯ ಇಂತಹ ಕುತಂತ್ರಗಳನ್ನು ಮೆಟ್ಟಿನಿಂತು ಕಾಂಗ್ರೆಸ್ ಅನ್ನು ಭಾರೀ ಬಹುಮತದಿಂದ ಗೆಲ್ಲಿಸಲಿದ್ದಾರೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಭರವಸೆ ವ್ಯಕ್ತಪಡಿಸಿದರು.
ಪುಂಜಾಲಕಟ್ಟೆ ಮತ್ತು ಪಿಲಾತಬೆಟ್ಟುವಿನಲ್ಲಿ ಚುನಾವಣಾ ಪ್ರಚಾರ ಸಭೆಗಳನ್ನುದ್ಧೇಶಿಸಿ ಅವರು ಮಾತನಾಡಿದರು.
ದಕ್ಷಿಣ ಕನ್ನಡ ಜಿಲ್ಲೆಯ ಹಲವಾರು ದೇವಸ್ಥಾನಗಳ ಜೀರ್ಣೋದ್ಧಾರ ಸಮಿತಿಗಳ ನೇತೃತ್ವ ನಾನು ವಹಿಸಿದ್ದೇನೆ. ಅನೇಕ ದೇವಸ್ಥಾನಗಳಿಗೆ ಧ್ವಜಸ್ಥಂಭ ನೀಡಿ ಸೇವೆ ಸಲ್ಲಿಸಿದ್ದೇನೆ. ಹಲವಾರು ಆರಾದನಾ ಕೇಂದ್ರಗಳ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸಿದ್ದೇನೆ.
ಆದರೂ ನನ್ನ ವಿರುದ್ಧ ಸುಳ್ಳುಗಳನ್ನು ಹಬ್ಬಿಸುವ ಕೆಲಸ ಬಿಜೆಪಿ ಮಾಡುತ್ತಿದೆ. ಜನತೆ ಸತ್ಯಾಂಶಗಳನ್ನು ಅರಿತು ಮತ ಚಲಾಯಿಸಬೇಕಾಗಿದೆ ಎಂದು ರೈ ತಿಳಿಸಿದರು.

ಸಜ್ಜನಿಕೆಯ ರಾಜಕಾರಣಕ್ಕೆ ರೈ ರಾಜ್ಯಕ್ಕೆ ಹೆಸರಾದವರು-ಅಶ್ವನಿ ಕುಮಾರ್ ರೈ

ಕೆಪಿಸಿಸಿ ಮುಖಂಡ, ನ್ಯಾಯವಾದಿ ಅಶ್ವನಿ ಕುಮಾರ್ ರೈ ಮಾತನಾಡಿ ರಮಾನಾಥ ರೈಗಳ ಅವಧಿಯಲ್ಲಿ ಬಡವರು, ಅಶಕ್ತರಿಗೆ ಸಾಕಷ್ಟು ಸೌಲಭ್ಯಗಳು ಸುಲಭವಾಗಿ ತಲುಪಿವೆ. ಸುಮಾರು 20,000ಕ್ಕೂ ಅಧಿಕ ಮಂದಿಗೆ ಹಕ್ಕು ಪತ್ರಗಳು ಸಿಕ್ಕಿವೆ. ಅಕ್ರಮ ಸಕ್ರಮ ಭೂಮಿ ಹಂಚಿಕೆಯು ಮಾಯಿಲಪ್ಪ ಸಾಲ್ಯಾನರ ಅಧ್ಯಕ್ಷತೆಯಲ್ಲಿ ನಿಷ್ಪಕ್ಷಪಾತವಾಗಿ, ಭ್ರಷ್ಟಾಚಾರ ರಹಿತವಾಗಿ ಹಂಚಲ್ಪಟ್ಟಿತ್ತು. ಆದರೆ, ಈಗ ಭೂಮಿ ಹಂಚಿಕೆಯ ವಿಷಯದಲ್ಲಿ ಯಾವ ರೀತಿಯ ಭ್ರಷ್ಟಾಚಾರ ನಡೆದಿದೆ ಎಂಬುದು ಬಂಟ್ವಾಳದ ಜನತೆಗೆ ತಿಳಿದಿದೆ ಎಂದು ಹೇಳಿದರು.
ಸಜ್ಜನಿಕೆಯ ರಾಜಕಾರಣಕ್ಕೆ ರಮಾನಾಥ ರೈಗಳು ಇಡೀ ರಾಜ್ಯಕ್ಕೆ ಹೆಸರಾದವರು. ಅವರ ಮನೆಗೆ ಯಾರೇ ಬಂದರೂ ವಿನಯ, ವಿದೇಯತೆಯಿಂದ ಕೆಲಸ ಮಾಡಿಕೊಡುತ್ತಾರೆ. ಅಧಿಕಾರ ಇಲ್ಲದಿದ್ದರೂ, ಅವರ ಮನೆಯಲ್ಲಿ ದಿನನಿತ್ಯ ನೂರಾರು ಮಂದಿ ಆಗಮಿಸಿ, ತಮಗೆ ಬೇಕಾದ ಕೆಲಸಗಳನ್ನು ಮಾಡಿಸಿಕೊಂಡು ಹೋಗುತ್ತಿರುತ್ತಾರೆ. ಇಂತಹ ಜನನಾಯಕನನ್ನು ಮತ್ತೊಮ್ಮೆ ಗೆಲ್ಲಿಸುವ ಮೂಲಕ, ಅವರಿಂದ ಕ್ಷೇತ್ರ ಹಾಗೂ ರಾಜ್ಯದ ಜನತೆಗೆ ಸೇವೆಯನ್ನು ಪಡೆಯುವ ಸೌಭಾಗ್ಯವನ್ನು ಮತದಾರರು ಒದಗಿಸಿಕೊಡಬೇಕು ಎಂದು ಅಶ್ವನಿ ಕುಮಾರ್ ರೈ ವಿನಂತಿಸಿದರು.
ಮಂಗಳೂರು ಮಹಾನಗರ ಪಾಲಿಕೆ ಮಾಜಿ ಕಾರ್ಪೊರೇಟರ್ ಕವಿತಾ ಸನಿಲ್, ಕೆಪಿಸಿಸಿ ಮುಖಂಡ ರಾಜಶೇಖರ್ ಕೋಟ್ಯಾನ್, ಕೆಪಿಸಿಸಿ ಸದಸ್ಯರುಗಳಾದ ಪಿಯೂಸ್ ಎಲ್.ರೋಡ್ರಿಗಸ್, ಚಂದ್ರಪ್ರಕಾಶ್ ಶೆಟ್ಟಿ, ಪ್ರಮುಖರಾದ ಪದ್ಮಶೇಖರ್ ಜೈನ್, ಜನಾರ್ಧನ್ ಚೆಂಡ್ತಿಮಾರ್, ಅಬ್ಬಾಸ್ ಅಲಿ, ಮೋಹನ್ ಸಾಲ್ಯಾನ್, ಬಾಲಾಜಿ ರಾವ್ ಮತ್ತಿತರರು ಉಪಸ್ಥಿತರಿದ್ದರು.